ದಕ್ಷ ಗಾಯನ, ಸುಂದರ ಸಟ್ರಿಯ

ಗುರುವಾರ , ಮೇ 23, 2019
27 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ದಕ್ಷ ಗಾಯನ, ಸುಂದರ ಸಟ್ರಿಯ

Published:
Updated:

ಬೆಂಗಳೂರು ಲಲಿತಕಲಾ ಪರಿಷತ್ತಿನ 777ನೇ ಕಾರ್ಯಕ್ರಮವಾಗಿ ಬಳ್ಳಾರಿ ಎಂ. ರಾಘವೇಂದ್ರ ಅವರ ಗಾಯನ ಕಾರ್ಯಕ್ರಮ ನಡೆಯಿತು. ಒಂದು ಪರಿಚಿತ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ರಾಘವೇಂದ್ರ, ಬಾಲ್ಯದಿಂದಲೇ ತಂದೆ ಎಂ. ವೆಂಕಟೇಶಾಚಾರ್ ಹಾಗೂ ಚಿಕ್ಕಪ್ಪ ಶೇಷಗಿರಿ ಆಚಾರ್ ಅವರಲ್ಲಿ ಸಂಗೀತ ಕಲಿತು, ವಿದ್ವತ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಗಾಯನವಲ್ಲದೆ ಮೋರ್ಚಿಂಗ್ ಮತ್ತು ಕೊನಕೋಲ್‌ಗಳಲ್ಲೂ ಸಾಧನೆ ಮಾಡಿದ್ದಾರೆ ಹಾಗೂ ಕೆಲ ವರ್ಷಗಳಿಂದ ಮೈಸೂರು ಬಾನುಲಿಯ ಕಾರ್ಯಕ್ರಮ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತ್ರಿಸ್ಥಾಯಿಗಳಲ್ಲೂ ಸುಲಲಿತವಾಗಿ ಸಂಚರಿಸುವ ಕಂಠದಿಂದ ರಾಘವೇಂದ್ರ ಕಾಶೀರಾಮಕ್ರಿಯ ರಾಗವನ್ನು ಸಾಂಪ್ರದಾಯಿಕವಾಗಿ ವಿಸ್ತರಿಸಿದರು. ನೆರವಲ್‌ನೊಂದಿಗೆ ಅರಳಿಸಿದ  `ರಾಮನಾಥಂ ಭಜೇಹಂ~, ಕಛೇರಿಯ ಘನತೆಯನ್ನು ವರ್ಧಿಸಿತು. ಮುಂದಿನ ಮೂರು ಕೀರ್ತನೆಗಳು ಚುಟುಕಿನಲ್ಲೂ ರಸವತ್ತಾಗಿ ರಂಜಿಸಿತು. ಮಾಂಪಾಲವೇಸಿತ, ಈಶ ಪಾಹಿಮಾಂ ಹಾಗೂ ಚಿಟ್ಟೆಸ್ವರದೊಂದಿಗೆ  ರಾಕಾಶಶಿವದನ ಕ್ಲಿಪ್ತ ಅವಧಿಯಲ್ಲಾದರೂ ಬೆಳಗಿತು. ತೋಡಿ ರಾಗದ ಆಲಾಪನೆ, ನೆರವಲ್ (ತಾರಕ ಮಂತ್ರೋಪಾಸಕಂ), ಸ್ವರ ಪ್ರಸ್ತಾರದೊಂದಿಗೆ ಯೋಗಾಂತನಿತ್ಯಂ ಉಪಾಸ್ಮಿತೆ ಶ್ರಿರಾಮದೂತಂ (ಬಳ್ಳಾರಿ ಶೇಷಗಿರಿ ಆಚಾರ್) ನಿರೂಪಿಸಿದರು. ಆ ಹಂತದಲ್ಲಿ ಹಿರಿಯರಾದ ಟಿ.ಎ.ಎಸ್. ಮಣಿ ಅವರು ನುಡಿಸಿದ ಮೃದಂಗದ ತನಿ ಕಿರಿಯರಿಗೆ ಮಾರ್ಗದರ್ಶಕವಾದುದು. ಎ.ಎಸ್.ಎನ್. ಸ್ವಾಮಿ ಅವರು ಖಂಜರಿಯಲ್ಲಿ ಕಛೇರಿಯ ಉದ್ದಕ್ಕೂ ಅನುಸರಿಸಿ ನುಡಿಸಿದರು. ದಾಸರ ನೀನೇ ಬಲ್ಲಿದನೊ  ಹಾಗೂ ಎನಗೂ ಆಣೆ ರಂಗ ನಿನಗೂ ಆಣೆ ಮತ್ತು ಭಜನ್ ರಾಮನಾಮ ರಸಪೀಜೆ - ಭಾವಪೂರ್ಣವಾಗಿ ಮೂಡಿತು. ಲಯಕಾರಿಯಾದ ತಿಲ್ಲಾನದೊಂದಿಗೆ ಮಂಗಳ ಹಾಡಿದರು. ಎಚ್. ಎಂ. ಸ್ಮಿತಾ ಪಿಟೀಲಿನಲ್ಲಿ ತನ್ನ ಪ್ರತಿಭೆಯನ್ನು ಮತ್ತೊಮ್ಮೆ ಶ್ರುತಪಡಿಸಿದರು.

`ಮಾಲಿ~ಗೆ ನಾದನಮನ

ವಿ. ಮಾಧವನ್ ನಾಯರ್ ಅವರು ಓರ್ವ ಹಿರಿಯ ಪತ್ರಿಕೋದ್ಯಮಿಯಾಗಿ, 53 ಪುಸ್ತಕಗಳ ಲೇಖಕರಾಗಿ, `ಮಾಲಿ~  ಎಂಬ ನಾಮಧೇಯದಲ್ಲಿ ಕವಿಯಾಗಿ, ಜನಪ್ರಿಯ `ಕೇರಳ ಸಂಗೀತಂ~ ಕರ್ತೃವಾಗಿ, ನಾಟಕಕಾರರಾಗಿ, ಕಥಕ್ಕಳಿಯ ಶೋಧಕರಾಗಿ, ಕ್ರೀಡಾಪಟು ಹಾಗೂ ಕೇರಳ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿ ಸಾಂಸ್ಕೃತಿಕ ಲೋಕದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ. ಅವರ ಸ್ಮರಣಾರ್ಥ ವಿಮರ್ಶಕಿ ಮಾಧವಿ ರಾಮ್‌ಕುಮಾರ್ ಪ್ರಾಯೋಜಿಸಿದ್ದ ಗಾಯನ ಕಾರ್ಯಕ್ರಮ ಭಾನುವಾರದಂದು ಎಂಇಎಸ್ ಕಲಾವೇದಿಯಲ್ಲಿ ನಡೆಯಿತು.

ಗಾಯಕಿ ವಾಣಿ ಸತೀಶ್ ಸಹ ಸಂಗೀತ ಮನೆತನದಿಂದ ಬಂದು, ಹಿರಿಯರಿಂದ ಕಲಿತು ರಾಜ್ಯದ ಒಳ ಹೊರಗೆ ಹಾಡಿ, ಪರಿಚಿತರಾಗುತ್ತಿರುವ ಕಲಾವಿದೆ. ಯುವ ಕಲಾವಿದೆ ಅದಿತಿ ಕೆ. ಪ್ರಕಾಶ್ (ಪಿಟೀಲು) ಅವರೊಂದಿಗೆ ಅನುಭವೀ ವಾದ್ಯಗಾರರಾದ ಸಿ. ಚೆಲುವರಾಜ್ (ಮೃದಂಗ) ಹಾಗೂ ಸುಕನ್ಯಾ ರಾಂಗೋಪಾಲ್ ಒತ್ತಾಸೆ ನೀಡಿದರು. ಪರಿಚಿತ ಇಂತಚಾಲ  ವರ್ಣದೊಂದಿಗೆ ಪ್ರಾರಂಭಿಸುತ್ತಾ ಕಛೇರಿಗೆ ಭದ್ರ ಬುನಾದಿ ಹಾಕಿಕೊಂಡರು. ಉತ್ತಮ ರಚನೆಗಳಲ್ಲಿ ಒಂದಾದ ಸರಸೀರುಹಾಸನ ಪ್ರಿಯೆ ವನ್ನು ಸ್ವಲ್ಪ ಸ್ವರದೊಂದಿಗೆ ಮಧ್ಯ ಗತಿಯಲ್ಲಿ ಹಾಡಿದರು. ತ್ಯಾಗರಾಜರು ಭಕ್ತಿಯ ಪಾರಮ್ಯವನ್ನು ಎತ್ತಿ ತೋರಿಸುವ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಶಬರಿಯ ಭಕ್ತಿಗೆ ಮೆಚ್ಚಿ, ಆಕೆಯಿರುವ ಸ್ಥಳಕ್ಕೆ ತಾನೇ ಬಂದು ರಾಮಚಂದ್ರ ದರ್ಶನ ನೀಡುತ್ತಾನೆ. ಅವನಿಗೆ ರುಚಿಕರವಾದ ಹಣ್ಣುಗಳನ್ನು ತಿನ್ನಿಸಿ, ಆತಿಥ್ಯ ನೀಡಿ ಶಬರೀ ಕೃತಾರ್ಥಳಾಗುತ್ತಾಳೆ! ಈ ಭಕ್ತಿ ಭಾವಕ್ಕೆ ಮುಖಾರಿ ರಾಗ ಸುಂದರವಾಗಿ ಹೊಂದಿಸಿದ್ದಾರೆ. ಈ ಕೀರ್ತನೆಯನ್ನು ವಾಣಿ ಭಾವಪೂರ್ಣವಾಗಿ ಹಾಡಿ, ಮೆಚ್ಚುಗೆ ಗಳಿಸಿದರು. ಮುಂದಿನ ಕೃತಿ  ಪರಿದಾನಮಿಚ್ಚಿತೆ ಸಹ ರಾಗಭಾವದಿಂದ ಗಮನ ಸೆಳೆಯಿತು. ಮಾರಮಣನ್  ನಂತರ ಮಾಧವನ್ ನಾಯರ್ (ಮಾಲಿ) ಅವರು ತಂದೆ ತಾಯಿಯರನ್ನು ಕುರಿತ ಮಾತಾಪಿತಾ  ಆಯ್ದರು. ವಿಳಂಬದಲ್ಲಿ ಆ ಭಾವ ಹಸನಾಗಿ ಹೊಮ್ಮಿತು. ಸ್ವಲ್ಪ ದ್ರುತ ಕಾಲದಲ್ಲಿ ಎಂಥ ಪುಣ್ಯವೇ ಗೋಪಿ  ದೇವರನಾಮ ಹಾಡಿ, ಕಾರ್ಯಕ್ರಮದ ಪ್ರಧಾನ ಕೃತಿಗೆ ಸರಿದರು. ಘನವಾದ  ನಿಧಿಚಾಲ ಸುಖಮಾ  ವಿಸ್ತರಿಸಿದರು. ತಾರಸ್ಥಾಯಿಯಲ್ಲಿ ಕಂಠ (ಸ್ವರಸ್ಥಾನ) ಸ್ವಲ್ಪ ವೆಲ್ತಿಯಾಗುತ್ತಿದ್ದರೂ, ನೆರವಲ್ (ದಮಶಮ ಮನು ಗಂಗಾ ಸ್ನಾನಮು ಸುಖಮಾ?) ಹಾಗೂ ಚುರುಕಿನ ಸ್ವರ ಪ್ರಸ್ತಾರಗಳಿಂದ ಕೃತಿ-ರಾಗಗಳಿಗೆ ಪೂರ್ಣತ್ವ ಕೊಡುವ ಪ್ರಯತ್ನ ಮಾಡಿದರು. ಮಧ್ಯಮ ಶ್ರುತಿಯಲ್ಲಿ  ಜಗದೋದ್ಧಾರನಾ ಹಾಡಿ ಮಂಗಳದೊಂದಿಗೆ ಮುಕ್ತಾಯ ಮಾಡಿದರು.

ಸುಂದರ ಸಟ್ರಿಯ

ಅಸ್ಸಾಂನ ಅಭಿನಯ ಡಾನ್ಸ್ ಅಕಾಡೆಮಿಯ ಸಟ್ರಿಯ ಡಾನ್ಸ್ ಒಂದು ಭಿನ್ನ ಅನುಭವ ನೀಡಿತು. ಒಂದು ಸ್ವಾಗತಾರ್ಹ ಬದಲಾವಣೆ ತಂದಿತು. ಅಸ್ಸಾಂನ ಸಟ್ರಿಯ ನೃತ್ಯ ಪ್ರಾದೇಶಿಕ ದೃಶ್ಯ, ರುಚಿ ಒಳಗೊಂಡಿರುವಂಥದು. ಸ್ಥಳೀಯ ಉಡುಪು, ಹಾವಭಾವಗಳಿಂದ, ವಿಳಂಬದಲ್ಲಿ ಸಾಗಿದ ನೃತ್ಯಕ್ಕೆ ಮೆಲುದನಿಯ, ಮೃದು ಮಧುರ ಸಂಗೀತದ ಹಿನ್ನೆಲೆ ಇತ್ತು. ಅನಿತಾ ಶರ್ಮರ ನೇತೃತ್ವದಲ್ಲಿ ನಂದಿ, ಚಲಿಯಾ, ಉಮಾ ರುದ್ರ ಸಂವಾದ   ಮುಂತಾದವುಗಳನ್ನು ಸುಲಲಿತವಾಗೂ, ಸುಂದರವಾಗೂ ನರ್ತಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry