ಮಂಗಳವಾರ, ಸೆಪ್ಟೆಂಬರ್ 21, 2021
21 °C

ತ್ಯಾಜ್ಯದ ಹೊಸ ಜಾಡು

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ಮಹಾನಗರಗಳಲ್ಲಿ ಕಸ ವಿಲೇವಾರಿ ದೊಡ್ಡ ದೊಂಬರಾಟವೇ ಸರಿ. ಕಸ, ಕಸವಾಗಿಯೇ ಇದ್ದರೆ ಯಾರಿಗೂ ಬೇಡ. ಆದರೆ ಕೊಳೆತು ನಾರುವ ಕಸದ ರಾಶಿಗಳೆಲ್ಲ ಆದಾಯ ಮೂಲಗಳಾಗಿ ಹೊಳೆಯಲಾರಂಭಿಸಿದರೆ...?  ಇಂಥದ್ದೊಂದು ಆಲೋಚನೆಯನ್ನು ಸಾಧ್ಯವಾಗಿಸಿರುವ ದೊಡ್ಡಬಳ್ಳಾಪುರದ ರೈತ ಆನಂದ್‌ ಅವರ ಪರಿಯನ್ನು ಇಲ್ಲಿ ಉಲ್ಲೇಖಿಸಿದ್ದಾರೆ ಪದ್ಮನಾಭ ಭಟ್‌ಬೆಂಗಳೂರು ಗ್ರಾಮಾಂತರ  ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಸ್ಕೂರಿನ  ರೈತ ಆನಂದ್‌ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದವರಲ್ಲ. ತಂತ್ರಜ್ಞಾನ, ಸಂಶೋಧನೆ ಅಂತೆಲ್ಲ ವರ್ಷಾನುಗಟ್ಟಲೆ ಪ್ರಯೋಗಾಲಯದಲ್ಲಿ ಕೂತು ಕಲಿತ ವಿಜ್ಞಾನಿಯೂ ಅಲ್ಲ. ಪರಿಸರ ರಕ್ಷಣೆಯ ಉದ್ದೇಶದ ಚಳವಳಿಗಳ ದಾರಿಯಲ್ಲಿ ಸಾಗಿದವರೂ ಅಲ್ಲ.

ದ್ವಿತೀಯ ಪಿಯಸಿ ಓದಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು ಕುಟುಂಬದತ್ತವಾಗಿ ಬಂದಿದ್ದ ಎಪ್ಪತ್ತು ಎಕರೆ ಭೂಮಿಯಲ್ಲಿ ಕೃಷಿ ಕಾಯಕಕ್ಕೆ ತಮ್ಮನ್ನು ತಾವು ಕೊಟ್ಟು ಕೊಂಡವರು. ಭೂಮಿಯನ್ನು ಪ್ರೀತಿಸಿ, ಶ್ರದ್ಧೆಯಿಂದ ಕೆಲಸ ಮಾಡಿ ಪ್ರಗತಿಪರ ರೈತ ಎಂಬ ಹೆಸರು ಪಡೆದು ಕೊಂಡವರು ಅಷ್ಟೇ. ಆದರೆ ಹೊಸದನ್ನು ಮಾಡ ಬೇಕು, ಆ ಕೆಲಸ ತಮಗೂ, ಸಮಾಜಕ್ಕೂ ಉಪಯುಕ್ತ ವಾಗುವಂತಿರಬೇಕು ಎಂಬ ಹಂಬಲ ಅವರಲ್ಲಿ ಯಾವತ್ತೂ ಇತ್ತು.