ಭಾನುವಾರ, ಮೇ 22, 2022
22 °C

ತೆಲಂಗಾಣ ಪ್ರತ್ಯೇಕ ರಾಜ್ಯ ಬೇಡಿಕೆ: ಒಮ್ಮತದ ತೀರ್ಮಾನಕ್ಕೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದಂತೆ ಒಮ್ಮತದ ತೀರ್ಮಾನಕ್ಕೆ ಯತ್ನಿಸಲಾಗುತ್ತಿದೆ ಎಂದು ಪ್ರಧಾನಿ ಮನಮೋಹನ್‌ಸಿಂಗ್ ಕಚೇರಿ ತಿಳಿಸಿದೆ.ಸಿಪಿಐಎಂ ಮುಖಂಡ ಪ್ರಕಾಶ್ ಕಾರಟ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ತೆಲಂಗಾಣಕ್ಕೆ ಸಂಬಂಧಿಸಿದಂತೆ ವಿಳಂಬ ಧೋರಣೆ ತೋರುವುದರಿಂದ ಪರಿಸ್ಥಿತಿ ಇನ್ನಷ್ಟು ಕ್ಲಿಷ್ಟಕರವಾಗಲಿದೆ. ಸರ್ಕಾರ ತಕ್ಷಣ ತೀರ್ಮಾನ ಕೈಗೊಳ್ಳಬೇಕು. ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವುದು ಎಂಬ ಭರವಸೆ ಇದೆ ಎಂದು ಕಾರಟ್ ಅವರು ಪ್ರಧಾನಿ ಅವರಿಗೆ ಪತ್ರ ಬರೆದಿದ್ದರು.ಅದಕ್ಕೆ ಪ್ರತಿಯಾಗಿ ಪ್ರಧಾನಿ ಕಚೇರಿಯು ಮಾಹಿತಿ ನೀಡಿ, `ಒಮ್ಮತದ ತೀರ್ಮಾನ ಕೈಗೊಳ್ಳಲು ಪ್ರಯತ್ನಿಸಲಾಗುತ್ತಿದೆ~ ಎಂದು ಸ್ಪಷ್ಟ ಪಡಿಸಿದೆ.ಸೋನಿಯಾ ಭೇಟಿ ಮಾಡಿದ ಆಜಾದ್: ತೆಲಂಗಾಣ ರಾಜ್ಯ ಘೋಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಆಜಾದ್ ಶುಕ್ರವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.ಪಕ್ಷದ ವತಿಯಿಂದ ಆಂಧ್ರ ಪ್ರದೇಶದ ಉಸ್ತುವಾರಿಯನ್ನೂ ಹೊತ್ತಿರುವ ಆಜಾದ್ ಅವರು ಸೋನಿಯಾಗಾಂಧಿ ನಿವಾಸಕ್ಕೆ ತೆರಳಿ, ರಾಜ್ಯದಲ್ಲಿ ನಿರಂತರ ನಡೆಯುತ್ತಿರುವ ಮುಷ್ಕರದ ಪರಿಸ್ಥಿತಿಯನ್ನು ವಿವರಿಸಿದರು.

