ತಂತ್ರ, ಪ್ರತಿತಂತ್ರ- ಕಾವೇರಿ ಅತಂತ್ರ

ಭಾನುವಾರ, ಜೂಲೈ 21, 2019
26 °C

ತಂತ್ರ, ಪ್ರತಿತಂತ್ರ- ಕಾವೇರಿ ಅತಂತ್ರ

Published:
Updated:

ಬೆಂಗಳೂರು: ನೂತನ ನಾಯಕನ ಆಯ್ಕೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುವುದೇ ಅನಿಶ್ಚಿತವಾಗಿದ್ದ ಕಾರಣ, ನಿಯೋಜಿತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಅಧಿಕೃತ ನಿವಾಸ `ಕಾವೇರಿ~ಯಲ್ಲಿ ಮಂಗಳವಾರ ಬೆಳಿಗ್ಗೆ ಆತಂಕದ ವಾತಾವರಣ ನಿರ್ಮಾಣವಾಯಿತು. ಪೂರ್ವ ನಿಗದಿಯಂತೆ ಬೆಳಿಗ್ಗೆ 11ಕ್ಕೆ ನಗರದ `ಕ್ಯಾಪಿಟಲ್~ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಾಗಿತ್ತು.`ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಬಣದ ಶಾಸಕರು ಮೂರು ಷರತ್ತುಗಳನ್ನು ವಿಧಿಸಿದ್ದಾರೆ. ಅವುಗಳನ್ನು ಒಪ್ಪಿದರೆ ಮಾತ್ರ ಶಾಸಕಾಂಗ ಪಕ್ಷದ ಸಭೆಗೆ ಬರುತ್ತೇವೆ. ಇಲ್ಲದಿದ್ದರೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ~ ಎಂಬ ಸುದ್ದಿ ಹಬ್ಬಿದ ಕೂಡಲೇ `ಕಾವೇರಿ~ಯಲ್ಲಿದ್ದ ಶೆಟ್ಟರ್ ಬೆಂಬಲಿಗರ ಮುಖ ಬಾಡಿತು. ಶೆಟ್ಟರ್ ಮಧ್ಯಾಹ್ನದವರೆಗೂ ಮನೆಯಲ್ಲಿಯೇ ಇದ್ದರು. ಶಾಸಕಾಂಗ ಪಕ್ಷದ ಸಭೆಗೆ ಬರುವಂತೆ ಫೋನ್ ಕರೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದರು. ಗಂಟೆಗಟ್ಟಲೆ ಕಾದರೂ ಕರೆ ಬರಲಿಲ್ಲ. ಮಧ್ಯಾಹ್ನ 1.30ರ ಸುಮಾರಿಗೆ `ಕಾವೇರಿ~ಯಿಂದ ಹೊರಬಂದರು. ಪಕ್ಕದಲ್ಲಿಯೇ ಇರುವ ಅಶೋಕ ಹೋಟೆಲ್‌ಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದರು. ಶುಭ ಕೋರಲು ಬಂದ ಬೆಂಬಲಿಗರ ಮುಖದಲ್ಲೂ ಗೆಲುವು ಇರಲಿಲ್ಲ. ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಶೆಟ್ಟರ್ ಬೆಂಬಲಿಗರು, `ಕಾವೇರಿ~ಯಲ್ಲಿನ ವಿಶಾಲ ಆವರಣದಲ್ಲಿ ವಿಶ್ರಾಂತಿ ಪಡೆದರು. ಕಾರ್ಯಕರ್ತರು, ಬೆಂಬಲಿಗರು ತಂಡೋಪತಂಡವಾಗಿ ಬಂದರು.ಸಂಸದರಾದ ಪ್ರಭಾಕರ ಕೋರೆ, ಸುರೇಶ ಅಂಗಡಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು, ಮುಖಂಡರು ಶೆಟ್ಟರ್ ಅವರನ್ನು ಬೆಳಿಗ್ಗೆಯೇ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಸಂಸದ ಪ್ರಹ್ಲಾದ ಜೋಷಿ, ಮಾಜಿ ಸಂಸದರಾದ ಬಿ.ಜಿ.ಜವಳಿ, ಕೆ.ಬಿ.ಶಾಣಪ್ಪ ಮೊದಲಾದವರು ಶೆಟ್ಟರ್ ಅವರನ್ನು ಮಧ್ಯಾಹ್ನದ ವೇಳೆಗೆ ಭೇಟಿಯಾದರು.ಆದರೆ, ಯಾರಲ್ಲೂ ಉತ್ಸಾಹ ಇರಲಿಲ್ಲ. ಶಾಸಕಾಂಗ ಪಕ್ಷದ ಸಭೆ ನಡೆಯುವುದೋ ಇಲ್ಲವೋ ಎಂಬ ಅನುಮಾನ ಅವರನ್ನು ಕಾಡುತ್ತಿತ್ತು. ಅವರ ಮಾತು, ಚರ್ಚೆಗಳಿಂದಲೇ ಅದು ವ್ಯಕ್ತವಾಯಿತು. ಆದರೆ ಮಧ್ಯಾಹ್ನ 3ರ ವೇಳೆಗೆ ಶಾಸಕಾಂಗ ಪಕ್ಷದ ಸಭೆ ನಡೆಯುವುದು ಖಚಿತವಾಯಿತು. ಅವರ ಬೆಂಬಲಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಶೆಟ್ಟರ್ ಅವರು ಅಶೋಕದಿಂದ ನೇರವಾಗಿ ಕ್ಯಾಪಿಟಲ್ ಹೋಟೆಲ್‌ಗೆ ತೆರಳಿದರು.