ಬ್ರಿಟನ್ನ ರಾಜಕುಮಾರ ವಿಲಿಯಮ್ಗೆ ಭಾರತೀಯ ಪರಂಪರೆಯ ಹಿನ್ನೆಲೆ ಇದೆ ಎಂಬುದು ಇತ್ತೀಚೆಗೆ ಬಹಿರಂಗವಾಗಿತ್ತು. ‘ಅಬ್ಬಬ್ಬಾ! ವೈಜ್ಞಾನಿಕ ಸಂಶೋಧನೆಗಳು ಎಂಥಾ ಮೂಲವನ್ನಾದರೂ ಪತ್ತೆ ಹಚ್ಚಬಲ್ಲವಪ್ಪಾ...’ ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟಿದ್ದರು. ಡಿ.ಎನ್.ಎ . ವಿಶ್ಲೇಷಣೆಯಿಂದ ವಿಲಿಯಮ್ ಅವರ ಮುತ್ತಜ್ಜಿಯ ಹಿನ್ನೆಲೆ ಹುಡುಕುವುದು ಸಾಧ್ಯವಾಯಿತು ಎಂದು ವಿಜ್ಞಾನಿಗಳು ಹೇಳಿದರು.

ಇದೇ ಸುಮಾರಿಗೆ ಹಾಲಿವುಡ್ ನಟಿ ಏಂಜಲಿನಾ ಜೋಲಿ ಕೂಡ ಸುದ್ದಿಯಲ್ಲಿದ್ದರು. ಏಂಜಲಿನಾ ತಮ್ಮ ಸಿನಿಮಾಗಳಿಗಿಂತ ಸಾಮಾಜಿಕ ಕಾರ್ಯಗಳು ಮತ್ತು ಹೊಸ ಯೋಚನೆಗಳ ಮೂಲಕವೇ ಸುದ್ದಿ ಮನೆಯಲ್ಲಿ ಚಾಲ್ತಿಯಲ್ಲಿರುವುದು ಜಾಸ್ತಿ. ಈ ಬಾರಿ ಏಂಜಲಿನಾರ ತೀರಾ ವೈಯಕ್ತಿಕ ವಿಚಾರ ಸುದ್ದಿಯಾಯಿತು. ತಮಗೆ ಸ್ತನಗಳ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂಬುದನ್ನು ವೈದ್ಯಕೀಯ ತಪಾಸಣೆ ಮೂಲಕ ಪತ್ತೆ ಮಾಡಿದ ಆಕೆ, ಸ್ತನಗಳನ್ನು ತೆಗೆದು ಹಾಕುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಅವರ ಈ ನಿರ್ಧಾರಕ್ಕೂ ಮೂಲ ಡಿ.ಎನ್.ಎ. ಅಧ್ಯಯನ ವರದಿಯೇ ಆಗಿತ್ತು.

ಡಿ.ಎನ್.ಎ. ಅಧ್ಯಯನದಿಂದ ಮೂಲ ಹುಡುಕುವುದಾಗಲೀ, ಮುಂಬರುವ ಕಾಯಿಲೆಗಳನ್ನು ಮೊದಲೇ ಗುರುತಿಸುವುದಾಗಲೀ ಸಾಧ್ಯ ಎಂಬುದನ್ನು ಓದುತ್ತಿರುವಾಗ ಕಣ್ಣ ಮುಂದೆ ಕರ್ನಾಟಕ-– ಕೇರಳ ಗಡಿ ವ್ಯಾಪ್ತಿಯ ಎಂಡೋಸಲ್ಫಾನ್ ಪೀಡಿತ ಪ್ರದೇಶದ ಮನೆಗಳು ಬಂದು ನಿಲ್ಲುತ್ತವೆ.

