ಗುರುವಾರ , ಮೇ 26, 2022
30 °C

ಡೇನಿಯಲ್ ಸ್ಯಾಂಡರ್‌ಸನ್ ನಿಘಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೇನಿಯಲ್ ಸ್ಯಾಂಡರ್‌ಸನ್ ಅವರ Dictionary. Canarese and English’  ನಿಘಂಟು 1858ರಲ್ಲಿ ಪ್ರಕಟವಾಗಿದೆ. ಈ ಕೋಶದಲ್ಲಿ ಸುಮಾರು 23,000 ಶಬ್ದಗಳಿಗೆ ಅರ್ಥವನ್ನು ನೀಡಲಾಗಿದೆ. ಬೆಂಗಳೂರಿನ ಕ್ರೈಸ್ತ ಕೇಂದ್ರದ ಶಾಲೆಯಲ್ಲಿ ಸ್ಯಾಂಡರ್‌ಸನ್ ಸುಮಾರು 1845ರಿಂದ ಇದ್ದನು. ವೆಸ್ಲಿ ಪ್ರೆಸ್ಸಿನಲ್ಲಿ ಮುದ್ರಣಗೊಂಡ ಈ ನಿಘಂಟು ಮೊದಲಿಗೆ ಡೆಮ್ಮಿ ಆಕಾರದ 700 ಪುಟಗಳಲ್ಲಿ ಮುದ್ರಣಗೊಂಡಿದ್ದು ಮತ್ತೆ 1858ನೆಯ ಡಿಸೆಂಬರ 1ನೆಯ ದಿನಾಂಕದ ಹೊತ್ತಿಗೆ ಮರುಮುದ್ರಣ ಕಂಡಿದೆ. ಮರುಮುದ್ರಣವು ಡೆಮ್ಮಿ ಅಷ್ಟದಳಾಕಾರದ್ದಾಗಿದ್ದು 1050 ಪುಟ ಹೊಂದಿದೆ. ಸ್ಯಾಂಡರ್‌ಸನ್ ಬಹುಶ್ರುತ ಸಂಸ್ಕೃತ ಕನ್ನಡ ವಿದ್ವಾಂಸ. 19ನೇ ಶತಮಾನದಲ್ಲಿ ಸಮಾಜಸೇವೆ ಹಾಗೂ ಸಾಹಿತ್ಯ ಸೇವೆ ಸಲ್ಲಿಸಿದ ಪಾಶ್ಚಾತ್ಯ ಪ್ರಮುಖರಲ್ಲಿ ಒಬ್ಬಾತ. ಸುಮಾರು 5000 ಪುಟಗಳಷ್ಟು, ಸಾಹಿತ್ಯ ರಚನೆ ಇವನದು. ಆ ಕಾಲದ ಪತ್ರಿಕೆಗಳಿಂದ, `ವೃತ್ತಾಂತ ಬೋಧಿನಿ~ ಹಾಗೂ `ವಾಗ್ವಿಧಾಯಿನಿ~ಗಳಲ್ಲಿ ಇವನ ಬೈಬಲ್ ಸೂಕ್ತಿಗಳು, ಗೀತೆಗಳು ಹಾಗೂ ಹಲವಾರು ವಿಚಾರ ಪೂರ್ಣಲೇಖನಗಳು ಪ್ರಕಟವಾಗಿದ್ದಲ್ಲದೆ, ಇತರರೊಂದಿಗೆ `ಕನ್ನಡ ವ್ಯಾಕರಣ~ ಧಾರಾವಾಹಿಯಾಗಿ ಪ್ರಕಟವಾಯಿತು.1841ರಲ್ಲಿ `ಏಸುವಿನ ಬಳಿಗೆ ಬಾ~, 1858ರ ‘Village dialogues in canarese’, , 1860ರಲ್ಲಿ `ಕಥಾಸಂಗ್ರಹ~ ಇವುಗಳು ಪ್ರಕಟವಾದವು. ಕಥಾಸಂಗ್ರಹದ ವಿವಿಧ ಭಾಗಗಳಲ್ಲಿ ಪಂಚತಂತ್ರ, ಶಿವಪುರಾಣ, ತೆನಾಲಿ ರಾಮಕೃಷ್ಣ, ಹಿಡಿಂಬವಧೆ, ದುಶ್ಯಂತೋಪಾಖ್ಯಾನ, ರಾಮಾಯಣ ತ್ತು ದಶಾವತಾರದ ಕಥೆಗಳು ಪ್ರಕಟವಾಗಿವೆ. ಜೈಮಿನಿ ಭಾರತದ ಆಯ್ದ ಭಾಗಗಳನ್ನು ಇಂಗ್ಲಿಷ್‌ನಲ್ಲಿ ಗದ್ಯರೂಪಕ್ಕೆ ಅನುವಾದಿಸಿದ್ದಾನೆ. ಇವೆಲ್ಲ ಅವನ ಜಾತ್ಯತೀತ ಮನೋಭಾವದ ದ್ಯೋತಕವಾಗಿದೆ.ಈ ನಿಘಂಟು ಒಂದು ದೃಷ್ಟಿಯಿಂದ ವಿಲಿಯಂ ರ‌್ಹೀವ್ ಅವರ‘A Dictionary, Carnataka and English’ ಕೋಶದ ಪರಿಷ್ಕೃತ ಆವೃತ್ತಿ ಎಂದು ಅನೇಕರು ಹೇಳುತ್ತಾರಾದರೂ ಇವನು ಮಾಡಿರುವ ಕೆಲಸವನ್ನು ನೋಡಿದರೆ ಇದೊಂದು `ಸ್ವತಂತ್ರ ನಿಘಂಟು~ ಎನ್ನಲು ಅಡ್ಡಿಯಿಲ್ಲ. `ರ‌್ಹೀವನ ನಿಘಂಟು ಕೊಂಡೊಯ್ಯಲು ಹಿಡಿತಕ್ಕೆ ಮೀರಿದ್ದರಿಂದ ಚಿಕ್ಕ ಆಕಾರದಲ್ಲಿ ಒಂದು ನಿಘಂಟು ತರಬೇಕೆಂದು ರ‌್ಹೀವನ ನಿಘಂಟನ್ನು ಈ ಆಕಾರದಲ್ಲಿ ತಂದಿದ್ದೇನೆ~ ಎಂದು ಸ್ಯಾಂಡರ್‌ಸನ್ ಮುನ್ನುಡಿಯಲ್ಲಿ ವಿನಮ್ರನಾಗಿ ಹೇಳಿದ್ದಾನೆ. ವೆಸ್ಲಿಯನ್ ಮಿಷನ್ ಸೊಸೈಟಿಯವರು ಕನ್ನಡದ ಅಕ್ಷರಗಳ ಮೊಳೆಗಳನ್ನು ಚಿಕ್ಕ ಆಕಾರದಲ್ಲಿ ರೂಪಿಸಿದ್ದರಿಂದ ಮತ್ತು ಮೈಸೂರು ಮಹಾರಾಜರ ಆಳ್ವಿಕೆಯ ಸಂಸ್ಥಾನಗಳ ಕಮೀಷನರ್ Sir Mark Cubban ಅವರ ಪ್ರೋತ್ಸಾಹದಿಂದ ಈ ಕೃತಿ ಹೊರಬರಲು ಸಾಧ್ಯವಾಯಿತೆಂದು ಸ್ಯಾಂಡರ್‌ಸನ್ ಸ್ಮರಿಸಿದ್ದಾನೆ.ಸ್ಯಾಂಡರ್‌ಸನ್ ಪ್ರತಿ ಉಲ್ಲೇಖಶಬ್ದಕ್ಕೆ ಸಾಮಾನ್ಯವಾಗಿ ನಿಘಂಟಿನಲ್ಲಿ ಬರುವ 9 ವಲಯಗಳನ್ನು ನೀಡುತ್ತಾನೆ. ಅವುಗಳೆಂದರೆ: ಯಾವ ಭಾಷೆ (ದೇಶ್ಯ/ಅನ್ಯದೇಶ್ಯ), ಉಲ್ಲೇಖಶಬ್ದ, ಉಲ್ಲೇಖಶಬ್ದದ ಇತರ ರೂಪಗಳು, ಉಲ್ಲೇಖಶಬ್ದದ ವ್ಯಾಕರಣೀಯ ಸ್ಥಾನಮಾನ, ಉಚ್ಛಾರಣೆ (ಇಂಗ್ಲಿಷ್ ಲಿಪಿಯಲ್ಲಿ), ಅರ್ಥ (ಇಂಗ್ಲಿಷ್ ಭಾಷೆಯಲ್ಲಿ), ಪರ್ಯಾಯಪದ, ಉಲ್ಲೇಖ ಪದವಿರುವ ವಾಕ್ಯಪ್ರಯೋಗ, ಈ ವಾಕ್ಯದ ಇಂಗ್ಲಿಷ್ ರೂಪ, ಸಮಾಸಪದಗಳ ಬಿಡಿಸಿದ ರೂಪ  ಹಾಗೂ ಉಲ್ಲೇಖಪದದ ವ್ಯತ್ಪತ್ತಿ.ರ‌್ಹೀವ್‌ನ ಅರ್ಥಕೋಶಕ್ಕೆ ಪ್ರಧಾನವಾಗಿ ಏಳು ಗುಣಾತ್ಮಕ ಬದಲಾವಣೆಗಳನ್ನು ಈ ಕೋಶದಲ್ಲಿ ಅಳವಡಿಸಿ ಪುನಃ ರಚಿಸಲಾಗಿದೆ. ಅವುಳೆಂದರೆ- 11,000 ಹೆಚ್ಚುವರಿ ಉಲ್ಲೇಖ(Entry)ಗಳನ್ನು ಸೇರಿಸಿದೆ ಹಾಗೂ ಅನೇಕ ಶಬ್ದಗಳಿಗೆ ಇನ್ನೂ ಹೆಚ್ಚಿನ ಅರ್ಥಗಳನ್ನು ನೀಡಲಾಗಿದೆ. ಪ್ರತಿ ಶಬ್ದದ ಉಚ್ಛಾರಣೆಯನ್ನು ಇಂಗ್ಲಿಷ್‌ನ ಇಟಾಲಿಕ್ಸ್ ರೂಪದಲ್ಲಿ ನೀಡಲಾಗಿದೆ. ಉದಾ: ಕೆಸರು, ಕೆಸುರು,  s Kesaru, Kesuru. ಉಲ್ಲೇಖಗಳು ಸಮಾಸಪದ ಅಥವಾ ಕೂಡುಪದಗಳಾಗಿದ್ದಲ್ಲಿ ಅವನ್ನು ಬಿಡಿಸಿ ಕೊಡಲಾಗಿದೆ. ಉದಾ: ಕೆಳಗಡೆ, ಕೆಳತಟ್ಟು,  Kela-gade, Kela-tattu.. ಅನೇಕ ಪದಗಳ ವ್ಯತ್ಪತ್ತಿಯನ್ನು ಆವರಣ ಚಿಹ್ನೆಯೊಳಗೆ ನೀಡಲಾಗಿದೆ. ಉದಾ: ಜಂಮ  (ಬ್ರಹ್ಮ), ಪವಳ  (ಪ್ರವಾಳ). ಉದಾಹೃತ ಪದಗಳನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬಿಡಿಸಿ ಕೊಡಲಾಗಿದೆ. ಅನೇಕ ವ್ಯಾಖ್ಯೆಗಳನ್ನು ಹೊಸದಾಗಿ ಸೇರಿಸಿ ಹೆಚ್ಚಿನ ಅರ್ಥಗಳನ್ನು ನೀಡಲಾಗಿದೆ. ಉಲ್ಲೇಖಗಳನ್ನು ಆದಷ್ಟೂ ಶುದ್ಧರೂಪಗಳಲ್ಲಿ ನೀಡಲಾಗಿದೆ ಹಾಗು ತಪ್ಪು ರೂಪಗಳನ್ನು ಕೈಬಿಡಲಾಗಿದೆ. ಈ ನಿಘಂಟಿನಲ್ಲಿ ಉಲ್ಲೇಖವಾಗಿರುವ, ಆ ಕಾಲದಲ್ಲಿ ಬಳಕೆಯಲ್ಲಿದ್ದ ಅನೇಕ ಶಬ್ದಗಳು ಈಗ ಬಳಕೆಯಲ್ಲಿಲ್ಲ. ಅಷ್ಟೇ ಅಲ್ಲದೆ ಅನೇಕ ಅಪರೂಪದ ಶಬ್ದಗಳನ್ನು ಈ ಕೋಶದಲ್ಲಿ ಗಮನಿಸಬಹುದು:c. ಗದರ್ದ್ುರು  garrduru,s.The smell of cow’s urine (page&361)

c. ತಂಡಸ Tandasa, s. A goldsmith’s tongs (page&480)

c. ತಂಡಲು Tandalu, s.The fleshy part of the arm.ಇದರ ಜೊತೆಗೆ, ಅನ್ಯಧರ್ಮೀಯರಿಗೆ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಪರಿಸರದ ಶಬ್ದಗಳಿಗೆ ಅರ್ಥ ಕೊಡುವುದು ಎಷ್ಟು ದುಸ್ತರ ಎಂಬುದಕ್ಕೆ `ಕೋಡಬಳೆ~ ಶಬ್ದವನ್ನು ಗಮನಿಸಬಹುದು. (ಕೋಡಬಳೆ, ಕೋಡಬೇಳೆ, ಕೋಡುಬಳಿ  Koda-bale, koda-bele, kodu-bali, s A cake made from the floor of a rice cumbum, or, millet, in the form of a coiled snake).ಯಾವುದೇ ಭಾಷೆಯ ಸಮಗ್ರ ಅಧ್ಯಯನಕ್ಕೆ ಒಳ್ಳೆಯ ನಿಘಂಟು ಅತ್ಯವಶ್ಯಕ. ಆಯಾ ಭಾಷೆಯ ಅತ್ಯುತ್ತಮ ಬರಹಗಾರರ ವಾಕ್ಯಪ್ರಯೋಗಗಳನ್ನು ಉದಾಹರಣೆಯಾಗಿ ನೀಡುವ ಪುರಾಣ, ಇತಿಹಾಸ, ವಿಜ್ಞಾನ, ಸಸ್ಯಶಾಸ್ತ್ರ, ಖಗೋಳಶಾಸ್ತ್ರ, ಭೂಗರ್ಭಶಾಸ್ತ್ರ ಮುಂತಾದ ಕ್ಷೇತ್ರಗಳ ತಿಳಿವಳಿಕೆಯನ್ನು ನೀಡುವ ಸ್ವಯಂಪೂರ್ಣ ನಿಘಂಟು ಅತ್ಯಗತ್ಯ ಎಂಬುದು ಅವನ ನಿಲುವಾಗಿದ್ದು, ಅಂತಹ ನಿಘಂಟುಗಳು ಕನ್ನಡದಲ್ಲಿ ಇಲ್ಲದಿರುವುದಕ್ಕಾಗಿ ಪರಿತಪಿಸಿದ್ದಾನೆ.ಆದರೆ ನಮ್ಮ ಈ ಸಂದರ್ಭದಲ್ಲಿ ಅವನು ಹೇಳಿದ ಕೊರತೆಗಳು ಬಹುಮಟ್ಟಿಗೆ ನೀಗಿವೆ ಎಂದು ಹೇಳಬಹುದು. ಕನ್ನಡ ನಿಘಂಟುಗಳ ಮಾಲೆಯಲ್ಲಿ Daniel Sanderson ಅವರ  A DICTIONARY, Canarese and English ಕೋಶಕ್ಕೆ ಒಂದು ಹಿರಿದಾದ ಸ್ಥಾನವಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.