ಗುರುವಾರ , ಮಾರ್ಚ್ 4, 2021
18 °C

ತಲೆ ಕೆಳಗಾಗಿ ಹಾರಿದ ರಾಷ್ಟ್ರಧ್ವಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲೆ ಕೆಳಗಾಗಿ ಹಾರಿದ ರಾಷ್ಟ್ರಧ್ವಜ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ದೇವರಭೂಪುರ ಹಾಗೂ ರಾಯಚೂರಿನ ಬಳಗಾನೂರು ಪಟ್ಟಣದ ಶಾಲೆಗಳಲ್ಲಿ  ಧ್ವಜವು ತಲೆ ಕೆಳಗಾಗಿ ಹಾರಿದವು. ಕೂಡಲೇ ಅದನ್ನು ಸರಿಪಡಿಸಲಾಯಿತು.



ಬಳಗಾನೂರು ವರದಿ:  ಬಳಗಾನೂರಿನ ಹರಿಜನವಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮೌನೇಶ ಅವರು ಧ್ವಜಾರೋಹಣ ಮಾಡಿದಾಗ ಬಾವುಟ ತಲೆ ಕೆಳಗಾಗಿ ಹಾರಾಡಿತು. ತಕ್ಷಣ ಎಚ್ಚೆತ್ತ ಶಿಕ್ಷಕರು ಮತ್ತು ಮುಖಂಡರು, ವಿದ್ಯಾರ್ಥಿಯನ್ನು ಧ್ವಜಸ್ಥಂಭ ಏರಿಸಿ ಬಾವುಟವನ್ನು ಸರಿಪಡಿಸಿದರು .  ಮುಖಂಡರು ಮುಖ್ಯ ಶಿಕ್ಷಕಿ ಪ್ರಭಾವತಿ ಅವರನ್ನು ತರಾಟೆಗೆ ತೆಗೆದುಕೊಂಡರು. 



ರಾಷ್ಟ್ರೀಯ ಹಬ್ಬ ಆಚರಣೆಯ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಪ್ರಭಾವತಿಯವರು ಬೇಜವಾಬ್ದಾರಿ ತೋರಿರುವ  ಎರಡನೇ ಪ್ರಕರಣ ಇದಾಗಿದೆ. ಕೂಡಲೆ ಇವರನ್ನು ಅಮಾನತುಗೊಳಿಸಬೇಕು ಎಂದು ದಲಿತ ಸಂರಕ್ಷಣ ಸಮಿತಿಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಿ.ಮೌನೇಶ  ಒತ್ತಾಯಿಸಿದರು.



ಲಿಂಗಸುಗೂರು ವರದಿ: ತಾಲ್ಲೂಕಿನ ದೇವರಭೂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 70ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ನಡೆದ ಧ್ವಜಾರೋಹಣ ಸಂದರ್ಭದಲ್ಲಿ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡಿದ್ದು ಸಾರ್ವಜನಿಕರ ಆಕ್ರೋಶ ಕಾರಣವಾಯಿತು. ಸೋಮವಾರ  ಮುಖ್ಯಗುರುಗಳ ಹಾಗೂ ಸಿಬ್ಬಂದಿ ತಪ್ಪಿನಿಂದ ಧ್ವಜದ ಕಂಬದಲ್ಲಿ ಮಧ್ಯದಲ್ಲಿಯೆ ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.



ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡುತ್ತಿರುವುದನ್ನು ಕಂಡ ಶಾಲಾ ಮುಖ್ಯಸ್ಥರು ಕೂಡಲೆ ರಾಷ್ಟ್ರಧ್ವಜವನ್ನು ಕೆಳಗೆ ಇಳಿಸಿಕೊಂಡು ಸರಿಪಡಿಸಿ, ಪುನಃ ಧ್ವಜಾರೋಹಣ ನೆರವೇರಿಸಿದರು ಎಂದು ಶಾಲಾ ಮಕ್ಕಳು ತಿಳಿಸಿದ್ದಾರೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಣ ಸಂಯೋಜಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ವರದಿ ಸಂಗ್ರಹಿಸಿದ್ದಾರೆ ಎಂದು ತಿಳಿಸಲಾಗಿದೆ.



ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ(ಪ್ರಭಾರ) ಸರೋಜ ಪೋಳ ಅವರನ್ನು ಸಂಪರ್ಕಿಸಿದಾಗ, ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿಸಿದ ಬಗ್ಗೆ ಹಿರಿಯ ಅಧಿಕಾರಿಗಳು ವರದಿ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.