ಸೋಮವಾರ, ಮೇ 23, 2022
30 °C

ತರಕಾರಿ, ಪೆಟ್ರೋಲ್ ದುಬಾರಿ: ಹಣದುಬ್ಬರ ಶೇ 7.55ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಪೆಟ್ರೋಲ್ ದರದಲ್ಲಿ ಭಾರಿ ಹೆಚ್ಚಳವಾಗಿದ್ದು, ತರಕಾರಿಗಳ ಧಾರಣೆಯಲ್ಲಿಯೂ ವಿಪರೀತ ಏರಿಕೆಯಾಗಿರುವುದರ ಪರಿಣಾಮ ದೇಶದಲ್ಲಿನ ಹಣದುಬ್ಬರ ಪ್ರಮಾಣ ಶೇ 7.55ಕ್ಕೆ ಏರಿದೆ.ದೇಶದ ಆರ್ಥಿಕ ಪರಿಸ್ಥಿತಿ ಹಿನ್ನಡೆ ಕಂಡಿರುವ ಕಠಿಣ ಸಂದರ್ಭದಲ್ಲಿಯೇ ಹಣದುಬ್ಬರವೂ ಹೆಚ್ಚಿರುವುದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ಗೆ ಮುಂದಿನ ವಾರ ಹೊಸ ಬಡ್ಡಿದರ ನೀತಿ ಪ್ರಕಟಿಸುವ ವಿಚಾರದಲ್ಲಿ ಸವಾಲು ಒಡ್ಡಿದಂತಿದೆ.`ಹಣದುಬ್ಬರದಲ್ಲಿನ ಈ ಏರಿಕೆಗೆ ಆಹಾರ ಹಣದುಬ್ಬರವೇ ಕಾರಣ~ ಎಂದು ಹಣಕಾಸು ತಜ್ಞರು ವಿಶ್ಲೇಷಿದ್ದಾರೆ.

ಆರ್‌ಬಿಐ ಇದೇ 18ರಂದು ಹಣಕಾಸು ನಿರ್ವಹಣಾ ನೀತಿ ಪರಾಮರ್ಶೆ ಪ್ರಕಟಿಸಲಿದ್ದು, ಬಡ್ಡಿಯ ಮೂಲದರದಲ್ಲಿ ಕನಿಷ್ಠ ಶೇ 0.25ರಷ್ಟು ಅಂಶಗಳನ್ನು ಕಡಿತಗೊಳಿಸಬಹುದಾಗಿದೆ. ಈ ಕ್ರಮ ಕೈಗೊಳ್ಳಲು ಈಗಿನ ಹಣದುಬ್ಬರ ಪ್ರಮಾಣವೇನೂ ಆರ್‌ಬಿಐಗೆ ಅಡ್ಡಿಯಾಗದು ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಕಳೆದ ವರ್ಷಕ್ಕಿಂತ ಉತ್ತಮ: ಹಣದುಬ್ಬರದ ಮಟ್ಟ ಏಪ್ರಿಲ್‌ನಲ್ಲಿ ಶೇ 7.23ರಷ್ಟಿದ್ದಿತು. ಕಳೆದ ವರ್ಷದ ಮೇ ತಿಂಗಳಲ್ಲಿ ಶೇ 9.56ರ ಕಳವಳಕಾರಿ ಮಟ್ಟದಲ್ಲಿತ್ತು.ಸಗಟು ದರ ಪಟ್ಟಿಯಲ್ಲಿ ಆಹಾರ ಪದಾರ್ಥಗಳ ಪಾಲೇ ಶೇ 14.3ರಷ್ಟಿರುತ್ತದೆ. ಏಪ್ರಿಲ್- ಮೇ ತಿಂಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದರೂ, ಹಾಲು, ಮೊಟ್ಟೆ, ಮಾಂಸ, ಆಲೂಗಡ್ಡೆ ಧಾರಣೆಯಲ್ಲಿ ಭಾರಿ ಏರಿಕೆಯಾಗಿದೆ. ಹಾಗಾಗಿಯೇ ಏಪ್ರಿಲ್‌ನಲ್ಲಿ ಶೇ 10.49ರಷ್ಟಿದ್ದ ಆಹಾರದ ಒಟ್ಟಾರೆ ಹಣದುಬ್ಬರ ಮೇ ತಿಂಗಳಲ್ಲಿ ಶೇ 10.74ಕ್ಕೇರಿದೆ.ಪ್ರಣವ್ ನಿರೀಕ್ಷೆ: ಈಗಿನ ಹಣದುಬ್ಬರ ಏರಿಕೆ ಬಗ್ಗೆ ಆತಂಕ ಪಡುವುದೇನೂ ಇಲ್ಲ ಎಂದಿರುವ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಈ ಬಾರಿ ಮುಂಗಾರು ಉತ್ತಮವಾಗಿರುವ ನಿರೀಕ್ಷೆ ಇದೆ. ಹಾಗಾದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರದ ಮಟ್ಟ ಶೇ 6.5ರಿಂದ ಶೇ 7.5ರ ನಡುವೆ ಇರಲಿದೆ ಎಂದಿದ್ದಾರೆ.ಹಣದುಬ್ಬರ ಕುರಿತು ಸುದ್ದಿಗಾರರ ಬಳಿ ಪ್ರತಿಕ್ರಿಯಿಸಿದ ಸಚಿವರು, ಕೆಲವು ಆಹಾರ ಪದಾರ್ಥಗಳು, ಕಾಯಿಪಲ್ಲೆಗಳು ಕೆಲವೇ ಋತುಗಳಲ್ಲಿ ಲಭ್ಯವಾಗುವಂತಹವು. ಹಾಗಾಗಿ ಅವುಗಳ ಧಾರಣೆಯಲ್ಲಿ ಹೆಚ್ಚಳವಾಗಿದೆ ಎಂದು ವಿಶ್ಲೇಷಿಸಿದರು.ಆಹಾರ ಪದಾರ್ಥಗಳ ಸರಬರಾಜು ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಗೋದಾಮುಗಳು ಮತ್ತು ಶೀತಲಗೃಹಗಳ ವ್ಯವಸ್ಥೆಯನ್ನೂ ಮಾಡಬೇಕಿದೆ ಎಂದೂ ಹೇಳಿದರು.ರಫ್ತು ಕ್ಷೇತ್ರ: ಶೇ 4.16 ಕುಸಿತ

ನವದೆಹಲಿ(ಪಿಟಿಐ):
ಈಗಾಗಲೇ ಇಳಿಜಾರಿನಲ್ಲಿರುವ ದೇಶದ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಕೆಳ ದೂಡುವಂತೆ ರಫ್ತು ಕ್ಷೇತ್ರವೂ ಕಳಪೆ ಸಾಧನೆ ತೋರಿದೆ.ರಫ್ತು ಕ್ಷೇತ್ರದ ಪ್ರಗತಿ ಮೇ ತಿಂಗಳಲ್ಲಿ ಶೇ 4.16ರಷ್ಟು ಕುಸಿತ ಕಂಡು 2568 ಕೋಟಿ ಅಮೆರಿಕನ್ ಡಾಲರ್(ರೂ. 1.41 ಲಕ್ಷ ಕೋಟಿ)ಗೆ ಬಂದು ನಿಂತಿದೆ.ಕೈಗಾರಿಕಾ ಕ್ಷೇತ್ರದ ಕಳಪೆ ಸಾಧನೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದ ಪರಿಣಾಮ ಭಾರತದ ರಫ್ತು ಉದ್ಯಮ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಎಸ್.ಆರ್.ರಾವ್ ಗುರುವಾರ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.