ಸೋಮವಾರ, ಮೇ 17, 2021
25 °C

ತಂತ್ರಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಂತ್ರಗಾರರು

ಇಪ್ಪತ್ತು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ಚಿತ್ರರಂಗದ ಆಳ-ಅಗಲಗಳನ್ನು ಕಂಡಿರುವ ಬಾಲಾಜಿಯವರನ್ನು ಸ್ವತಂತ್ರ ನಿರ್ದೇಶಕರಾಗಿ ಮಾಡಿದ್ದು ನಿರ್ಮಾಪಕ ಜಿ.ಆರ್.ಮೋಹನ್ ಕೃಷ್ಣ. ಈ ವಾರ ಅವರ ಈ ಸಾಹಸದ ಫಲ ಗೊತ್ತಾಗಲಿದೆ. `ತಂತ್ರ~ ಚಿತ್ರ ತೆರೆಕಾಣುತ್ತಿರುವ ಈ ಸಂದರ್ಭ ನಿರ್ದೇಶಕ, ನಿರ್ಮಾಪಕರಿಬ್ಬರಿಗೂ ಸಂತಸದ ಗಳಿಗೆ.`ಮೊದಲರ್ಧ ಪ್ರೇಕ್ಷಕರ ಮೂಡ್ ಹಿಡಿದಿಟ್ಟರೆ, ಎರಡನೇ ಅರ್ಧದಲ್ಲಿ ಕಥೆ ಸೂಕ್ತ ತಿರುವುಗಳನ್ನು ಪಡೆಯುತ್ತದೆ. ಕುತೂಹಲ ಉಳಿಸಿಕೊಂಡು ನೋಡಿಸಿಕೊಳ್ಳುವ ಗುಣ ಈ ಚಿತ್ರಕ್ಕಿದೆ~ ಎಂದು ಬಾಲಾಜಿ ಆತ್ಮವಿಶ್ವಾಸದಿಂದ ಹೇಳಿದರು. ಯಾವುದನ್ನೋ ಸಾಧಿಸಲು ನಾಲ್ವರು ಹೊಸೆಯುವ ತಂತ್ರವನ್ನೇ ಮುಂದುಮಾಡಿ ಅವರು ಸಿನಿಮಾ ಮಾಡಿದ್ದಾರೆ. ಕಥೆ ಏನೆಂಬ ಗುಟ್ಟನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲ.ಚಿತ್ರದ ಪ್ರಮುಖ ಪಾತ್ರಧಾರಿ ಗಿರೀಶ್ ಮಟ್ಟಣ್ಣನವರ್. ಅವರ ಪ್ರಕಾರ ಇದು ಆಫ್‌ಬೀಟ್ ಸಿನಿಮಾ. ಉದ್ದುದ್ದ ಸಂಭಾಷಣೆ, ಸಿದ್ಧಸೂತ್ರ ಯಾವುದೂ ಇಲ್ಲದಿದ್ದರೆ ಮಾತ್ರ ತಾವು ನಟಿಸಲು ಸಿದ್ಧ ಎಂದು ಅವರು ಮೊದಲೇ ಷರತ್ತು ಹಾಕಿದ್ದರು. ನಿರ್ದೇಶಕರು ನುಡಿದಂತೆಯೇ ನಡೆದಿರುವ ತೃಪ್ತಿ ಅವರಿಗೆ ಇದೆ.ಚಿತ್ರಕ್ಕೆ ಹಾಡುಗಳಿಲ್ಲದಿದ್ದರೂ ಅಶೋಕ್ ಹಿನ್ನೆಲೆ ಸಂಗೀತ ನೀಡಿದ್ದಾರೆ. `ಜಂಬೆ~ ವಾದ್ಯದ ಕಂಪನಗಳು ಚಿತ್ರದ ಭಾವತೀವ್ರತೆಯನ್ನು ಹೆಚ್ಚಿಸುವಂತಿವೆ ಎಂದ ಅವರಿಗೆ ಅಂದುಕೊಂಡಂತೆಯೇ ಸಂಗೀತ ಮಾಡಲು ಆಗಲಿಲ್ಲವಲ್ಲ ಎಂಬ ಅತೃಪ್ತಿಯೂ ಇದೆ. ಕೆಲಸ ಅಚ್ಚುಕಟ್ಟಾಗಿ ಆಗಬೇಕು ಎಂಬ ಅವರ ತುಡಿತಕ್ಕೆ ಈ ಅತೃಪ್ತಿ ಸಾಕ್ಷಿಯಂತಿತ್ತು.ನವ್ಯಾ, ಪ್ರಮೋದ್ ಚಕ್ರವರ್ತಿ, ಆಶಾ, ಪ್ರಣವ ಚಕ್ರವರ್ತಿ, ಬಿರಾದರ್, ಸಿದ್ದರಾಜ್ ಕಲ್ಯಾಣ್‌ಕರ್, ಮಿಮಿಕ್ರಿ ರಾಜ್‌ಗೋಪಾಲ್ ಮೊದಲಾದವರು ನಟಿಸಿರುವ `ತಂತ್ರ~ ಚಿತ್ರಕ್ಕೆ `ಮಂತ್ರಸ್ಪರ್ಶ~ ಇದ್ದೀತೆ ಎಂಬುದು ಬೇಗ ಗೊತ್ತಾಗಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.