ಶುಕ್ರವಾರ, ಮೇ 7, 2021
23 °C

ದಡಕ್ಕೆ ಅಪ್ಪಳಿಸಿ ಸಮುದ್ರ ಸೇರಿದ ಭ್ರಷ್ಟಾಚಾರ ವಿರೋಧಿ ಅಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣೇಶ ಚೌತಿಗೆ ಶೇ 51ರಷ್ಟು ಪರಿಸರ ಸ್ನೇಹಿ ಗಣಪತಿ ವಿಗ್ರಹಗಳ ವಿಸರ್ಜನೆ ಆಯಿತು ಅಂತ ಬೆಂಗಳೂರಿನಲ್ಲಿ ವರದಿಯಾಗಿದೆ. ಇದಕ್ಕೆ ಚೌತಿಯ ಮುನ್ನವೇ ಕೆಲ ವಾರಗಳಿಂದಲೂ ಮಾಧ್ಯಮಗಳಲ್ಲಿ ಮಣ್ಣಿನ ಗಣಪತಿ, ವರ್ಣ ರಹಿತ ಗಣಪತಿ, ಪರಿಸರ ಸ್ನೇಹಿ ಎಂಬ ವಿಷಯಗಳ ಬಗ್ಗೆ ಸಾಕಷ್ಟು ಪ್ರಚಾರ ಪಡೆದಿತ್ತು. ಅಂತೂ ಜನರು ತಾವಾಗಿಯೇ ಕಣ್ಣು ಕುಕ್ಕುವ ಗುಲಾಬಿ, ಹಳದಿ ವರ್ಣಗಳ ಗಣಪತಿಯನ್ನು ಹಿಂದಿಟ್ಟು, ಗೌರಿ ತನಯನನ್ನು ಸಹಜವಾಗಿಯೇ ಮಣ್ಣಿನ ರೂಪದಲ್ಲಿ ಹೊತ್ತೊಯ್ದರು. ಕೆಲವು ಶಾಲೆಗಳಲ್ಲಿ ಮಕ್ಕಳಿಂದಲೇ ಗಣಪತಿಯನ್ನು ಮಾಡಿಸಿ, ಮನೆಗೆ ಕಳುಹಿಸಿದರು. ಇದೆಲ್ಲವೂ ಜನಜಾಗೃತಿಯಲ್ಲಿ, ಜನರ ನಿರ್ಣಯ ತೆಗೆದುಕೊಳ್ಳುವಲ್ಲಿ ಮಾಧ್ಯಮದ ಪ್ರಭಾವ ಮತ್ತು ಪರಿಣಾಮವನ್ನು ತಿಳಿಸುತ್ತವೆ.ಅಂತೂ ಕೆರೆಗಳ ಸಂರಕ್ಷಣೆಗೆ ಈ ಕ್ರಮ ಕೈಗೊಂಡಿದ್ದು ಒಂದು ಉತ್ತಮ ಬೆಳವಣಿಗೆ ಹಾಗೂ ಸುಧಾರಣೆ. ಮುಂಬರುವ ದಿನಗಳಲ್ಲಿ ಇದೇ ಪದ್ಧತಿ ಜನ ಬಳಕೆಗೆ ಬರಲೂ ಬಹುದು. ಗಣಪತಿಯ ಅಲಂಕಾರಗಳಲ್ಲಿ ಅಣ್ಣಾ ಹಜಾರೆ ಮಿಂಚಿದ್ದು ಸುಳ್ಳಲ್ಲ. ಆದರೆ ಇಲ್ಲಿ ಅಣ್ಣಾ ಅವರ ಭ್ರಷ್ಟಾಚಾರ ವಿರೋಧಿ ಚಳವಳಿ ಮತ್ತು ಜನಲೋಕಪಾಲ್ ಕರಡಿನ ಬಗ್ಗೆ ಮಾತ್ರ ಚರ್ಚೆಯಾಯಿತೆ ಹೊರತು ನಿರ್ಮೂಲನೆಯಲ್ಲ! ಭ್ರಷ್ಟಾಚಾರ ನಿರ್ಮೂಲನೆಗೆ ಅದೆಷ್ಟು ದಶಕಗಳು ಬೇಕಾಗಬಹುದು ಅಂತ ಲೆಕ್ಕ ಹಾಕುವುದೇ ಕಷ್ಟವಾದೀತು. ಅಣ್ಣಾನೊಂದಿಗೆ ಕೈ ಜೋಡಿಸಿದವರಲ್ಲಿ, ಬಹುತೇಕರು ಈ ದುಡಿಮೆಯಲ್ಲದ, ಶ್ರಮವಿಲ್ಲದ ಹಣಕ್ಕೆ ಕೈ ಒಡ್ಡಿದವರೂ ಸೇರಿದ್ದರು. ಜೊತೆಗೆ ನೀಡಿದವರೂ ಇದ್ದರು.