ಶುಕ್ರವಾರ, ಮಾರ್ಚ್ 5, 2021
30 °C

ತಲೆನೋವಾಗಿರುವ ತ್ಯಾಜ್ಯ ವಿಲೇವಾರಿ!

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ತಲೆನೋವಾಗಿರುವ ತ್ಯಾಜ್ಯ ವಿಲೇವಾರಿ!

ಬೆಂಗಳೂರು: ನಗರದಲ್ಲಿ ಪ್ರತಿ ದಿನ ಉತ್ಪತ್ತಿಯಾಗುತ್ತಿರುವ ಸುಮಾರು ನಾಲ್ಕರಿಂದ ಐದು ಸಾವಿರ ಟನ್‌ಗಳಷ್ಟು ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದು ಬಿಬಿಎಂಪಿಗೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.`ರಾಮ್ಕಿ~ ಕಂಪೆನಿಯು ಅವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುತ್ತಿದೆ ಎಂಬ ಕಾರಣಕ್ಕಾಗಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಯಲಹಂಕ ಹೊರವಲಯದ ಮಾವಳ್ಳಿಪುರ ಬಳಿ ಕಸ ವಿಲೇವಾರಿ ಮಾಡದಂತೆ ಬಿಬಿಎಂಪಿಗೆ ತಾಕೀತು ಮಾಡಿದೆ. ಇದರಿಂದ ಪಾಲಿಕೆಯು ತಾತ್ಕಾಲಿಕವಾಗಿ ಅಲ್ಲಿ ಕಸ ವಿಲೇವಾರಿ ಮಾಡುವುದನ್ನು ನಿಲ್ಲಿಸಿದೆ.ಅವೈಜ್ಞಾನಿಕ ಕಸ ವಿಲೇವಾರಿಯಿಂದ ಸುತ್ತಲಿನ ಪರಿಸರ ಹಾಳಾಗಿ ರೋಗ-ರುಜಿನಗಳಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಮಾವಳ್ಳಿಪುರ ಸುತ್ತಮುತ್ತಲಿನ 12 ಗ್ರಾಮಗಳ ಜನತೆ ಪ್ರತಿಭಟನೆ ನಡೆಸಿದ ಬೆನ್ನಲ್ಲಿಯೇ ಮಾಲಿನ್ಯ ನಿಯಂತ್ರಣ ಮಂಡಳಿಯು ಅಲ್ಲಿ ಕಸ ವಿಲೇವಾರಿ ಮಾಡುವುದನ್ನು ನಿಲ್ಲಿಸುವಂತೆ ಪಾಲಿಕೆಗೆ ಸೂಚಿಸಿದೆ. ಹೀಗಾಗಿ, ಪಾಲಿಕೆಯು ಸದ್ಯಕ್ಕೆ ದೂರದ ದೊಡ್ಡಬಳ್ಳಾಪುರ ಬಳಿಯ ಟೆರ‌್ರಾ ಫಾರ್ಮ್ ಬಳಿ ನಗರದಲ್ಲಿ ಸಂಗ್ರಹಿಸುವ ಕಸವನ್ನು ಸುರಿಯುತ್ತಿದೆ.ಬಿಬಿಎಂಪಿಯ ಬಜೆಟ್‌ನ ಮೊತ್ತ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದರೂ ಸಮರ್ಪಕ ಕಸ ವಿಲೇವಾರಿ ಮಾತ್ರ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ, ಕಾನೂನು ತೊಡಕಿನಿಂದ ಕಸ ವಿಲೇವಾರಿಯ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ.

 

ತೀರ್ಪು ಬಿಬಿಎಂಪಿ ಪರವಾಗಿದ್ದರೂ ಗುತ್ತಿಗೆದಾರರಿಗೆ ಕಾರ್ಯಾದೇಶ ಪತ್ರ ನೀಡುವ ಮೊದಲು ಟೆಂಡರ್ ಪ್ರಕ್ರಿಯೆಯ ರೂಪುರೇಷೆಗಳನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ಹೈಕೋರ್ಟ್‌ನ ಅನುಮತಿ ಪಡೆದು ತ್ಯಾಜ್ಯ ವಿಲೇವಾರಿಯ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಬೇಕಾಗಿದೆ.ಈ ನಡುವೆ, ಮಾವಳ್ಳಿಪುರ ಹಾಗೂ ಮಂಡೂರು ಬಳಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಗಳ ಕಾರ್ಯಾರಂಭಕ್ಕೆ ಅಡ್ಡಿ-ಆತಂಕಗಳು ಎದುರಾಗುತ್ತಿರುವುದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.

19ರಂದು ಮಾವಳ್ಳಿಪುರಕ್ಕೆ ಭೇಟಿ: `ಇದೇ 19ರಂದು ಮಾವಳ್ಳಿಪುರ ಕಸ ವಿಲೇವಾರಿ ಘಟಕದ ಬಳಿ ಆಯುಕ್ತರೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು~ ಎಂದು ಮೇಯರ್ ಡಿ. ವೆಂಕಟೇಶಮೂರ್ತಿ ತಿಳಿಸಿದ್ದಾರೆ.`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಮಾವಳ್ಳಿಪುರ ಬಳಿ ಕಸ ವಿಲೇವಾರಿ ಮಾಡುವುದನ್ನು ನಿಲ್ಲಿಸಲಾಗಿದೆ. 19ರಂದು ಸ್ಥಳೀಯರ ಜತೆ ಚರ್ಚೆ ನಡೆಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು~ ಎಂದು ಹೇಳಿದರು.ಮಂಡೂರು ಘಟಕಕ್ಕೆ ಬಾಲಗ್ರಹ ಪೀಡೆ:

