ಗುರುವಾರ , ಏಪ್ರಿಲ್ 22, 2021
30 °C

ಡಿವಿಎಸ್ ಬದಲಿಸಿದರೆ ಹೋರಾಟ: ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿ.ವಿ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಸಚಿವ ಜಗದೀಶ ಶೆಟ್ಟರ್ ಅವರನ್ನು ಆ ಸ್ಥಾನಕ್ಕೆ ತಂದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ.ಶನಿವಾರ ಇಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಹಾಗೂ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಅವರು, `ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ, ಪ್ರಾಮಾಣಿಕವಾಗಿ ಆಡಳಿತ ನಡೆಸುತ್ತಿರುವ ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾರಣ ಏನು ಎಂಬುದನ್ನು ಬಿಜೆಪಿಯ ವರಿಷ್ಠರು ಸ್ಪಷ್ಟವಾಗಿ ಹೇಳಬೇಕು~ ಎಂದು ಒತ್ತಾಯಿಸಿದರು.ರಾಜ್ಯದ 16 ಜಿಲ್ಲೆಗಳಲ್ಲಿ ಒಕ್ಕಲಿಗರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ರಾಜ್ಯ ವಿಧಾನಸಭೆಯ 150 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಒಕ್ಕಲಿಗರ ಮತಗಳು ನಿರ್ಣಾಯಕ. 90 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡುವ ಶಕ್ತಿ ಒಕ್ಕಲಿಗ ಸಮುದಾಯಕ್ಕೆ ಇದೆ. ಇಂಥ ಪ್ರಭಾವಿ ಸಮುದಾಯವನ್ನು ನಿರ್ಲಕ್ಷಿಸುವ ಮೊದಲು ಬಿಜೆಪಿಯ ವರಿಷ್ಠರು ಎರಡು ಬಾರಿ ಆಲೋಚಿಸಬೇಕು ಎಂದು ಸ್ವಾಮೀಜಿ ಹೇಳಿದರು.`ಸದಾನಂದ ಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೇ ಬಿಜೆಪಿಯ ಮುಖಂಡರು ಅವರ ಸಹಾಯಕ್ಕೆ ಧಾವಿಸಿಲ್ಲ. ಅವರು ನೇರ ನುಡಿಯ, ಸಜ್ಜನ ರಾಜಕಾರಣಿ. ಜನಪರ ಆಡಳಿತ ನೀಡುತ್ತಿರುವ ಅವರ ಕುರಿತ ನಮಗೆ ಹೆಮ್ಮೆ ಇದೆ. ಇದೇ ಕಾರಣಕ್ಕೆ ನಾವು ಅವರಿಗೆ ಬೆಂಬಲ ನೀಡಿದ್ದೇವೆ. ಅವರನ್ನು ಬದಲಾಯಿಸಲೇಬೇಕು ಎಂಬುದು ಅಂತಿಮ ನಿರ್ಧಾರವಾದರೆ, ಮುಖ್ಯಮಂತ್ರಿ ಸ್ಥಾನದಲ್ಲಿ ದಲಿತ ಸಮುದಾಯಕ್ಕೆ ಸೇರಿದವರನ್ನು ನೇಮಕ ಮಾಡಲಿ~ ಎಂದು ಹೇಳಿದರು.ಪಕ್ಷದ ವರಿಷ್ಠರ ನಿರ್ಧಾರವನ್ನು ಬಿಜೆಪಿಯಲ್ಲಿರುವ ಒಕ್ಕಲಿಗ ಸಮುದಾಯದ ಎಲ್ಲ ಶಾಸಕರು, ಸಚಿವರು ವಿರೋಧಿಸಬೇಕು. ಈ ಸಂದರ್ಭದಲ್ಲಿ ಅವರು ಸುಮ್ಮನಿರುವುದು ಸರಿಯಲ್ಲ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.ರಾಜ್ಯದ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸಲು ಒಕ್ಕಲಿಗರ ಸಂಘ ಸೋಮವಾರ ಬೆಂಗಳೂರಿನಲ್ಲಿ ಸಭೆ ನಡೆಸಲಿದೆ. ಈ ಸಭೆಗೆ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲಿರುವ ಒಕ್ಕಲಿಗ ಮುಖಂಡರನ್ನು ಆಹ್ವಾನಿಸಲಾಗುವುದು. ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು ಎಂದು ಕೆಂಚಪ್ಪಗೌಡ ತಿಳಿಸಿದರು.

 

ಶೆಟ್ಟರ್ ನಿವಾಸದಲ್ಲಿ ಸಂಭ್ರಮ

ಬೆಂಗಳೂರು: ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಸಚಿವ ಜಗದೀಶ ಶೆಟ್ಟರ್ ಅವರ ಅಧಿಕೃತ ನಿವಾಸ `ಕಾವೇರಿ~ಯಲ್ಲಿ ಶನಿವಾರ ಇಡೀ ದಿನ ಸಂಭ್ರಮದ ವಾತಾವರಣ ನೆಲೆಗೊಂಡಿತ್ತು.ಶೆಟ್ಟರ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಭಾವಿಸಿ, ಅವರ ಬೆಂಬಲಿಗರು, ಹಿತೈಷಿಗಳು ಶುಭ ಹಾರೈಸಿದರು. ಪಕ್ಷದ ವರಿಷ್ಠರು ಅಧಿಕೃತವಾಗಿ ಘೋಷಣೆ ಮಾಡುವ ಮೊದಲೇ ಹಾರೈಕೆಗಳು ಹರಿದುಬಂದವು.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಸಿ.ಪಿ.ಯೋಗೇಶ್ವರ್, ಆನಂದ ಅಸ್ನೋಟಿಕರ್ ಸೇರಿದಂತೆ ಹಲವು ಸಚಿವರು ಶೆಟ್ಟರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಸಚಿವರಾದ ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ ಅವರೂ ಭೇಟಿಯಾಗಿದ್ದರು. ಶಾಸಕಾಂಗ ಪಕ್ಷದ ಸಭೆ ಸೋಮವಾರ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಆ ದಿನ ನಗರದಲ್ಲೇ ಉಳಿಯುವಂತೆ ಶಾಸಕರಿಗೆ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.ಸದ್ಯಕ್ಕೆ ಕಾವೇರಿ: ಶೆಟ್ಟರ್ ಮುಖ್ಯಮಂತ್ರಿಯಾದ ನಂತರವೂ `ಕಾವೇರಿ~ಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯವರ ಅಧಿಕೃತ ನಿವಾಸ `ಅನುಗ್ರಹ~. ಅದು ಕಾವೇರಿ ಪಕ್ಕದಲ್ಲೇ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.