ಕಾಸರಗೋಡಿನ ಮುಳಿಯದ ಮುಚ್ಚಿರ ಪದವು ಎಂಬ ಹಳ್ಳಿಯಲ್ಲಿ ಒಂದು ಮನೆ. ಪುಟ್ಟ ಮಕ್ಕಳ ಕಿಲ ಕಿಲ ಸದ್ದಿಲ್ಲದ, ನೀರವ ಮೌನದ ಮನೆಯಲ್ಲಿ ಆಗಾಗ ನರಳುವ, ಕಿರುಚುವ ಸದ್ದು. ಮನೆಯಾಕೆ ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿಯಲೇಬೇಕು. ಆಕೆಯ ಇಬ್ಬರು ಮಕ್ಕಳೂ ಅಂಗವಿಕಲರು. ಮಾತ್ರವಲ್ಲ ಮಾನಸಿಕ ಬೆಳವಣಿಗೆಯೂ ಸಮರ್ಪಕವಾಗಿಲ್ಲ. 14 ಮತ್ತು 16 ವರ್ಷದ ಇಬ್ಬರು ಗಂಡು ಮಕ್ಕಳು ಚೆನ್ನಾಗಿದ್ದಿದ್ದರೆ ಆಕೆ ‘ಕೋಟಿ ಚೆನ್ನಯರಂತಹ ಮಕ್ಕಳನ್ನು ಪಡೆದ ಅಮ್ಮ ನಾನು’ ಎಂದು ಬೀಗುತ್ತಿದ್ದಳೇನೋ. ಆದರೆ ಎಂಡೋಸಲ್ಫಾನ್ ಎಂಬ ಮಹಾರಾಕ್ಷಸ ಆಕೆಯ ಬದುಕನ್ನು ಚಿಂತಾಜನಕ ಸ್ಥಿತಿಗೆ ದೂಡಿದೆ.

ಒಂದೆಡೆ ಈ ಇಬ್ಬರೂ ಮಕ್ಕಳನ್ನು, ಆರು ತಿಂಗಳ ಮಗುವನ್ನು ನೋಡಿಕೊಳ್ಳುವಂತೆ ಆಕೆ ಪಾಲನೆ ಮಾಡಬೇಕಾಗಿದೆ. ಮತ್ತೊಂದೆಡೆ, ಮನೆ ನಿಭಾಯಿಸಲು ದುಡಿಮೆಯನ್ನೂ ಮಾಡಬೇಕಾಗಿದೆ. ಔಷಧಿಗೆ, ಆಸ್ಪತ್ರೆಗೆಂದು ಆ ಮಕ್ಕಳನ್ನು ಎತ್ತಿ ಸಾಗಿಸುವುದು ಇತ್ತೀಚೆಗೆ ಆಕೆಯಿಂದ ಸಾಧ್ಯವಾಗುತ್ತಿಲ್ಲ. ಕಷ್ಟಕ್ಕೆ ಹೆಗಲಾಗಬೇಕಿದ್ದ ಗಂಡ ಕುಡಿತಕ್ಕೆ ಶರಣಾಗಿದ್ದಾನೆ. ಜವಾಬ್ದಾರಿಯಿಂದ ತಣ್ಣಗೆ ನುಣುಚಿಕೊಂಡಿದ್ದಾನೆ.

ಇದು ಒಂದು ಮನೆಯ ಕತೆಯಲ್ಲ. ಆ ಹಳ್ಳಿಯಿಡೀ ಇಂತಹ ಹತ್ತಾರು ಮನೆಗಳಿವೆ. ಕೆಲವೆಡೆ ಒಂದೇ ಮನೆಯಲ್ಲಿ ಮೂರ್ನಾಲ್ಕು ಮಂದಿ ಇಂತಹ ದುಃಸ್ಥಿತಿಯಲ್ಲಿದ್ದಾರೆ. ಮನೆಗೆ ಆಧಾರವಾಗಿ ಮಕ್ಕಳು ಹುಟ್ಟುತ್ತಾರೆ ಎಂಬ ನಿರೀಕ್ಷೆಯಲ್ಲಿರುವ ತಾಯಂದಿರು ನಿರಾಶರಾಗುತ್ತಿದ್ದಾರೆ. ಹುಟ್ಟುವ ಮಕ್ಕಳ ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯತೆಗೆ ಚಿಕಿತ್ಸೆ ಮಾಡುವುದರಲ್ಲೇ ಹೆಣ್ಣು ಮಕ್ಕಳು ತಮ್ಮ ಬದುಕು ಸವೆಸುತ್ತಿದ್ದಾರೆ. ಅವರ ಪಾಲಿಗೆ ತಾಯ್ತನ ಸಂಭ್ರಮವಾಗಿ ಉಳಿದಿಲ್ಲ.

