ಗುರುವಾರ , ಆಗಸ್ಟ್ 5, 2021
26 °C

ತರಕಾರಿ ಬೀಜ ಮಾರಾಟದ ಯಶೋಗಾಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಮಾತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಿಲ್ಲಂಪದವು ನಾರಾಯಣ ಭಟ್ಟರು ಉತ್ತಮ ಉದಾಹರಣೆ. ಹದಿನೈದು ಎಕರೆ ಭೂಮಿ ಇರುವ ಭಟ್ಟರು ಪ್ರಯೋಗಶೀಲ ರೈತರು. ಅಡಿಕೆ, ತೆಂಗು, ಕೋಕೊ, ಗೇರು ಇತ್ಯಾದಿ ಬೆಳೆಗಳನ್ನು ಸಾವಯವದಲ್ಲಿ ಬೆಳೆದು ಸೈ ಎನ್ನಿಸಿಕೊಂಡಿದ್ದಾರೆ. ಜತೆಗೆ ತರಕಾರಿ ಬೀಜ ಉತ್ಪಾದಿಸಿ ಮಾರಾಟ ಮಾಡುತ್ತಾರೆ.ಹನ್ನೆರಡು ವರ್ಷಗಳಿಂದ ನಾರಾಯಣ ಭಟ್ಟರು ಬೇಸಾಯದ ಜತೆಗೆ ಮನೆಯ ಅಂಗಳದಲ್ಲಿ ಸಾವಯವ ಬೇಸಾಯದಲ್ಲಿ ತರಕಾರಿ ಬೆಳೆಯುತ್ತಾರೆ. ತರಕಾರಿ ಬೀಜಗಳನ್ನು ಅವರೇ ಮಾರಾಟ ಮಾಡುತ್ತಾರೆ.ಇಪ್ಪತ್ತೈದಕ್ಕೂ ಹೆಚ್ಚು  ಕೃಷಿ ಮೇಳಗಳಲ್ಲಿ ಅವರು ವಿವಿಧ ತರಕಾರಿ ಬೀಜಗಳನ್ನು ಮಾರಾಟ ಮಾಡಿದ್ದಾರೆ. ತಮ್ಮ ಮನೆಯಂಗಳದಲ್ಲಿ (0. 35 ಎಕರೆ) ರಾಸಾಯನಿಕ ಗೊಬ್ಬರ ಬಳಸದೆ  ಅಲಸಂಡೆ, ಕೂದರ ಅಲಸಂಡೆ, ಗಿಡ ಅಲಸಂಡೆ, ಬಿಳಿ, ಕೆಂಪು ಹಾಗೂ ಶ್ರೀಲಂಕಾ ಮತ್ತು ಬಹು ವಾರ್ಷಿಕ ತಳಿಯ ಬೆಂಡೆಕಾಯಿ, ಹರಿವೆ ಸೊಪ್ಪು,  ಬದನೆಕಾಯಿ, ಚೀನಿಕಾಯಿ, ಸೊರೆಕಾಯಿ, ಮುಳ್ಳು ಸೌತೆ, ಸಾಂಬಾರ ಸೌತೆ,  ಪಡುವಲ, ಬದನೆ, ಬೊಂಡಾ ಮೆಣಸಿನ ಕಾಯಿ,ಗೊಂಚಲು ಹೀರೆಕಾಯಿ ಹೀಗೆ ಇಪ್ಪತೈದು  ನಮೂನೆಯ ತರಕಾರಿಗಳನ್ನು ಬೆಳೆಯುತ್ತಾರೆ. ಬೆಳೆದ  ತರಕಾರಿಗಳಿಂದ ಬೀಜ ಸಂಗ್ರಹಿಸುತ್ತಾರೆ. ಸ್ವಲ್ಪ ತರಕಾರಿಯನ್ನು ಮನೆಗೆ ಬಳಸುತ್ತಾರೆ.ಹೆಚ್ಚಾದುದನ್ನು ಮಾರುಕಟ್ಟೆಗೆ  ಕಳುಹಿಸಿ ಮಾರಾಟ ಮಾಡುತ್ತಾರೆ.ಪ್ರತಿ ವರ್ಷ ತರಕಾರಿ ಬೀಜ ಮಾರಾಟದಿಂದ ಅವರಿಗೆ ಸುಮಾರು ಇಪ್ಪತ್ತು ಸಾವಿರ ರೂ ಆದಾಯವಿದೆ. ತರಕಾರಿ ಗಿಡಗಳಿಗೆ ಹಟ್ಟಿ ಗೊಬ್ಬರ, ಸುಡು ಮಣ್ಣು, ಅಡಿಕೆ ಸಿಪ್ಪೆ, ಸಗಣಿ ಗೊಬ್ಬರ ಬಳಸುತ್ತಾರೆ.ಗೋಮೂತ್ರ ಮತ್ತು ಕಾಸರಕನ ಮರದ ಎಲೆ ಮತ್ತು ಇಂಟೆಗದ ಎಲೆಗಳ ರಸ ಸಿಂಪರಣೆ ಮಾಡುತ್ತಾರೆ. ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು ಎಂಬ ಭಾವನೆ ಜನರಲ್ಲಿ ಇರುವುದರಿಂದ ಸಾವಯವ ತರಕಾರಿ ಬೀಜಗಳಿಗೆ ಬೇಡಿಕೆ ಇದೆ. ಅವರು ಬೀಜೋತ್ಪಾದನೆ ಮಾಡಲು ಇದೇ ಕಾರಣ.‘ಕೃಷಿ ಮೇಳಗಳಲ್ಲಿ ತರಕಾರಿ ಬೀಜ ಮಾರಾಟ ಮಾಡಲು ನಾನೂ ಹೋಗುತ್ತೇನೆ. ಇದರಿಂದ ಸ್ವಲ್ಪ ಆದಾಯ ಸಿಗುತ್ತದೆ ಎನ್ನುವುದಕ್ಕಿಂತ ನಾಲ್ಕಾರು ರೈತರ ಪರಿಚಯ, ಒಡನಾಟ ಸಿಗುತ್ತದೆ. ಬೇರೆ ಭಾಗಗಳ ತರಕಾರಿ ಬೀಜಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಭಟ್ಟರು.ಭಟ್ಟರ ಬಳಿ ಹತ್ತಾರು ತಳಿಗಳ ತರಕಾರಿ ಬೀಜಗಳ ಸಂಗ್ರಹವಿದೆ. ತರಕಾರಿ ಬೀಜ ಬೇಕಿದ್ದವರು ಮತ್ತು ಬೀಜೋತ್ಪಾದನೆಯ ಬಗ್ಗೆ ಮಾಹಿತಿ ಬೇಕಿದ್ದವರು ಅವರನ್ನು ಸಂಪರ್ಕಿಸಿ ಮಾತನಾಡಬಹುದು. ಅವರ ದೂರವಾಣಿ ನಂಬರ್: 08255 270266.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.