ಭಾನುವಾರ, ಜೂನ್ 20, 2021
25 °C
ಆಲಾಪ

ತಾರಕಕ್ಕೇರಿದ ಸ್ವರ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದು ಸಹಕಾರ ನಗರದಲ್ಲಿರುವ ರಾಗ ಸಂಗಮ ಆಯೋಜಿಸಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ. ಬನಾರಸ್‌ ಘರಾಣೆಯ ಖ್ಯಾತ ಕಲಾವಿದರಾದ ಪಂ.ರಾಜನ್‌-–-ಸಾಜನ್‌ ಮಿಶ್ರಾ ಅವರ ಶಿಷ್ಯರಾದ ಹೆಗ್ಗಾರ ಅನಂತ ಹೆಗಡೆ ಅವರ ಗಾಯನ ಕಾರ್ಯಕ್ರಮ.ಸಾಯಂಕಾಲದ ಸುಪ್ರಸಿದ್ಧ ರಾಗ ಬಿಹಾಗ್‌ನೊಂದಿಗೆ ಗಾಯನಕ್ಕೆ ಮುನ್ನುಡಿ ಬರೆದರು. ಔಡವ ಸಂಪೂರ್ಣ ರಾಗವಾದ ಇದಕ್ಕೆ ವಿಲಂಬಿತ್‌ ಏಕ್‌ತಾಲ್‌ನಲ್ಲಿ ಸುದೀರ್ಘವಾದ ಆಲಾಪ ಮಾಡಿದರು. ‘ಕೈಸೆ ಸುಖ ಸೋವೆ ನಿಂದರಿಯಾ..’ ಬಂದೀಶ್‌ ಅನ್ನು ಆಯ್ದು ಹಂತ ಹಂತವಾಗಿ ರಾಗ ವಿಸ್ತಾರ ಮಾಡಿದರು.ಆಲಾಪವನ್ನು ಮಂದ್ರದಿಂದ ಆರಂಭಿಸಿ ರಾಗದ ನಿಯಮಕ್ಕೆ ಅನುಗುಣವಾಗಿ ಸ್ವರದಿಂದ ಸ್ವರಕ್ಕೆ ಜಾರುತ್ತಾ ಅತಿ ತಾರಕದವರೆಗೆ ಹಾಡಿದ್ದು ಕೇಳುಗರಲ್ಲಿ ಸಂಚಲನ ಮೂಡಿಸಿತು. ವಿಲಂಬಿತ್‌ ನಂತರ ಎರಡನೇ ವೇಗದಲ್ಲಿ ಗಾಯನ ರೋಚಕ ತಿರುವು ಪಡೆಯಿತು. ಗಾಯಕರ ಎಂದಿನ ಶೈಲಿಯಂತೆ ಆಕಾರ್‌ ತಾನ್‌, ಸ್ವರ ತಾನ್‌ಗಳನ್ನು ಅತಿತಾರಕದ ಮಧ್ಯಮ ಸಪ್ತಕದವರೆಗೆ ಎತ್ತರಿಸಿ ಹಾಡಿದ್ದು ವಿಶೇಷವಾಗಿತ್ತು. ವಿಲಂಬಿತ್‌ ಮುಗಿಸಿ ದೃತ್‌ಗೆ ಬಂದಾಗ ಕೇಳುಗರನ್ನು ಸಂಗೀತ ಸಂಪೂರ್ಣವಾಗಿ ಕಟ್ಟಿಹಾಕಿತ್ತು. ದೃತ್‌ನಲ್ಲಿ ‘ಲಟ್‌ ಉಲಜಿ ಸುಲಜಾ...’ ಚೋಟಾ ಖ್ಯಾಲ್‌ ಹಾಡಿದರು. ಇಲ್ಲೂ ಸ್ವರ- ಆಕಾರ್‌ ತಾನ್‌ಗಳು ವಿಜೃಂಭಿಸಿದವು.