ಗುರುವಾರ , ಜುಲೈ 29, 2021
21 °C

ಡಿಸಿಎಫ್ ಶ್ರೀನಿವಾಸ್ ಪೋಷಕರಿಗೆ ನಿವೇಶನ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಸಿಎಫ್ ಶ್ರೀನಿವಾಸ್ ಪೋಷಕರಿಗೆ ನಿವೇಶನ ಹಸ್ತಾಂತರ

ಬೆಂಗಳೂರು: ದಂತಚೋರ ವೀರಪ್ಪನ್ ಮತ್ತು ಆತನ ಸಹಚರರ ದಾಳಿಯಿಂದ 1991ರ ನವೆಂಬರ್ 10ರಂದು ಹತ್ಯೆಯಾಗಿದ್ದ ಐಎಫ್‌ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಅವರ ಪೋಷಕರಿಗೆ ಅವರ ವೇತನದ ಬಾಕಿ ಮೊತ್ತ ಮತ್ತು ಬಿಡಿಎ ನಿವೇಶನವನ್ನು ರಾಜ್ಯ ಸರ್ಕಾರ ಮಂಗಳವಾರ ಹಸ್ತಾಂತರಿಸಿತು.ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಕಾರಣ ಅವರಿಗೆ ಪೂರ್ಣ ವೇತನ ನೀಡಬೇಕಿದ್ದು, ಆ ಪ್ರಕಾರ 1991ರಿಂದ 2010ರ ಡಿಸೆಂಬರ್ ತಿಂಗಳವರೆಗೆ ನೀಡಬೇಕಿದ್ದ 33.82 ಲಕ್ಷ ರೂಪಾಯಿಗಳ ಚೆಕ್ ಅನ್ನು ಅರಣ್ಯ ಸಚಿವ  ಸಿ.ಎಚ್.ವಿಜಯಶಂಕರ್ ಅವರು ಹಸ್ತಾಂತರಿಸಿದರು.ಔಷಧೀಯ ಸಸ್ಯಗಳ ಅಭಿವೃದ್ಧಿ ಕುರಿತು ಚರ್ಚಿಸಲು ಆಯೋಜಿಸಿದ್ದ ಕಾರ್ಯಾಗಾರದಲ್ಲೇ ಈ ಕಾರ್ಯಕ್ರಮವೂ ನಡೆಯಿತು. ಆಂಧ್ರಪ್ರದೇಶದ ರಾಜಮುಂಡ್ರಿಯಿಂದ ಬಂದಿದ್ದ ಶ್ರೀನಿವಾಸ್ ಅವರ ತಾಯಿ ಪಿ.ಜಯಲಕ್ಷ್ಮಿ ಚೆಕ್ ಸ್ವೀಕರಿಸಿದರು. ಅವರ ತಂದೆ ಪಿ.ಅನಂತರಾವ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.ಇದಲ್ಲದೆ, ಬಿಡಿಎ 40/60 ಅಡಿ ಅಳತೆಯ ನಿವೇಶವನ್ನು ಜ್ಞಾನಭಾರತಿ ಒಂದನೇ ಬ್ಲಾಕ್‌ನಲ್ಲಿ ಹಂಚಿಕೆ ಮಾಡಿದ್ದು, ಅದರ ಮೌಲ್ಯ 5.16 ಲಕ್ಷ ರೂಪಾಯಿಯನ್ನೂ ಸರ್ಕಾರವೇ ಪಾವತಿ ಮಾಡಿದೆ. ಇದರ ಸಲುವಾಗಿ ಶ್ರೀನಿವಾಸ್ ಅವರು ಮುಂಗಡವಾಗಿ ಸಂದಾಯ ಮಾಡಿದ್ದ 40 ಸಾವಿರ ರೂಪಾಯಿಗಳನ್ನು ಐಎಫ್‌ಎಸ್ ಅಧಿಕಾರಿಗಳ ಸಂಘ ಪಾವತಿ ಮಾಡಿತು. ನಿವೇಶನದ ಸ್ವಾಧೀನ ಪತ್ರವನ್ನೂ ಸಚಿವರು ಇದೇ ಸಂದರ್ಭದಲ್ಲಿ ಹಸ್ತಾಂತರ ಮಾಡಿದರು.ವಿಳಂಬ ಏಕೆ: ಶ್ರೀನಿವಾಸ್ ಅವರಿಗೆ ವಿಚ್ಛೇದಿತ ಪತ್ನಿ ಇದ್ದು, ಪರಿಹಾರ ಯಾರಿಗೆ ಹೋಗಬೇಕು ಎನ್ನುವುದು ಕೋರ್ಟ್‌ನಲ್ಲಿ ಇತ್ಯರ್ಥ ಆಗಿರಲಿಲ್ಲ. ಹೀಗಾಗಿ ವಿಳಂಬವಾಗಿದ್ದು, ಇಲ್ಲಿನ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಚೆಕ್ ಮತ್ತು ನಿವೇಶನವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು.ಈ ಸಂದರ್ಭದದಲ್ಲಿ ಮಾತನಾಡಿದ ಶ್ರೀನಿವಾಸ್ ಅವರ ತಂದೆ ಅನಂತರಾವ್, ‘ವೀರಪ್ಪನ್ ವಿರುದ್ಧದ  ಕಾರ್ಯಾಚರಣೆಯ ಪ್ರಮುಖ ರೂವಾರಿಯೇ ನನ್ನ ಮಗ. ಇದು ಹೆಮ್ಮೆ ಇದ್ದರೂ ಆ ನಂತರ ಪೊಲೀಸ್ ಇಲಾಖೆ ಸಿಬ್ಬಂದಿಗೆ ಕೊಟ್ಟ ಮಾನ್ಯತೆ ಮತ್ತು ಗೌರವ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಗಲಿಲ್ಲ ಎನ್ನುವ ನೋವು ಇದೆ. ಅವರನ್ನೂ ಸರ್ಕಾರ ಗೌರವದಿಂದ ಕಾಣಬೇಕು. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೂ ಬಹುಮಾನ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.