ದಕ್ಷಿಣ ಕನ್ನಡ ಜಿ.ಪಂ: ಗೊಂದಲಮಯವಾಯ್ತು ವಿಶೇಷ ಸಭೆ.ಸ್ಥಾಯಿ ಸಮಿತಿ ರಚನೆ ಆಯ್ಕೆ ಕಸರತ್ತು

7

ದಕ್ಷಿಣ ಕನ್ನಡ ಜಿ.ಪಂ: ಗೊಂದಲಮಯವಾಯ್ತು ವಿಶೇಷ ಸಭೆ.ಸ್ಥಾಯಿ ಸಮಿತಿ ರಚನೆ ಆಯ್ಕೆ ಕಸರತ್ತು

Published:
Updated:
ದಕ್ಷಿಣ ಕನ್ನಡ ಜಿ.ಪಂ: ಗೊಂದಲಮಯವಾಯ್ತು ವಿಶೇಷ ಸಭೆ.ಸ್ಥಾಯಿ ಸಮಿತಿ ರಚನೆ ಆಯ್ಕೆ ಕಸರತ್ತು

ಮಂಗಳೂರು: ಕಡೆ ಗಳಿಗೆಯಲ್ಲಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ರಚನೆಗೆ ಕರೆದಿದ್ದ ಗುರುವಾರದ ಸಭೆ ಗೊಂದಲಮಯವಾಯಿತು. ಕಾಂಗ್ರೆಸ್ ಸದಸ್ಯರು ಸ್ಥಾಯಿ ಸಮಿತಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಒತ್ತಡವನ್ನೂ ಹೇರಿದರು.ಐದು ಸ್ಥಾಯಿ ಸಮಿತಿಗಳಲ್ಲಿ ನಾಲ್ಕರ ಚುನಾವಣಾ ಪ್ರಕ್ರಿಯೆ ಮುಗಿದಿತ್ತು. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ರಚನೆ ಪ್ರಕ್ರಿಯೆ ವೇಳೆ ಕಾಂಗ್ರೆಸ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿತು. ಸಭೆಯನ್ನು ಮುಂದೂಡಿ ಊಟದ ವಿರಾಮ ಪ್ರಕಟಿಸಲಾಯಿತು. ಬಿಜೆಪಿ ಸದಸ್ಯರ ಪ್ರತ್ಯೇಕ ಸಭೆ, ಕೊನೆ ಗಳಿಗೆ ಚರ್ಚೆ ಈ ಕಗ್ಗಂಟನ್ನು ಬಿಡಿಸುವಲ್ಲಿ ಯಶಸ್ವಿಯಾಗಲಿಲ್ಲ.ಬಿಜೆಪಿಯ ಹಿರಿಯ ಸದಸ್ಯೆ ಆಶಾ ತಿಮ್ಮಪ್ಪ ಎರಡು ಸಮಿತಿಗಳಲ್ಲಿ ಸ್ಥಾನ ಪಡೆದಿದ್ದರು. ಎರಡರಲ್ಲೊಂದು ಸ್ಥಾನವನ್ನು ಅವಕಾಶ ವಂಚಿತರಾಗುವ ಏಕಮಾತ್ರ ಸದಸ್ಯೆ ಅಂಬಿಕಾ ಶೆಟ್ಟಿ ಅವರಿಗೆ ನೀಡುವಂತೆ ಕಾಂಗ್ರೆಸ್ ಹಿರಿಯ ಸದಸ್ಯರಾದ ಎಂ.ಎಸ್.ಮಹಮದ್ ಮತ್ತು ಕೆ.ಸಿ.ಮಮತಾ ಗಟ್ಟಿ ಪಟ್ಟುಹಿಡಿದರು.