ಎಂಡೋಪೀಡಿತರಿಗೆ ಪರಿಹಾರ, ಸಾಂತ್ವನ ಕೇಂದ್ರ, ಸಮೀಕ್ಷೆ ಕಾರ್ಯ ಏನೇ ನಡೆಯುತ್ತಿದ್ದರೂ ಮಹಿಳೆಯರ ನಿಜವಾದ ಪಡಿಪಾಟಲಿಗೆ ಪೂರ್ಣ ವಿರಾಮ ಹಾಕುವ ಪ್ರಯತ್ನಗಳು ನಡೆದಿಲ್ಲ. ಎಂಡೋಸಲ್ಫಾನ್ ಪೀಡಿತರ ಪರವಾಗಿ ಸಾಮಾಜಿಕ ಹೋರಾಟಗಳು ನಡೆದಿವೆಯೇ ಹೊರತು, ಆಗಿರುವ ದುರಂತದಿಂದ ಜನರನ್ನು ಕಾಪಾಡುವ ವೈಜ್ಞಾನಿಕ ಅಧ್ಯಯನ ನಡೆದಿಲ್ಲ. ರಾಸಾಯನಿಕಗಳ ಪರಿಣಾಮ ಮಹಿಳೆಯರ ದೇಹದ ಮೇಲೆ ಬಹುಬೇಗನೇ ಆಗುವುದರಿಂದ ದುರಂತಕ್ಕೆ ಅವರು ದೈಹಿಕವಾಗಿಯೂ, ಸಾಮಾಜಿಕವಾಗಿಯೂ ಬಲಿಯಾಗುತ್ತಿದ್ದಾರೆ.

ಹೀಗೆ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹದಿಮೂರು ತಾಲ್ಲೂಕುಗಳಲ್ಲಿ ಸಾವಿರಾರು ಅಂಗವಿಕಲರು ನಿರಾಶಾದಾಯಕ ಬದುಕು ಸವೆಸುತ್ತಿದ್ದಾರೆ. ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳು ಹುಟ್ಟುತ್ತಲೇ ಇದ್ದಾರೆ.

ಹಾಗಿದ್ದರೆ ನಮ್ಮ ದೇಶದ ಅತ್ಯಾಧುನಿಕ ವಿಜ್ಞಾನ, ತಂತ್ರಜ್ಞಾನ ಆಧಾರಿತ ವೈದ್ಯಕೀಯ ಕ್ಷೇತ್ರ ಇಲ್ಲಿನ ತಾಯಂದಿರಿಗೆ ಏನನ್ನೂ ಮಾಡಲಾರದೇ...?

ನೆರವಾಗದ ಸ್ಕ್ಯಾನಿಂಗ್
ಡಿ.ಎನ್.ಎ. ತಂತ್ರಜ್ಞಾನ ದೇಶದಲ್ಲಿ ಸಾಮಾನ್ಯ ವರ್ಗದವರನ್ನು ತಲುಪಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕ್ರೋಮೊಸೋಮ್ಗಳಲ್ಲಿ ಆಗುವ ವ್ಯತ್ಯಾಸವನ್ನು ಗುರುತಿಸಿ, ಹುಟ್ಟುವ ಮಗು ಸ್ವಸ್ಥವಾಗಿದೆಯೇ ಎಂಬುದನ್ನು ಪತ್ತೆ ಮಾಡುವ ತಂತ್ರಜ್ಞಾನ ನಮ್ಮ ದೇಶದಲ್ಲಿ ವ್ಯಾಪಕವಾಗಿದೆ. ಇದನ್ನು ಸಾಮಾನ್ಯ ಸ್ಕ್ಯಾನಿಂಗ್ನಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತದೆ.

