ಶನಿವಾರ, ಮಾರ್ಚ್ 28, 2020
19 °C

ತಾರತಮ್ಯದ ಒಡಕು, ಪದಕದ ಕನಸು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾರತಮ್ಯದ ಒಡಕು, ಪದಕದ ಕನಸು...

ಬ್ಯಾಡ್ಮಿಂಟನ್‌ನ ಡಬಲ್ಸ್‌ ವಿಭಾಗದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಕರ್ನಾಟಕದ ಅಶ್ವಿನಿ ಪೊನ್ನಪ್ಪ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಎರಡನೇ ಬಾರಿ ವಿಶ್ವದ ಶ್ರೇಷ್ಠ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿರುವ ಅವರನ್ನು ಪ್ರಮೋದ್‌ ಜಿ.ಕೆ. ಸಂದರ್ಶಿಸಿದ್ದಾರೆ.‘ಸಿಂಗಲ್ಸ್‌ಗೆ ಸಿಗುವ ಪ್ರಾಮುಖ್ಯತೆ ಡಬಲ್ಸ್‌ ವಿಭಾಗಕ್ಕೆ ಏಕಿಲ್ಲ..’

ಬ್ಯಾಡ್ಮಿಂಟನ್‌ನ ಪುರುಷರ ಮತ್ತು ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಆಡುವ ಪ್ರತಿಯೊಬ್ಬ ಸ್ಪರ್ಧಿಯ ಪ್ರಶ್ನೆಯಿದು. ಬ್ಯಾಡ್ಮಿಂಟನ್, ಟೆನಿಸ್ ಕ್ರೀಡೆ ಗಳ ಸಿಂಗಲ್ಸ್‌ನಲ್ಲಿ ಯಾವುದಾದರೂ ಪ್ರಶಸ್ತಿ ಗೆದ್ದರೆ ದೊಡ್ಡ ಮಟ್ಟದಲ್ಲಿ ಪ್ರಚಾರ ಲಭಿಸುತ್ತದೆ. ಆದರೆ ಡಬಲ್ಸ್‌ ವಿಭಾಗದ ಸಾಧನೆ ಗಮನ ಸೆಳೆಯ ವುದು ಅಷ್ಟಕಷ್ಟೇ ಏಕೆ ಎಂಬುದು ಬ್ಯಾಡ್ಮಿಂಟನ್‌ ಡಬಲ್ಸ್ ಸ್ಪರ್ಧಿಗಳ ವಾದ.

ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ಆರಂಭಿಸಿರುವ  ಟಾಪ್‌ ಯೋಜನೆಗೆ ತಮ್ಮನ್ನು ಸೇರ್ಪಡೆ ಮಾಡದ ಕಾರಣಕ್ಕಾಗಿ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಅಸಮಾಧಾನ ವ್ಯಕ್ತಪಡಿಸಿದ್ದರು. ದೇಶದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ನ್ಯಾಯ ಎಂದು ಜ್ವಾಲಾ ಕೆಂಡಾಮಂಡಲವಾಗಿ ದ್ದರು. ನಂತರ ಸರ್ಕಾರ ಇವರನ್ನು ಟಾಪ್‌ ಯೋಜನೆಗೆ ಸೇರ್ಪಡೆ ಮಾಡಿತು.ನಂತರ ಅಶ್ವಿನಿ ಮತ್ತು ಜ್ವಾಲಾ ಕೆಲ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಇದರಿಂದ ಪಾಯಿಂಟ್ಸ್‌ ಸಂಖ್ಯೆ ಹೆಚ್ಚಿಸಿಕೊಂಡು ರಿಯೊ ಒಲಿಂಪಿಕ್ಸ್‌ಗೆ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಆದರೆ ಡಬಲ್ಸ್‌ ವಿಭಾಗಕ್ಕೆ ತಾರತಮ್ಯ ಆಗುತ್ತಿದೆ ಎಂದು ಈಗಲೂ  ಅಶ್ವಿನಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.‘ಸಿಂಗಲ್ಸ್‌ನಲ್ಲಿ ಆಡುವಾಗ ಒಬ್ಬರ ಯೋಚನೆಗಳಷ್ಟೇ ವ್ಯಕ್ತ ವಾಗುತ್ತವೆ. ಅವರು ತಮ್ಮ ಯೋಜನೆಗೆ ತಕ್ಕಂತೆ ಆಡಬಹುದು. ಆದರೆ ಡಬಲ್ಸ್‌ನಲ್ಲಿ ಇಬ್ಬರ ನಡುವೆ ಒಂದೇ ರೀತಿಯ ಯೋಜನೆ ಮತ್ತು ಹೊಂದಾಣಿಕೆ ಇರಬೇಕಾಗುತ್ತದೆ. ಆದ್ದರಿಂದ ಸಿಂಗಲ್ಸ್‌ಗಿಂತ ಡಬಲ್ಸ್‌ನಲ್ಲಿ ಸಾಧನೆ ಮಾಡುವುದು ಬಹಳ ಕಷ್ಟ. ಆದರೂ ಸಿಂಗಲ್ಸ್‌ ವಿಭಾಗಕ್ಕೆ ಹೆಚ್ಚು ಪ್ರಾಮುಖ್ಯತೆ ಲಭಿಸುತ್ತಿದೆ. ಈ ತಾರತಮ್ಯದಿಂದಲೇ ಡಬಲ್ಸ್‌ ವಿಭಾಗ ಹಿಂದುಳಿದಿದೆ’ ಎಂದು ಕರ್ನಾಟಕದ ಅಶ್ವಿನಿ ಬೇಸರ ವ್ಯಕ್ತಪಡಿಸುತ್ತಾರೆ.ಹೀಗೆ ತಾರತಮ್ಯದ ಒಡಕು ಬ್ಯಾಡ್ಮಿಂಟನ್‌ ರಂಗದಲ್ಲಿ ಹೊಗೆಯಾಡುತ್ತಿದೆ. ಆದರೂ ಡಬಲ್ಸ್‌ನಲ್ಲಿ ಭಾರತದ ಸಾಧನೆ ಕಡಿಮೆಯೇನೂ ಆಗಿಲ್ಲ. ಡಬಲ್ಸ್ ವಿಭಾಗದ ‘ಸೂಪರ್‌ ಜೋಡಿ’ ಎನಿಸಿರುವ ಜ್ವಾಲಾ ಮತ್ತು ಅಶ್ವಿನಿ ಈಗ ಮತ್ತೊಂದು ಒಲಿಂಪಿಕ್ಸ್‌ಗೆ ಸಜ್ಜಾಗಿದ್ದಾರೆ. 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಜ್ವಾಲಾ ಜೊತೆ ಡಬಲ್ಸ್‌ ವಿಭಾಗದಲ್ಲಿ ಅಶ್ವಿನಿ ಚಿನ್ನ ಜಯಿಸಿದ್ದರು.ಈ ಜೋಡಿ ಹಲವಾರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ.  ಭಾರತದ ಮಹಿಳಾ ವಿಭಾಗದ ಡಬಲ್ಸ್‌ ಎಂದರೆ ಅಶ್ವಿನಿ ಹಾಗೂ ಜ್ವಾಲಾ ಎನ್ನುವಷ್ಟರ ಮಟ್ಟಿಗೆ ಅವರು ಖ್ಯಾತರಾಗಿದ್ದಾರೆ. ಇವರು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಲ್ಲಿಯೇ ಸೋತಿದ್ದರು. ಈಗ ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಕಂಡಿದ್ದಾರೆ. ಈ ಕುರಿತು ಅಶ್ವಿನಿ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ  ವಿವರ ಇಲ್ಲಿದೆ.

* ಕೊನೆಯ ಗಳಿಗೆಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಲಭಿಸಿದೆ. ಇದರ ಬಗ್ಗೆ ಹೇಳಿ?

ಹೋದ ವರ್ಷ ಜ್ವಾಲಾ ಜೊತೆ ಕೆನಡಾ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದೆ. ಆ ಬಳಿಕ ಆಡಿದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಹಿಂದಿನ ಕೆಲ ಟೂರ್ನಿಗಳಲ್ಲಿ ಆರಂಭಿಕ ಸುತ್ತುಗಳಲ್ಲಿಯೇ ಸೋತಿದ್ದೆವು. ಆದ್ದರಿಂದ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಲಭಿಸುವ ಬಗ್ಗೆ ಆತಂಕವಿತ್ತು. ಕೊನೆಯಲ್ಲಿ ಅರ್ಹತೆ ಖಚಿತವಾಗಿದ್ದಕ್ಕೆ ಸಂತೋಷವಾಗಿದೆ.

* ಒಲಿಂಪಿಕ್ಸ್‌ಗೆ ಅರ್ಹತೆ ಸಿಕ್ಕಿದ್ದು ಅದೃಷ್ಟದಿಂದ ಎನಿಸುತ್ತದೆಯೇ?

ಹಾಗೇನು ಇಲ್ಲ. 2015ರಲ್ಲಿ ಕೆಲ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದೆವು. ನಮಗಿಂತಲೂ ಕೆಳಗಿನ ರ‍್ಯಾಂಕ್‌ನಲ್ಲಿದ್ದ ಆಟಗಾರ್ತಿಯರು ಉತ್ತಮ ಸಾಮರ್ಥ್ಯ ನೀಡಲಿಲ್ಲ. ಇದು ನಮಗೆ ವರದಾನವಾಯಿತು. ರ‍್ಯಾಂಕಿಂಗ್‌ನಲ್ಲಿ ಹೆಚ್ಚು ವ್ಯತ್ಯಾಸವಾಗಲಿಲ್ಲ. ಒಲಿಂಪಿಕ್ಸ್‌ಗೆ ಅರ್ಹತೆ ಲಭಿಸಲು ಅದೃಷ್ಟವಷ್ಟೇ ಕಾರಣವಲ್ಲ. ನಮ್ಮ ಪರಿಶ್ರಮವೂ ಇದೆ.* ಇತ್ತೀಚಿಗೆ ನಡೆದ ಊಬರ್‌  ಕಪ್‌ನಲ್ಲಿ ಭಾರತ ಕಂಚು ಪದಕ ಜಯಿಸಿತಲ್ಲಾ. ಇದರ ಬಗ್ಗೆ?

ಊಬರ್‌ ಕಪ್‌ ಟೂರ್ನಿಗೆ ಮೊದಲೇ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರು ಯಾರು ಎನ್ನುವುದು ಗೊತ್ತಾಗಿತ್ತು. ಆದ್ದರಿಂದ ನಮ್ಮ ಆಟಗಾರ್ತಿಯರ ವಿಶ್ವಾಸ ಹೆಚ್ಚಾಗಿತ್ತು. ಹೋದ ವರ್ಷ ಕೂಡ ಊಬರ್‌ ಕಪ್‌ನಲ್ಲಿ ನಮ್ಮ ತಂಡ ಕಂಚು ಜಯಿಸಿತ್ತು. ಈ ಬಾರಿಯೂ ಇದೇ ಸಾಧನೆ ಮಾಡಿತು. ಒಲಿಂಪಿಕ್ಸ್‌ನಲ್ಲಿ ಪದಕದ ಆಸೆ ಹೊಂದಿರುವ ನಮಗೆ ಪದಕ ಲಭಿಸಿದ್ದರಿಂದ ವಿಶ್ವಾಸ ಇಮ್ಮಡಿಗೊಂಡಿದೆ.

* ಊಬರ್‌ ಕಪ್‌ನಲ್ಲಿ ಇನ್ನು ಉತ್ತಮ ಸಾಧನೆ ಮಾಡಲು ಸಾಧ್ಯವಿತ್ತಲ್ಲವೇ?

ಹೌದು. ಟೂರ್ನಿಗೆ ತೆರಳುವ ಮೊದಲು ನಾವೇ ಫೈನಲ್‌ ತಲುಪಬೇಕು ಎನ್ನುವ ಗುರಿ ಹಾಕಿಕೊಂಡಿದ್ದೆವು. ಆದರೆ, ಸೆಮಿಫೈನಲ್‌ನಲ್ಲಿ ಬಲಿಷ್ಠ ಚೀನಾ ಎದುರು ಸೋತ ಕಾರಣ ನಮ್ಮ ಆಸೆ ಈಡೇರಲಿಲ್ಲ.* ಸಾಮಾನ್ಯವಾಗಿ ನೀವು ಮತ್ತು ಜ್ವಾಲಾ ಡಬಲ್ಸ್‌ನಲ್ಲಿ ಆಡುತ್ತೀರಿ. ಆದರೆ ಊಬರ್‌ ಕಪ್‌ನ ಕೆಲ ಪಂದ್ಯಗಳಲ್ಲಿ ಸಿಂಧು ಜೊತೆ ಆಡಿದ್ದು ಏಕೆ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿತಲ್ಲವೇ?

