ಮಂಗಳವಾರ, ಮೇ 18, 2021
22 °C

ತುಂತುರು ಮಳೆ, ದಟ್ಟ ಮಂಜು: ಪ್ರವಾಸಿಗರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಂತುರು ಮಳೆ, ದಟ್ಟ ಮಂಜು: ಪ್ರವಾಸಿಗರ ದಂಡು

ಮಡಿಕೇರಿ: ಕೊಡಗಿನಲ್ಲಿ ಮುಂಗಾರು ಮಳೆಯ ಆರ್ಭಟ ಮಂಗಳವಾರ ಜಿಲ್ಲೆಯಾದ್ಯಂತ ಕೊಂಚ ಕಡಿಮೆಯಾಗಿದೆ. ನಗರದಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿತ್ತು.ಆಗಾಗ ತುಂತುರು ಮಳೆಯಾಗಿದ್ದನ್ನು ಬಿಟ್ಟರೆ ಉಳಿದಂತೆ ಸಾಮಾನ್ಯವಾಗಿ ಮಂಜು ಕವಿದ ವಾತಾವರಣ ಕಂಡುಬಂದಿತು.ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಮುಂಗಾರಿನ ಆರ್ಭಟ ತಗ್ಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ರಮಣೀಯ ತಾಣಗಳತ್ತ ಹೆಚ್ಚಾಗಿ ಧಾವಿಸುತ್ತಿದ್ದಾರೆ.ನಗರದ ರಾಜಾಸೀಟು, ಅಬ್ಬಿ ಜಲಪಾತ, ತಲಕಾವೇರಿ, ಭಾಗಮಂಡಲ, ನಿಸರ್ಗ ಧಾಮ, ದುಬಾರೆ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ.ಮನೆಗೆ ಹಾನಿ: ಮಡಿಕೇರಿ ತಾಲ್ಲೂಕಿನ ಸಂಪಾಜೆ ಹೋಬಳಿಯ ಚೆಂಬು ಗ್ರಾಮದ ಬಿ.ಕೆ. ತಮ್ಮಯ್ಯ ಎಂಬುವವರ ಮನೆಯ ಪಕ್ಕದ ಮಣ್ಣು ಕುಸಿದಿದೆ. ಭಾಗಮಂಡಲ  ಹೋಬಳಿಯ ಪದಕಲ್ಲು ಗ್ರಾಮದ ಎ.ಬಿ. ಉದಯ್ ಎಂಬುವವರ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ.ಜಿಲ್ಲೆಯ ಮಳೆ ವಿವರ:

ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆ ಅವಧಿ ಪೂರ್ಣಗೊಂಡಂತೆ ಕಳೆದ 24 ಗಂಟೆಯಲ್ಲಿ 12.84 ಮಿ.ಮೀ. ಮಳೆ ದಾಖಲಾಗಿದೆ.ಕಳೆದ ವರ್ಷ ಇದೇ ದಿನ 58.93 ಮಿ.ಮೀ. ಮಳೆ ಸುರಿದಿತ್ತು. ಜನವರಿಯಿಂದ ಇಲ್ಲಿಯವರೆಗೆ 617.00 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 400.16 ಮಿ.ಮೀ. ಮಳೆ ದಾಖಲಾಗಿತ್ತು.ಮಡಿಕೇರಿ ತಾಲ್ಲೂಕಿನಲ್ಲಿ 23.90 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 880.39 ಮಿ.ಮೀ. ಮಳೆ ದಾಖಲಾಗಿದೆ. ವೀರಾಜಪೇಟೆ ತಾಲ್ಲೂಕಿನಲ್ಲಿ 6.52 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 463.03 ಮಿ.ಮೀ. ಮಳೆಯಾಗಿದೆ.ಸೋಮವಾರಪೇಟೆ ತಾಲ್ಲೂಕಿನಲ್ಲಿ 8.10 ಮಿ.ಮೀ. ಮಳೆ ಸುರಿದಿದೆ.  ಜನವರಿಯಿಂದ ಇಲ್ಲಿಯವರೆಗೆ 507.62ಮಿ.ಮೀ. ಮಳೆಯಾಗಿದೆ.ಹೋಬಳಿವಾರು ಮಳೆ ವಿವರ:

ಮಡಿಕೇರಿ ಕಸಬಾ 14.00 ಮಿ.ಮೀ., ನಾಪೋಕ್ಲು 21.60 ಮಿ.ಮೀ., ಸಂಪಾಜೆ 30.80 ಮಿ.ಮೀ., ಭಾಗಮಂಡಲ 29.20 ಮಿ.ಮೀ., ವೀರಾಜಪೇಟೆ ಕಸಬಾ 8.60 ಮಿ.ಮೀ., ಹುದಿಕೇರಿ 4.80 ಮಿ.ಮೀ., ಶ್ರಿಮಂಗಲ 12.60 ಮಿ.ಮೀ., ಪೊನ್ನಂಪೇಟೆ 6.60 ಮಿ.ಮೀ., ಅಮ್ಮತ್ತಿ 4.50 ಮಿ.ಮೀ., ಬಾಳಲೆ 2.00 ಮಿ.ಮೀ., ಸೋಮವಾರಪೇಟೆ ಕಸಬಾ 7.20 ಮಿ.ಮೀ., ಶನಿವಾರಸಂತೆ 4.80 ಮಿ.ಮೀ., ಶಾಂತಳ್ಳಿ 12.80 ಮಿ.ಮೀ., ಕೊಡ್ಲಿಪೇಟೆ 9.40 ಮಿ.ಮೀ., ಕುಶಾಲನಗರ 5.00 ಮಿ.ಮೀ., ಸುಂಟಿಕೊಪ್ಪ 9.40ಮಿ.ಮೀ. ಮಳೆಯಾಗಿದೆ.ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2823.43 ಅಡಿಗಳು, ಕಳೆದ ವರ್ಷ ಇದೇ ದಿನ 2805.50 ಅಡಿ ನೀರು ಸಂಗ್ರವಾಗಿತ್ತು.ಹಾರಂಗಿಯಲ್ಲಿ 7.60ಮಿ.ಮೀ. ಮಳೆಯಾಗಿದೆ. ಇಂದಿನ ನೀರಿನ ಒಳ ಹರಿವು 2498.00 ಕ್ಯೂಸೆಕ್ ಆಗಿದೆ, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1806.00ಕ್ಯೂಸೆಕ್ ಆಗಿತ್ತು.ಕಳೆಗಟ್ಟಿದ ಲಕ್ಷ್ಮಣತೀರ್ಥ

ಗೋಣಿಕೊಪ್ಪಲು ವರದಿ:  ಮುಂಗಾರು ಮಳೆ ದಕ್ಷಿಣ ಕೊಡಗಿನಾ ದ್ಯಂತ ಬುಧವಾರ ಮಧ್ಯಾಹ್ನ ಬಿರುಸಾಗಿ ಸುರಿಯಿತು. ಬೆಳಗಿನಿಂದ ಮಧ್ಯಾಹ್ನದವರೆಗೆ ಮೋಡ, ಬಿಸಿಲಿನ ವಾತಾವರಣ ಇತ್ತು. ಬಳಿಕ ನಿರಂತರವಾಗಿ ಮಳೆ  ಸುರಿಯಿತು. ಕೀರೆ ಹೊಳೆ ಮತ್ತು ಲಕ್ಷ್ಮಣತೀರ್ಥ ನದಿ ನೀರು ಏರತೊಡಗಿದೆ. ಲಕ್ಷ್ಮಣ ತೀರ್ಥ ನದಿಯ ಉಗಮ ಸ್ಥಾನವಾದ ಬ್ರಹ್ಮಗಿರಿ ಪರ್ವತ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಲಕ್ಷ್ಮಣತೀರ್ಥ ಜಲಪಾತ  ಕಳೆದುಂಬಿದೆ. ನಲ್ಲೂರು, ಕಿರಗೂರು ನಡುವಿನ ಕೀರೆ ಹೊಳೆಯ ನೀರು ಹೆಚ್ಚುತ್ತಿದೆ. ಈ ಭಾಗದ ಗದ್ದೆಗಳಲ್ಲಿ ನೀರು ತುಂಬಿ ಕೆಲವು ಗದ್ದೆಗಳು ಕೆರೆಗಳಂತಾಗಿವೆ. ಪಶ್ಚಿಮದಲ್ಲಿ ದಟ್ಟ ಮೋಡ ಕವಿದು ತಣ್ಣನೆಯ ಗಾಳಿಯೊಂದಿಗೆ ಸುರಿವ ಮಳೆ ಮೈ ನಡುಗಿಸುತ್ತಿದೆ.ವಿದ್ಯುತ್ ಕಣ್ಣಾಮುಚ್ಚಾಲೆ, ಗ್ರಾಹಕರ ಪರದಾಟ

ನಾಪೋಕ್ಲು ವರದಿ: ನಾಪೋಕ್ಲು ವ್ಯಾಪ್ತಿಯಲ್ಲಿ ಬುಧವಾರ ಮಳೆಯ ಬಿರುಸು ಕಡಿಮೆಯಾಗಿದೆ. ಮಂಗಳವಾರ ಸುರಿದ ಮಳೆಗೆ ಅಲ್ಲಲ್ಲಿ ಹಾನಿಯುಂಟಾಗಿದೆ. ಸಮೀಪದ ಬೆಟ್ಟಗೇರಿ ಬಳಿಯ ಬಕ್ಕ ಎಂಬಲ್ಲಿ ಮಂಗಳವಾರ ಮರವೊಂದು ಮನೆಮೇಲೆ ಬಿದ್ದು ಮನೆ ಭಾಗಶಃ ಜಖಂಗೊಂಡಿದೆ.ಮರಬೀಳುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿರುವುರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಹದಿನೈದು ದಿನಗಳಿಂದ ಪಟ್ಟಣಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಯಾಗದೆ ಗ್ರಾಹಕರು ಪರದಾಡುವಂತಾಗಿದೆ.ಇಲ್ಲಿನ ಬೇತು ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡುವ ಟ್ರಾನ್ಸ್‌ಫಾರ್ಮರ್ ಹಾಳಾಗಿದ್ದು ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿದೆ. ಸೆಸ್ಕ್ ಸಿಬ್ಬಂದಿ ಟ್ರಾನ್ಸ್‌ಫಾರ್ಮರ್‌ನಲ್ಲಿನ ದೋಷ ಪತ್ತೆ ಹಚ್ಚುವಲ್ಲಿ ದಿನವಿಡೀ ನಿರತರಾದರೂ ಒಂದಲ್ಲ ಒಂದು ಭಾಗಕ್ಕೆ ವಿದ್ಯುತ್ ಸರಬರಾಜು ಕಡಿತಗೊಳ್ಳುತ್ತಿದೆ. ವಿದ್ಯುತ್ ಕೊರತೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಕು ಮಾತ್ರವಲ್ಲ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ನಾಪೋಕ್ಲುವಿನಲ್ಲಿ ಬುಧವಾರ ಮಧ್ಯಾಹ್ನದವರೆಗೂ ಬಿಡುವುಕೊಟ್ಟ ಮಳೆ ಸಂಜೆಯ ವೇಳೆಗೆ ರಭಸದಿಂದ ಸುರಿಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.