ಸ್ಕ್ಯಾನಿಂಗ್ ಸಂದರ್ಭದಲ್ಲಿ ಮಗುವಿನ ನ್ಯೂನತೆ ಮೊದಲೇ ಗೊತ್ತಾದಾಗ ವೈದ್ಯರು ಗರ್ಭಪಾತಕ್ಕೆ ಸಲಹೆ ಮಾಡುತ್ತಾರೆ. ಇಂದು ವೈದ್ಯಕೀಯ ಕೇಂದ್ರಗಳಲ್ಲಿ ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಿರುವ ಉದ್ದೇಶವೇ ಹುಟ್ಟುವ ಮಗುವಿನ ಬೆಳವಣಿಗೆ ಸಮರ್ಪಕವಾಗಿದೆಯೇ ಎಂಬುದನ್ನು ಅರಿತುಕೊಳ್ಳುವುದಕ್ಕೆ. ಆದರೆ ಅದು ಸಾಮಾನ್ಯವಾಗಿ ಬಳಕೆಯಾಗುತ್ತಿರುವುದು ಬೇರೆಯೇ ಕಾರಣಕ್ಕೆ.

ಅದೇನೇ ಇರಲಿ, ಇದೇ ತಂತ್ರಜ್ಞಾನ ಮತ್ತು ವಿಧಾನವನ್ನು ಎಂಡೋಪೀಡಿತ ಪ್ರದೇಶದ ಮಹಿಳೆಯರು ಹಣ ಕೊಟ್ಟು ಪಡೆಯಲಾರರು. ದೈನಂದಿನ ಜೀವನ ಸಾಗಿಸುವುದೇ ಅವರಿಗೆ ಸವಾಲು. ಗರ್ಭಿಣಿಯು ವೈದ್ಯರ ಬಳಿ ನಿರಂತರ ತಪಾಸಣೆ ಮಾಡಿಸಿಕೊಳ್ಳುವುದೇ ಅಲ್ಲಿ ಕಷ್ಟ. ಅಂದಮೇಲೆ ಸ್ಕ್ಯಾನಿಂಗ್ ಮಾತು ಎಲ್ಲಿಂದ ಬಂತು?

ಪರಿಹಾರವೆಂದರೆ ‘ಹಣ’
ಕರ್ನಾಟಕ ಹಾಗೂ ಕೇರಳ ಗೇರು ಅಭಿವೃದ್ಧಿ ನಿಗಮವು ಎಂಡೋಸಲ್ಫಾನ್ ಔಷಧಿಯನ್ನು ಹೆಲಿಕಾಪ್ಟರ್ಗಳ ಮೂಲಕ ಸಿಂಪಡಿಸಿದ್ದು ಅಲ್ಲಿನ ನಾಗರಿಕರ ಆನುವಂಶೀಯತೆಯ ಮೇಲೆ ಮಾರಕ ಪರಿಣಾಮ ಬೀರಿದೆ. ಅದಕ್ಕೆ ಪರಿಹಾರದ ರೂಪದಲ್ಲಿ ಹಣ ನೀಡುವಂತೆ ಆಗ್ರಹಗಳು, ಅಲ್ಪಸ್ವಲ್ಪ ಪರಿಹಾರಗಳು ದೊರೆತಿವೆ.

ಆನುವಂಶೀಯ ಸಮಸ್ಯೆ ಇದ್ದಾಗ ಹಾಗೂ ಅಲ್ಲಿನ ಮಹಿಳೆಯರು ನಿರಂತರವಾಗಿ ಪಡಿಪಾಟಲು ಅನುಭವಿಸುತ್ತಿರುವಾಗ ಅವರಿಗೆ ನೆರವಾಗುವ ವ್ಯವಸ್ಥೆಯೊಂದನ್ನು ನಿರ್ಮಿಸುವುದು ಸರ್ಕಾರದ ಜವಾಬ್ದಾರಿ. ರಾಸಾಯನಿಕ ಸಿಂಪಡಣೆಯ ಪ್ರಭಾವದಿಂದಾಗಿ, ಮಹಿಳೆಯರ ಹಾರ್ಮೋನುಗಳಲ್ಲಿ ವ್ಯತ್ಯಾಸ, ಆನುವಂಶೀಯತೆಗೆ ಸಂಬಂಧಿಸಿದ ಏರುಪೇರುಗಳು ಕಾಣಿಸಿಕೊಂಡಾಗ ಸರ್ಕಾರ ವಿಜ್ಞಾನದ ನೆರವು ಪಡೆದು ತಪಾಸಣೆ, ಚಿಕಿತ್ಸೆ, ಸಾಂತ್ವನದ ನೆರವು ನೀಡಬೇಕು.