ಹಿಂದೂಸ್ತಾನಿ ಗಾಯನವನ್ನು ಡಿ ಮತ್ತು ಡಿ ಶಾರ್ಪ್‌ ಶ್ರುತಿಯಲ್ಲಿ ಹಾಡುವುದು ಸಾಮಾನ್ಯ. ಇವೆರಡಕ್ಕಿಂತ ಏರು ಶ್ರುತಿ ‘ಇ’. ಇದರಲ್ಲಿ ತಾರ ಸಪ್ತಕದ ಸ್ವರಗಳಲ್ಲಿ ಸಂಚರಿಸುವುದು ನಿರಂತರ ಶಾರೀರ ಸಾಧನೆಯಿಂದ ಮಾತ್ರ ಸಾಧ್ಯ. ಅಂದಿನ ಗಾಯನ ಇದೇ ಶ್ರುತಿಯಲ್ಲಿ ವಿಲಂಬಿತ್‌ ಮತ್ತು ದೃತ್‌ನಲ್ಲಿ ಸಮಯಕ್ಕೆ ತಕ್ಕಂತೆ ಅತಿತಾರಕದ ಮಧ್ಯಮ ಸ್ವರದವರೆಗೆ ಮುಟ್ಟಿದ್ದು ಅತ್ಯಂತ ವಿಶೇಷವಾಗಿತ್ತು. ಗಾಯನದಲ್ಲಿ ಇಂತಹ ಕ್ಲಿಷ್ಟಕರವಾದ ನೈಪುಣ್ಯ ತೋರಿಸುತ್ತಿದ್ದಾಗ ಸಭಾಂಗಣದಲ್ಲಿ ಭರ್ತಿಯಾಗಿದ್ದ ಕೇಳುಗರು ಚಪ್ಪಾಳೆಯ ಅಭಿನಂದನೆ ಸಲ್ಲಿಸಿದ್ದು ಗಾಯಕರಿಗೆ ಮತ್ತಷ್ಟು ಸ್ಫೂರ್ತಿ ನೀಡಿತು. ಹೀಗೆ ಹಾಡಲು ಕಠಿಣ ಪರಿಶ್ರಮ, ಶಾರೀರ ಸಾಮರ್ಥ್ಯ, ಶ್ರದ್ಧೆ ಮತ್ತು ರಿಯಾಜ್‌ ಬೇಕು. ಇದನ್ನು ಸಾಧಿಸುವುದು ಕೂಡ ಹಾಡುಗಾರಿಕೆಯಲ್ಲಿ ಕಷ್ಟ.ಛಾಯಾನಟ್‌ನಲ್ಲಿ ಗುಡುಗಿದ ತಾನ್‌ಗಳು

ಗಾಯಕರು ನಂತರ ಹಾಡಿದ್ದು ಸುಪ್ರಸಿದ್ಧ ವಕ್ರರಾಗ ಛಾಯಾನಟ್‌. ಮಧ್ಯಲಯ ಪಂಜಾಬಿ ತೀನ್‌ತಾಲ್‌ನಲ್ಲಿ ‘ಜನನ ಜನನ ಜನ್‌ ಬಾಜೆ....’ ಬಂದೀಶ್‌ ಅನ್ನು ಪ್ರಸ್ತುತಪಡಿಸಿದರು. ಛಾಯಾನಟ್‌ ರಾಗಕ್ಕೆ ಇತರ ರಾಗಗಳಾದ ಕಾಮೋದ್‌, ಹಮೀರ್‌, ಕೇದಾರ್‌ ರಾಗಗಳ ಸ್ವರಗಳು ಅತ್ಯಂತ ಸಮೀಪದವಾಗಿವೆ. ಜತೆಗೆ ಸಾಕಷ್ಟು ಸಾಮ್ಯತೆಯನ್ನೂ ಹೊಂದಿವೆ.