ಮಂಗಳವಾರ, ಮೇ 18, 2021
24 °C

ತೆರಿಗೆ ಮೇಲ್ಮನವಿ ಪ್ರಾಧಿಕಾರ: ನಿಷ್ಕಳಂಕ ವ್ಯಕ್ತಿ ನೇಮಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಐಎಎನ್‌ಎಸ್): ಎಚ್.ಕೆ. ಶರಣ್ ಮತ್ತು ರಾಜೇಂದ್ರ ಪ್ರಕಾಶ್ ಅವರ ಪ್ರಾಮಾಣಿಕತೆಯ ಬಗ್ಗೆ ಸಂಶಯವಿರುವುದರಿಂದ ಅವರನ್ನು ಕ್ರಮವಾಗಿ ಮುಂಬೈ ಮತ್ತು ಲಖನೌ ಪರೋಕ್ಷ ತೆರಿಗೆಗಳ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬಾರದು ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಶನಿವಾರ ಒತ್ತಾಯಿಸಿದ್ದಾರೆ.ಈ ಇಬ್ಬರ ಪ್ರಾಮಾಣಿಕತೆಯ ಬಗ್ಗೆ ಸಂಶಯವಿದೆ ಎಂಬ ವಿಚಾರವನ್ನು ಬೇರೆ ಬೇರೆ ಮೂಲಗಳಿಂದ ಖಚಿತಪಡಿಸಿಕೊಂಡಿರುವುದರಿಂದ ಅವರ ಹೆಸರನ್ನು ಸಂಪುಟದ ನೇಮಕಾತಿ ಸಮಿತಿಯು ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷರ ಹುದ್ದೆಗೆ ಪರಿಗಣಿಸಬಾರದು ಎಂದು ಪ್ರಶಾಂತ್ ಭೂಷಣ್ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.ಕಸ್ಟಮ್ಸ, ಅಬಕಾರಿ ಸುಂಕ ಮತ್ತು ಸೇವಾ ತೆರಿಗೆಗಳ ಗ್ರಾಹಕರಿಗೆ ಅಧಿಕಾರಿಗಳಿಂದ ಆಗಿರುವ ಅನ್ಯಾಯವನ್ನು ಸರಿಪಡಿಸುವಂತಹ ಹುದ್ದೆಗೆ ನಿಷ್ಕಳಂಕ ವ್ಯಕ್ತಿಗಳನ್ನು ನೇಮಕ ಮಾಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ಶರಣ್ ಮತ್ತು ರಾಜೇಂದ್ರ ಪ್ರಕಾಶ್ ವಿರುದ್ಧ ಭ್ರಷ್ಟಾಚಾರದ ಆಪಾದನೆಗಳು ಇದ್ದು, ಪ್ರಕಾಶ್ ಅವರನ್ನು ವಿಚಾರಣೆಗೆ ಗುರಿಪಡಿಸಲು ಸಿಬಿಐ ಅನುಮತಿಯನ್ನೂ ಕೋರಿದೆ ಎಂಬ ವಿಚಾರವನ್ನು ಪ್ರಶಾಂತ್ ಭೂಷಣ್, ಪ್ರಧಾನಿ ಅವರ ಗಮನಕ್ಕೆ ತಂದಿದ್ದಾರೆ.ಶರಣ್ ಅವರನ್ನು ದೆಹಲಿಗೆ ವರ್ಗ ಮಾಡಿದ್ದಾಗಾಗ ಅವರು ಸುರೀಂದ್ರನಾಥ ಕಾನೂನು ಕಾಲೇಜಿನಲ್ಲಿ ಆಂತರಿಕ ವಿದ್ಯಾರ್ಥಿಯಾಗಿ ಕಾನೂನು ಪದವಿ ಪಡೆದಿದ್ದಾರೆ ಎಂಬ ಆಪಾದನೆ ಇದೆ ಎಂದು ಭೂಷಣ್ ತಿಳಿಸಿದ್ದಾರೆ.ಕೇಂದ್ರ ಜಾಗೃತ ಆಯೋಗದ ಮುಖ್ಯ ಆಯುಕ್ತರಾಗಿ ಪಿ. ಜೆ. ಥಾಮಸ್ ಅವರನ್ನು ನೇಮಕ ಮಾಡಿದ್ದಾಗ ಭೂಷಣ್, ಸುಪ್ರೀಂಕೋರ್ಟ್‌ಗೆ ದೂರು ಸಲ್ಲಿಸಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.ತೆರಿಗೆ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷರ ಹುದ್ದೆಯ ಆಕಾಂಕ್ಷಿಯು ಕನಿಷ್ಠ ಒಂದು ವರ್ಷ 67 ಸಾವಿರದಿಂದ 79 ಸಾವಿರ ರೂಪಾಯಿಗಳ ವರೆಗಿನ ವೇತನ ಶ್ರೇಣಿಯಲ್ಲಿ ಕೆಲಸ ಮಾಡಿರಬೇಕು ಮತ್ತು ಸೇವೆಯಲ್ಲಿ ಇರಬೇಕು ಎಂಬುದು ನೇಮಕಾತಿಯ ಮಾನದಂಡವಾಗಿರುವುದಕ್ಕೆ ಭೂಷಣ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ನಿಷ್ಪಕ್ಷಪಾತವಾಗಿ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯುತ ಸ್ಥಾನದ ನಿರ್ವಹಣೆಗೆ ನಿಷ್ಕಳಂಕ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಾಗಿರುವುದರಿಂದ ನೇಮಕಾತಿಯ ಮಾನದಂಡ ಸಮರ್ಪಕವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.