ಅಗತ್ಯ ಇದ್ದಲ್ಲಿ ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ವೈದ್ಯರ ತಂಡ ರಚಿಸಿ, ಅಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ದುರದೃಷ್ಟವೆಂದರೆ, ಸಂತ್ರಸ್ತರ ಕೈಗೆ ಆಗೀಗ ಒಂದಿಷ್ಟು ದುಡ್ಡು ತುರುಕುವುದರ ಹೊರತಾಗಿ, ರಚನಾತ್ಮಕವಾದ ಯಾವುದೇ ಪ್ರಯತ್ನಗಳನ್ನು ಸರ್ಕಾರ ಈ ಪ್ರದೇಶದಲ್ಲಿ ಮಾಡಿಲ್ಲ.

21ನೇ ಶತಮಾನದಲ್ಲಿ ನಾವು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿಯಲಿ, ಅದು ನೊಂದ ಸಾಮಾನ್ಯ ವರ್ಗದ ಮಹಿಳೆಗೆ ತಲುಪದು ಎಂದರೆ ಅದರ ಉದ್ದೇಶ ಸಂಪೂರ್ಣ ವಿಫಲವಾಗಿದೆ ಎಂದೇ ಅರ್ಥ.

ಇಲ್ಲಿಂದ ಆರಂಭ
ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಗೇರುಬೆಳೆಯನ್ನು ಸಮೃದ್ಧವಾಗಿ ಬೆಳೆಯುತ್ತವೆ. ಈ ಬೆಳೆಗೆ ಟೀ ಸೊಳ್ಳೆ ಎಂಬ

ಕೀಟದ ಬಾಧೆ ಕಾಣಿಸಿಕೊಂಡಾಗ ಗೇರು ನಿಗಮವು ಹೆಲಿಕಾಪ್ಟರ್ಗಳ ಮೂಲಕ ಈ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ಎಂಬ ಕೀಟನಾಶಕವನ್ನು ಸಿಂಪಡಿಸಿತು.

1980ರಿಂದ 2000ನೇ ಇಸವಿಯವರೆಗೂ ಇಂತಹ ಸಾಮೂಹಿಕ ಸಿಂಪಡಣೆ ಕಾರ್ಯ ಮುಂದುವರಿಯಿತು. ಅಷ್ಟರಲ್ಲಿ ಗಡಿ ಭಾಗದ ಪೆಟ್ರಮೆ, ನಿಡ್ಲೆ ಮತ್ತು ಕೊಕ್ಕಡ ಗ್ರಾಮಗಳ 211 ಕುಟುಂಬಗಳಲ್ಲಿ ತೀವ್ರ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದನ್ನು ಗುರುತಿಸಲಾಯಿತು. ಬಳಿಕ ನಿಧಾನವಾಗಿ ಗಮನಿಸಿದಾಗ ಎಂಡೋಸಲ್ಫಾನ್ ಸಿಂಪಡಣೆಯಾದ ಹೆಚ್ಚಿನ ಪ್ರದೇಶಗಳಲ್ಲಿ ತೀವ್ರ ಪ್ರಮಾಣದ ಅಂಗವೈಕಲ್ಯ, ಬುದ್ಧಿಮಾಂದ್ಯತೆಯಂತಹ ಗಂಭೀರವಾದ ಸಮಸ್ಯೆಗಳು ಕಂಡುಬಂದವು.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾವಿರಾರು ಕುಟುಂಬಗಳು ಇಂತಹ ತೊಂದರೆಗಳನ್ನು ಎದುರಿಸುತ್ತಿವೆ. ಈ ಸಮಸ್ಯೆಗಳು ಕಾಣಿಸಿಕೊಂಡ 10 ವರ್ಷಗಳ ಬಳಿಕ, ಅಂದರೆ 2010ರಿಂದ ಪರಿಹಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯಲಾರಂಭಿಸಿದವು.

