ಶನಿವಾರ, ಮೇ 8, 2021
20 °C
ಕರಾವಳಿಯಲ್ಲಿ ಜಿಟಿ ಜಿಟಿ ಮಳೆ : ಮುಂಗಾರು ಆರಂಭದ ಸೂಚನೆ

ಡೋಣಿ ನದಿಗೆ ಪ್ರವಾಹ: ಸಂಚಾರಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಕರಾವಳಿ, ಕೊಡಗು ಮತ್ತು ಉತ್ತರ ಕರ್ನಾಟಕದ ಕೆಲವೆಡೆ ಗುರುವಾರ ಮಳೆಯಾಗಿದೆ. ವಿಜಾಪುರ ಜಿಲ್ಲೆಯ  ತಾಳಿಕೋಟೆ ಸಮೀಪದ  ಹಡಗಿನಾಳ ರಸ್ತೆಯಲ್ಲಿ ಡೋಣಿ ನದಿಗೆ ನಿರ್ಮಿಸಿರುವ ನೆಲ ಮಟ್ಟದ ಸೇತುವೆ ಮೇಲೆ ಭಾರಿ ಪ್ರವಾಹ ಬಂದು ಏಳೆಂಟು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.ಕರಾವಳಿಯಲ್ಲಿ ಮಂಗಳೂರು ಸುತ್ತಮುತ್ತ  ಮುಂಗಾರು ಮಳೆ ಆರಂಭವಾದ ಸೂಚನೆ ಲಭಿಸಿದ್ದು ಜಿಟಿಜಿಟಿ ಮಳೆ ಸುರಿಯತೊಡಗಿದೆ.ಗುರುವಾರ ನಸುಕಿನ 4 ಗಂಟೆ ಸುಮಾರಿಗೆ ಮಂಗಳೂರು ಸುತ್ತಮುತ್ತ ಗುಡುಗು ಸಹಿತ ಮಳೆ ಸುರಿಯತೊಡಗಿತು. ಸಂಜೆಯವರೆಗೆ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಸಂಜೆಯಿಂದ ಮತ್ತೆ ಮಳೆ ಆರಂಭವಾಗಿತ್ತು.ಮಂಗಳೂರು ತಾಲ್ಲೂಕಿನ ಮೂಲ್ಕಿ ಕೊಯ್ಯಕುಡೆ ಗ್ರಾಮದಲ್ಲಿ ಶೇಖರ ಅಮೀನ್ ಅವರ ಹೆಂಚಿನ ಮನೆಗೆ  ತೆಂಗಿನ ಮರ ಬಿದ್ದು 25 ಸಾವಿರ ರೂಪಾಯಿ ಹಾನಿ ಸಂಭವಿಸಿದೆ.ಮಂಗಳೂರಿನಲ್ಲಿ 31.3 ಮಿ.ಮೀ., ಮೂಡುಬಿದಿರೆಯಲ್ಲಿ 6.2 ಮಿ.ಮೀ,, ಪುತ್ತೂರಿನಲ್ಲಿ 7.1 ಮಿ.ಮೀ. ಮಳೆಯಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಸುರಿದಿದೆ.ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೂ, ಮಳೆ ಸುರಿಯಲಿಲ್ಲ.

ಇಡೀ ರಾತ್ರಿ ಮಳೆ: ತಾಳಿಕೋಟೆ, ಮುದ್ದೇಬಿಹಾಳ ಸುತ್ತಮುತ್ತ ಬುಧವಾರ ಸಂಜೆಯಿಂದ ಇಡೀ ರಾತ್ರಿ ಮಳೆಯಾಗಿದ್ದು ಗುರುವಾರ ಬೆಳಗಿನ ಜಾವ 3 ಗಂಟೆಯಿಂದ ಮುಂಜಾನೆ 10 ಗಂಟೆಯವರೆಗೆ ವಾಹನ ಸಂಚಾರ ಸ್ಥಗಿತಗೊಂಡು ಜನರು ಪರದಾಡಿದರು.ಇದಲ್ಲದೆ ಮೂಕಿಹಾಳ ಬಳಿಯ ಸೋಗಲಿ ಹಳ್ಳಕ್ಕೆ ಬುಧವಾರ ಸಂಜೆ ಪ್ರವಾಹ ಬಂದು ಎರಡು ತಾಸಿಗೂ ಹೆಚ್ಚು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ನೆಲಮಟ್ಟದ ಡೋಣಿ ಸೇತುವೆಯ ಮೇಲೆ ಪ್ರವಾಹದಿಂದಾಗಿ ಗುರುವಾರ ಹಾಲಿನ ವಾಹನಗಳು, ಬಸ್ಸುಗಳು, ಟ್ರ್ಯಾಕ್ಟರ್, ಕಾರ್, ಜೀಪ್ ಮುಂತಾದ ವಾಹನಗಳು ನೀರು ಇಳಿಯುವವರೆಗೆ ಆಚೆ ದಡದಲ್ಲಿಯೇ ಕಾಯಬೇಕಾಯಿತು.ಮಧ್ಯಾಹ್ನದ ಹೊತ್ತಿಗೆ ಪ್ರವಾಹ ಇಳಿಮುಖವಾದರೂ ನೀರಲ್ಲಿ ಕೊಚ್ಚಿಕೊಂಡು ಅಪಾರ ಪ್ರಮಾಣದಲ್ಲಿ ಮುಳ್ಳು- ಕಂಟಿಗಳು ಬಂದಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು. ಸ್ಥಳೀಯ ಆಶ್ರಯ ಬಡಾವಣೆ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಈಳಗೇರ ಮತ್ತು ಇತರರು ಮುಳ್ಳು-ಕಂಟಿಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಸಂಚಾರ ನಿಷೇಧ: ವಿಜಾಪುರ ರಸ್ತೆಯಲ್ಲಿ ಡೋಣಿ ನದಿಗೆ ನಿರ್ಮಿಸಿರುವ ಬೃಹತ್ ಸೇತುವೆಯ ಮಧ್ಯಭಾಗ ಶಿಥಿಲಗೊಂಡಿದ್ದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ ಹಡಗಿನಾಳ - ಮೂಕಿಹಾಳ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿವೆ.ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ವಿಜಾಪುರ, ಉತ್ತರ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಗುರುವಾರ ಜಿಟಿಜಿಟಿ ಮಳೆಯಾಗಿದೆ.ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತ್ತು ಸುತ್ತಮುತ್ತ, ಬಾಗಲಕೋಟೆ, ವಿಜಾಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ರಭಸದ ಮಳೆಯಾಗಿದೆ.ಕೊಡಗಿನಲ್ಲೂ ಮಳೆ: ಕೊಡಗು ಜಿಲ್ಲೆಯಾದ್ಯಂತ ಗುರುವಾರ ತುಂತುರು ಮಳೆಯಾಗಿದೆ. ಮಡಿಕೇರಿಯಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಆಗಾಗ ತುಂತುರು ಮಳೆ ಸುರಿಯುತ್ತಿತ್ತು.ಮಧ್ಯಾಹ್ನ ಹಾಗೂ ಸಂಜೆ ವೇಳೆ ದಟ್ಟ ಮಂಜಿನ ಜತೆಗೆ ತುಂತುರು ಮಳೆಯಾಯಿತು. ಪೊನ್ನಂಪೇಟೆ, ಭಾಗಮಂಡಲ, ನಾಪೋಕ್ಲು, ಶಾಂತಳ್ಳಿ, ಶ್ರೀಮಂಗಲ, ಕುಟ್ಟ ಸೇರಿದಂತೆ ಇತರ  ಭಾಗದಲ್ಲಿಯೂ ಸ್ಪಲ್ಪ ಪ್ರಮಾಣದಲ್ಲಿ ಮಳೆಯಾಗಿರುವ ವರದಿಯಾಗಿದೆ.ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ ಸೇರಿದಂತೆ ಜಿಲ್ಲೆಯ ಇತರ ಭಾಗಗಳಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.