ಮಂಗಳವಾರ, ಮೇ 18, 2021
28 °C

ದರ್ಶನ್ ಚಿತ್ರಗಳ ಬಂಡವಾಳದ ಗತಿ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ದರ್ಶನ್ ಪತ್ನಿ ವಿಷಯದಲ್ಲಿ ಖಳನಾಯಕನಾಗಿದ್ದರೂ ಸಿನಿಮಾಲೋಕ ಅವರ ಭವಿಷ್ಯದ ಕುರಿತು ಆಶಾದಾಯಕವಾಗಿಯೇ ಮಾತನಾಡುತ್ತಿದೆ. ಇದಕ್ಕೆ ಕಾರಣ ಅವರ ಮೇಲೆ ಹೂಡಿರುವ ದೊಡ್ಡ ಮೊತ್ತದ ಬಂಡವಾಳ.ಅವರನ್ನು ನೆಚ್ಚಿಕೊಂಡು ಚಿತ್ರಗಳನ್ನು ನಿರ್ಮಿಸುತ್ತಿರುವವರು, ಮುಂಗಡ ಹಣ ಕೊಟ್ಟು ಕಾಲ್‌ಷೀಟ್ ಪಡೆದು ತಮ್ಮ ಸರತಿಗೆ ಕಾಯುತ್ತಿರುವವರಲ್ಲಿ ದರ್ಶನ್ ಇಮೇಜ್ ಬದಲಾದೀತೆ ಎಂಬ ಆತಂಕವೇನೋ ಇದೆ. ಆದರೆ, ಯಾರೂ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸಿದ್ಧರಿಲ್ಲ.ಕನ್ನಡ ಚಿತ್ರರಂಗದಲ್ಲೇ ಅತಿ ದೊಡ್ಡ ಬಜೆಟ್‌ನ ಚಿತ್ರ ಎನಿಸಿಕೊಳ್ಳಲಿರುವ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ~. ಬೆಳಗಾವಿಯ ಆನಂದ ಬಿ.ಅಪ್ಪುಗೋಳ ಅದರ ನಿರ್ಮಾಪಕರು. ಅವರು ಈಗಲೂ ದರ್ಶನ್ ಅಭಿನಯದ ಈ ಚಿತ್ರದ ಕುರಿತು ಆಶಾವಾದಿಯಾಗಿಯೇ ಇದ್ದಾರೆ.`ದರ್ಶನ್ ನಮಗೆ ಒಬ್ಬ ನಟನಾಗಿ ಅಷ್ಟೇ ಮುಖ್ಯ. ಅವರ ವೈಯಕ್ತಿಕ ಬದುಕು ಬೇರೆ. ನಟನಾ ಬದುಕು ಬೇರೆ. ಖಾಸಗಿ ಸಮಸ್ಯೆಗಳು ಬರುತ್ತವೆ, ಹೋಗುತ್ತವೆ. ಅದರಿಂದ ನಮ್ಮ ಚಿತ್ರಕ್ಕೆ ಸಮಸ್ಯೆಯೇನೂ ಆಗುವುದಿಲ್ಲ. ಇನ್ನೂ 20 ದಿನಗಳ ಚಿತ್ರೀಕರಣ ಬಾಕಿ ಇದೆ.ಒಂದು ಹಾಡು ಹಾಗೂ ಕ್ಲೈಮ್ಯಾಕ್ಸ್‌ಗೆ ಇದೇ 16ರಿಂದ ಚಿತ್ರೀಕರಣ ಪ್ರಾರಂಭವಾಗಬೇಕು. ಅವರಿಗೆ ಜಾಮೀನು ದೊರೆತ ನಂತರ ಎಲ್ಲಾ ಒಳ್ಳೆಯದೇ ಆಗುತ್ತದೆಂಬುದು ನಮ್ಮ ಭಾವನೆ~ ಎಂಬುದು ಅಪ್ಪುಗೋಳ ಅವರ ಪ್ರತಿಕ್ರಿಯೆ.ಕಿತ್ತೂರಿನ ಕಲ್ಮಠದಲ್ಲಿ ನವೆಂಬರ್ 19ರಿಂದ ಚಿತ್ರೀಕರಣ ಪ್ರಾರಂಭಿಸಿದ್ದ `ಸಂಗೊಳ್ಳಿರಾಯಣ್ಣ~ ಈಗಾಗಲೇ ನೂರಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆಸಿದೆ. ಅದರ ಬಜೆಟ್ ಎಷ್ಟು ಎಂಬುದನ್ನು ಹೇಳಲು ನಿರ್ಮಾಪಕರು ತಯಾರಿಲ್ಲ. ಒಂದು ಅಂದಾಜಿನ ಪ್ರಕಾರ ಈಗಾಗಲೇ ಸುಮಾರು 12 ಕೋಟಿ ರೂಪಾಯಿ ಖರ್ಚಾಗಿದೆ.ಚಿತ್ರ ಮುಗಿಯುವ ಹೊತ್ತಿಗೆ ಇನ್ನೂ ಮೂರ‌್ನಾಲ್ಕು ಕೋಟಿಯಂತೂ ಬೇಕಾಗುತ್ತದೆ ಎಂಬುದು ಅಂದಾಜು.

