ಬುಧವಾರ, ಜೂನ್ 3, 2020
27 °C

ತೋಟದ ಬೆಳೆ:ಅಭಿವೃದ್ಧಿಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೋಟದ ಬೆಳೆ:ಅಭಿವೃದ್ಧಿಗೆ ಕ್ರಮ

ಕೂನೂರು (ತಮಿಳುನಾಡು): `ದೇಶದ ಆರ್ಥಿಕ ದೃಢತೆಗೆ ಚಹಾ, ಕಾಫಿ, ರಬ್ಬರ್, ಏಲಕ್ಕಿ ಮೊದಲಾದ ತೋಟದ ಬೆಳೆಗಳ ಕೊಡುಗೆ ದೊಡ್ಡದು. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ~ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.ನೀಲಗಿರಿ ಶ್ರೇಣಿಯ ಊಟಿ ಸಮೀಪದ ಈ ಪಟ್ಟಣದಲ್ಲಿ `ಉಪಾಸಿ~ (ದಕ್ಷಿಣ ಭಾರತದ ಟೀ, ಕಾಫಿ, ರಬ್ಬರ್, ಏಲಕ್ಕಿ ಹಾಗೂ ಮೆಣಸು ತೋಟದ ಬೆಳೆಗಾರರ ಸಂಘ) 118ನೇ ವಾರ್ಷಿಕ ಅಧಿವೇಶನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ತೆರಿಗೆ, ವಿದೇಶಿ ವಿನಿಮಯದ ಲೆಕ್ಕಾಚಾರಗಳಿಗಿಂತ ಲಕ್ಷಾಂತರ ಮಂದಿಗೆ ಈ ಕ್ಷೇತ್ರ ಕೆಲಸ ಒದಗಿಸಿದೆ ಎಂಬುದು ಮಹತ್ವದ ಅಂಶ. ಯಾವುದೋ ಮೂಲೆಯಲ್ಲಿ, ಹಿಂದುಳಿದ ಪ್ರದೇಶಗಳಲ್ಲಿ, ಗಿರಿಶಿಖರಗಳಲ್ಲಿ ದುಡಿಮೆಗೆ ಅವಕಾಶ ಮಾಡಿಕೊಟ್ಟಿದೆ. ಅವರ ಯೋಗಕ್ಷೇಮದತ್ತ ಗಮನಹರಿಸಿದೆ ಎಂದು ಅವರು ಶ್ಲಾಘಿಸಿದರು.ಪ್ಲಾಂಟೇಷನ್ ಕ್ಷೇತ್ರ ಎದುರಿಸುತ್ತಿರುವ ಕಾರ್ಮಿಕರ ಕೊರತೆಗೆ ಕೃಷಿ ಕ್ಷೇತ್ರದಲ್ಲಿ ಆಗಿರುವ ಸ್ಥಿತ್ಯಂತರ ಪ್ರಮುಖ ಕಾರಣ. ಹೊಸ ಪೀಳಿಗೆಯ ವಿದ್ಯಾವಂತರಿಗೆ ಬೇಸಾಯದ ಬದುಕು ಬೇಡವಾಗಿದೆ. ಅವರೆಲ್ಲ ಬೇರೆ ಬಗೆಯ ಉದ್ಯೋಗಗಳನ್ನು ಅರಸಿ ಹೋಗುತ್ತಿದ್ದಾರೆ. ಬದಲಾದ ಕಾಲಕ್ಕೆ ತಕ್ಕಂತೆ ಪ್ಲಾಂಟೇಷನ್ ಕ್ಷೇತ್ರದ ಬೇಸಾಯದ ಕ್ರಮಗಳೂ ಬದಲಾಗಬೇಕಿದೆ ಎಂದರು.ಕಪ್ಪು ಚಹಾ ಅತ್ಯಧಿಕ ಉತ್ಪಾದನೆ ಮತ್ತು ಬಳಕೆಯಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನ ಪಡೆದಿದೆ. ನೀಲಗಿರಿ ಮತ್ತು ಡಾರ್ಜಿಲಿಂಗ್ ಚಹಾ ವಿಶ್ವದಲ್ಲೇ ಹೆಸರುವಾಸಿ. ಕಾಫಿ ಬೆಳೆ 4 ಲಕ್ಷ ಹೆಕ್ಟೇರ್‌ಗಳಿಗೆ ಚಾಚಿದೆ. ರಬ್ಬರ್ ಬೆಳೆ 6.87 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿದೆ.

 

ಈ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ವಿಶೇಷ ಕಾಳಜಿ ವಹಿಸಿದೆ. ಪ್ಲಾಂಟೇಷನ್ ಕಾರ್ಮಿಕ ಕಾಯ್ದೆ-1951ಕ್ಕೆ ಕಳೆದ ವರ್ಷ ತಿದ್ದುಪಡಿ ತಂದಿದೆ. ಇದರ ಹೊರತಾಗಿಯೂ ನ್ಯೂನತೆಗಳಿದ್ದರೆ ಅವುಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಹೇಳಿದರು.ತೋಟದ ಬೆಳೆಗಳ ಇಳುವರಿ ರಸಗೊಬ್ಬರಗಳ ಹದವಾದ ಬಳಕೆಯನ್ನು ಅವಲಂಬಿಸಿದೆ.ಆದರೆ, ರಸಗೊಬ್ಬರಗಳ ಬೆಲೆ ಕೈಗೆಟುಕದ ಸ್ಥಿತಿ ತಲುಪಿದೆ. ಹೀಗಾಗಿ ರಸಗೊಬ್ಬರಗಳಿಗೆ ಸಬ್ಸಿಡಿ ಒದಗಿಸುವ ಮೂಲಕ ತೋಟದ ಬೆಳೆಗಾರರ ನೆರವಿಗೆ ಬರಬೇಕು ಎಂದು ನಟಿ-ಸಂಸದೆ ಜಯಪ್ರದಾ ಮನವಿ ಮಾಡಿದರು.

ಚಹಾ ಕಾರ್ಖಾನೆಗಳಿಗೆ ತಾಂತ್ರಿಕ ಉನ್ನತೀಕರಣಕ್ಕೆ ನೀಡುವ ರಿಯಾಯ್ತಿ ಮೊತ್ತವನ್ನು ದ್ವಿಗುಣಗೊಳಿಸಬೇಕು ಎಂದು ಸಂಸದ ಪಿ.ವಿಶ್ವನಾಥನ್ ಕೋರಿದರು.ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ರಿಯಾಯ್ತಿ-ವಿನಾಯ್ತಿ ಮತ್ತು ಪ್ರೋತ್ಸಾಹವನ್ನು ಪ್ಲಾಂಟೇಷನ್ ಕ್ಷೇತ್ರಕ್ಕೂ ವಿಸ್ತರಿಸಬೇಕು ಎಂದು `ದಿ ಯುನೈಟೆಡ್ ಪ್ಲಾಂಟರ್ಸ್‌ ಅಸೋಸಿಯೇಷನ್ ಆಫ್ ಸದರನ್ ಇಂಡಿಯಾ~ (ಉಪಾಸಿ) ಅಧ್ಯಕ್ಷ ಸಿ.ಎನ್.ನಟರಾಜ್ ತಮ್ಮ ಸ್ವಾಗತ ಭಾಷಣದಲ್ಲಿ ಒತ್ತಾಯಿಸಿದರು.ಚಹಾ ಕ್ಷೇತ್ರದ ಸ್ಥಿತಿಗತಿ: ಕಳೆದ 10 ವರ್ಷಗಳ ಅವಧಿಯಲ್ಲಿ ಜಾಗತಿಕ ಚಹಾ ಉತ್ಪಾದನೆ ಪ್ರಮಾಣ 3,000 ದಶಲಕ್ಷ ಕೆ.ಜಿ.ಗಳಿಂದ 4,200 ದಶಲಕ್ಷ ಕೆ.ಜಿ.ಗಳಿಗೆ ಹೆಚ್ಚಿದೆ. ಚೀನಾದ ಉತ್ಪಾದನೆ 676 ದಶಲಕ್ಷ ಕೆ.ಜಿ.ಗಳಿಂದ 1,310 ದಶಲಕ್ಷ ಕೆ.ಜಿ.ಗಳಿಗೆ ಏರಿದೆ.ಹಸಿರು ಚಹಾ ಉತ್ಪಾದನೆ ದ್ವಿಗುಣಗೊಂಡಿದೆ. ಚಹಾ ಬೆಳೆಯುವ ಪ್ರದೇಶ ಸುಮಾರು 8 ಲಕ್ಷ ಹೆಕ್ಟೇರ್‌ನಷ್ಟು ಅಧಿಕವಾಗಿದೆ. ಭಾರತದಲ್ಲಿ ಪ್ರಮುಖವಾಗಿ ಸಣ್ಣ ಬೆಳೆಗಾರರ ವಲಯ ಮಾತ್ರ ಏರಿಕೆ ದಾಖಲಿಸಿದೆ ಎಂದು ಚಹಾ ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಅಂಬಳವಾನನ್ ಹೇಳಿದರು.ಚಹಾ ರಫ್ತಿನಲ್ಲಿ ಕೀನ್ಯಾ ಮುಂಚೂಣಿಯಲ್ಲಿದೆ.  ಆ ದೇಶದ ರಫ್ತು 217 ದಶಲಕ್ಷ ಕೆ.ಜಿ.ಯಿಂದ 342 ದಶಲಕ್ಷ ಕೆ.ಜಿ.ಗೆ ಜಿಗಿದಿದೆ. 303 ದಶಲಕ್ಷ ಕೆ.ಜಿ. ರಫ್ತಿನೊಂದಿಗೆ ಚೀನಾ ದ್ವಿತೀಯ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಚಹಾ ಬಳಕೆ ಪ್ರಮಾಣ ವಾರ್ಷಿಕ ಶೇ 3ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ ಎಂದರು.ರಬ್ಬರ್ ಬಳಕೆಯಲ್ಲಿ ಏರಿಕೆ: 2010ರಲ್ಲಿ ಜಾಗತಿಕವಾಗಿ 10.38 ದಶಲಕ್ಷ ಟನ್ ರಬ್ಬರ್ (ನೈಜ ರಬ್ಬರ್) ಉತ್ಪಾದನೆ ಆಗಿದೆ. ಇದರಲ್ಲಿ ಭಾರತದ ಪಾಲು ಶೇ 8.2ರಷ್ಟು. ಪ್ರಮುಖ ಬಳಕೆದಾರ ರಾಷ್ಟ್ರಗಳಲ್ಲಿ ಆರ್ಥಿಕ ಚೇತರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಬಳಕೆ ಪ್ರಮಾಣ ಶೇ 15.5 ರಷ್ಟು ಏರಿಕೆ ದಾಖಲಿಸಿದೆ. ವಾಹನ ಮತ್ತು ಟೈರ್‌ಗಳ ಉತ್ಪಾದನೆಯಲ್ಲಿ ಆಗಿರುವ ಏರಿಕೆಯೂ ಇದಕ್ಕೆ ಪೂರಕವಾಗಿ ಕೆಲಸ ಮಾಡಿದೆ ಎಂದು ರಬ್ಬರ್ ಮಂಡಳಿ ಅಧ್ಯಕ್ಷೆ ಶೀಲಾ ಥಾಮಸ್ ವಿಶ್ಲೇಷಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.