ಇವರೆಲ್ಲರು ಭ್ರಷ್ಟರಿಗೆ ಪಾಠ ಕಲಿಸಲು ಕೈ ಜೋಡಿಸಿದರೇ ಹೊರತು, ಲಂಚ ಕೊಡದಂತೆ ತಾವೇನೂ ಪಣ ತೊಡಲಿಲ್ಲ. ವ್ಯವಸ್ಥೆಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಹಣ ನೀಡುವ, ನಂತರ ಬಂದು ವಿರೋಧಿಸುವ ಗಟ್ಟಿತನವಿಲ್ಲದ ಜನರಿಗೆ ಹೇಳುವುದೇನು?ಆದರೆ, ಯಾರೂ ಇದನ್ನು ತಾತ್ವಿಕವಾಗಿ ಹೋಲಿಸಲು ಹೋಗಲೇ ಇಲ್ಲ. ಕೇವಲ ಅಹಿಂಸೆ ಹಾಗೂ ಸತ್ಯಾಗ್ರಹ, ಉಪವಾಸಗಳೇ ಗಾಂಧೀಜಿಯ ಮಂತ್ರವಾಗಿರಲಿಲ್ಲ. ಸರಳತನ, ಸ್ವಾವಲಂಬಿಯಾಗುವುದೇ ಮೂಲಮಂತ್ರವಾಗಿತ್ತು. ಈ ಚಳವಳಿಯಲ್ಲಿ ಜೋರು ಕೇಕೆ ಹಾಕಿದ, ಘೋಷಣೆ ಕೂಗಿದ, ಯುವಜನರು ಅದೆಷ್ಟು ಜನ ಲಂಚದ ಹಣ ಬೇಡ, ಆ ಮೂಲಕ ಬರುವ ಐಷಾರಾಮಿ ಅನುಕೂಲಗಳು ಬೇಡ ಎಂಬ ನಿರ್ಣಯ ಕೈಗೊಂಡರು?ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿ ಈ ಬಗ್ಗೆ ಜಾಣತನದಿಂದ ಪ್ರತಿಕ್ರಿಯಿಸಿದಳು. ಹೌದು, ನನ್ನಪ್ಪನಿಗೆ ಆಗಾಗ ಅವರ ಕಚೇರಿಗೆ ಸಂಬಂಧಿಸಿದವರು ಉಡುಗೊರೆಗಳನ್ನು ಕೊಡುತ್ತಾರೆ. ಅನೇಕ ಉಪಕಾರಗಳನ್ನೂ ಮಾಡುತ್ತಾರೆ. ಆದರೆ ಇದನ್ನೂ ಲಂಚವೆಂದು ಪರಿಗಣಿಸಬೇಕೆ? ಯಾವುದೋ ಕಂಪೆನಿ ನಮಗಾಗಿ ರಜೆಗಳನ್ನು ಆಯೋಜಿಸಿದರೆ ಅದನ್ನು ಲಂಚವೆನ್ನಬೇಕೆ? ನನ್ನ ಅಗತ್ಯಗಳನ್ನು ಪೂರೈಸಲು ನನ್ನಪ್ಪನ ಸಂಬಳದಿಂದ ಆಗಲಿಕ್ಕಿಲ್ಲ. ಆದರೆ ಹಾಗೇಂತ ನಾನೇಕೆ ಹೊಂದಾಣಿಕೆ ಮಾಡಿಕೊಳ್ಳಬೇಕು? ನಾನು ದುಡಿಯುವಾಗ ಲಂಚ ತೆಗೆದುಕೊಳ್ಳುವುದಿಲ್ಲ ಎಂದು ಖಂಡಿತವಾಗಿ ಹೇಳಬಲ್ಲೆ. ಆದರೆ ನನ್ನಪ್ಪನ ಕೈ ಕಟ್ಟಿಹಾಕಿ, ನನ್ನ ಜೀವನಶೈಲಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಅಸಾಧ್ಯ.ಬಹುತೇಕ ಎಲ್ಲ ವಿದ್ಯಾರ್ಥಿಗಳ ಮನೋಭಾವವೂ ಹೀಗೆ ಆಗಿತ್ತು. ಅತ್ಯಾಧುನಿಕ ಮೊಬೈಲ್ ಫೋನುಗಳು, ಐಪಾಡ್‌ಗಳು, ದ್ವಿಚಕ್ರ ವಾಹನ, ಕೆಲವೊಬ್ಬರು ಕಾರನ್ನೂ ಹೊಂದಿದ್ದರು. ಕಾಫಿಗೆ ಕಾಫಿ ಡೇ ಬಯಸುವ, ಪಾಕೆಟ್ ಮನಿಯ ಹೆಸರಿನಲ್ಲಿ ಸಾವಿರಗಟ್ಟಲೆ ಅಮ್ಮನಿಂದ ವಸೂಲಿ ಮಾಡುವ ಬಹುತೇಕ ಯುವಕರೂ ಇದೇ ಮಾತುಗಳನ್ನೇ ಹೇಳಿದ್ದರು. ನಾವು ಮಾತ್ರ ಇಂಥ ಕೆಲಸಗಳಿಗೆ ಸೇರುವುದಿಲ್ಲ.ಸರ್ಕಾರಿ ಕೆಲಸಕ್ಕೆ ಸೇರುವ ಬದಲು ಕಾರ್ಪೋರೆಟ್ ವಲಯ ಸೇರಿದರೆ ಲಂಚ ಕೇಳುವ ಜರೂರತ್ತು ಇರುವುದಿಲ್ಲ. ಆದರೆ ಈಗಿರುವ ವ್ಯವಸ್ಥೆಯಿಂದ ಒಂದೆರಡು ಮೆಟ್ಟಿಲು ಕೆಳಗಿಳಿದು, ಸರಳ ಜೀವನಕ್ಕೆ ಹೊಂದಿಕೊಳ್ಳುವುದು ಕಷ್ಟ ಎನ್ನುವುದು ಇವರ ಅಭಿಮತ.ಅಲ್ಲಿಗೆ ಮುಂದಿನ ಒಂದು ತಲೆಮಾರು ಬರುವವರೆಗೂ ಈ ಚಳವಳಿ ಕೇವಲ ನಿಯಂತ್ರಣಕ್ಕಾಗಿ ಹೆಣಗಬೇಕಾಗುತ್ತದೆಯೇ ಹೊರತು, ನಿರ್ಮೂಲನೆಗೆ ಅಲ್ಲ. ಇವರಲ್ಲಿಯೂ ಲಂಚ ಕೇಳದ ವಲಯಗಳನ್ನು ಹುಡುಕುತ್ತಿದ್ದಾರೆಯೇ ಹೊರತು, ಇಂಥ ಅವ್ಯವಸ್ಥೆಯಲ್ಲಿಯೇ ಸೆಡ್ಡು ಹೊಡೆಯುವ ಧೈರ್ಯವನ್ನು ಮಾತ್ರ ಯಾರೂ ತೋರುತ್ತಿಲ್ಲ.ಇದೇ ಮಾತನ್ನು ಲಂಚ ಕೇಳುವ ತರುವ ಅಧಿಕಾರಿಗಳ ಕುಟುಂಬದವರಿಗೂ ಅನ್ವಯಿಸಬಹುದು. ನಮ್ಮಳಗಿನ ಆಸೆ, ಆಕಾಂಕ್ಷೆಗಳಿಗೆ ಲಗಾಮು ಹಾಕಬೇಕು. `ಹಾಸಿಗೆ ಇದ್ದಷ್ಟು~ ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು. ಸರಳತನದ ಬದುಕಿಗೆ ಒಗ್ಗಿಕೊಂಡರೆ, ಗಳಿಕೆಯ ಸಾಮರ್ಥ್ಯದಷ್ಟೇ ಜೀವನಶೈಲಿ ರೂಪಿಸುವಷ್ಟು ಒಳಮನಸ್ಸು ನಿಗ್ರಹದಲ್ಲಿರಬೇಕು. ಆಗ ಗಳಿಸುವವರಲ್ಲಿಯೂ  ಈ `ಇನ್ನಷ್ಟು ಬೇಕೆನ್ನುವ~ ಕೂಡಿಡುವ ಒತ್ತಡ ಕಡಿಮೆಯಾಗುತ್ತದೆ.