ರಾಜಕೀಯ ಚಟುವಟಿಕೆಗಳ ಕೇಂದ್ರ: ಸದಾನಂದ ಗೌಡ ಅವರ ನಿವಾಸ `ಅನುಗ್ರಹ~, ಶೆಟ್ಟರ್ ನಿವಾಸ `ಕಾವೇರಿ~, ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿ ನಿವಾಸ `ಧವಳಗಿರಿ~, ಬಿಜೆಪಿ ವೀಕ್ಷಕರು ತಂಗಿದ್ದ ಹೋಟೆಲ್ ಅಶೋಕ ಹಾಗೂ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಇಡೀ ದಿನ ರಾಜಕೀಯ ಚಟುವಟಿಕೆಗಳ ಕೇಂದ್ರಗಳಾಗಿದ್ದವು.ಸದಾನಂದ ಗೌಡ ಬಣದ ಶಾಸಕರು ತಮ್ಮ ಬೇಡಿಕೆ ಈಡೇರುವವರೆಗೂ ಶಾಸಕಾಂಗ ಪಕ್ಷದ ಸಭೆಗೆ ಬರುವುದಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ, ಯಡಿಯೂರಪ್ಪ ಅವರು ಅಶೋಕ ಹೋಟೆಲ್‌ಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಿದರು. ಬಳಿಕ ಸದಾನಂದ ಗೌಡ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಮೂರು ಗಂಟೆ ಕಾಲ ವರಿಷ್ಠರೊಂದಿಗೆ ಚರ್ಚೆ ನಡೆಸಿದರು. 56 ಮಂದಿ ಶಾಸಕರು ಸಹಿ ಮಾಡಿರುವ ಬೇಡಿಕೆ ಪತ್ರವನ್ನು ವರಿಷ್ಠರಿಗೆ ನೀಡಿದ ಸದಾನಂದಗೌಡ, ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು ಎಂದು ಗೊತ್ತಾಗಿದೆ.ಈಶ್ವರಪ್ಪ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಸದಾನಂದ ಗೌಡರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಹಾಗೂ ಸಂಪುಟ ಸೇರಲಿರುವ 30 ಶಾಸಕರ ಪಟ್ಟಿಯನ್ನು ಮೊದಲೇ ಪ್ರಕಟಿಸಬೇಕು ಎಂಬುದು ಈ ಬಣದ ಶಾಸಕರ ಬೇಡಿಕೆ.ಸದಾನಂದ ಗೌಡ ಮುಂದಿಟ್ಟ ಮೂರು ಬೇಡಿಕೆಗಳ ಪೈಕಿ, ಈಶ್ವರಪ್ಪ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡುವ ಬೇಡಿಕೆಗೆ ವೀಕ್ಷಕರು ತಕ್ಷಣವೇ ಒಪ್ಪಿಗೆ ಸೂಚಿಸಿದರು. ಉಳಿದ ಎರಡು ಬೇಡಿಕೆಗಳ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸಿ, ದೆಹಲಿಯಲ್ಲೇ ತೀರ್ಮಾನ ತೆಗೆದುಕೊಳ್ಳವುದು ಸೂಕ್ತ ಎಂದು ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮಾಡಿದ ಸಲಹೆಗೆ ಈಶ್ವರಪ್ಪ, ಸದಾನಂದ ಗೌಡ ಒಪ್ಪಿಗೆ ಸೂಚಿಸಿದರು.ನಂತರ ಸದಾನಂದ ಗೌಡ, ಈಶ್ವರಪ್ಪ ಅವರು `ಅನುಗ್ರಹ~ಕ್ಕೆ ತೆರಳಿ, ಅಲ್ಲಿದ್ದ ತಮ್ಮ ಬಣದ ಶಾಸಕರಿಗೆ ಚರ್ಚೆಯ ವಿವರ ನೀಡಿದರು. ಮತ್ತೊಮ್ಮೆ ಅಶೋಕ ಹೋಟೆಲ್‌ಗೆ ತೆರಳಿ ತಮ್ಮ ಬಣದ ಸಚಿವರು, ಶಾಸಕರ ಅಭಿಪ್ರಾಯವನ್ನು ವೀಕ್ಷಕರಿಗೆ ಮುಟ್ಟಿಸಿದರು. ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಸ್ಪಷ್ಟ ಭರವಸೆ ದೊರೆತ ನಂತರವೇ ಆ ಬಣದ ಶಾಸಕರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲು ಕ್ಯಾಪಿಟಲ್ ಹೋಟೆಲ್‌ಗೆ ಬಂದರು.`ಅನುಗ್ರಹ~ದಲ್ಲಿ ಠಿಕಾಣಿ: ಸದಾನಂದ ಗೌಡರ ಬಣದೊಂದಿಗೆ ಗುರುತಿಸಿಕೊಂಡಿರುವ 56 ಮಂದಿ ಶಾಸಕರು ಬೆಳಿಗ್ಗೆಯಿಂದ ಮಧ್ಯಾಹ್ನ 3.30ರವರೆಗೂ `ಅನುಗ್ರಹ~ದಲ್ಲೇ ಠಿಕಾಣಿ ಹೂಡಿದರು. ಯಡಿಯೂರಪ್ಪ ಅವರ ತಂತ್ರಗಳಿಗೆ ಪ್ರತಿ ತಂತ್ರ ರೂಪಿಸುವ ಹಾಗೂ ಬೇಡಿಕೆಗಳ ಈಡೇರಿಕೆಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಸಂಸದ ಡಿ.ಬಿ. ಚಂದ್ರೇಗೌಡ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry