ಗುರುವಾರ , ಮೇ 13, 2021
38 °C

ತಗ್ಗು ಪ್ರದೇಶಗಳಿಗೆ ಉಪ ಲೋಕಾಯುಕ್ತ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಗ್ಗು ಪ್ರದೇಶಗಳಿಗೆ ಉಪ ಲೋಕಾಯುಕ್ತ ಭೇಟಿ

ಬೆಂಗಳೂರು: ಹೆಚ್ಚಿನ ಮಳೆಯಾದ ಸಂದರ್ಭಗಳಲ್ಲೆಲ್ಲ ಜಲಾವೃತವಾಗುವ ನಗರದ ಆರು ತಗ್ಗು ಪ್ರದೇಶಗಳಿಗೆ ಭೇಟಿನೀಡಿದ ಉಪ ಲೋಕಾಯುಕ್ತ ನ್ಯಾಯಮೂತಿ ಸುಭಾಷ್ ಬಿ.ಅಡಿ, ಮಳೆ ನೀರು ಕಾಲುವೆಗಳ ನಿರ್ವಹಣೆ ಕುರಿತು ಪರಿಶೀಲಿಸಿದರು. ಕಾಲುವೆಗಳ ಸಮರ್ಪಕ ನಿರ್ವಹಣೆಗಾಗಿ ರೂಪಿಸಿರುವ `ಸಮಗ್ರ ಯೋಜನೆ'ಯನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಶಿವಾಜಿನಗರದ ರಸೆಲ್ ಮಾರುಕಟ್ಟೆ ಹಿಂಭಾಗದಲ್ಲಿರುವ ಪಟ್ಟದಮ್ಮ ದೇವಾಲಯದ ಬಳಿಯ ಮಳೆ ನೀರು ಕಾಲುವೆ, ಲಕ್ಷ್ಮಣರಾವ್ ನಗರ ಕೊಳೆಗೇರಿ, ಶಾಂತಿನಗರ ಬಸ್ ಡಿಪೊ ಮುಂಭಾಗದ ಮಳೆ ನೀರು ಕಾಲುವೆ, ಓಕಳೀಪುರದಲ್ಲಿನ ಮಳೆ ನೀರು ಕಾಲುವೆ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶ ಹಾಗೂ ನಾಯಂಡಹಳ್ಳಿ ವೃತ್ತಗಳಿಗೆ ಉಪ ಲೋಕಾಯುಕ್ತರು ಭೇಟಿನೀಡಿ ಪರಿಶೀಲನೆ ನಡೆಸಿದರು.ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ರವಿಕುಮಾರ್, ಬೆಂಗಳೂರು ಜಲಮಂಡಳಿ ಪ್ರಧಾನ ಎಂಜಿನಿಯರ್ ಟಿ.ವೆಂಕಟರಾಜು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಎಂಜಿನಿಯರ್ (ಬೃಹತ್ ಮಳೆನೀರು ಕಾಲುವೆ) ಅನಂತಸ್ವಾಮಿ ಮತ್ತಿತರರು ಉಪ ಲೋಕಾಯುಕ್ತರ ಭೇಟಿಯ ವೇಳೆ ಹಾಜರಿದ್ದರು.