ಮಾವಳ್ಳಿಪುರದ ಕತೆ ಒಂದು ರೀತಿಯದ್ದಾದರೆ, ಹೊಸಕೋಟೆ ರಸ್ತೆಯ ಮಂಡೂರು ಬಳಿ ಕೂಡ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವಂತಹ ಪಾಲಿಕೆಯ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.ಅಲ್ಲಿ ವಿದ್ಯುತ್ ಘಟಕ ಸ್ಥಾಪನೆಗೆ `ಬಾಲಗ್ರಹ ಪೀಡೆ~ ಕಾಡುತ್ತಿರುವುದರಿಂದ ಸುಮಾರು ಏಳು ವರ್ಷಗಳಾದರೂ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪನೆ ಕೈಗೂಡಲು ಸಾಧ್ಯವಾಗಿಲ್ಲ. ಮಂಡೂರು ಬಳಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಬಿಬಿಎಂಪಿಯು 2005ರ ಜೂನ್ 24ರಂದು ಶ್ರೀನಿವಾಸ ಗಾಯಿತ್ರಿ ರಿಸೋರ್ಸಸ್ ಕಂಪೆನಿ ಜತೆ ಒಪ್ಪಂದಕ್ಕೆ ಸಹಿ ಹಾಕಿತು.ಅಲ್ಲದೆ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪನೆಗೂ ಪಾಲಿಕೆ ಒಪ್ಪಂದ ಮಾಡಿಕೊಂಡಿತ್ತು. ಸುಮಾರು 50 ಕೋಟಿ ರೂಪಾಯಿ ವೆಚ್ಚದ ಈ ಮಹಾತ್ವಾಕಾಂಕ್ಷೆಯ ಯೋಜನೆ ದೇಶದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ತ್ಯಾಜ್ಯ ವಿಲೇವಾರಿಗಾಗಿ ಪಾಲಿಕೆ ಮೀಸಲಿಟ್ಟಿದ್ದ 155 ಎಕರೆ ಜಾಗದ ಪೈಕಿ 25 ಎಕರೆ ಜಾಗವನ್ನು ಸಂಸ್ಥೆಗೆ ಹಸ್ತಾಂತರ ಮಾಡಿತ್ತು. ಈ ಪೈಕಿ 19 ಎಕರೆ ಜಾಗವನ್ನು ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ 6 ಎಕರೆ ಜಾಗವನ್ನು ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀಡಿ, ಪ್ರತಿ ನಿತ್ಯ ಒಂದು ಸಾವಿರ ಮೆಟ್ರಿಕ್ ಟನ್ ವಿದ್ಯುತ್ ಪೂರೈಸಲು ಪಾಲಿಕೆ ಒಪ್ಪಿತ್ತು.`ಬಿಓಟಿ~ (ನಿರ್ಮಾಣ, ನಿರ್ವಹಣೆ ಹಾಗೂ ಹಸ್ತಾಂತರ) ಆಧಾರದಲ್ಲಿ ಕಂಪೆನಿಯು ಒಪ್ಪಂದಕ್ಕೆ ಸಹಿ ಹಾಕಿದ 14 ತಿಂಗಳಲ್ಲಿ ಸಂಸ್ಕರಣಾ ಘಟಕ, 16 ತಿಂಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಿ, ಒಟ್ಟು 20 ತಿಂಗಳಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭ ಮಾಡಬೇಕಿತ್ತು. ಅಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಕಡಿಮೆ ವೆಚ್ಚದಲ್ಲಿ ಪಾಲಿಕೆಯೇ ಖರೀದಿಸಿ ಮಾರಾಟ ಮಾಡಲು ಉದ್ದೇಶಿಸಿತ್ತು. ಆದರೆ, ಒಪ್ಪಂದದ ನಂತರ ಪಾಲಿಕೆಯು ಮಂಡೂರು ಬಳಿ ಟನ್‌ಗಟ್ಟಲೆ ಕಸ ಸುರಿದಿರುವುದನ್ನು ಹೊರತುಪಡಿಸಿದರೆ ಇದುವರೆಗೆ ಒಂದೇ ಒಂದು ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗಿಲ್ಲ.ಸುಮಾರು ಏಳು ವರ್ಷಗಳಿಂದಲೂ ಮಂಡೂರು ಬಳಿಯೇ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಪ್ರಾರಂಭವಾಗದಿದ್ದರೂ, ಪಾಲಿಕೆಯು ಮಾವಳ್ಳಿಪುರ ಬಳಿ 10 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಪ್ರಕ್ರಿಯೆ ನಡೆಸದೆ `ರಾಮ್ಕಿ~ ಕಂಪೆನಿಗೆ ಅನುಮತಿ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 20 ಕೋಟಿ ನೆರವಿಗೆ ಗುತ್ತಿಗೆ ಕಂಪೆನಿ ಮನವಿ

`ಮಂಡೂರು ಬಳಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿರುವ ಶ್ರೀನಿವಾಸ ಗಾಯಿತ್ರಿ ರಿಸೋರ್ಸಸ್ ಕಂಪೆನಿಯು, ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಪ್ರಾರಂಭಿಸಲು 20 ಕೋಟಿ ರೂಪಾಯಿ ನೆರವು ನೀಡುವಂತೆ ಕೋರಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಪಾಲಿಕೆ ನೆರವು ನೀಡಲು ಸಾಧ್ಯವಿಲ್ಲ.ಬದಲಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವು ನೀಡಲಿವೆ~ ಎಂದು ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ತಿಳಿಸಿದ್ದಾರೆ.`ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಂಪೆನಿಗೆ ನೆರವು ನೀಡಲು ಆಸ್ತಿ ತೋರಿವೆ. ಆದಷ್ಟು ಬೇಗ ಹಣಕಾಸಿನ ನೆರವು ಒದಗಿಸಿದಲ್ಲಿ ಇನ್ನು ಆರು ತಿಂಗಳಲ್ಲಿ ಮಂಡೂರು ಬಳಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಪ್ರಾರಂಭವಾಗಬಹುದು~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.