ಶನಿವಾರ, ಜನವರಿ 18, 2020
27 °C

ತಂಬಾಕು: ಕಗ್ಗುಂಡಿ ಹರಾಜು ಕೇಂದ್ರ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿರಿಯಾಪಟ್ಟಣ: ತಂಬಾಕು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾ ಯಿಸಿ ರೈತ ಸಂಘದ ಕಾರ್ಯಕರ್ತರು ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆ ಬಂದ್ ಮಾಡಿ ಸೋಮವಾರ ಧರಣಿ ನಡೆಸಿದರು.ಈಚೆಗೆ ಸಭೆ ನಡೆಸಿ ಕೆಲವು ಬೇಡಿಕೆ ಈಡೇರಿಸುವಂತೆ ತಂಬಾಕು ಮಂಡಳಿ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಆದರೆ, ರೈತರ ಮನವಿಗೆ ಸ್ಪಂದಿಸದ ಕಾರಣ ಧರಣಿ ನಡೆಸಲಾಯಿತು.ಈ ಸಂದರ್ಭದಲ್ಲಿ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ರಾಜ್ಯವನ್ನು ಪ್ರತಿನಿಧಿಸುವ ರಾಜಕೀಯ ನಾಯಕರಲ್ಲಿ ಇಚ್ಛಾ ಶಕ್ತಿಯ ಕೊರತೆ ಇದೆ. ಇದರ ಲಾಭವನ್ನು ನೆರೆಯ ಆಂಧ್ರ ಬೆಳೆಗಾರರು ಪಡೆಯುತ್ತಿದ್ದಾರೆ. ತಂಬಾಕು ಮಂಡಳಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಬೆಲೆ ತಾರತಮ್ಯದಿಂದಾಗಿ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.ಧರಣಿ ಸ್ಥಳಕ್ಕೆ ಧಾವಿಸಿದ ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಶೇ.22ರಷ್ಟು ದಂಡ ವಿಧಿಸುತ್ತಿದ್ದ ಸಂದರ್ಭದಲ್ಲಿ ಅದನ್ನು ಶೇ.7ಕ್ಕೆ ಕಡಿತ ಗೊಳಿಸಲಾಗಿದ್ದು ದಂಡ ರದ್ಧತಿಗೆ ಒತ್ತಾಯಿಸಲಾಗಿದೆ ಎಂದರು.ಅಧಿಕಾರಿಗಳು ಇ–ಟೆಂಡರ್ ಜಾರಿಗೆ ತರದಂತೆ ತಡೆಯೊಡ್ಡಿದ್ದರು ಅದನ್ನು ನಿವಾರಿಸಿ ಈಗ ಜಾರಿಗೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಕೆ.ವೆಂಕಟೇಶ್ ಮಾತನಾಡಿ, ಮಾರುಕಟ್ಟೆ ದರ ಸ್ಥಿರವಾಗಿ ಕೊಂಡೊಯ್ಯುವ ಕೆಲಸವಾಗಬೇಕಿದೆ. ಆದರೆ ಕಳೆದ 15 ದಿನಗಳಿಂದ ಮಧ್ಯಮ ದರ್ಜೆ ತಂಬಾಕಿಗೆ ಕಡಿಮೆ ಬೆಲೆ ನೀಡಿರುವುದು ಕಂಡು ಬಂದಿದ್ದು ತಕ್ಷಣ ಕಂಪನಿಗಳು ಮತ್ತು ತಂಬಾಕು ಮಂಡಳಿ ಅಧಿಕಾರಿಗಳು ಸರಿಪಡಿಸಿ ಮಾರುಕಟ್ಟೆ ಪ್ರಾರಂಭದ ದರದಲ್ಲೇ ಕೊಳ್ಳುವಂತೆ ಮಾತನಾಡಲಾಗಿದೆ ಎಂದರು.ಮಂಡಳಿ ಅಧ್ಯಕ್ಷ ಕೆ.ಗೋಪಾಲ್ ಮಾತನಾಡಿ, ತಂಬಾಕು ಬೆಳೆಗಾರರ ಹಿತ ಕಾಪಾಡಲು ಬದ್ದರಾಗಿರುವುದಾಗಿ ತಿಳಿಸಿದರು. ಬೆಲೆಯಲ್ಲಿನ ಏರಿಳಿತ ಮಂಡಳಿಯ ಗಮನಕ್ಕೆ ಬಂದಿದ್ದು,  ಬೆಲೆ ಸ್ಥಿತ್ಯಂತರಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೆಲವು ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸಚಿವರು ಮತ್ತು ಸಂಸದರು ಶ್ರಮವಹಿಸಿದರೆ ಮಾತ್ರ ಸಾಧ್ಯವಾ ಗಲಿದೆ ಎಂದು ಸ್ಪಷ್ಠಪಡಿಸಿದರು.ರಾಜ್ಯ ಘಟಕದ ಖಜಾಂಚಿ ಹೊಸಕೋಟೆ ಬಸವರಾಜು, ಜಿಲ್ಲಾ ಉಪಾಧ್ಯಕ್ಷ ಬೋರೆಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್, ಗೌರವಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ದೇವರಾಜ್, ಖಜಾಂಚಿ ನವೀನ್ ರಾಜೇಅರಸ್ ಸೇರಿದಂತೆ ಹಲವು ರೈತ ಮುಖಂಡರು ಹಾಜರಿದ್ದರು.

ಪ್ರತಿಕ್ರಿಯಿಸಿ (+)