ಆನಂದ್‌ ಅವರ ಈ ಇಂಗಿತಕ್ಕೆ ಸ್ಪಷ್ಟರೂಪ ಸಿಕ್ಕಿದ್ದು 2012ರಲ್ಲಿ ಅವರು ಮಾಡಿದ ಚೀನಾ ಪ್ರವಾಸದಲ್ಲಿ. 2012ರಲ್ಲಿ ಸರ್ಕಾರ ಕೆಲವು ರೈತರಿಗೆ ಚೀನಾ ಪ್ರವಾಸ ಏರ್ಪಡಿಸಿತ್ತು. ಅದರಲ್ಲಿ ಆನಂದ್‌ ಹೆಸರೂ ಇತ್ತು. ಆದರೆ ಕೆಲವು ಕಾರಣ ಗಳಿಂದ ಕೊನೆಯಲ್ಲಿ ಅವರ ಹೆಸರನ್ನು ಕೈಬಿಡ ಲಾಯಿತು. ಆದರೆ ಆನಂದ ಇದರಿಂದ ನಿರಾಶರಾಗ ಲಿಲ್ಲ. ಬದಲಿಗೆ ತಮ್ಮ ಒಬ್ಬ ರೈತಸ್ನೇಹಿತನ ಜತೆಯಲ್ಲಿ ಸ್ವಂತ ಖರ್ಚಿನಲ್ಲಿ ಚೀನಾ ಪ್ರವಾಸ ಕೈಗೊಂಡರು. ಈ ಪ್ರವಾಸದಲ್ಲಿ ಅವರ ಗಮನ ಸೆಳೆದದ್ದು ತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದಿಸುವ ತಂತ್ರಜ್ಞಾನ. ಮಹಾನಗರಗಳಲ್ಲಿನ ಕಸ ವಿಲೇವಾರಿ ಸಮಸ್ಯೆಯ ಅರಿವಿದ್ದ ಅವರಿಗೆ ಈ ತಂತ್ರಜ್ಞಾನ ಆಕರ್ಷಕವಾಗಿ ಕಂಡಿತು. ಈ ಬಗ್ಗೆ ಮಾಹಿತಿ ಪಡೆದುಕೊಂಡಾಗ ಅದು ಆರ್ಥಿಕವಾಗಿಯೂ ಲಾಭ ತರುವ ಉದ್ಯಮ ಎಂದು ತಿಳಿಯಿತು.ಸಾಕಾರದ ದಾರಿಯಲ್ಲಿ...

ಪ್ರವಾಸದಿಂದ ಮರಳಿ ಬಂದ ಆನಂದ್‌ ತಕ್ಷಣವೇ ತಮ್ಮ ಯೋಜನೆಯನ್ನು ಸಾಕಾರಗೊಳಿ ಸುವತ್ತ ಕಾರ್ಯೋನ್ಮುಖರಾದರು. ಈ ಯೋಜನೆಯ ಹೆಚ್ಚಿಗೆ ತಾಂತ್ರಿಕ ಮಾಹಿತಿಯನ್ನು ಪಡೆದುಕೊಳ್ಳಲು ಆನಂದ್‌ ಅಂತರ್ಜಾಲದ ಮೊರೆ ಹೋದರು. ಹೀಗೆ ಗ್ಯಾಸ್‌ ಉತ್ಪಾದನೆ ತಂತ್ರಜ್ಞಾನದ ಬಗ್ಗೆ ಮಾಹಿತಿ ಹುಡುಕುತ್ತಿದ್ದಾಗ ಅವರಿಗೆ ಅಹಮ ದಾಬಾದ್‌ನ ‘ಅಟ್ಮಾಸ್‌ಪವರ್‌’ ಎಂಬ ಕಂಪೆನಿಯ ಬಗ್ಗೆ ತಿಳಿಯಿತು.ತಕ್ಷಣವೇ ಹೈದರಾಬಾದ್‌ ದಾರಿ ಹಿಡಿದ ಆನಂದ್‌ ‘ಅಟ್ಮಾಸ್‌ಪವರ್‌’ನ ವ್ಯವಸ್ಥಾಪಕ ನಿರ್ದೇಶಕ ಬಿ. ಆರ್‌. ಸಿಂಗ್‌ ಅವರನ್ನು ಭೇಟಿಯಾದರು. ಹೀಗೆ ಬಯೋಗ್ಯಾಸ್‌ ಉತ್ಪಾದನೆಯ ತಂತ್ರಜ್ಞಾನದ ಯೋಜನೆಯ ಕನಸು ಹೊತ್ತು ಬಂದ ಸಾಮಾನ್ಯ ರೈತನನ್ನು ಕಂಡು ಸಂತೋಷಗೊಂಡ ಬಿ.ಆರ್‌. ಸಿಂಗ್‌, ಆನಂದ್‌ ಅವರ ಕನಸಿನ ಯೋಜನೆಯ ಸಂಪೂರ್ಣ ಬೆಂಬಲಕ್ಕೆ ನಿಂತರು. ಈ ತಂತ್ರಜ್ಞಾನದ ಅಧ್ಯಯನಕ್ಕಾಗಿಯೇ ಚೀನಾಕ್ಕೂ ಭೇಟಿ ನೀಡಿ ಬಂದರು.ನಂತರ ತಮ್ಮ ‘ಅಟ್ಮಾಸ್‌ ಪವರ್‌’ ಕಂಪೆನಿಯಿಂದಲೇ ಅಗತ್ಯ ಉಪಕರಣಗಳನ್ನು ತಯಾರಿಸಿದ್ದೂ ಅಲ್ಲದೇ, ಪೂರ್ಣ ಪ್ರಮಾಣದ ಬಯೋಗ್ಯಾಸ್‌ ಉತ್ಪನ್ನ ಘಟಕವನ್ನು ಸ್ಥಾಪಿಸಿಕೊಟ್ಟರು. ತಾವು ಚೀನಾಕ್ಕೆ ಭೇಟಿ ನೀಡಿದ್ದ ವರ್ಷದಲ್ಲಿಯೇ ಅಂದರೆ 2012ರಲ್ಲಿಯೇ ಆನಂದ್‌ ‘ಮಾಲ್ಟೂಸ್‌ ಅಗ್ರಿ ಪ್ರೈವೇಟ್‌ ಲಿಮಿಟೆಡ್‌’ ಎಂಬ ಹೆಸರಿನಲ್ಲಿ ಕಂಪೆನಿ ಆರಂಭಿಸಿ ಒಂದೂವರೆ ಎಕರೆ ಜಾಗದಲ್ಲಿ ಬಯೋ ಗ್ಯಾಸ್‌ ಉತ್ಪಾದನಾ ಘಟಕ ಸ್ಥಾಪಿಸಿಯೇಬಿಟ್ಟರು. ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಘಟಕಕ್ಕೆ ಬ್ಯಾಂಕ್‌ ಆಫ್‌ ಇಂಡಿಯಾ ಧನಸಹಾಯ ನೀಡಿತು. ಕೇಂದ್ರದ ಸಹಾಯಧನವೂ ದೊರಕಿತು. ‘ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಕೇಂದ್ರ ಸರ್ಕಾರದ ಸಹಾಯಧನದಿಂದ ಈ ಘಟಕವನ್ನು ಆರಂಭಿಸಿದೆ. ಆದರೆ ನಮ್ಮದೇ ರಾಜ್ಯ ಸರ್ಕಾರ ಈ ಘಟಕವನ್ನು ಸ್ಥಾಪಿಸುವಾಗ ನನಗೆ ಯಾವ ರೀತಿಯ ಸಹಾಯವನ್ನೂ ಮಾಡಲಿಲ್ಲ’ ಎಂದು ನೋವಿನಿಂದಲೇ ಹೇಳಿಕೊಳ್ಳುತ್ತಾರೆ ಆನಂದ್‌.ಆರಂಭದಲ್ಲಿ ಐದು ಜನರನ್ನು ಕೆಲಸಕ್ಕೆ ತೆಗೆದು ಕೊಂಡು 10 ಟನ್‌ ಹಸಿ ತ್ಯಾಜ್ಯ ಸಾಮರ್ಥ್ಯದ ಘಟಕ ವನ್ನು ಸ್ಥಾಪಿಸಿದರು. ಕೆಲವು ಸಮಯದ ನಂತರ ಇದನ್ನು 20 ಟನ್‌ಗೆ ಏರಿಸಲಾಯಿತು. ಪ್ರಸ್ತುತ ಈ ಘಟಕದಲ್ಲಿ ಪ್ರತಿದಿನವೂ 20 ಟನ್‌ ಹಸಿತ್ಯಾಜ್ಯವನ್ನು ಬಳಸಿಕೊಂಡು ಬಯೋಗ್ಯಾಸ್‌ ಉತ್ಪಾದಿಸಲಾಗುತ್ತದೆ. 20 ಜನ ಈ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಹೇಗೆ ಕೆಲಸ ನಿರ್ವಹಿಸುತ್ತದೆ

ಪ್ರತಿದಿನ ಬಿಬಿಎಂಪಿ ಮತ್ತು ನಗರದ ಕೆಲವು ಹೋಟೆಲ್‌ಗಳಿಂದ ಹಸಿ ತ್ಯಾಜ್ಯವನ್ನು ಸಂಗ್ರಹಿಸಿ ಬಯೋಗ್ಯಾಸ್‌ ಉತ್ಪಾದನಾ ಘಟಕಕ್ಕೆ ಒಯ್ಯಲಾಗುತ್ತದೆ. ಹಾಗೆಯೇ ದೊಡ್ಡಬಳ್ಳಾಪುರದ ಹುಸ್ಕೂರಿನ ಅಕ್ಕ ಪಕ್ಕದ ಹಳ್ಳಿಗಳ ಹಸಿ ತ್ಯಾಜ್ಯ ಮತ್ತು ಸೆಗಣಿಯನ್ನೂ ಸಂಗ್ರಹಿಸಲಾಗುತ್ತದೆ. ನಂತರ ಅದರಿಂದ ಬಯೋಗ್ಯಾಸ್‌ ಉತ್ಪಾದಿಸಿ ಮತ್ತೆ ನಗರದ ಹೋಟೆಲ್‌ಗಳಿಗೇ ಮಾರಾಟ ಮಾಡಲಾಗುತ್ತದೆ.ಬಯೋಗ್ಯಾಸ್‌ ಘಟಕ ಆರಂಭಿಸುವ ಹಂತದಲ್ಲಿಯೇ ಉತ್ಪಾದನೆಯಾದ ಗ್ಯಾಸ್‌ ಅನ್ನು ಮಾರಾಟ ಮಾಡುವ ಬಗ್ಗೆಯೂ ಯೋಜನೆಯನ್ನು ರೂಪಿಸಿದ್ದರು.  ‘ಆರಂಭದ ಹಂತದಲ್ಲಿಯೇ ಬೆಂಗಳೂರಿನ ಕೆಲವು ಹೋಟೆಲ್‌ಗಳ ಜತೆ ಮಾತನಾಡಿದ್ದೆವು. ಇದು ಪರಿಸರಪ್ರೇಮಿ ಯೋಜನೆ. ಇದನ್ನು ಬಳಸಿದರೆ ನಿಮ್ಮ ಹೋಟೆಲ್‌ಗೂ ಹೆಸರು ಬರುತ್ತದೆ ಎಂದೆಲ್ಲಾ ಮನವರಿಕೆ ಮಾಡಿದ್ದೂ ಅಲ್ಲದೇ ಎಲ್‌ಪಿಜಿ ಗ್ಯಾಸ್‌ಗಿಂತ ಐದು ರೂಪಾಯಿ ಕಡಿಮೆಯಲ್ಲಿ ಕೊಡುತ್ತೇವೆ ಎಂದೂ ಹೇಳಿದೆವು.ನಮ್ಮ ಈ ಯೋಜನೆಗೆ ಅನೇಕ ಹೋಟೆಲ್‌ಗಳು ಒಪ್ಪಿಕೊಂಡವು. ಆದ್ದರಿಂದ ನಾವು ಉತ್ಪಾದಿಸಿದ ಗ್ಯಾಸ್‌ ಅನ್ನು ಮಾರಾಟ ಮಾಡುವುದು ಅಷ್ಟು ದೊಡ್ಡ ಸಮಸ್ಯೆ ಯೆಂದು ನಮಗೆ ಅನಿಸಲಿಲ್ಲ’ ಎಂದು ಆನಂದ್‌ ವಿವರಿಸುತ್ತಾರೆ. ಈಗ ನಗರದ ಕೋನಾರ್ಕ್‌ ಹೋಟೆಲ್‌ ಪೂರ್ತಿಯಾಗಿ 2012ರಲ್ಲಿಯೇ ಆನಂದ್‌ ‘ಮಾಲ್ಟೂಸ್‌ ಅಗ್ರಿ ಪ್ರೈವೇಟ್‌ ಲಿಮಿಟೆಡ್‌’ ಉತ್ಪಾದಿಸುವ ಬಯೋಗ್ಯಾಸ್‌ನಲ್ಲಿಯೇ ಕಾರ್ಯನಿರ್ವ ಹಿಸುತ್ತಿದೆ. ಅಲ್ಲದೇ ಬೆಂಗಳೂರಿನ ಒಂದು ಹೋಟೆಲ್‌ ಹಾಗೂ ಕಂಠೀರವ ಕ್ರೀಡಾಂಗಣಕ್ಕೂ ಬಯೋಗ್ಯಾಸ್‌ ವಿತರಣೆ ಮಾಡಲಾಗುತ್ತಿದೆ.ಆದಾಯವೇನೂ ಕಮ್ಮಿಯಿಲ್ಲ

ಸಾಮಾನ್ಯವಾಗಿ ಇಂತಹ ಉದ್ಯಮಗಳು ಲಾಭ ತರುವುದಿಲ್ಲ ಎಂಬ ಪೂರ್ವಗ್ರಹ ಜನರಲ್ಲಿದೆ. ಆದರೆ ಆನಂದ್‌ ಅವರ ಅನುಭವದ ಪ್ರಕಾರ ಇದು ಸಂಪೂರ್ಣ ತಪ್ಪು ಕಲ್ಪನೆ. ‘ಸದ್ಯಕ್ಕೆ ಪ್ರತಿದಿನ 20 ಟನ್‌ ಹಸಿ ತ್ಯಾಜ್ಯದಿಂದ ಐದರಿಂದ ಆರು ಟನ್‌ ಗ್ಯಾಸ್‌ ಉತ್ಪಾದನೆ ಮಾಡಲಾಗುತ್ತದೆ. ಇದರಿಂದ ತಿಂಗಳಿಗೆ ಒಂಬತ್ತು ಲಕ್ಷ ಆದಾಯ ಬರುತ್ತದೆ. ಆರು ಲಕ್ಷ ಖರ್ಚಿದೆ.ಉಳಿದ ಮೂರು ಲಕ್ಷ ನಿವ್ವಳ ಲಾಭ’ ಎಂದು ಆನಂದ್‌ ವ್ಯವಹಾರದ ಲೆಕ್ಕಾಚಾರವನ್ನು ಬಿಚ್ಚಿಡುತ್ತಾರೆ. ತ್ಯಾಜ್ಯದಿಂದ ಗ್ಯಾಸ್‌ ಉತ್ಪಾದಿಸಿ ಉಳಿಯುವ ಸ್ಲರಿ ಕೂಡ ಒಳ್ಳೆಯ ಗೊಬ್ಬರ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಇದೆ. ಇದನ್ನು ಮಾರಾಟ ಮಾಡಿಯೂ ಲಾಭ ಗಳಿಸಬಹುದು.ವಿಸ್ತರಣೆಯ ಹೊಸ್ತಿಲಲ್ಲಿ

ತಮ್ಮ ಆರಂಭಿಕ ಪ್ರಯತ್ನಕ್ಕೆ ದೊರೆತಿರುವ ಯಶಸ್ಸಿನಿಂದ ಉತ್ಸುಕತೆ ಹೆಚ್ಚಿಸಿಕೊಂಡಿರುವ ಆನಂದ್‌ ಈಗ ತಮ್ಮ ಘಟಕದ ಸಾಮರ್ಥ್ಯ ವಿಸ್ತರಣೆಗೆ ಮುಂದಾಗಿದ್ದಾರೆ. ಮುಂದಿನ ಹಂತವಾಗಿ ದಿನ ವೊಂದಕ್ಕೆ ನೂರು ಟನ್‌ ತ್ಯಾಜ್ಯದಿಂದ  ಬಯೋಗ್ಯಾಸ್‌ ಉತ್ಪಾದನೆ ಮಾಡುವ ಯೋಜನೆ ಅವರದ್ದು. ಇದಕ್ಕಾಗಿ ತಮ್ಮ ಘಟಕವನ್ನು ಹದಿನೈದು ಕೋಟಿ ವೆಚ್ಚದಲ್ಲಿ ಎಲ್ಲ ರೀತಿಯಲ್ಲಿಯೂ ತಾಂತ್ರಿಕವಾಗಿ ಅಭಿವೃದ್ಧಿ ಪಡಿಸಿದ್ದಾರೆ.ಜೊತೆಗೆ ದಿನಕ್ಕೆ ನೂರು ಟನ್‌ ಹಸಿ ತ್ಯಾಜ್ಯವನ್ನು ಒದಗಿಸಲು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದು ಅದಕ್ಕೆ ಒಪ್ಪಿಗೆಯೂ ದೊರಕಿದೆ. ‘ದಿನವೊಂದಕ್ಕೆ ನೂರು ಟನ್‌ ತ್ಯಾಜ್ಯ ಉತ್ಪಾದಿ ಸಲು ಸಾಧ್ಯವಾದರೆ ಅದರಿಂದ ₹75 ಲಕ್ಷದಿಂದ ಒಂದು ಕೋಟಿ ವ್ಯವಹಾರ ನಡೆಸಲು ಸಾಧ್ಯವಾಗು ತ್ತದೆ. ನೂರು ಟನ್‌ ಬಯೋಗ್ಯಾಸ್‌ ಉತ್ಪಾದನೆಗೆ ಸುಮಾರು ₹50 ಲಕ್ಷ ವೆಚ್ಚ ತಗುಲುತ್ತದೆ’ ಎಂದು ತಮ್ಮ ಯೋಜನೆಯ ವ್ಯಾವಹಾರಿಕ ಆಯಾಮದ ಬಗ್ಗೆ ಆನಂದ್‌ ವಿವರಿಸುತ್ತಾರೆ.ವಿಸ್ತರಣೆಗೊಂಡ ಹೊಸ ಘಟಕ ಮುಂದಿನ ತಿಂಗಳಿಂದ ಕಾರ್ಯಾರಂಭ ಮಾಡಲಿದೆ. ಇಲ್ಲಿ ಉತ್ಪಾದನೆಯಾದ ಬಯೋ ಗ್ಯಾಸ್‌ ಅನ್ನು ಕೊಂಡು ಕೊಳ್ಳಲು ಬೆಂಗಳೂರಿನ ಅಡಿಗಾಸ್‌ನ 18 ಹೋಟೆಲ್‌ ಗಳು, ಹೋಟೆಲ್‌ ಅಶೋಕ, ಒಬಿರಾಯ್‌ ಸೇರಿದಂತೆ ಅನೇಕ ಪ್ರತಿಷ್ಠಿತ ಹೋಟೆಲ್‌ಗಳು ಮುಂದೆ ಬಂದಿವೆ. ನೂರು ಟನ್‌ನ ಸಾಮರ್ಥ್ಯದ ಬಯೋಗ್ಯಾಸ್‌ ಘಟಕ ಯಶಸ್ವಿಯಾದರೆ ಇದನ್ನು ಮಂಗಳೂರು, ಮೈಸೂರು ಸೇರಿದಂತೆ ಕರ್ನಾ ಟಕದ ಉಳಿದ ನಗರಗಳಿಗೆ ವಿಸ್ತರಿಸುವ ಗುರಿಯನ್ನೂ ಆನಂದ್‌ ಹೊಂದಿದ್ದಾರೆ.ಈ ದಿಶೆಯಲ್ಲಿ ಈಗಾಗಲೇ ಮಂಗಳೂರಿನಲ್ಲಿ ಘಟಕ ಸ್ಥಾಪಿಸುವ ಕುರಿತು ಪ್ರಸ್ತಾವವನ್ನೂ ಸಲ್ಲಿಸಲಾಗಿದೆ. ‘ಕಸ ಸರ್ವನಗರಗಳಿಗೂ ಸಾಮಾನ್ಯ ಸಮಸ್ಯೆ. ಅದನ್ನು ಏಕಮುಖವಾಗಿ ಬರೀ ಸಮಸ್ಯೆ ಎಂದು ನೋಡುವುದರಿಂದ ಏನೂ ಬದಲಾಗುವುದಿಲ್ಲ. ಬದಲಿಗೆ ಅದಕ್ಕೆ ಪರ್ಯಾಯ ವಾದ ಯಾವ ಮಾರ್ಗಗಳನ್ನು ರೂಪಿಸಿಕೊಳ್ಳ ಬಹುದು ಎಂದು ಯೋಚಿಸಬೇಕು. ನಮ್ಮ ಈ ಬಯೋಗ್ಯಾಸ್‌ ಯೋಜನೆ ಅಂಥದ್ದೊಂದು ಪರ್ಯಾಯ ಮಾರ್ಗ’ ಎನ್ನುತ್ತಾರೆ ಆನಂದ್‌.