ಭಾನುವಾರ, ಮೇ 22, 2022
22 °C

ತೆರಿಗೆ ಹೆಚ್ಚಳಕ್ಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ ವಾಸಿಗಳಿಗೆ ಮೂಲಭೂತ ಸೌಕರ್ಯ, ಸ್ವಚ್ಛತೆ, ಸೌಲಭ್ಯ ಕಲ್ಪಿಸುವಲ್ಲಿ ಹಿಂದೆ ಬಿದ್ದಿರುವ ಇಲ್ಲಿನ ನಗರಸಭೆಯು ಮನೆ ಮತ್ತು ವಾಣಿಜ್ಯ ಮಳಿಗೆಗಳಿಗೆ ತೆರಿಗೆ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳುವ ಮೂಲಕ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ತೆರಿಗೆ ಬಿಸಿ ಮುಟ್ಟಿಸಿದೆ!ನಗರದ ಮನೆಗಳಿಗೆ ಶೇ 16 ಮತ್ತು ವಾಣಿಜ್ಯ ಮಳಿಗೆಗಳಿಗೆ ಶೇ 20ರಷ್ಟು ತೆರಿಗೆ ಹೆಚ್ಚಳ ಮಾಡಿದೆ. ನಗರದಲ್ಲಿ ಅಳವಡಿಸಲಾಗುವ ಜಾಹೀರಾತು ಫಲಕ ಮತ್ತು ಫ್ಲೆಕ್ಸ್ ಬ್ಯಾನರ್‌ಗಳಿಗೆ ಹೆಚ್ಚಿನ ಶುಲ್ಕ ನಿಗದಿಗೊಳಿಸುವ ನಿರ್ಧಾರ ಕೈಗೊಂಡಿದೆ.ಶುಕ್ರವಾರ ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ ಅವರ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯು ಸರ್ವನುಮತದ ನಿರ್ಣಯ ಕೈಗೊಂಡಿತು.

ಆರಂಭದಲ್ಲಿ ಮಾತನಾಡಿದ ಅಧ್ಯಕ್ಷೆ ಮಮತಾ ಸುಧಾಕರ ಅವರು, ರಾಜ್ಯ ಸರ್ಕಾರವು 2005-06ರ ಆರ್ಥಿಕ ವರ್ಷದಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ ದರವನ್ನು ಶೇ 15ರಿಂದ 30ರಷ್ಟು ಹೆಚ್ಚಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.ಸದಸ್ಯರಿಂದ ಚರ್ಚೆ: ತೆರಿಗೆ ಹೆಚ್ಚಳದ ಬಗ್ಗೆ ಸದಸ್ಯರು ವ್ಯಾಪಕ ಚರ್ಚೆ ನಡೆಸಿದರು. ನಗರಸಭೆ ಆರ್ಥಿಕ ಸಂಪನ್ಮೂಲವೇ ಇಲ್ಲ. ಎಲ್ಲದಕ್ಕೂ ಸರ್ಕಾರದ ಅನುದಾನ, ಸಾಲ ರೂಪದ ಯೋಜನೆಗಳನ್ನೇ ಆಶ್ರಯಿಸಬೇಕಾಗಿದೆ. ನಗರಸಭೆಗೆ ತನ್ನದೇ ಆದ ಆರ್ಥಿಕ ಸಂಪನ್ಮೂಲ ಎಂದರೆ ತೆರಿಗೆ ಒಂದೇ. ಹೀಗಾಗಿ ತೆರಿಗೆ ಹೆಚ್ಚಳ ನಿರ್ಧಾರ ಸ್ವಾಗತಾರ್ಹ ಎಂದು ಹೇಳಿದರು.ಆದರೆ, ಈ ಹೊಸದಾಗಿ ಹಾಕುವ ತೆರಿಗೆ ಜನಸಾಮಾನ್ಯರಿಗೆ ಹೊರೆ ಆಗಬಾರದು. ನಗರಸಭೆ ಅಗತ್ಯ ಆರ್ಥಿಕ ಸಂಪನ್ಮೂಲ ತಂದು ಕೊಡುವಂತಿರಬೇಕು. ಈ ಎರಡೂ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಗರಸಭೆ ಹಣಕಾಸು ವಿಭಾಗದ ಅಧಿಕಾರಿಗಳು ಚಿಂತನೆ ಮಾಡಬೇಕು. ಕೆಲ ಸ್ಲಂ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ 20 ವರ್ಷದಿಂದ ತೆರಿಗೆ ಕಟ್ಟಿಲ್ಲ. ಕಟ್ಟಿದ್ದರೂ ಅತ್ಯಂತ ಕನಿಷ್ಠ ತೆರಿಗೆ ಮಾತ್ರ ಕಟ್ಟಿದ್ದಾರೆ. ಇಂಥ ಮನೆ, ವಾಣಿಜ್ಯ ಮಳಿಗೆ ಗುರುತಿಸಿ ಅಗತ್ಯ ತೆರಿಗೆ ಹೆಚ್ಚಳ ಅವಶ್ಯ ಎಂಬ ವಿಚಾರ ಪ್ರಸ್ತಾಪಿಸಿದರು.