ಆದರೆ ಓಡಾಡಲು ಆಗದೇ ಮಲಗಿದಲ್ಲಿಯೇ ಇರುವ ಅದೆಷ್ಟೋ ಸಂತ್ರಸ್ತರಿಗೆ ಯಾವುದೇ ಪರಿಹಾರ ಇನ್ನೂ ತಲುಪಿಲ್ಲ. ಮಕ್ಕಳಿಗೆ 25 ವರ್ಷಗಳಾದರೂ ಪಾಲಕರು ಅವರನ್ನು ಪುಟ್ಟ ಮಕ್ಕಳಂತೆ ಆರೈಕೆ ಮಾಡಬೇಕಾಗಿದೆ. ಅಂತಹ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕಾರ್ಯಗಳನ್ನು ನಡೆಸುವಂತೆ ಆಗ್ರಹಗಳು ಕೇಳಿಬರುತ್ತಿವೆ.

ಈ ಹಳ್ಳಿಗಳ ಪರಿಸ್ಥಿತಿಯ ಬಗ್ಗೆ ಪತ್ರಿಕೆಗಳು ಬರೆದ ಲೇಖನಗಳನ್ನೇ ಗಮನಿಸಿ ಹೈಕೋರ್ಟ್ ನ್ಯಾಯಾಧೀಶ ರಾಮಕೃಷ್ಣ ಅವರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ಪರಿಹಾರ ಕಾರ್ಯಾಚರಣೆಗೆ ಚುರುಕು ಮುಟ್ಟಿಸಿದ್ದಾರೆ. ಎಂಡೋ ಸಂತ್ರಸ್ತರಿಗೆ ಸರ್ಕಾರ ನೀಡಿದ ಪರಿಹಾರ ತೀರಾ ಅತ್ಯಲ್ಪ ಎಂದು ಇತ್ತೀಚೆಗಷ್ಟೆ ಕೋರ್ಟ್ ಅಭಿಪ್ರಾಯಪಟ್ಟಿದೆ.

ಇಲ್ಲಿ ಕೇಳಿ...
ಎಂಡೋಪೀಡಿತ ಪ್ರದೇಶಗಳಲ್ಲಿ ಕ್ಯಾನ್ಸರ್ ಮತ್ತು ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯದ ಸಂಭವ ಹೆಚ್ಚು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐ.ಸಿ.ಎಂ.ಆರ್.) ನಿರ್ದೇಶಕ ವಿ.ಎಂ.ಕಟೋಚ್ ನೇತೃತ್ವದ ಅಧ್ಯಯನ ಸಮಿತಿ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ತಿಳಿಸಿದೆ.

ರಾಜ್ಯ ಸರ್ಕಾರವೇ ಐ.ಸಿ.ಎಂ.ಆರ್.ನಿಂದ ಈ ವರದಿಯನ್ನು ಕೋರಿತ್ತು. ಅಲ್ಲದೆ ಅಕ್ಟೋಬರ್ನಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದ ವಿ.ಎಂ.ಕಟೋಚ್, ಎಂಡೋಪೀಡಿತ ಪ್ರದೇಶದಲ್ಲಿ ಹುಟ್ಟುವ ಮಕ್ಕಳಿಗೆ ಅಂಗವೈಕಲ್ಯ ಬರುವ ಹಿನ್ನೆಲೆಯನ್ನು ಅಧ್ಯಯನ ಮಾಡಬೇಕಾಗಿದೆ

ಎಂದು ಹೇಳಿದ್ದರು.

