ಗುರುವಾರ , ಮೇ 13, 2021
34 °C

ಡಿಸಿಸಿ ಬ್ಯಾಂಕ್‌ಗೆ ರೂ 8 ಕೋಟಿ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2011-2012ನೇ ಸಾಲಿನಲ್ಲಿ ರೂ 8 ಕೋಟಿ ಲಾಭ ಗಳಿಸಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಾನಾ ಸ್ಪರ್ಧೆಗಳಿದ್ದರೂ ಉತ್ತಮ ಸೇವೆ ಹಾಗೂ ಸಾರ್ವಜನಿಕರ ವಿಶ್ವಾಸದಿಂದಾಗಿ ಪ್ರಸಕ್ತ ಸಾಲಿನಲ್ಲಿ  ಗುರಿ ಮೀರಿದ ಠೇವಣಿ ರೂ 395 ಕೋಟಿ ಸಂಗ್ರಹಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ  ತಿಳಿಸಿದರು.ರಾಜ್ಯ ಸರ್ಕಾರದ ಯೋಜನೆಯಂತೆ 2011-2012ನೇ ಸಾಲಿನಲ್ಲಿ ಶೇ. 1ರ ಬಡ್ಡಿ ದರದಲ್ಲಿ 65 ಸಾವಿರ ರೈತರಿಗೆ ರೂ 204 ಕೋಟಿ ಕೃಷಿ ಸಾಲ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 85 ಸಾವಿರ ರೈತರಿಗೆ ರೂ 275 ಕೋಟಿ ಕೃಷಿ ಸಾಲ ನೀಡಲು ಉದ್ದೇಶಿಸಲಾಗಿದೆ ಎಂದರು.ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬ್ಯಾಂಕ್ ಅನುಷ್ಠಾನಕ್ಕೆ ತಂದು 75 ಸಾವಿರ ರೈತರುಗಳಿಗೆ ಕಾರ್ಡ್ ವಿತರಿಸಿದೆ. ಹಾಗೆಯೇ,ಕಾರ್ಡ್ ಹೊಂದಿರುವ ರೈತ ಸದಸ್ಯರಿಗೆ ರೂ  50 ಸಾವಿರ ವೈಯುಕ್ತಿಕ ಅಪಘಾತ ವಿಮಾ ಯೋಜನೆ ಜಾರಿಗೆ ತಂದು, ಇದುವರೆಗೆ  95 ರೈತರಿಗೆ ರೂ 44 ಲಕ್ಷ ವಿಮಾ ಪರಿಹಾರ ದೊರಕಿಸಲಾಗಿದೆ ಎಂದು ವಿವರಿಸಿದರು.ಇದುವರೆಗೆ 7,562 ಸ್ವ-ಸಹಾಯ ಗುಂಪುಗಳನ್ನು ರಚಿಸಲಾಗಿದ್ದು, ಗ್ರಾಮೀಣ ಹಾಗೂ ಬಡತನರೇಖೆಗಿಂತ ಕೆಳಗಿರುವ ಒಟ್ಟು 1.26 ಲಕ್ಷ ಜನರು ಫಲನುಭವಿಗಳಾಗಿದ್ದಾರೆ. 2011- 2012ನೇ ಸಾಲಿನಲ್ಲಿ 3,264 ಸ್ವ-ಸಹಾಯ ಗುಂಪುಗಳಿಗೆ ಶೇ. 4ರ ಬಡ್ಡಿ ದರದಲ್ಲಿ ರೂ 3,282 ಲಕ್ಷ ಕಿರು ಹಣಕಾಸು ಯೋಜನೆಯಡಿಯಲ್ಲಿ ಸಾಲ ನೀಡಲಾಗಿದೆ. ಆದ್ದರಿಂದಲೇ ಸತತ 4ನೇ ಬಾರಿಗೆ ನಬಾರ್ಡ್‌ನಿಂದ ಸ್ವ-ಸಹಾಯ ಗುಂಪುಗಳ ರಚನೆ ಮತ್ತು ಲಿಂಕೇಜ್ ಕುರಿತ ಪ್ರಶಸ್ತಿಯನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.ಪ್ರತಿ ವರ್ಷ ಬ್ಯಾಂಕು ಶಾಸನಬದ್ಧ ಆಡಿಟ್ ಅವರಿಂದ `ಎ~ ವರ್ಗದ ಶ್ರೇಣಿ ಪಡೆದಿದ್ದು, ಪ್ರಸಕ್ತ ಸಾಲಿನಲ್ಲೂ ಆ ದಿಸೆಯಲ್ಲಿ ಕಾರ್ಯನಿರ್ವಹಿಸಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.ಈಗಾಗಲೇ ಬ್ಯಾಂಕಿನ 28 ಶಾಖೆಗಳೂ ಕಂಪ್ಯೂಟರೀಕರಣ ಗೊಂಡಿದ್ದು, ಗ್ರಾಹಕರಿಗೆ ತ್ವರಿತ ಸೇವೆಯನ್ನು ಒದಗಿಸಲು ಕೋರ್ ಬ್ಯಾಂಕಿಂಗ್ ಸೌಲಭ್ಯವನ್ನು ಜಾರಿಗೊಳಿಸಲಾಗುವುದು. ಹಾಗೆಯೇ ಪ್ರಸಕ್ತ ಸಾಲಿನಲ್ಲಿ ನಬಾರ್ಡ್ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ 160 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣ ಮಾಡಲಾಗುವುದು ಎಂದರು.ಪ್ರಸಕ್ತ ಸಾಲಿನಲ್ಲಿಯೂ ಸಾಲ ವಿತರಣೆ, ಸಾಲ ವಸೂಲಾತಿ, ಠೇವಣಿ ಸಂಗ್ರಹಣೆ ಮುಂತಾದವುಗಳ ಸಾಮರ್ಥ್ಯ ವೃದ್ಧಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆಯ ಮೂಲಕ ಬ್ಯಾಂಕ್ ಮತ್ತಷ್ಟೂ ಲಾಭ ಗಳಿಸಲು ಕಾರ್ಯಕ್ರಮ ರೂಪಿಸಿದೆ.ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಕಲ್ಲಿಹಾಳ್, ಶಿಕಾರಿಪುರ ತಾಲ್ಲೂಕಿನ ಸುಣ್ಣದಕೊಪ್ಪ, ಸೊರಬ ತಾಲ್ಲೂಕಿನ ಜಡೆ ಹಾಗೂ ಸಾಗರದ ಎಪಿಎಂಸಿ ಯಾರ್ಡ್‌ಗಳಲ್ಲಿ ಶಾಖೆಗಳನ್ನು ತೆರೆಯುವ ಬಗ್ಗೆ ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.ಅಲ್ಲದೇ, ಬ್ಯಾಂಕು ತನ್ನ ಎಲ್ಲಾ ಶಾಖೆಗಳಿಗೂ ನಿವೇಶನ ಖರೀದಿಸಿ, ಸ್ವಂತ ಕಟ್ಟಡ ನಿರ್ಮಿಸುವ ಯೋಜನೆ ಹೊಂದಿದ್ದು, ಈ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಷಡಾಕ್ಷರಿ, ನಿರ್ದೇಶಕರಾದ ಅಗಡಿ ಅಶೋಕ್, ಸರಸ್ವತಿ ನಾಗರಾಜ್, ಯೋಗೇಶ್, ದುಗ್ಗಪ್ಪಗೌಡ, ಚನ್ನವೀರಪ್ಪ, ವ್ಯವಸ್ಥಾಪಕ ಬಿ.ಎನ್. ಚನ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.