‘ನಮ್ಮಲ್ಲಿ ಯಾರಾದರೂ ಈ ರೀತಿ ತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದಿಸುವ ಪ್ರಯತ್ನಕ್ಕೆ ಮುಂದಾದರೆ ಅವರಿಗೆ ಪೂರ್ತಿ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ನಾನು ಸದಾ ಸಿದ್ಧ’ ಎನ್ನುವ ಆನಂದ್‌  ಪ್ರಯತ್ನದಿಂದ ಸ್ಫೂರ್ತಿಗೊಂಡು ಕೆಲವಾ ದರೂ ಈ ದಾರಿಯನ್ನು ತುಳಿಯಲು ಮುಂದೆ ಬಂದರೆ ತ್ಯಾಜ್ಯ ನಿರ್ವಹಣೆಯ ಹೊಸ ಅಧ್ಯಾಯವೊಂದು ತೆರೆದುಕೊಳ್ಳಬಹುದು. ಅಷ್ಟೇ ಅಲ್ಲ, ಜಾಗತಿಕ ಮಟ್ಟ ದಲ್ಲಿ ಚರ್ಚೆಯಾಗುತ್ತಿರು ಪರ್ಯಾಯ ಇಂಧನ ಮೂಲದ ಶೋಧನೆಗೂ ಸಾರ್ಥಕ ಮಾದರಿಯಾಗ ಬಲ್ಲದು.

*

ಬಯೋಗ್ಯಾಸ್‌ ವಾಹನ

‘ಮಾಲ್ಟೂಸ್‌ ಅಗ್ರಿ ಪ್ರೈವೇಟ್‌ ಲಿಮಿಟೆಡ್‌’ ಘಟಕಕ್ಕೆ ತ್ಯಾಜ್ಯವನ್ನು ಸಾಗಿಸುವ ಮತ್ತು ಅಲ್ಲಿ ತಯಾರಿಸಿದ ಬಯೋಗ್ಯಾಸ್‌ ಅನ್ನು ವಿವಿಧೆಡೆ ಸಾಗಿಸುವ ವಾಹನವೂ ಬಯೋಗ್ಯಾಸ್‌ ನಿಂದಲೇ ಓಡುತ್ತಿರುವುದು ಇನ್ನೊಂದು ವಿಶೇಷ. ‘ಭಾರತದಲ್ಲಿಯೇ ಬಯೋಗ್ಯಾಸ್‌ ವಾಹನಕ್ಕೆ ಪರವಾನಗಿ ತೆಗೆದುಕೊಂಡವರಲ್ಲಿ ನಾನೇ ಮೊದಲಿಗ’ ಎಂದು ಹೆಮ್ಮೆಯಿಂದ  ಹೇಳಿಕೊಳ್ಳುತ್ತಾರೆ ಆನಂದ್‌.ಸಣ್ಣ ನಗರಗಳಲ್ಲಿಯೂ ಬಯೋಗ್ಯಾಸ್‌ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ಇರುವವರು ‘ಮಾಲ್ಟೂಸ್‌ ಅಗ್ರಿ ಪ್ರೈವೇಟ್‌ ಲಿಮಿಟೆಡ್‌’ ಸ್ಥಾಪಕ ಆನಂದ್‌ (9880039666) ಅಥವಾ ಮಾರುಕಟ್ಟೆ ವಿಭಾಗದ ಪ್ರಮೋದ್‌ ಸಿದ್ದಲಿಂಗಯ್ಯ (7259835825) ಅವರನ್ನು ಸಂಪರ್ಕಿಸಬಹುದು.

*

ಬಯೋಗ್ಯಾಸ್ ಘಟಕದ ಕಾರ್ಯ ನಿರ್ವಹಣೆ

ಮೊದಲಿಗೆ ಹಸಿ ಕಸವನ್ನು ಬಯೋಗ್ಯಾಸ್ ಡೈಜೆಸ್ಟೆರ್ ಒಳಗೆ ಹಾಕಲಾಗುತ್ತದೆ. ಹಸಿ ಕಸವನ್ನು ಸೂಕ್ಷ್ಮ ಜೀವಿಗಳು ನೀರು ಮತ್ತು ಬಯೋಗ್ಯಾಸ್ ಆಗಿ ಪರಿವರ್ತಿಸುತ್ತದೆ. ಬಯೋಗ್ಯಾಸ್‌ನಲ್ಲಿ  ಮೀಥೇನ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಇರುತ್ತದೆ. ಬಯೋಗ್ಯಾಸ್ ಅನ್ನು ಹಾಗೆಯೇ ಉಪಯೋಗಿಸಬಹುದಾದರೂ ಎಲ್‌ಪಿಜಿ ಗುಣಮಟ್ಟಕ್ಕೆ ಕೊಂಡೊಯ್ಯಲು ಸ್ಕ್ರಬ್ಬಿಂಗ್ ಮುಖಾಂತರ ಕಾರ್ಬನ್ ಡೈ ಆಕ್ಸೈಡ್ ಅನ್ನು ನಿರ್ಮೂಲನೆ ಮಾಡಲಾಗುತ್ತದೆ.ಹೀಗೆ ಶುದ್ಧೀಕರಿಸಿದ ಬಯೋಗ್ಯಾಸ್‌ನಲ್ಲಿ ಶೇ 92ವರೆಗೂ ಮೀಥೇನ್ ಲಭ್ಯವಿರುತ್ತದೆ. ಬಯೋಗ್ಯಾಸ್ ಘಟಕಕ್ಕೆ ಮನೆಯಲ್ಲಿ ಉತ್ಪತ್ತಿಯಾದ ಬಹುಪಾಲು ಎಲ್ಲ ಹಸಿ ಕಸವನ್ನೂ ಉಪಯೋಗಿಸಬಹುದು. ಕೊಳೆತ ತರಕಾರಿ, ಹಣ್ಣು, ಹುಳಿ ಬಂದ ಮೊಸರು, ಒಣಗಿದ ಹೂವು, ಸೆಗಣಿ, ಅಡುಗೆ ಎಣ್ಣೆ , ದೋಸೆ ಹಿಟ್ಟು ಹೀಗೆ... ಎಲ್‌ಪಿಜಿ ಉಪಯೋಗಿಸಬಹುದಾದ ಕಡೆಗಳಲ್ಲೆಲ್ಲ ಬಯೋಗ್ಯಾಸ್ ಅನ್ನು ಇಂಧನವಾಗಿ ಉಪಯೋಗಿಸಬಹುದು.ಪೂರಕ ಮಾಹಿತಿ: ಪ್ರಮೋದ್‌ ಸಿದ್ದಲಿಂಗಯ್ಯ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.