ಕೆಲವು ಸ್ಥಳಗಳಲ್ಲಿ ಮಳೆನೀರು ಕಾಲುವೆಗಳ ನಿರ್ವಹಣೆಯಲ್ಲಿನ ಲೋಪದಿಂದಲೇ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸ್ಥಳೀಯರು ದೂರಿದರು. ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಉಪ ಲೋಕಾಯುಕ್ತರು, ತಕ್ಷಣವೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.ಕೆಲವೆಡೆಗಳಲ್ಲಿ ಕೊಳಗೇರಿ ಸ್ಥಳಾಂತರ ಯೋಜನೆಗಳಿಂದಲೇ ಸಮಸ್ಯೆ ಬಿಗಡಾಯಿಸಿರುವುದು ಪರಿಶೀಲನೆ ವೇಳೆ ಗಮನಕ್ಕೆ ಬಂತು. ಆಗ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾ.ಅಡಿ ಅವರು, `ನೀವು ಒಂದು ಕೊಳೆಗೇರಿ ಸ್ಥಳಾಂತರಿಸಲು ಮತ್ತೊಂದು ಕೊಳೆಗೇರಿ ಸೃಷ್ಟಿಸುತ್ತೀರಿ. ಯೋಜನೆಗಳನ್ನು ಸರಿಯಾಗಿ ರೂಪಿಸದೇ ಇರುವುದೇ ಇದಕ್ಕೆಲ್ಲ ಕಾರಣ' ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಳೆ ನೀರು ಕಾಲುವೆಗಳಲ್ಲೇ ನಗರದ ಒಳಚರಂಡಿ ನೀರು ಕೂಡ ಹರಿಯುತ್ತಿರುವುದು, ಮಳೆ ನೀರು ಕಾಲುವೆಗಳಲ್ಲಿ ಹೂಳು ತೆಗೆಯದೇ ಇರುವುದು, ಘನ ತ್ಯಾಜ್ಯವನ್ನೂ ಕಾಲುವೆಗಳಿಗೆ ಸುರಿಯುವುದನ್ನು ನಿಯಂತ್ರಿಸದಿರುವುದು ಹಾಗೂ ಕಾಲುವೆಗಳಲ್ಲಿ ದಟ್ಟವಾಗಿ ಕಳೆ ಬೆಳೆದಿದ್ದರೂ ಅದನ್ನು ತೆಗೆದು ಹಾಕದಿರುವ ಬಗ್ಗೆ ಉಪ ಲೋಕಾಯುಕ್ತರು ಆಕ್ಷೇಪ ವ್ಯಕ್ತಪಡಿಸಿದರು. ಮಳೆ ನೀರು ಕಾಲುವೆಯಿಂದ ಒಳಚರಂಡಿ ನೀರನ್ನು ಪ್ರತ್ಯೇಕಿಸಲು ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.`ಸಮಗ್ರ ಯೋಜನೆ ಸಿದ್ಧ': ಪರಿಶೀಲನೆ ವೇಳೆ ಹಾಜರಿದ್ದ ಬಿಬಿಎಂಪಿ ಅಧಿಕಾರಿಗಳು ಬೃಹತ್ ಮಳೆನೀರು ಕಾಲುವೆಗಳ ಪುನಶ್ಚೇತನ ಮತ್ತು ನಿರ್ವಹಣೆಗಾಗಿ ರೂಪಿಸಿರುವ ಸಮಗ್ರ ಯೋಜನೆಯ ಪ್ರತಿಯನ್ನು ಉಪ ಲೋಕಾಯುಕ್ತರಿಗೆ ಸಲ್ಲಿಸಿದರು. ಮಳೆನೀರು ಕಾಲುವೆಗಳ ಸಮಗ್ರ ನಿರ್ವಹಣೆ, ಒಳಚರಂಡಿ ನೀರು ಹರಿಯಲು ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ಹಲವು ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು. 2014ರಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಭರವಸೆ ನೀಡಿದರು.ಭೇಟಿ ಮುಗಿಸಿ ವಾಪಸಾದ ನ್ಯಾ.ಅಡಿ ಅವರು ಲೊಕಾಯುಕ್ತ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. `ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿ ಸಂಭವಿಸುವ ತಗ್ಗು ಪ್ರದೇಶಗಳಲ್ಲಿ ಇರುವ ಸಮಸ್ಯೆಯ ಬಗ್ಗೆ ಅರಿಯಲು ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಶೀಘ್ರದಲ್ಲಿ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇನ್ನೂ ಕೆಲ ದಿನಗಳವರೆಗೆ ಕಾಲಾವಕಾಶ ನೀಡುತ್ತೇವೆ. ಮುಂದೆ ಸಾರ್ವಜನಿಕರಿಂದ ದೂರು ಬಂದರೆ ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ' ಎಂದು ತಿಳಿಸಿದರು.

ಸ್ಥಳ ಪರಿಶೀಲನೆ

`ನಗರದ ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ಪದೇ ಪದೇ ಮನೆಗಳಿಗೆ ನುಗ್ಗಿ ಹಾನಿ ಸಂಭವಿಸುತ್ತಿರುವುದು ಗಮನಕ್ಕೆ ಬಂದಿತ್ತು. ಸಮಸ್ಯೆಯ ಕುರಿತ ಮಾಹಿತಿಗಾಗಿ ಉಪ ಲೋಕಾಯುಕ್ತರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ' ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ತಿಳಿಸಿದರು.

`ನಾಗರಿಕರಿಗೆ ಉತ್ತಮ ಜೀವನಕ್ಕೆ ಅಗತ್ಯವಿರುವ ವಾತಾವರಣವನ್ನು ಕಲ್ಪಿಸುವುದು ಸರ್ಕಾರದ ಸಂವಿಧಾನಬದ್ಧ ಜವಾಬ್ದಾರಿ. ಈ ದಿಸೆಯಲ್ಲಿ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಉದ್ದೇಶವೂ ಈ ಭೇಟಿಯ ಹಿಂದಿದೆ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.