ನಗರದ ಜನತೆ ಅಭಿವೃದ್ಧಿ ನಿರೀಕ್ಷೆ ಮಾಡುತ್ತಾರೆ. ಆದರೆ ನಗರಸಭೆಗೆ ತನ್ನದೇ ಆದ ಆರ್ಥಿಕ ಸಂಪನ್ಮೂಲ ಇಲ್ಲದೇ ಅಭಿವೃದ್ಧಿ ಅಸಾಧ್ಯ. ತೆರಿಗೆ ಹೆಚ್ಚಳ ಮಾಡುವುದರಿಂದ ಅವಶ್ಯ ಅಭಿವೃದ್ಧಿ ಕೆಲಸ ಕೈಗೊಳ್ಳಲು ನಗರಸಭೆಗೆ ಸಾಧ್ಯವಾಗಲಿದೆ ಎಂದು ಹೇಳಿದರು.ಅಧಿಕಾರಿಗಳ ಧೋರಣೆಗೆ ಆಕ್ಷೇಪ: ಸ್ವಯಂ ಘೋಷಿತ ಆಸ್ತಿ ತೆರಿಗೆ, ಮನೆ, ವಾಣಿಜ್ಯ ಮಳಿಗೆಗಳ ತೆರಿಗೆ ಕಟ್ಟಿದ್ದರ ಬಗ್ಗೆ ನಗರಸಭೆ ಮರು ಪರಿಶೀಲನೆ ನಡೆಸಿಲ್ಲ. ಅಧಿಕಾರಿಗಳು ಸಮರ್ಪಕ ರೀತಿಯಲ್ಲಿ ತೆರಿಗೆ ಸಂಗ್ರಹ ಮಾಡುವುದಿಲ್ಲ. ಎಲ್ಲೆಂದಲ್ಲಿ ಹೊಸ ಬಡಾವಣೆ, ಅಪಾರ್ಟ್‌ಮೆಂಟ್, ವಾಣಿಜ್ಯ  ತಲೆ ಎತ್ತುತ್ತಿವೆ. ನಗರಸಭೆ ಪರವಾನಗಿ ಕೊಡುತ್ತದೆ. ಆದರೆ, ನಗರಸಭೆ ಅಧಿಕಾರಿಗಳು ತೆರಿಗೆ ವಸೂಲಿ ಮಾತ್ರ ಮಾಡುವುದಿಲ್ಲ. ಇದರಿಂದ ನಗರಸಭೆ ಆದಾಯಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ ಎಂದು ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಫ್ಲೆಕ್ಸ್ ಬ್ಯಾನರ್ ಹಾವಳಿ ಮಿತಿ ಮೀರಿದೆ. ಗರಿಷ್ಠ ದರ ನಿಗದಿಪಡಿಸಬೇಕು. ಬ್ಯಾನರ್‌ಗಳ ಮೇಲೆಯೇ ಇಷ್ಟು ದಿನ ಮಾತ್ರ ಎಂಬ ಸೀಲ್ ಮತ್ತು ದಿನಾಂಕ ನಮೂದಿಸುವ ಶರತ್ತು ವಿಧಿಸಬೇಕು. ಅವಧಿ ಮುಗಿದ ತಕ್ಷಣ ತೆರವುಗೊಳಿಸಲು, ತೆರವು ಮಾಡದೇ ಇದ್ದಲ್ಲಿ ದಂಡ ವಿಧಿಸುವಂತ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದ ಸದಸ್ಯರು ಗಮನ ಸೆಳೆದರು.ಹಿರಿಯ ಸದಸ್ಯರಾದ ಜಯಣ್ಣ, ಮಾಜಿ ಅಧ್ಯಕ್ಷ ಎ ಮಾರೆಪ್ಪ, ಮಾಜಿ ಉಪಾಧ್ಯಕ್ಷ ಯು ದೊಡ್ಡ ಮಲ್ಲೇಶ, ಶಾಂತಪ್ಪ, ತಿಮ್ಮಪ್ಪ ಪಿರಂಗಿ, ಬಸವರಾಜ ದರೂರ, ಶ್ರೀನಿವಾಸರೆಡ್ಡಿ, ಎಂ.ಎ ರಹೀಮ್, ಮೆಹಬೂಬ, ಸುಭಾಷ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ನಗರಸಭೆ ಉಪಾಧ್ಯಕ್ಷೆ ಕೆ ಸುಲೋಚನಾ, ಆಯುಕ್ತ ತಿಪ್ಪೇಶ ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.