ನಂತರ ಐ.ಸಿ.ಎಂ.ಆರ್. ರಾಜ್ಯ ಸರ್ಕಾರಕ್ಕೆ ಎರಡೆರಡು ಪತ್ರ ಬರೆದು ಎಂಡೋಸಲ್ಫಾನ್ ಪರಿಣಾಮ ಕುರಿತಂತೆ ಅಧ್ಯಯನ ನಡೆಸಲು ರಾಜ್ಯದ ವೈದ್ಯಕೀಯ ಕಾಲೇಜೊಂದನ್ನು ಗುರುತಿಸುವಂತೆಯೂ ಸೂಚಿಸಿದೆ. ಈ ಅಧ್ಯಯನಕ್ಕೆ ಆರ್ಥಿಕ ನೆರವನ್ನು ಐ.ಸಿ.ಎಂ.ಆರ್. ನೀಡಲಿದೆ. ಆದರೆ ಇನ್ನೂ ಯಾವುದೇ ಕಾಲೇಜಿಗೆ ಅಧ್ಯಯನದ ಜವಾಬ್ದಾರಿ ವಹಿಸಿಲ್ಲ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋ ಸಂತ್ರಸ್ತರನ್ನು ಗುರುತಿಸಿ ಪಟ್ಟಿ ಮಾಡಿದ್ದಾಗಿ ಆರೋಗ್ಯ ಸಚಿವರು ಹೇಳಿದ್ದರು. ಆದರೆ ಆ ಪಟ್ಟಿಯಲ್ಲಿ ಹೆಚ್ಚಿನ ಸಂತ್ರಸ್ತರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆಕ್ಷೇಪಗಳು ವ್ಯಕ್ತವಾದವು. ಆದರೆ ಹೆಸರನ್ನು ಮತ್ತೆ ಸೇರಿಸಲು ಅವಕಾಶವಿದೆ ಎಂದು ಸಚಿವರು ಉತ್ತರಿಸಿದರೂ, ಮೂಲ ಪಟ್ಟಿಯೇ ಇಲ್ಲಿನ ನಾಗರಿಕರಿಗೆ ಲಭ್ಯವಿಲ್ಲ. ಹಾಗಾಗಿ, ತಾವು ಸಂತ್ರಸ್ತರ ಪಟ್ಟಿಯಲ್ಲಿ ಇದ್ದೇವೆಯೇ ಇಲ್ಲವೇ ಎಂಬುದೇ ಅವರಿಗೆ ಗೊತ್ತಾಗಿಲ್ಲ.

ಮಾಹಿತಿ ಹಕ್ಕಿನಡಿ ಪಟ್ಟಿಯನ್ನು ಕೇಳಿದಾಗ, ಇದು ವೈದ್ಯರು ಮತ್ತು ರೋಗಿಯ ನಡುವಿನ ವಿಷಯವಾದ್ದರಿಂದ ಗೋಪ್ಯತೆಗೆ ಸಂಬಂಧಿಸಿದ್ದು ಎಂಬ ಉತ್ತರ ಬರುತ್ತಿದೆ. ಇದು ವಿಪರ್ಯಾಸ ಅಲ್ಲವೇ...?
–ಶ್ರೀಧರ ಗೌಡ ಅಧ್ಯಕ್ಷರು, ಎಂಡೋ ವಿರೋಧಿ ಹೋರಾಟ ಸಮಿತಿ, ಕೊಕ್ಕಡ

ಎಂಡೋಪೀಡಿತ ಪ್ರದೇಶದಲ್ಲಿ ಇರುವ ಸಮಸ್ಯೆಗಳನ್ನು ವಿವರಿಸಿ, ಸ್ಕ್ಯಾನಿಂಗ್ ಕೇಂದ್ರಗಳನ್ನು ತೆರೆಯುವಂತೆ ಕೋರಿ ಎರಡು ವರ್ಷಗಳಲ್ಲಿ ಸರ್ಕಾರಕ್ಕೆ ಎಂಟು ಪತ್ರಗಳನ್ನು ಬರೆದಿದ್ದೇವೆ. ‘ಎಂಡೋಪೀಡಿತ ಪ್ರದೇಶದಲ್ಲಿ ಸರ್ಕಾರ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದೇವೆ. ನಾಲ್ಕು ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗವಿಕಲ ಮಕ್ಕಳು ಹುಟ್ಟುತ್ತಿರುವುದಕ್ಕೆ ಏನು ಕಾರಣ ಎಂಬುದನ್ನಾದರೂ ಸರ್ಕಾರ ಮಾನವೀಯವಾಗಿ ಪತ್ತೆ ಮಾಡಬೇಕು.
- ರವೀಂದ್ರನಾಥ ಶಾನುಭೋಗ್, –ಬಸ್ರೂರು ಬಳಕೆದಾರರ ವೇದಿಕೆ(ಎಂಡೋಪೀಡಿತರ ಪರ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.