ಛಾಯಾನಟ್‌ ರಾಗವನ್ನು ಭಿನ್ನವಾಗಿ ಹಾಡಿದ್ದು ಗಾಯಕರಿಗೆ ಸ್ವರಗಳ ಮೇಲಿನ ಹಿಡಿತವನ್ನು ಸ್ಪಷ್ಟಪಡಿಸಿತ್ತು. ಗಾಯಕ-ವಾದಕರ ಚಾಕಚಕ್ಯತೆ, ಗಾಯನ ಕ್ಷಮತೆಯಿದ್ದರೆ ಮಾತ್ರ ಇಂಥ ರಾಗಗಳನ್ನು ಇತರ ರಾಗಗಳ ಛಾಯೆಯಿಂದ ಬೇರ್ಪಡಿಸಿ ಹಾಡಬಹುದು. ಇಂತ ಕ್ಲಿಷ್ಟಕರ ರಾಗವನ್ನು ಸರಾಗವಾಗಿ ಸ್ವರ-ಆಕಾರ್‌ ತಾನ್‌ಗಳ ಸಹಿತ ಹಾಡಿದ್ದು ಕೇಳುಗರ ಪ್ರಶಂಸೆಗೂ ಪಾತ್ರವಾಯಿತು.ಎರಡು ಪ್ರಮುಖ ರಾಗಗಳ ಬಳಿಕ ಶಾಸ್ತ್ರೀಯ ಸಂಗೀತದ ಏಕತಾನತೆ ಮರೆಸಲು ಅನಂತ ಹೆಗಡೆ ಅವರು ಹಾಡಿದ್ದು ಪುರಂದರ ದಾಸರ ಸುಪ್ರಸಿದ್ಧ ದೇವರನಾಮ ‘ಕಲಿಯುಗದಲಿ ಹರಿನಾಮವ ನೆನೆದರೆ..’ ದುರ್ಗಾ ರಾಗದಲ್ಲಿತ್ತು. ಇಲ್ಲಿಯೂ ಸ್ವರಗಳ ಸಾಂಗತ್ಯ ದೇವರನಾಮಕ್ಕೆ ವಿಶೇಷ ಮೆರುಗು ನೀಡಿತ್ತು. ಸಂಪ್ರದಾಯದಂತೆ ಕಛೇರಿಯ ಅಂತ್ಯಕ್ಕೆ ಹಾಡಿದ್ದು ಭೈರವಿ ರಾಗದ ‘ಮತ್‌ಜಾ ಜೋಗಿ..’ ಇದೂ ಕೂಡ ಆಕರ್ಷಕ ಶೈಲಿಯಲ್ಲಿ ಮೂಡಿಬಂತು. ನಿರರ್ಗಳವಾಗಿ ಎರಡೂವರೆ ಗಂಟೆ ನಡೆದ ಸಂಗೀತ ಕಛೇರಿ ಬಹುಕಾಲ ನೆನಪಿನಲ್ಲಿ ಉಳಿಯುವಂತಿತ್ತು.ಅನಂತ ಹೆಗಡೆ ಅವರ ಗಾಯನಕ್ಕೆ ತಬಲಾದಲ್ಲಿ ಗುರುಚರಣ ಗರುಡ, ಹಾರ್ಮೋನಿಯಂನಲ್ಲಿ ಭರತ್‌ ಹೆಗಡೆ ಹೆಬ್ಬಲಸು ಮತ್ತು ತಂಬೂರದಲ್ಲಿ ವಿದ್ಯಾ ದೇಸಾಯಿ ಸಮರ್ಥವಾಗಿ ಸಹಕರಿಸಿದರು. ಹಿರಿಯ ತಬಲಾ ವಾದಕರಾದ ಪಂ. ಗೋವಿಂದರಾವ್‌ ಗರಗ್‌ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ರೂವಾರಿ ಡಿ.ಪ್ರಾಣೇಶ್‌ ಬಾಬು ಕಾರ್ಯಕ್ರಮ ಆಯೋಜಿಸಿದ್ದರು. ಜಯಸಿಂಹ ನಿರೂಪಿಸಿ ಕಲಾವಿದರನ್ನು ಸತ್ಕರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.