ಈ ನಿಟ್ಟಿನಲ್ಲಿ ಯೋಚಿಸುವುದಾದಲ್ಲಿ ಈ ಚಳವಳಿ ಜನಸಾಮಾನ್ಯರಲ್ಲಿ ಭ್ರಷ್ಟಾಚಾರ ವಿರೋಧಿ ಅಲೆಯೊಂದನ್ನು ಹುಟ್ಟಿಹಾಕಿತು. ಅದು ಅಷ್ಟೇ ರಭಸದಲ್ಲಿ ಸರ್ಕಾರಕ್ಕೆ ಅಪ್ಪಳಿಸಿ ಮಾಯವಾಯಿತು. ಈಗ ಅಗತ್ಯವಿರುವುದು ಇಂಥ ಅಲೆಗಳಲ್ಲ.ಗಾಂಧೀಜಿಯಂತೆ ಸರಳ, ಸತ್ಯ, ಪ್ರಾಮಾಣಿಕತನಗಳು ಅಂತರ್ಗತವಾಗಿ ಜೀವನದಿಯಂತೆ ಪ್ರವಹಿಸುವ ಸಂಸ್ಕಾರ. ಅದು ಎಲ್ಲರಲ್ಲಿ ಮೂಡಿದಾಗ ಭ್ರಷ್ಟಾಚಾರ ನಿರ್ಮೂಲನೆ, ಭ್ರಷ್ಟಾಚಾರ ರಹಿತ ವ್ಯವಸ್ಥೆಯ ಬಗ್ಗೆಯೂ ಕನಸು ಕಾಣಬಹುದು.

ಚಳವಳಿಯೊಂದು ಅಂಥ ಮನೋಭಾವವನ್ನೇ ನಿರ್ಮಾಣ ಮಾಡದಿದ್ದಲ್ಲಿ, ಕೇವಲ ಅದು ಪ್ರತಿಭಟನೆಯ ಸ್ವರೂಪ ಪಡೆಯುತ್ತದೆಯೇ ಹೊರತು ಹೊಸತನದ ಆರಂಭ ಮಾಡುವುದೇ ಇಲ್ಲ.  ಮತ್ತೆ ಅಣ್ಣಾ ಹಜಾರೆ ಅಥವಾ ಅವರಂಥವರು ಇಂಥ ಚಳವಳಿಯ ಮುಂಚೂಣಿಗೆ ಬರುವವರೆಗೆ ಎಲ್ಲರೂ ಕಾಯುವುದು. ನಂತರ ಅವರಿಗೆ ಬೆಂಬಲ ಸೂಚಿಸುವುದು, ಗೋಡೆ ಬರಹ ಬರೆಯುವುದು, ವ್ಯಕ್ತಿ ಆರಾಧನೆಗೆ ನಿಲ್ಲುವುದು, ಇವೆಲ್ಲವೂ ಹೋರಾಟ ನಿರ್ಮಿಸುವ ಕಸರತ್ತುಗಳಾಗಿವೆ. ಮಾಧ್ಯಮವೂ ಇಂಥ ಮನೋಭಾವದ ನಿರ್ಮಾಣಕ್ಕೆ ಶ್ರಮಿಸಬೇಕು. ಹೊರತು ಕಸರತ್ತುಗಳ ವೈಭವೀಕರಣಕ್ಕೆ ಅಲ್ಲ.   ಅವುಗಳ ಬದಲು ನಮ್ಮಳಗೆ ಸರಳ ಬದುಕಿನ `ಅಣ್ಣಾ~ನಂಥ ವ್ಯಕ್ತಿತ್ವದ ಆರಾಧನೆ ಮಾಡುವ ಬದಲು ಅಳವಡಿಸಿಕೊಂಡರೆ ಇದು ಸಾಧ್ಯವಾದೀತು. ಆದರೆ ಈ ಸಂಸ್ಕಾರ ಅಥವಾ ಇಂಥ ಮನೋಭಾವ ನಿರ್ಮಾಣ ಸಾಧ್ಯವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.