ಇದೇ 23ರಂದು ತೆರೆಕಾಣಬೇಕಿರುವ `ಸಾರಥಿ~ ದರ್ಶನ್ ವೃತ್ತಿಬದುಕಿನಲ್ಲಿ ಇನ್ನೊಂದು ವಿವಾದಕ್ಕೆ ಕಾರಣವಾಗಿದ್ದ ಚಿತ್ರ.ಹಿಂದೆ ಇದೇ ನಾಯಕನನ್ನು ನೆಚ್ಚಿಕೊಂಡು `ಭೂಪತಿ~ ಚಿತ್ರವನ್ನು ನಿರ್ಮಿಸಿ ಎರಡು ಕೋಟಿಗಿಂತ ಹೆಚ್ಚು ನಷ್ಟ ಅನುಭವಿಸಿದ್ದ ಹಿರಿಯ ನಿರ್ಮಾಪಕ ಕೆ.ಸಿ.ಎನ್.ಚಂದ್ರು `ಸಾರಥಿ~ಯ ಮೂಲಕ ಕಳೆದುಕೊಂಡದ್ದನ್ನು ಮರಳಿ ಪಡೆಯುವ ಯೋಚನೆಯಲ್ಲಿದ್ದರು.ಆದರೆ, ಈ ಚಿತ್ರ ನಿಗದಿತ ಬಜೆಟ್ ಮೀರಿದಾಗ ಚಂದ್ರು ಕಂಗಾಲಾದರು. ಗಾಂಧಿನಗರದ ಮೂಲಗಳ ಪ್ರಕಾರ `ಸಾರಥಿ~ ಒಂಬತ್ತು ಕೋಟಿ ಬಜೆಟ್‌ನ ಚಿತ್ರ. ಅಷ್ಟೊಂದು ಖರ್ಚು ಭರಿಸಲಾಗದೆ ಕೆ.ಸಿ.ಎನ್.ಚಂದ್ರು ಆ ಚಿತ್ರವನ್ನು ಸತ್ಯಪ್ರಕಾಶ್ ಎಂಬುವರಿಗೆ ಮಾರಾಟ ಮಾಡಿದರು.`ಜಾಮೀನು ಸಿಕ್ಕ ನಂತರ ಪ್ರೇಕ್ಷಕರನ್ನು ಉದ್ದೇಶಿಸಿ ನಮ್ಮ ನಾಯಕ ನಟರೇ ಸ್ಪಷ್ಟನೆ ನೀಡಲಿದ್ದಾರೆ. ಅವರ ಅಭಿಮಾನಿಗಳು ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯನ್ನು ಮುಂದೂಡಬೇಡಿ ಎನ್ನುತ್ತಿದ್ದಾರೆ. ನಾನು ಕೂಡ ಯಾರಿಗೂ ಚಿತ್ರದ ಬಿಡುಗಡೆಯ ಹಕ್ಕನ್ನು ಮಾರಾಟ ಮಾಡಿಲ್ಲ.ಇನ್ನೂ ಸೆನ್ಸಾರ್ ಆಗಬೇಕಿರುವುದರಿಂದ ಜಾಹೀರಾತುಗಳಲ್ಲಿ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿಲ್ಲ. 23ರಂದು ಚಿತ್ರ ಖಂಡಿತ ಬಿಡುಗಡೆ ಆಗುತ್ತದೆ~ ಅಂತಾರೆ ಸತ್ಯಪ್ರಕಾಶ್.ದರ್ಶನ್ ಜೈಲು ಸೇರಿದ ಶುಕ್ರವಾರ (ಸೆ.9) `ಚಿಂಗಾರಿ~ ಚಿತ್ರದ ಬಾಕಿ ಇರುವ ಒಂದು ಹಾಡಿನ ಚಿತ್ರೀಕರಣ ನಡೆಯಬೇಕಿತ್ತು. ಅದೀಗ ಮುಂದಕ್ಕೆ ಹೋಗಿದೆ. ಆ ಚಿತ್ರದ ನಿರ್ಮಾಪಕ ಮಹದೇವ್ ಕೂಡ ಎಲ್ಲಾ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. `ಇದುವರೆಗೆ 75 ದಿನ ಶೂಟಿಂಗ್ ಮಾಡಿದ್ದೇವೆ.

