ಮಂಗಳವಾರ, ಮೇ 17, 2022
25 °C

ತಾಳೆಯೊಂದಿಗೆ ಬಾಳೆ

ಬಸವರಾಜ ಮರಳಿಹಳ್ಳಿ Updated:

ಅಕ್ಷರ ಗಾತ್ರ : | |

ತಾಳೆಯೊಂದಿಗೆ ಬಾಳೆ

ತಾಳೆಯೊಂದಿಗೆ ಬಾಳೆ ಬೆಳೆದು ಉತ್ತಮ ಆದಾಯ ಗಳಿಸಲು ಸಾಧ್ಯ ಎನ್ನುವುದಕ್ಕೆ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ರೈತ ವೀರಣ್ಣ ಪರಂಗಿ ಅತ್ಯುತ್ತಮ ಉದಾಹರಣೆ. ತಾಳೆಯೊಂದಿಗೆ ಬಾಳೆ ಬೆಳೆಯುವವರು ವಿರಳ. ಅನೇಕ ಜಿಲ್ಲೆಗಳಲ್ಲಿ ಕೆಲ ಪ್ರಯೋಗಶೀಲ ರೈತರು ತಾಳೆಯೊಂದಿಗೆ ಬಾಳೆ ಬೆಳೆದು ಯಶಸ್ವಿಯಾಗಿದ್ದಾರೆ.ವೀರಣ್ಣ ಹತ್ತು ಎಕರೆ ಜಮೀನಿನಲ್ಲಿ ತಾಳೆ ಹಾಗೂ ಬಾಳೆಯನ್ನು ಕಳೆದ ನಾಲ್ಕು ವರ್ಷಗಳಿಂದ ಬೆಳೆಯುತ್ತಿದ್ದಾರೆ.ವೀರಣ್ಣ ಐದು ವರ್ಷಗಳ ಹಿಂದೆ ಹತ್ತು ಎಕರೆ ಜಮೀನಿನಲ್ಲಿ 700 ತಾಳೆ ಸಸಿಗಳನ್ನು ನೆಟ್ಟಿದ್ದರು. ಕಳೆದ ವರ್ಷದಿಂದ 250 ಗಿಡಗಳು ಫಲ ನೀಡಲು ಆರಂಭಿಸಿವೆ.ತಾಳೆಯಿಂದ ಈಗಾಗಲೇ ಎರಡು ಲಕ್ಷ ರೂ ಆದಾಯ ಪಡೆದಿದ್ದಾರೆ. ಅವರು ಬೆಳೆದ ತಾಳೆ ಹಣ್ಣುಗಳ ಗುಣಮಟ್ಟ ಉತ್ತಮವಾಗಿದೆ. 15 ದಿನಗಳಿಗೊಮ್ಮೆ ಕಟಾವು ಮಾಡುವ ತಾಳೆ ಫಸಲು ಜಮೀನಿಗೆ ಬಂದು ಖರೀದಿಸಲು ತಮಿಳುನಾಡು ಮೂಲದ ಶಿವಪುರಿ ಅಗ್ರೋಟೆಕ್ ಎಂಬ ಕಂಪೆನಿಯೊಂದಿಗೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ. ತಾಳೆ ಫಸಲನ್ನು ಮಾರುಕಟ್ಟೆ ಒಯ್ದು ಮಾರಾಟ ಮಾಡುವ ಕಿರಿಕಿರಿ ಅವರಿಗೆ ಇಲ್ಲ.ಮಧ್ಯವರ್ತಿಗಳ ಹಾವಳಿಯೂ ಇಲ್ಲ. ಪ್ರತಿ ಟನ್ ತಾಳೆ ಹಣ್ಣುಗಳಿಗೆ ಕಂಪೆನಿ 4000 ರೂ ದರದಲ್ಲಿ ಖರೀದಿಸುತ್ತದೆ. ತಾಳೆ ಬೆಳೆಯಲು ಸರ್ಕಾರ ನೀಡುವ ಸಹಾಯ ಧನವನ್ನು ಅವರು ಪಡೆಯುತ್ತಿದ್ದಾರೆ.ಸಾವಯವ ಬೇಸಾಯ ಪದ್ಧತಿ ಅನುಸರಿಸುತ್ತಿರುವ ವೀರಣ್ಣ ಅವರದ್ದು ಶೂನ್ಯ ಬಂಡವಾಳದ ಬೇಸಾಯ. ಕಂಪೆನಿಯಿಂದ ಉಚಿತವಾಗಿ ಸಸಿಗಳನ್ನು ಪಡೆದಿದ್ದಾರೆ. ತಾಳೆ ಬೆಳೆಯಲು ಅವರು ಯಾವುದೇ ರಸಗೊಬ್ಬರ ಬಳಸಿಲ್ಲ.ತಾಳೆಯೊಂದಿಗೆ ಬಾಳೆ  ನಾಟಿ ಮಾಡಿ ನಾಲ್ಕು ವರ್ಷಗಳಾಗಿವೆ. ಈವರೆಗೆ ಮೂರು ಬೆಳೆ ಪಡೆದಿದ್ದಾರೆ. ಮೊದಲ  ವರ್ಷ ಅವರಿಗೆ ಒಟ್ಟು 10 ಲಕ್ಷ ರೂ ಆದಾಯ ಸಿಕ್ಕಿತು.ಎರಡು ಮತ್ತು ಮೂರನೇ ಬೆಳೆಯಲ್ಲಿ ಅವರಿಗೆ ತಲಾ ಆರು ಲಕ್ಷರೂ ಆದಾಯ ಪಡೆದಿದ್ದಾರೆ. ಬಾಳೆ ಬೇಸಾಯಕ್ಕೆ ಮೊದಲ ವರ್ಷ ನಾಲ್ಕು ಲಕ್ಷ ರೂಗಳನ್ನು ಅವರು ಖರ್ಚು ಮಾಡಿದ್ದರು. ನಾಟಿ ಸಮಯದಲ್ಲಿ ಕಾಂಪೋಸ್ಟ್ ಗೊಬ್ಬರಗಳನ್ನು ಹಾಕಿದ್ದರು. ನಂತರದ ವರ್ಷಗಳಲ್ಲಿ ಅವರು ಬಾಳೆಗೆ ಹೆಚ್ಚು ಹಣ ಖರ್ಚು ಮಾಡಿಲ್ಲ.ಬಾಳೆ ನಾಲ್ಕನೇ ವರ್ಷದ ಫಸಲು ಈಗ ಕಟಾವಿಗೆ ಬಂದಿದೆ. ಈ ವರ್ಷವೂ ಉತ್ತಮ ಇಳುವರಿ ಪಡೆಯುವ ನಿರೀಕ್ಷೆ ಅವರದು. ವೀರಣ್ಣ ಕಳೆದ ಮೂವತ್ತು ವರ್ಷಗಳಿಂದ ಬೇಸಾಯ ಮಾಡುತ್ತಿದ್ದಾರೆ.

 

ಆಹಾರ ಧಾನ್ಯದ ಬೆಳೆಗಳ ಜತೆಗೆ ತರಕಾರಿ ಹಾಗೂ ಇತರ ಬೆಳೆಗಳನ್ನು ಬೆಳೆದ ಅನುಭವ ಅವರಿಗೆ ಇದೆ. ತಾಳೆ ಹಾಗೂ ಅದರ ಜತೆಯಲ್ಲಿ ಬಾಳೆ ಬೆಳೆಯುವುದು ಲಾಭದಾಯಕ ಎನ್ನುವುದು ಅವರಿಗೆ ಮನವರಿಕೆಯಾಗಿದೆ.

 

ತಾಳೆ ಬೇಸಾಯಕ್ಕೆ ಹೆಚ್ಚಿನ ಶ್ರಮ ಬೇಕಿಲ್ಲ. ತಾಳೆ ನಾಟಿ ಮಾಡಿದ ಮೊದಲ ನಾಲ್ಕು ವರ್ಷಗಳಲ್ಲಿ  ತಾಳೆ ಜತೆಯಲ್ಲಿ ಇತರ ಬೆಳೆಗಳನ್ನು ಬೆಳೆಯಬಹುದು. ಆಸಕ್ತರು ಅವರ ಅನುಭವಗಳನ್ನು ಹಂಚಿಕೊಳ್ಳಬಹುದು. ಅವರ ಮೊಬೈಲ್ ನಂಬರ್: 94485 55946.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.