 

‘2-3 ದಿನದ ಸಮಯ ಕೇಳಿದ್ದೀರಿ. ನ್ಯಾಯ ಒದಗಿಸಿಕೊಡುವ ವಿಶ್ವಾಸವಿದೆ. ಇಲ್ಲದಿದ್ದರೆ ನಾವೆಲ್ಲ ರಾಜೀನಾಮೆ ಪತ್ರ ಸಿದ್ಧ ಮಾಡಿಟ್ಟುಕೊಂಡಿದ್ದೇವೆ’ ಎಂದು ಮಹಮದ್ ಎಚ್ಚರಿಕೆ ಮಾತು ಹೇಳಿದರು.ರಾಜೀಸೂತ್ರಕ್ಕೆ ಬರಲಾಗದ ಕಾರಣ, ‘ನಾಲ್ಕು ಸಮಿತಿಗಳ ರಚನೆ ಪ್ರಕ್ರಿಯೆ ಮುಗಿದಿದೆ. ಕೊನೆಯ (ಕೃಷಿ ಮತ್ತು ಕೈಗಾರಿಕೆ) ಸ್ಥಾಯಿ ಸಮಿತಿ ಆಯ್ಕೆಯನ್ನು ಮಾತ್ರ ಬಾಕಿಯಿಟ್ಟು, ಮುಂದೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಘೋಷಿಸಿದ ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಗೊಂದಲದ ಸಭೆಗೆ ಮಂಗಳ ಹಾಡಿದರು.ಸ್ಥಾಯಿ ಸಮಿತಿಗಳ ರಚನೆ ಪ್ರಕ್ರಿಯೆಗೆ ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು.  35 ಸದಸ್ಯರ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ 24 ಮತ್ತು ಕಾಂಗ್ರೆಸ್ 11 ಸದಸ್ಯರನ್ನು ಹೊಂದಿದ್ದವು. ಕಾಂಗ್ರೆಸ್‌ನ 10 ಮಂದಿ ಒಂದೊಂದು ಸಮಿತಿಗೆ ಇಬ್ಬರಂತೆ ಅವಕಾಶ ಪಡೆದಿದ್ದರು. ಅಂಬಿಕಾ ಶೆಟ್ಟಿ (ಶಿರ್ತಾಡಿ ಜಿ.ಪಂ ಸದಸ್ಯೆ) ಅವರಿಗೆ ಅವಕಾಶ ನೀಡದಿದ್ದರೆ ಉಳಿದ ಸಮಿತಿಗಳ ಸದಸ್ಯತ್ವಕ್ಕೂ ಕಾಂಗ್ರೆಸ್ ಸದಸ್ಯರು ರಾಜೀನಾಮೆ ನೀಡುವರು ಎಂದು ಮಹಮದ್ ‘ಒತ್ತಡ’ ಹೇರಿದರು.

 

‘ಕೊನೆಯ ಸಮಿತಿಯಲ್ಲಿ ನಮ್ಮ ಪಕ್ಷದ ಮೂವರು ಇರುತ್ತಾರೆ ಎಂಬ ಭರವಸೆ ಇತ್ತು. ನಮ್ಮ ಒಬ್ಬ ಸದಸ್ಯರನ್ನು- ಅದೂ ಮಹಿಳೆಯನ್ನು- ಕೈಬಿಡಲು ತಯಾರಿಲ್ಲ. ಸಮಸ್ಯೆ ಇದ್ದರೆ ಅಧ್ಯಕ್ಷರ ಚೇಂಬರಿಗೆ ನಮ್ಮನ್ನು ಕರೆಯಬಹುದಿತ್ತು. ಸೇರಿಸುವುದಾದರೆ 11 ಮಂದಿಯನ್ನೂ ಸೇರಿಸಿ. 10 ಜನ ಇರುವುದಿಲ್ಲ. ಇಲ್ಲವಾದರೆ ನಮ್ಮನ್ನೂ ಸಮಿತಿಯಿಂದ ಪೂರ್ಣವಾಗಿ ಕೈಬಿಡಿ. ಯಾವುದಕ್ಕೂ ಇವತ್ತೇ ನಿರ್ಧರಿಸಿ’ ಎಂದು ಮಹಮದ್ ಆಗ್ರಹಿಸಿದರು.‘ನಿಮಗೆ ನಮ್ಮ ಸಂಪೂರ್ಣ ಸಹಕಾರ ಇದೆ. ರಾಜಕೀಯವಾಗಿ ನಾವು ಖಂಡಿತಕ್ಕೂ ಹೋರಾಟ ಮಾಡುವುದಿಲ್ಲ’ ಎಂಬ ಭರವಸೆಯೂ ಬಂದಿತು.ಅಧ್ಯಕ್ಷರು ಅವಕಾಶ ತೆಗೆದುಕೊಂಡು ಬಿಕ್ಕಟ್ಟು ಸರಿಪಡಿಸಲಿ. ಒಬ್ಬರನ್ನು ಕೈಬಿಡಲು ನಾವು ತಯಾರಿಲ್ಲ ಎಂದು ಮಮತಾ ಧ್ವನಿಗೂಡಿಸಿದರು. ವಿರಾಮ ನಂತರವೂ ಒಮ್ಮತದ ನಿರ್ಧಾರ ಬರಲಿಲ್ಲ. ಎರಡು ದಿನ ಕಾಲಾವಕಾಶ ಕೊಡುವಂತೆ ಅಧ್ಯಕ್ಷೆ ಶೈಲಜಾ ಭಟ್ ಮನವಿ ಮಾಡಿದರು.‘ಈ ಬಗ್ಗೆ ಎಲ್ಲರೂ ಒಪ್ಪಿದರೆ, ಯಾರಾದರೂ ಒಬ್ಬರು ರಾಜೀನಾಮೆ ಕೊಟ್ಟರೆ ಇನ್ನೊಬ್ಬರನ್ನು ಸೇರಿಸಬಹುದು. ಮುಂದೆ ಸರಿಪಡಿಸಲು ಅವಕಾಶವಿದೆ’ ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಪಿ.ಶಿವಶಂಕರ್ ಸಲಹೆ ನೀಡಿದರು.ನಾಲ್ಕು ಸ್ಥಾಯಿ ಸಮಿತಿಗಳ ಆಯ್ಕೆ ಸಾಂಗವಾಗಿ ಮುಗಿದಿತ್ತು. ಸಾಮಾನ್ಯ ಸ್ಥಾಯಿ ಸಮಿತಿ,  ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸಮಿತಿಗೆ ಸದಸ್ಯರ ಆಯ್ಕೆ ವೇಳೆ ಯಾವುದೇ ಸಮಸ್ಯೆ ತಲೆದೋರಿರಲಿಲ್ಲ.

 

ಹಿರಿಯ ಸದಸ್ಯ ಆಶಾ ತಿಮ್ಮಪ್ಪ ಗೌಡ, ಹಣಕಾಸು ಮತ್ತು ಲೆಕ್ಕಪತ್ರ ಪರಿಶೋಧನೆ ಸ್ಥಾಯಿ ಸಮಿತಿ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಕೊನೆಯ ಸ್ಥಾಯಿ ಸಮಿತಿಯಲ್ಲಿ ತಮ್ಮ ಪಕ್ಷದ ಮೂವರಿಗೆ- ಆ ಮೂಲಕ ಪಕ್ಷದ ಎಲ್ಲರಿಗೂ ಸ್ಥಾನ ಸಿಕ್ಕಿದಂತಾಗುತ್ತದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ ಬುಡಮೇಲಾಗಿದ್ದು ಬಿಕ್ಕಟ್ಟಿಗೆ ಕಾರಣವಾಯಿತು.(ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ನವೀನ್ ಕುಮಾರ್ ಮೇನಾಲ, ಆಶಾ ತಿಮ್ಮಪ್ಪ ಗೌಡ, ತುಳಜಿ ಜಿ.ಪೂಜಾರಿ ಹಾರಬೆ, ಕೇಶವ ಗೌಡ ಬಜತ್ತೂರು, ಆಶಾ ಸುವರ್ಣ, ಕುಮಾರಿ, ಶೈಲೇಶ್ ಕುಮಾರ್ ಕುರ್ತೋಡಿ ಅವರ ಹೆಸರನ್ನು ನಾಮಕರಣ ಮಾಡಲಾಗಿತ್ತು.)

ಸಾಮಾನ್ಯ ಸ್ಥಾಯಿ ಸಮಿತಿಗೆ ಜಿಪಂ ಉಪಾಧ್ಯಕ್ಷರೇ ಅಧ್ಯಕ್ಷೆಯಾಗುವುದು ವಾಡಿಕೆ. ಹಣಕಾಸು ಮತ್ತು ಲೆಕ್ಕಪರಿಶೋಧನೆ, ಯೋಜನೆ ಸ್ಥಾಯಿ ಸಮಿತಿಗೆ ಜಿಪಂ ಅಧ್ಯಕ್ಷರೇ ಅಧ್ಯಕ್ಷರಾಗುವುದೂ ಸಂಪ್ರದಾಯ.ಜಿ.ಪಂ. ಸ್ಥಾಯಿ ಸಮಿತಿ


