ಬುಧವಾರ, ಮೇ 12, 2021
18 °C

`ಡೆಂಗೆಗೆ ಕಲುಷಿತ ನೀರು ಕಾರಣ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ:  ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹರಡಿರುವ ಡೆಂಗೆಗೆ ನೀರಿನ ಸಮಸ್ಯೆ ಬಹುತೇಕ ಕಾರಣವಾಗಿರುವುದು ದೃಢಪಟ್ಟಿದೆ. ಅದರಲ್ಲೂ ಕುಡ್ಲೂರು ಗ್ರಾಮದಲ್ಲಿ  ಈಗಾಗಲೇ ಡೆಂಗೆಗೆ ಎರಡು ಬಲಿಯಾಗಿದ್ದು, 15 ದಿನಕ್ಕೊಮ್ಮೆ  ಟ್ಯಾಂಕರ್‌ನಲ್ಲಿ ನೀರು ಸರಬರಾಜು ಆಗುತ್ತಿದ್ದ ಕಾರಣ ಗ್ರಾಮಸ್ಥರು ನೀರಿನ ಅಭಾವದಿಂದಾಗಿ ಶೇಖರಣೆಗೆ ಮುಂದಾದ ಪರಿಣಾಮ ಡೆಂಗೆಯ ತೀವ್ರತೆ ಹೆಚ್ಚಿದೆ.ತಾಲ್ಲೂಕು ಬರದಿಂದ ತತ್ತರಿಸಿ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದ್ದು, ಏಪ್ರಿಲ್ ತಿಂಗಳಿನಿಂದ ನೀರಿನ ಕೊರತೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲ್ಲೂಕು ಆಡಳಿತ, ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ, ಪುರಸಭೆ ಮುಖ್ಯಾಧಿಕಾರಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಒಳಗೊಂಡ ಸಮಿತಿ ಸಭೆಯಲ್ಲಿ ಚರ್ಚಿಸಿ ಅಗತ್ಯ ಇರುವ ಗ್ರಾಮಗಳಿಗೆ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ವ್ಯವಸ್ಥೆ ಜಾರಿಗೆ ಬಂದು ಸಮಿತಿ ಈಗಾಗಲೇ 4 ಸಭೆಗಳನ್ನು ಸೇರಿ ಒಟ್ಟು 81 ಗ್ರಾಮಗಳಿಗೆ  2259 ಟ್ಯಾಂಕರ್ ನೀರನ್ನು ತಲಾ ಟ್ಯಾಂಕರ್‌ಗೆ 750 ರೂಪಾಯಿಯಂತೆ ಖಾಸಗಿ ಟೆಂಡರ್‌ದಾರರ ಮೂಲಕ ಸರಬರಾಜು ಮಾಡಿದೆ.ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಸಲುವಾಗಿ ಜಿಲ್ಲಾಧಿಕಾರಿಗಳಿಂದ 30 ಲಕ್ಷ ರೂಪಾಯಿ ಸಹಾ ಮಂಜೂರಾಗಿದ್ದು, ಗುತ್ತಿಗೆ ದಾರರು ಸರಬರಾಜು ಮಾಡುತ್ತಿದ್ದ ನೀರಿನ ಮೂಲ ಹಾಗೂ ಅದರ ಗುಣಮಟ್ಟದ ಬಗ್ಗೆ ತಲೆಕೆಡೆಸಿಕೊಳ್ಳದ ಕಾರಣ ಗುತ್ತಿಗೆದಾರರು ಕೆರೆ ಮತ್ತು ಹಳ್ಳ ಕೊಳ್ಳದ ಕೆಂಪು ಬಣ್ಣದಿಂದ ಹಾಗೂ ಶುದ್ಧೀಕರಿಸದ ನೀರನ್ನು ಸರಬರಾಜು ಮಾಡಿದ ಉದಾಹರಣಗೆಳು ಇವೆ.ಮತ್ತೊಂದೆಡೆ ಸಮರ್ಪಕ ಹಾಗೂ ಅಗತ್ಯ ಇರುವಷ್ಟು ನೀರು ಸರಬರಾಜು ಆಗದ ಕಾರಣ ಟ್ಯಾಂಕರ್ ನಲ್ಲಿ ನೀರು ಬಂದಂತಹ ಸಂದರ್ಭದಲ್ಲಿ ನೀರಿನ ಕೊರತೆಯಿಂದಾಗಿ, ನೀರನ್ನು ಗ್ರಾಮಸ್ಥರು ಶೇಖರಣೆಗೆ ಮುಂದಾಗುವ ಅನಿವಾರ್ಯತೆ ಒದಗಿದ ಕಾರಣ ತಾಲ್ಲೂಕಿನಾದ್ಯಂತ ಡೆಂಗೆ ಪ್ರಕರಣಗಳು ಪತ್ತೆ ಆಗುತ್ತಿವೆ ಎಂಬ ಆರೋಪಗಳು ಎಲ್ಲೆಡೆ ಕೇಳಿ ಬರುತ್ತಿದೆ.ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ತಹಶೀಲ್ದಾರ್ ರಂಜಿತಾ, ಟ್ಯಾಂಕರ್ ಮೂಲಕ ಸರಬರಾಜಿನ ಮೇಲ್ಮಿಚಾರಣೆಯನ್ನು ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯತಿ ಎಂಜನಿಯರಿಂಗ್ ವಿಭಾಗದ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ವಹಿಸಿದ್ದು, ಅವರುಗಳು ನೀಡಿದ ಮಾಹಿತಿ ಅನುಸರಿಸಿ ನೀರು ಸರಬರಾಜು ಮಾಡಿ ಅವರಿಂದ ಸರಬರಾಜು ಆದ ಕುರಿತಂತೆ ಸಹಿ ಪಡೆದ ನಂತರವೇ ಬಿಲ್ ಪಾವತಿಸಲಾಗುತ್ತಿದೆ. ಹಾಗಾಗಿ ಪಂಚಾಯಿತಿ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಮೇಲೆ ಹೆಚ್ಚಿನ ಉತ್ತರದಾಯಿತ್ವ ಇದೆ. ನೀರಿನ ಗುಣಮಟ್ಟ ಕುರಿತಂತೆ `ಪ್ರಜಾವಾಣಿ'ಯಲ್ಲಿ ಬಂದ ವರದಿ ಆಧರಿಸಿ  ಈ ಬಗ್ಗೆ ಕ್ರಮಕ್ಕೆ ಮುಂದಾಗಿ, ಗುಣಮಟ್ಟದ ನೀರು ಸರಬರಾಜಿಗಾಗಿ ಗಮನ ನೀಡಲಾಗಿದೆ ಎಂದರು.ಬರ ಪರಿಹಾರ ಯೋಜನೆಯಲ್ಲಿ ಜಿಲ್ಲಾಧಿಕಾರಿಗಳು  ಪೈಪ್‌ಲೈನ್, ಫ್ಲಶಿಂಗ್ ಇನ್ನಿತರೆಗಳಿಗಾಗಿ ಒಟ್ಟು 76.88 ಲಕ್ಷ ಬಿಡುಗಡೆ ಮಾಡಿದ್ದು, ಅದರಲ್ಲಿ 54 ಲಕ್ ರೂಗಳನ್ನು ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ನೀಡಲಾಗಿದೆ. ಮೂರನೇ ವ್ಯಕ್ತಿಯ ತಪಾಸಣೆ ಆಗದ ಕಾರಣ ಉಳಿದ ಹಣವನ್ನು ತಡೆಹಿಡಿಯಲಾಗಿದೆ. ಕಾಮಗಾರಿಗಳ ಪರಿಶೀಲನೆ ಜವಾಬ್ದಾರಿಯನ್ನು ತಹಶೀಲ್ದಾರ್ ರವರಿಗೆ ವಹಿಸಿದ್ದು, ತಾಂತ್ರಿಕ ತಪಾಸಣೆ ಆಗಬೇಕಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.