ಭಾನುವಾರ, ಜುಲೈ 25, 2021
20 °C
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ

ತಡೆ ಹಿಡಿದ ಕಾಮಗಾರಿಗಳಿಗೆ ಮರು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಡೆ ಹಿಡಿದ ಕಾಮಗಾರಿಗಳಿಗೆ ಮರು ಚಾಲನೆ

ಬೆಂಗಳೂರು: `ಕಳೆದ ತಿಂಗಳು ತಡೆ ಹಿಡಿಯಲಾಗಿದ್ದ ರೂ 522 ಕೋಟಿ ಮೊತ್ತದ 1,970 ಕಾಮಗಾರಿಗಳನ್ನು ಒಂದೊಂದಾಗಿ ಪುನರ್ ಪರಿಶೀಲಿಸಲಾಗುವುದು. ಅಗತ್ಯ ಎನಿಸಿದ ಎಲ್ಲಾ ಕೆಲಸಗಳನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು' ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಪ್ರಕಟಿಸಿದರು.ಮಂಗಳವಾರ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್ ಎತ್ತಿದ ಪ್ರಶ್ನೆಗೆ ಅವರು ಉತ್ತರ ನೀಡಿದರು. `ಸ್ಥಗಿತಗೊಂಡ ಕಾಮಗಾರಿಗಳ ಪುನರಾರಂಭಕ್ಕೆ ರಾಜ್ಯ ಸರ್ಕಾರ ಮಂಗಳವಾರವೇ ಆದೇಶ ಹೊರಡಿಸಿದ್ದು, ಬುಧವಾರದಿಂದ ಕೆಲಸಗಳು ಶುರುವಾಗಲಿವೆ' ಎಂದು ಹೇಳಿದರು.`ಸೋಮವಾರ ಸಂಜೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಆರ್. ರಾಮಲಿಂಗಾರೆಡ್ಡಿ ಅವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಕಾರ್ಯದ ಆದೇಶ ನೀಡಿದ ಕಾಮಗಾರಿಗಳು ಮತ್ತು ಪ್ರವಾಹ ಪರಿಸ್ಥಿತಿ ತಡೆಗಟ್ಟಲು ಆಗಬೇಕಾದ ಕೆಲಸಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಬೇಕು ಎಂಬ ಸೂಚನೆಯನ್ನು ಸಚಿವರು ನೀಡಿದ್ದಾರೆ' ಎಂದು ತಿಳಿಸಿದರು.`ರಸ್ತೆ ಡಾಂಬರೀಕರಣ, ವಿಸ್ತರಣೆ, ಉದ್ಯಾನ ಅಭಿವೃದ್ಧಿಯಂತಹ ಕಾಮಗಾರಿಗಳನ್ನು ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಸದಸ್ಯರು ಸಹಕಾರ ನೀಡಬೇಕು' ಎಂದು ಹೇಳಿದರು.`ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ 22,850 ಮುಂದುವರಿದ ಕಾಮಗಾರಿಗಳು ನಡೆದಿವೆ. ಹೊಸದಾಗಿ ಮಂಜೂರಾದ ಕಾಮಗಾರಿಗಳೂ ಸೇರಿದರೆ ಅವುಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಅವುಗಳ ಮೇಲ್ವಿಚಾರಣೆ ಮಾಡುವ ಜತೆಗೆ ಗುಣಮಟ್ಟದ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟದ ಕೆಲಸವಾಗುತ್ತದೆ. ರೂ5 ಲಕ್ಷಕ್ಕಿಂತ ಅಧಿಕ ಮೊತ್ತದ ಕಾಮಗಾರಿಗಳು ಇದ್ದರೆ ಅವುಗಳ ಅಗತ್ಯವನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲೇಬೇಕಿದೆ. ಮಾರ್ಗಸೂಚಿಯನ್ನು ಪಾಲಿಸುವುದು ಅನಿವಾರ್ಯವಾಗಿದ್ದು, ಅವಶ್ಯ ಕಾಮಗಾರಿಗಳ ಆರಂಭಕ್ಕೆ ಯಾವುದೇ ತೊಂದರೆ ಇಲ್ಲ' ಎಂದು ವಿವರಿಸಿದರು.`ಗುತ್ತಿಗೆದಾರರಿಗೆ ರೂ1,265 ಕೋಟಿ ಬಾಕಿ ನೀಡಬೇಕಿದ್ದು, ಹಣ ಪಾವತಿ ಮಾಡುವಂತೆ ನಿತ್ಯ ಒತ್ತಡ ಹೇರುತ್ತಿದ್ದಾರೆ. ಹಣಕಾಸಿನ ಸ್ಥಿತಿ ಹೀಗಿರುವಾಗ ಕಾಮಗಾರಿಗಳನ್ನು ಎಚ್ಚರಿಕೆಯಿಂದ ಕೈಗೆತ್ತಿಕೊಳ್ಳದೆ ಬೇರೆ ಮಾರ್ಗ ಇಲ್ಲ' ಎಂದು ತಿಳಿಸಿದರು.`ಕಾರ್ಯದ ಆದೇಶ ನೀಡಿದ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು. ಕೋಡ್ ಸಂಖ್ಯೆ ನೀಡಿದ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಒಂದೇ ಕೆಲಸಕ್ಕೆ ಮತ್ತೆ ಬೇಡಿಕೆ ಬಂದಿದ್ದರೆ, ಕಾಮಗಾರಿ ಕಳಪೆ ಆಗಿದ್ದರೆ, ಕೆಲಸ ಅಗತ್ಯ ಇಲ್ಲದಿದ್ದರೆ ಅಂತಹ ಕಾಮಗಾರಿಗಳನ್ನು ಕೈಬಿಡಬೇಕು. ಬಜೆಟ್‌ನಲ್ಲಿ ಈಗಾಗಲೇ ಎಲ್ಲ ಕೆಲಸಗಳಿಗೆ ಹಣ ಎತ್ತಿಡಲಾಗಿದೆ. ಅದನ್ನೇ ಬಳಸಿಕೊಂಡು ಕಾಮಗಾರಿ ಆರಂಭಿಸಬೇಕು' ಎಂದು ಮೇಯರ್ ವೆಂಕಟೇಶಮೂರ್ತಿ ಸೂಚಿಸಿದರು.ವಿಷಯ ಪ್ರಸ್ತಾಪಿಸಿದ ನಾಗರಾಜ್, `ಆಯುಕ್ತರ ತಾಂತ್ರಿಕ ತನಿಖಾ ಕೋಶ (ಟಿವಿಸಿಸಿ) ಕುಳಿತಲ್ಲೇ ಪರಿಶೀಲನೆ ನಡೆಸಿ ನೀಡಿದ ವರದಿ ಆಧರಿಸಿ ಹಿಂದಿನ ಆಯುಕ್ತರು ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದರು. ಇದರಿಂದ ನಗರದಲ್ಲಿ ಹಲವು ಕೆಲಸಗಳು ಅರ್ಧಕ್ಕೆ ನಿಂತಿದ್ದು, ಮೋರಿಗಳು ತೆರೆದುಕೊಂಡಿವೆ. ಫುಟ್‌ಪಾತ್ ಮೇಲಿನ ಕಲ್ಲುಗಳನ್ನು ಅಗೆಯಲಾಗಿದೆ. ಚರಂಡಿಗಳ ಗೋಡೆಗಳು ಕುಸಿದಿವೆ. ಇವುಗಳಿಗೆ ಪರಿಹಾರ ಏನು' ಎಂದು ಪ್ರಶ್ನಿಸಿದರು.`ಬಿಬಿಎಂಪಿ ಏಕಾಏಕಿ ಕೆಲಸ ನಿಲ್ಲಿಸಿದ್ದರಿಂದ ಸಾರ್ವಜನಿಕರಿಗೆ ಏನು ಉತ್ತರ ಕೊಡಬೇಕು' ಎಂದು ಕೇಳಿದ ಅವರು, `ಗುತ್ತಿಗೆದಾರರಿಗೆ ಕೆಲಸ ಪುನರಾರಂಭಿಸುವಂತೆ ಕೇಳಿಕೊಳ್ಳಲೂ ಆಗುತ್ತಿಲ್ಲ' ಎಂದು ಹೇಳಿದರು.ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ, `ಸರ್ಕಾರದ ಅನುದಾನದಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಸ್ಥಗಿತಗೊಳಿಸಲು ಬಿಬಿಎಂಪಿ ಆಯುಕ್ತರಿಗೆ ಅಧಿಕಾರ ಕೊಟ್ಟವರು ಯಾರು' ಎಂದು ಕೇಳಿದರು. `198 ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದ್ದು, ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಉತ್ತರ ಹೇಳಬೇಕಿದೆ. ನಿಲ್ಲಿಸಿದ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು' ಎಂದು ಒತ್ತಾಯಿಸಿದರು.`ಮಹಾಲೆಕ್ಕಪಾಲರ (ಸಿಎಜಿ) ವರದಿಯಲ್ಲಿ ಪ್ರಸ್ತಾಪಗೊಂಡ ಬಿಬಿಎಂಪಿ ಹಗರಣಗಳಿಂದ ಸದಸ್ಯರ ಗೌರವಕ್ಕೆ ಕುಂದು ಉಂಟಾಗಿದ್ದು, ಈ ಅಂಶಗಳ ಕುರಿತು ಪರಿಶೀಲನೆ ಮಾಡಲಾಗಿದೆಯೇ' ಎಂದು ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್ ಪ್ರಶ್ನಿಸಿದರು.`ಅವ್ಯವಹಾರಗಳ ಪ್ರಸ್ತಾಪ ಇರುವ ಪ್ರತಿ ಕಾಮಗಾರಿ ವಿಷಯವಾಗಿಯೂ ಕಾಲಮಿತಿಯಲ್ಲಿ ವಿವರವಾದ ಮಾಹಿತಿ ನೀಡುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಂದ ಮಾಹಿತಿಯನ್ನು ಕ್ರೋಢೀಕರಿಸಿ ಉತ್ತರ ನೀಡಲಾಗುವುದು' ಎಂದು ಆಯುಕ್ತರು ತಿಳಿಸಿದರು.ಉತ್ತರಾಖಂಡ ಸಂತ್ರಸ್ತರಿಗೆ  ರೂ1 ಕೋಟಿ ನೆರವು

ಉತ್ತರಾಖಂಡ ಪ್ರವಾಹ ಸಂತ್ರಸ್ತರ ನೆರವಿಗಾಗಿ ಬಿಬಿಎಂಪಿ ವತಿಯಿಂದ ರೂ1 ಕೋಟಿ ದೇಣಿಗೆಯನ್ನು ಕೇಂದ್ರ ಪರಿಹಾರ ನಿಧಿಗೆ ನೀಡಲು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಇದಲ್ಲದೆ, ಬಿಬಿಎಂಪಿ ಸದಸ್ಯರು ತಮ್ಮ ಒಂದು ತಿಂಗಳ ಗೌರವ ಧನವನ್ನು ದೇಣಿಗೆ ನೀಡಲು ನಿರ್ಧರಿಸಿದರು. ನೌಕರರ ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಿ, ಎಲ್ಲ ನೌಕರರ ಒಂದು ದಿನದ ವೇತನವನ್ನು ಪರಿಹಾರ ನಿಧಿಗೆ ಕಳುಹಿಸಿ ಕೊಡಬೇಕು ಎಂದು ಮೇಯರ್ ಡಿ.ವೆಂಕಟೇಶಮೂರ್ತಿ, ಆಯುಕ್ತರಿಗೆ ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.