ತೆಲಂಗಾಣ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಈಡೇರಿಸುವಂತೆ ಕಳೆದೆರಡು ದಿನಗಳ ಹಿಂದೆ ಕೆ.ಚಂದ್ರಶೇಖರ ರಾವ್ ಅವರು ಪ್ರಧಾನಿಗೆ ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಸೋನಿಯಾ ಅವರೊಂದಿಗೆ ಅಜಾದ್ ಚರ್ಚಿಸಿದ್ದಾರೆ ಎನ್ನಲಾಗಿದೆ.ಪರಿಸ್ಥಿತಿಯ ನಿರ್ವಹಣೆಗಾಗಿ ಶೀಘ್ರದಲ್ಲಿಯೇ ಸರ್ವ ಪಕ್ಷ ಸಭೆ ಕರೆಯುವ ಕುರಿತೂ ಆಸಕ್ತಿ ತೋರಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನೂ ಕರೆಯಲಾಗುವುದು ಎನ್ನಲಾಗಿದೆ.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಮುಷ್ಕರ ಹಿಂದೆಗೆದುಕೊಳ್ಳುವ ಪ್ರಧಾನಿ  ಮನವಿಯನ್ನು ಚಂದ್ರಶೇಖರರಾವ್ ತಳ್ಳಿ ಹಾಕಿದ್ದಾರೆ. 2009ರಲ್ಲಿ ತೆಗೆದುಕೊಂಡ ನಿರ್ಣಯವನ್ನು ಜಾರಿಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಜಾದ್ ಹಾಗೂ ಸೋನಿಯಾ ಭೇಟಿ ಮಹತ್ವ ಪಡೆದುಕೊಂಡಿದೆ.ಕೋಮಟಿರೆಡ್ಡಿ ರಾಜೀನಾಮೆ (ಹೈದರಾಬಾದ್ ವರದಿ): ಆಂಧ್ರ ಪ್ರದೇಶದ ಮೂಲ ಸೌಲಭ್ಯ ಮತ್ತು ಬಂಡವಾಳ ಸಚಿವ, ನೆಲಗೊಂಡ ಕ್ಷೇತ್ರದ ಶಾಸಕ ಕೋಮಟಿರೆಡ್ಡಿ ವೆಂಕಟರೆಡ್ಡಿ ಅವರು ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಶುಕ್ರವಾರ ಅಂಗೀಕರಿಸಿದ್ದಾರೆ.ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಘೋಷಿಸುವಲ್ಲಿ ಕೇಂದ್ರ ಸರ್ಕಾರದ ವಿಳಂಬ ಧೋರಣೆಯನ್ನು ವಿರೋಧಿಸಿ ಅ.1ರಂದು ರಾಜೀನಾಮೆ ಸಲ್ಲಿಸಿದ್ದರು. ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಚರ್ಚಿಸಿದ ನಂತರ ಮುಖ್ಯಮಂತ್ರಿ ಎನ್.ಕಿರಣಕುಮಾರ್ ರೆಡ್ಡಿ ಅವರು ಕೋಮಟಿರೆಡ್ಡಿ ಅವರ ರಾಜೀನಾಮೆ ಅಂಗೀಕರಿಸುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದರು.ಶಾಸಕ ಸ್ಥಾನಕ್ಕೂ ಕೋಮಟಿರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್ ನಾದೆಂಡ್ಲಾ ಮನೋಹರ್ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ತೆಲಂಗಾಣ ವಿಷಯಕ್ಕೆ ಸಂಬಂಧಿಸಿದಂತೆ ಜುಪಳ್ಳಿ ಕೃಷ್ಣ ರಾವ್ ನಂತರ ಕೋಮಟಿರೆಡ್ಡಿ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿರುವ ಎರಡನೇ ಸಚಿವರಾದ್ದಾರೆ. ಆದರೆ ಕೃಷ್ಣಾರಾವ್ ಶಾಸಕ ಸ್ಥಾನದಲ್ಲಿ ಮುಂದುವರಿಯುತ್ತಲಿದ್ದಾರೆ.

 

`ರೈಲು ತಡೆ~ ನಿರ್ವಹಣೆಗೆ ಸಜ್ಜು

ಹೈದರಾಬಾದ್ (ಪಿಟಿಐ): ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುತ್ತಿರುವ ಚಳವಳಿಗಾರರು ಅ.9ರಿಂದ ಮೂರು ದಿನಗಳ ಕಾಲ ರೈಲು ತಡೆ ಹಮ್ಮಿಕೊಂಡಿದ್ದು, ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ಆಂಧ್ರ ಪ್ರದೇಶ ಸರ್ಕಾರ ಮತ್ತು ರೈಲ್ವೆ ಇಲಾಖೆ ಹಲವಾರು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿವೆ.ಪೊಲೀಸ್ ಇಲಾಖೆ, ದಕ್ಷಿಣ ಮಧ್ಯ ರೈಲ್ವೆಗಳು ಜಂಟಿಯಾಗಿ ಕ್ರಿಯಾಯೋಜನೆಯೊಂದು ಸಿದ್ಧಪಡಿಸಿವೆ. ಉನ್ನತ ಮಟ್ಟದ ನಿಯಂತ್ರಣ ಕೊಠಡಿಯ ಸ್ಥಾಪನೆ, ರೈಲುಗಳಲ್ಲಿ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗುವುದು. ಇದಲ್ಲದೆ ರೈಲುಗಳ ಸಂಚಾರ ಮಾರ್ಗದಲ್ಲಿ ಬದಲಿ ವ್ಯವಸ್ಥೆ, ವೇಳಾಪಟ್ಟಿಯಲ್ಲಿ ಬದಲಾವಣೆ ಮುಂತಾದವುಗಳ ಮೂಲಕ ಪ್ರಯಾಣಿಕರಿಗೆ ಹೆಚ್ಚು ಅನಾನುಕೂಲವಾಗದಂತೆ ನೋಡಿಕೊಳ್ಳುವ ಭರವಸೆಯನ್ನು ನೀಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.