 

ನಮಗೆ ಏನೂ ತೊಂದರೆಯಾಗಿಲ್ಲ. ಇದು ಗಂಡ-ಹೆಂಡತಿ ನಡುವಿನ ಜಗಳ. ಈಗ ದರ್ಶನ್ ಪತ್ನಿಯೇ ದೂರು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಮಾಧ್ಯಮ ಈ ವಿಷಯವನ್ನು ದೊಡ್ಡದಾಗಿಸಿದೆಯಷ್ಟೆ. ನಮ್ಮ ಸಿನಿಮಾಗೆ ಯಾವ ತೊಂದರೆಯೂ ಆಗುವುದಿಲ್ಲ~ ಎಂಬುದು ಮಹದೇವ್ ನುಡಿ.`ಮೈಸೂರು ಹುಡುಗ~, `ಬುಲ್‌ಬುಲ್~ ಹಾಗೂ `ಭೀಮ~ ದರ್ಶನ್ ಅಭಿನಯಿಸಲಿರುವ ಮುಂದಿನ ಚಿತ್ರಗಳು. `ಬುಲ್‌ಬುಲ್~ ಅವರದ್ದೇ ಬ್ಯಾನರ್‌ನ ಚಿತ್ರ. ಅದರ ಚಿತ್ರಕಥೆ ಸಿದ್ಧವಾಗುತ್ತಿದೆ. ಉಳಿದ ಚಿತ್ರಗಳು ಕೂಡ ಪೂರ್ವ ತಯಾರಿಯ ಹಂತದಲ್ಲಿವೆ.ಸಿನಿಮಾ ಮಾರುಕಟ್ಟೆಯ ಲೆಕ್ಕಾಚಾರದ ಪ್ರಕಾರ ದರ್ಶನ್ ಹೆಸರನ್ನು ನೆಚ್ಚಿಕೊಂಡು ಸುಮಾರು 40-45 ಕೋಟಿ ರೂಪಾಯಿ ಹೂಡಿಕೆಯಾಗಿದೆ. ಹಣ ಚೆಲ್ಲಿರುವ ಯಾವ ನಿರ್ಮಾಪಕರೂ ಅವರ ವಿರುದ್ಧವಾಗಿ ಮಾತನಾಡುವ ಸ್ಥಿತಿಯಲ್ಲಿ ಈಗ ಇಲ್ಲ.ದರ್ಶನ್ ಸಹೋದರ ದಿನಕರ್ ನಿರ್ದೇಶಿಸಿರುವ `ಸಾರಥಿ~ ಚಿತ್ರವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದರ ಮೇಲೆ ದರ್ಶನ್ ಚಿತ್ರಭವಿಷ್ಯ ನಿಂತಿದೆ. ಬಲ್ಲವರ ಪ್ರಕಾರ ಅವರ ಖಾಸಗಿ ಹಾಗೂ ವೃತ್ತಿ ಬದುಕಿನಲ್ಲಿ ಸಮಸ್ಯೆಗಳು ಉಲ್ಬಣಿಸಿದ್ದು `ಸಾರಥಿ~ ಸೆಟ್ಟೇರಿದ ಹೊತ್ತಲ್ಲೇ. ಕಳಂಕದ ಹಣೆಪಟ್ಟಿ ಹೊತ್ತು ನಿಂತಿರುವ ದರ್ಶನ್ ಅವರನ್ನು `ಸಂಗೊಳ್ಳಿರಾಯಣ್ಣ~ನಾಗಿ ಜನ ಹೇಗೆ ನೋಡುತ್ತಾರೆ ಎಂಬ ಪ್ರಶ್ನೆಯೂ ಮೂಡಿದೆ.ದರ್ಶನ್ ಪತ್ನಿ ಹಲ್ಲೆ ಪ್ರಕರಣ ಖಂಡನೀಯ: ಜಯಮಾಲಾ

`ಆರೋಪಿಗೆ ಬೆಂಬಲ ಕಳವಳಕಾರಿ~ಬೆಂಗಳೂರು: ದೌರ್ಜನ್ಯಕ್ಕೆ ಒಳಗಾದ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಬೆಂಬಲಕ್ಕೆ ನಿಲ್ಲುವ ಬದಲು ನಟನನ್ನು ಬೆಂಬಲಿಸಿದ ಚಿತ್ರರಂಗದವರ ವರ್ತನೆಗೆ ಸಂಘ- ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

`ಚಿತ್ರರಂಗದಲ್ಲಿರುವ ನಾವು ಜನರಿಗೆ ಮಾದರಿಯಾಗಿರಬೇಕು.ವಿಜಯಲಕ್ಷ್ಮಿ ಅವರ ಮೇಲೆ ನಡೆದ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಯಾರಾದರೂ ಸರಿ ಮಹಿಳೆ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ. ಈ ಘಟನೆ ಯಾರಿಗೂ ಶೋಭೆ ತರುವಂತದಲ್ಲ. ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರ ಜತೆ ನಾನು ನಟಿಸಿದ್ದೇನೆ.