ಸೋಮವಾರ, ಏಪ್ರಿಲ್ 19, 2021
32 °C

ತಾ.ಪಂ. ಸದಸ್ಯರು, ಶಾಸಕರ ನಡುವೆ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಸತಿ ಯೋಜನೆ ಜಾಗೃತಿ ಸಮಿತಿ ಸಭೆಯಲ್ಲಿ ಶಾಸಕ ಸಂಜಯ ಪಾಟೀಲ ಹಾಗೂ ತಾ.ಪಂ.ನ ಕೆಲವು ಸದಸ್ಯರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.ಶಾಸಕ ಸಂಜಯ ಪಾಟೀಲರು ತಮ್ಮ ಕ್ಷೇತ್ರಕ್ಕೆ ಮಂಜೂರಾಗಿದ್ದ 4 ಸಾವಿರ ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಲುವಾಗಿ ವಸತಿ ಯೋಜನೆ ಜಾಗೃತಿ ಸಮಿತಿ ಸಭೆಯನ್ನು ಶನಿವಾರ ಕರೆದಿದ್ದರು. ಸಭೆ ಆರಂಭವಾಗುತ್ತಿದ್ದಂತೆ ಕೆಲವು ಮರಾಠಿ ಭಾಷಿಕ ತಾ.ಪಂ. ಸದಸ್ಯರು, ಸಭೆ ನಡೆಸುವ ಬಗ್ಗೆ ಎರಡು ದಿನಗಳ ಹಿಂದೆಯಷ್ಟೇ ನೋಟಿಸ್ ನೀಡಲಾಗಿದೆ. ಹಲವರಿಗೆ ನೋಟಿಸ್ ತಲುಪಿಯೇ ಇಲ್ಲ ಎಂದು ಗದ್ದಲ ಎಬ್ಬಿಸಿದರು. ಶಾಸಕರ ಮೇಲೆ ಆರೋಪಗಳ ಸುರಿಮಳೆಗೈದರು.ಇದರಿಂದ ಬೇಸತ್ತ ಉಷಾ ಸಿಂತ್ರೆ ಸೇರಿದಂತೆ ಹಲವು ಕನ್ನಡ ಭಾಷಿಕ ತಾ.ಪಂ. ಸದಸ್ಯರು, `ಪ್ರತಿ ಬಾರಿಯೂ ಒಂದಿಲ್ಲ ಒಂದು ವಿಷಯಕ್ಕೆ ಗದ್ದಲ ಎಬ್ಬಿಸುತ್ತೀರಿ. ಯಾರು ಬಂದಿಲ್ಲವೋ ಅವರ ಬಗ್ಗೆ ಏಕೆ ಯೋಚಿಸುತ್ತೀರಿ. ಈಗ ಬಂದಿರುವ ನೀವು ಅಭಿವೃದ್ಧಿ ಕೆಲಸ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡುವುದನ್ನು ಬಿಟ್ಟು ಅಡ್ಡಗಾಲು ಹಾಕಬೇಡಿ~ ಎಂದು ತಿರುಗೇಟು ನೀಡಿದರು. ಇದರಿಂದ ಕೆರಳಿದ ಮರಾಠಿ ಭಾಷಿಕ ಸದಸ್ಯರು, ಇನ್ನೂ ಹೆಚ್ಚಿನ ಗಲಾಟೆ ಮಾಡಲು ಆರಂಭಿಸಿದರು.ಇದರಿಂದ ಆಕ್ರೋಶಗೊಂಡ ಶಾಸಕ ಸಂಜಯ ಪಾಟೀಲ, “ನೀವು ರಾಜಕೀಯ ಮಾಡುವುದಿದ್ದರೆ, ಹೊರಗೆ ನಿಂತು ಮಾಡಿ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಡಿ. ವಸತಿ ಯೋಜನೆಗಳು ಬಡವರಿಗೆ ಮುಟ್ಟುವಂತೆ ಮಾಡಬೇಕೆ ಹೊರತು, ಅದಕ್ಕೆ ಅಡ್ಡಗಾಲು ಹಾಕಬೇಡಿ” ಎಂದು ತರಾಟೆಗೆ ತೆಗೆದುಕೊಂಡರು.“ನಮ್ಮ ಕ್ಷೇತ್ರಕ್ಕೆ ಸರ್ಕಾರದಿಂದ 4 ಸಾವಿರ ಮನೆಗಳು ಮಂಜೂರಾಗಿದೆ. ನಿಮ್ಮ ಕ್ಷೇತ್ರದಲ್ಲಿನ ಬಡ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಿಕೊಡಿ. ಆದಷ್ಟು ಬೇಗನೆ ಬಡವರಿಗೆ ಮನೆ ಸಿಗುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ” ಎಂದು ಮನವಿ ಮಾಡಿದರು.ತಾ.ಪಂ. ಅಧ್ಯಕ್ಷೆ ಮಲ್ಲವ್ವ ಕೋಲಕಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ. ಪಾಟೀಲ ಹಾಗೂ ತಾ.ಪಂ.ನ ಹಲವು ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.