ತಂಡವಾಗಿ ಆಡುವಾಗ ಕೆಲ ಪ್ರಯೋಗಗಳನ್ನು ಮಾಡುವುದು ಅನಿವಾರ್ಯ. ಊಬರ್ ಕಪ್‌ನಲ್ಲಿ ಎರಡು ಡಬಲ್ಸ್‌ ಪಂದ್ಯಗಳನ್ನು ಕಡ್ಡಾಯ ವಾಗಿ ಆಡಬೇಕಿತ್ತು. ಜ್ವಾಲಾ ಜೊತೆ ಡಬಲ್ಸ್‌ ಆಡಿದ್ದರೆ, ಇನ್ನೊಂದು ಡಬಲ್ಸ್‌ನಲ್ಲಿ ಸಿಂಧು ಮತ್ತು ಸಿಕಿ ರೆಡ್ಡಿ ಕಣಕ್ಕಿಳಿಯಬೇಕಾಗುತ್ತಿತ್ತು. ಎರಡೂ ಡಬಲ್ಸ್‌ ಪಂದ್ಯಗಳು ಹೆಚ್ಚು ಪೈಪೋಟಿಯಿಂದ ಕೂಡಿರಲಿ ಎನ್ನುವ ಕಾರಣಕ್ಕಾಗಿ  ಬದಲಾವಣೆ ಮಾಡಿದೆವು.

* ಡಬಲ್ಸ್‌ ವಿಭಾಗಕ್ಕಿಂತ ಸಿಂಗಲ್ಸ್‌ಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ ಎನ್ನುವ ವಿಷಯ ಪದೇ ಪದೇ ಚರ್ಚೆಗೆ ಒಳಗಾಗುತ್ತಿದೆಯಲ್ಲಾ?

ಇದು ಹೊಸ ವಿಷಯವೇನಲ್ಲ. ಮೊದಲಿನಿಂದಲೂ ಈ ತಾರತಮ್ಯ ನಡೆದುಕೊಂಡೇ ಬಂದಿದೆ. ಸಿಂಗಲ್ಸ್‌ ಮತ್ತು ಡಬಲ್ಸ್‌ ಎರಡನ್ನೂ ಸಮಾನವಾಗಿ ನೋಡಬೇಕು. ಫೆಡರೇಷನ್‌ ಮೊದಲು ಈ ಕೆಲಸ ಮಾಡಬೇಕು. ಎರಡೂ ವಿಭಾಗಕ್ಕೂ ಸಮ ಬಹುಮಾನ ಮೊತ್ತ ನಿಗದಿ ಮಾಡಬೇಕು. ಆಗಲಾದರೂ ಎರಡೂ ವಿಭಾಗಗಳನ್ನೂ ಒಂದೇ ರೀತಿ ನೋಡುವ ಪರಿಪಾಠ ಬೆಳೆಯಬಹುದು.* ರಿಯೊ ಒಲಿಂಪಿಕ್ಸ್‌ಗೆ ಅಭ್ಯಾಸ ಹೇಗೆ ನಡೆಯುತ್ತಿದೆ?

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಶಿಬಿರದಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಫಿಟ್‌ನೆಸ್‌ ಒತ್ತುಕೊಟ್ಟು ಅಭ್ಯಾಸ ಹೇಳಿಕೊಡುತ್ತಿದ್ದಾರೆ. ಡಬಲ್ಸ್‌ ವಿಭಾಗಕ್ಕೆ ಪ್ರತ್ಯೇಕ ಕೋಚ್‌ ಇರುವುದರಿಂದ ತರಬೇತಿಗೆ ಅನುಕೂಲವಾಗಿದೆ.* ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಿಂದ ಎಷ್ಟು ಪದಕ ನಿರೀಕ್ಷೆ ಮಾಡಬಹುದು?

2012ರ ಒಲಿಂಪಿಕ್ಸ್‌ಗೆ ಬ್ಯಾಡ್ಮಿಂಟನ್‌ಗೆ ಭಾರತದ ಐವರು ಸ್ಪರ್ಧಿಗಳು ಅರ್ಹತೆ ಪಡೆದಿದ್ದರು. ಈಗ ಏಳು ಜನ ಅರ್ಹತೆ ಗಳಿಸಿದ್ದಾರೆ. ಪ್ರತಿ ಬಾರಿಯೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಬ್ಯಾಡ್ಮಿಂಟನ್ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ ಎನ್ನುವುದಕ್ಕೆ ಈ ಅಂಶ ಸಾಕ್ಷಿ. ಈ ಬಾರಿ ಎಷ್ಟು ಪದಕಗಳು ಬರುತ್ತವೆ ಎಂದು ನಿರೀಕ್ಷಿಸುವುದು ಕಷ್ಟ. ಆದರೆ, ಸಿಂಗಲ್ಸ್ ಮತ್ತು ಡಬಲ್ಸ್‌ ಎರಡೂ ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ನೀಡಬಲ್ಲ ಶಕ್ತಿ ನಮ್ಮವರಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)