ಅವರೊಬ್ಬ ಸಜ್ಜನ ವ್ಯಕ್ತಿಯಾಗಿದ್ದರು. ಸಹನೆ- ಪ್ರೀತಿ ಅವರಲ್ಲಿತ್ತು. ಅಂತಹ ಗುಣಗಳನ್ನು ದರ್ಶನ್ ಬೆಳೆಸಿಕೊಳ್ಳಬೇಕು~ ಎಂದು ನಟಿ ಜಯಮಾಲಾ ಅಭಿಪ್ರಾಯಪಟ್ಟಿದ್ದಾರೆ.`ವಿಜಯಲಕ್ಷ್ಮಿ ಅವರಿಗೆ ಅಗತ್ಯ ಬೆಂಬಲ ಮತ್ತು ರಕ್ಷಣೆ ಸಿಗಬೇಕು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಆ ಬಗ್ಗೆ ಏನೂ ಹೇಳಲಾರೆ. ಆದರೆ ಅವರ ಸಂಸಾರ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ~ ಎಂದು ಅವರು ತಿಳಿಸಿದರು.`ಪತ್ನಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ನಟ ದರ್ಶನ್ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ವಿಜಯಲಕ್ಷ್ಮಿ ಅವರು ನೀಡಿದ ದೂರಿನ ಅನ್ವಯ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಆದರೆ ಚಿತ್ರರಂಗದ ನಟರು ಮತ್ತು ಗಣ್ಯ ವ್ಯಕ್ತಿಗಳು ದರ್ಶನ್ ಬೆಂಬಲಕ್ಕೆ ನಿಂತಿರುವ ಸಂಗತಿ ಕಳವಳಕಾರಿಯಾದದ್ದು~ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ಅಧ್ಯಕ್ಷೆ ಬಿ.ಎಸ್.ಪ್ರತಿಭಾಕುಮಾರಿ ಹೇಳಿದ್ದಾರೆ.`ನಟರು ಖಾಸಗಿ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಇಟ್ಟುಕೊಳ್ಳಬೇಕು. ಮೌಲ್ಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಅದನ್ನು ಎಲ್ಲರೂ ಖಂಡಿಸಬೇಕು. ಪತ್ನಿಯ ಮೇಲೆ ಹಲ್ಲೆ ನಡೆಸಿರುವ ದರ್ಶನ್ ಅವರನ್ನು ಬೆಂಬಲಿಸಿರುವ ಚಿತ್ರರಂಗದ ಗಣ್ಯರ ಕ್ರಮಕ್ಕೆ ಸಂಘಟನೆಯ ವಿರೋಧವಿದೆ.ಇಡೀ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ನಟ ತಪ್ಪಿತಸ್ಥ ಎಂದು ಗೊತ್ತಾದರೆ ಆತನನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು~ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.`ದರ್ಶನ್ ಪತ್ನಿ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಿನಿಮಾ ನಟರು ಇತರರಿಗೆ ಆದರ್ಶರಾಗಿರಬೇಕು. ಆದರೆ ಈಗ ನಡೆದಿರುವ ಘಟನೆ ದೂರಗಾಮಿ ಪರಿಣಾಮ ಬೀರುತ್ತದೆ. ಇಂತಹ ಘಟನೆಗಳು ಕಾನೂನಿನ ವ್ಯಾಪ್ತಿಯಲ್ಲಿ ಪರಿಹಾರ ಕಾಣಬೇಕು~ ಎಂದು ಅಖಿಲ ಭಾರತ ಜನವಾದಿ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ಗೌರಮ್ಮ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.