ಸಾಮಾನ್ಯ ಸ್ಥಾಯಿ ಸಮಿತಿ: ಧನಲಕ್ಷ್ಮಿ ಜನಾರ್ದನ(ಅಧ್ಯಕ್ಷೆ), ಎಂ.ಪಕೀರ, ಸಂತೋಷ್ ಕುಮಾರ್ ರೈ ಬೋಳಿಯಾರ್, ಸುನಿತಾ ಸುಚರಿತ ಶೆಟ್ಟಿ, ನಳಿನಿ ಶೆಟ್ಟಿ, ಕೆ.ಸಿ.ಮಮತಾ ಗಟ್ಟಿ, ಕೆ.ಎಸ್.ದೇವರಾಜ್.ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ: ಕೆ.ಟಿ.ಶೈಲಜಾ ಭಟ್, ಆಶಾ ತಿಮ್ಮಪ್ಪ ಗೌಡ, ಆರ್.ಚೆನ್ನಪ್ಪ ಕೋಟ್ಯಾನ್, ರೀತೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಸರಸ್ವತಿ ಕಾಮತ್, ದೇವಕಿ ಸಂಜೀವ ಗೌಡ.ಸಾಮಾಜಿಕ ನ್ಯಾಯ ಸಮಿತಿ:

ಜನಾರ್ದನ ಗೌಡ, ಕೆ.ಮೀನಾಕ್ಷಿ, ಬಾಲಕೃಷ್ಣ ಸುವರ್ಣ, ಕೆ.ಕೊರಗಪ್ಪ ನಾಯ್ಕ, ಸಿ.ಕೆ.ಚಂದ್ರಕಲಾ, ಎನ್.ಎಸ್.ಕರೀಂ, ಮೆಲ್ವಿನ್ ಡಿಸೋಜ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ: ಈಶ್ವರ ಕಟೀಲು, ಸತೀಶ್ ಕುಂಪಲ, ಎಚ್.ಎಸ್.ಸಾವಿತ್ರಿ, ಜಯಶ್ರೀ, ಗಿರಿಜಾ, ಎಂ.ಎಸ್.ಮಹಮದ್, ಯಶವಂತಿ ಆಳ್ವ.ಅಧ್ಯಕ್ಷೆಗೇ ಆಮಂತ್ರಣವಿಲ್ಲ!

ಮಂಗಳೂರು: ತೋಟಗಾರಿಕೆ ಇಲಾಖೆ, ದ.ಕ. ಜಿ.ಪಂ, ತೋಟಗಾರಿಕಾ ಸಂಘ ಏರ್ಪಡಿಸುವ ‘ಫಲಪುಷ್ಪ ಪ್ರದರ್ಶನ’ ಆಹ್ವಾನಪತ್ರಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹೆಸರೇ ಇಲ್ಲ!

ಗುರುವಾರ ಸ್ಥಾಯಿ ಸಮಿತಿ ರಚನೆ ಸಮಿತಿ ಸಭೆಯಲ್ಲಿ ಆಹ್ವಾನ ಪತ್ರಿಕೆಯಲ್ಲಿನ ಈ ಲೋಪದ ಬಗ್ಗೆಯೂ ಚರ್ಚೆ ಆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂತೋಷ್ ಕುಮಾರ್ ರೈ, ‘ಆಹ್ವಾನಪತ್ರಿಕೆಯಲ್ಲಿ ಜಿಪಂ ಎಂದು ಬರೆಯಲಾಗಿದೆ. ಆದರೆ ಅಧ್ಯಕ್ಷರ ಹೆಸರು ಹಾಕದೇ ಅಗೌರವ ತೋರಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.‘ಈ ಪ್ರದರ್ಶನವನ್ನು ಜಿ.ಪಂ ಏರ್ಪಡಿಸುತ್ತಿಲ್ಲ. ಆದರೆ ಜಿ.ಪಂ ಎಂದು ಹಾಕಿದ ಮೇಲೆ ಹೆಸರು ಇರಬೇಕಿತ್ತು. ಏಕೆ ಹಾಕಿಲ್ಲ ಎಂದು ವಿಚಾರಿಸುತ್ತೇನೆ’ ಎಂದು ಸಿಇಒ ಪಿ.ಶಿವಶಂಕರ್ ಸಮಜಾಯಿಷಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry