ಗುರುವಾರ , ಮೇ 13, 2021
32 °C

ತಾಳ ತಪ್ಪಿದ ಬಾಳು ಆಗದಿರಲಿ: ಶಿವಮೊಗ್ಗ ಸುಬ್ಬಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಜೀವನಕ್ಕೆ ಒಂದು ರಿದಂ ಇರಬೇಕು, ಎಂದಿಗೂ ತಾಳ ತಪ್ಪಿದ ಬಾಳು ಆಗಬಾರದು~ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಡಾ.ಶಿವಮೊಗ್ಗ ಸುಬ್ಬಣ್ಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ನಗರದ ಊಟಿ ರಸ್ತೆಯ ಜೆಎಸ್‌ಎಸ್ ಪದವಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ವೇದಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳು ಕೀಳರಿಮೆ ಪಡುವ ಅಗತ್ಯವಿಲ್ಲ. ಶೇ.80-90 ಅಂಕಗಳಿಸಿದವರು ಐಎಎಸ್, ಕೆಎಎಸ್ ಅಧಿಕಾರಿಗಳಾಗ ಬಹುದು. ಸಾಮಾನ್ಯ ವಿದ್ಯಾರ್ಥಿ ಮುಖ್ಯಮಂತ್ರಿ, ಪ್ರಧಾನಿಯೂ ಆಗಬಹುದು. ಇದು ಪ್ರಜಾಪ್ರಭುತ್ವದ ಶಕ್ತಿ. ಆದ್ದರಿಂದಲೇ ಕುವೆಂಪು ಶ್ರೀ ಸಾಮಾನ್ಯನನ್ನು `ಮಾನ್ಯ~ ಮಾಡುತ್ತಾರೆ. ನಿಮ್ಮಲ್ಲಿರುವ ಪ್ರತಿಭೆಯಿಂದ ತೆಂಡೂಲ್ಕರ್, ಪಿಟೀಲು ಚೌಡಯ್ಯ ಮುಂತಾದವರ ರೀತಿ ಉತ್ತಮ ಸ್ಥಾನಕ್ಕೆ ಏರಬಹುದು ಎಂದು ಪ್ರೋತ್ಸಾಹದಾಯಕ ಮಾತುಗಳನ್ನು ಆಡಿದರು.ಪ್ರಾಣಿಗಳಿಗೆ ಹೊಟ್ಟೆಗೆ ಹಿಟ್ಟು ಬೇಕು. ಆದರೆ ಮನುಷ್ಯನಿಗೆ ಹೊಟ್ಟೆಗೆ ಹಿಟ್ಟು-ಜುಟ್ಟಿಗೆ ಮಲ್ಲಿಗೆಯೂ ಬೇಕು. ಕನಸು ಕಾಣದೆ ಪ್ರಗತಿ ಕಾಣಲು ಸಾಧ್ಯವಿಲ್ಲ. ಕನಸನ್ನು ನನಸು ಮಾಡುವ ಪ್ರಯತ್ನವೂ ಆಗಬೇಕು. `ನೀ ಏನಾದರೂ ಆಗು ಮೊದಲು ಮಾನವನಾಗು...~ ಎಂಬ ಗೀತೆಯನ್ನು ಹಾಡಿ, ನಂತರ ಅಹಂಕಾರ ತ್ಯಜಿಸಿ ವಿನಯವಂತರಾಗಿ, ಮಾನವೀಯ ಗುಣ ಬೆಳಸಿಕೊಳ್ಳಬೇಕು ಎಂಬ ಸಂದೇಶ ಈ ಹಾಡಿನಲ್ಲಿದೆ ಎಂದರು.ಭಾರತ ಬಹುಮುಖಿ ಸಂಸ್ಕೃತಿಯ ದೇಶ. ಆದ್ದರಿಂದಲೇ ಕಬೀರ, ಸಂತ ಶಿಶುನಾಳ ಷರೀಫ ಅಂತಹವರು ಈ ಮಣ್ಣಿನಿಂದಲೇ ಹುಟ್ಟಿ ಬರುತ್ತಾರೆ. ಭಾರತೀಯರ ಭಾವೈಕ್ಯತೆಗೆ ಸಾಕ್ಷಿಯಾದವರು ಷರೀಫರು. `ಕಾಡು ಕುದುರೆ ಓಡಿ ಬಂದಿತ್ತಾ~ ಎಂಬ ಗೀತೆ ನನಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತು. ಇದಕ್ಕೆ ಕಾರಣ ಕಂಬಾರರ ಕಾವ್ಯದಲ್ಲಿರುವ ಅದ್ಭುತ ಶಕ್ತಿ ಎಂದು ವಿನಯಪೂರ್ವಕವಾಗಿ ಗೀತೆ ರಚನಕಾರರನ್ನು ಸ್ಮರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.