ಗುರುವಾರ , ಜನವರಿ 23, 2020
19 °C
ಹಾಸ್ಟೆಲ್‌ಗಳಲ್ಲಿ ಅವ್ಯವಹಾರದ ಆರೋಪ

ತಾ.ಪಂ. ಸಭೆಯಲ್ಲಿ ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ವಿತರಿಸುವ ತಟ್ಟೆ, ಲೋಟ, ಹಾಸಿಗೆ ಇತರ ವ್ಯವಹಾರದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಟಿ. ಶ್ರೀಧರ್‌ ಒತ್ತಾಯಿಸಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ತಾಲ್ಲೂಕಿನ ವಿವಧ ಹಾಸ್ಟೆಲ್‌ಗಳಿಗೆ ಕೊಡುವ ವಸ್ತುಗಳ ಖರೀದಿಯಲ್ಲಿ ಲೋಪ ನಡೆದಿರುವ ಬಗ್ಗೆ ಹಿಂದುಳಿದ ವರ್ಗಗಳ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬಡ ವಿದ್ಯಾರ್ಥಿಗಳಿಗೆ ನೀಡುವ ಸವಲತ್ತುಗಳಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ. ಹಾಗಾಗಿ ಈ ಕುರಿತು ಕೂಲಂಕಷ ತನಿಖೆ ನಡೆಸಬೇಕು. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ತಾಲ್ಲೂಕಿನ ಚಿಕ್ಕ ಅಂಕನಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್‌ ಕಂಬಗಳು ಶಿಥಿಲಾವಸ್ಥೆಯಲ್ಲಿದ್ದು, ಬೀಳುವ ಸ್ಥಿತಿಯಲ್ಲಿವೆ. ಇವುಗಳನ್ನು ಬದಲಿಸುವಂತೆ ‘ಸೆಸ್ಕ್‌’ ಎಂಜಿನಿಯರ್‌ಗೆ ಹೇಳಿದ್ದರೂ ಇತ್ತ ಗಮನ ಹರಿಸುತ್ತಿಲ್ಲ. ಅಧ್ಯಕ್ಷರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮತ್ತೊಬ್ಬ ಸದಸ್ಯ ಪುಟ್ಟಸ್ವಾಮಿ ಮನವಿ ಮಾಡಿದರು.ಶಿಥಿಲವಾಗಿರುವ ವಿದ್ಯುತ್‌ ಕಂಬಗಳನ್ನು ಆದಷ್ಟು ಶೀಘ್ರ ಬದಲಿಸುವಂತೆ ಅಧ್ಯಕ್ಷ ಮಹದೇವಸ್ವಾಮಿ ಸೆಸ್ಕ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಅವರಿಗೆ ತಾಕೀತು ಮಾಡಿದರು.ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಅರಣ್ಯ ಇಲಾಖೆ ಸೋಲಾರ್‌ದೀಪಗಳನ್ನು ವಿತರಿಸಬೇಕು. ಆದರೆ ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ಅಮರನಾಥ್‌ ಸಲಹೆ ನೀಡಿದರು.ಉಪಾಧ್ಯಕ್ಷೆ ಕೆಂಪಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸಜ್ಜೇಗೌಡ, ಸದಸ್ಯರಾದ ಸುನಿತಾ ದಿವಾಕರ್‌, ಸುಮಲತಾ ಸಿದ್ದೇಗೌಡ, ಟಿ.ಬಿ. ಕೆಂಪೇಗೌಡ ಇತರರು ಇದ್ದರು.

ಪ್ರತಿಕ್ರಿಯಿಸಿ (+)