ಮಂಗಳವಾರ, ಮೇ 18, 2021
24 °C

ದಲಿತರ ಮನೆಯಲ್ಲಿ ಬ್ರಾಹ್ಮಣರ ಸಹಭೋಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪೇಜಾವರ ಸ್ವಾಮೀಜಿ ಅವರು ದಲಿತರ ಕೇರಿಗಳಲ್ಲಿ ಪಾದಯಾತ್ರೆ ನಡೆಸಿದ ಹಾಗೂ ಬಸವಲಿಂಗಪ್ರಭು ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಬ್ರಾಹ್ಮಣರ ಬೀದಿಯಲ್ಲಿ ಪಾದಯಾತ್ರೆ ನಡೆಸಿದ ಮುಂದುವರಿದ ಭಾಗವಾಗಿ ಸೆ.15ರಂದು ದಲಿತರ ಮನೆಗಳಲ್ಲಿ ಬ್ರಾಹ್ಮಣರ ಸಹಪಂಕ್ತಿ ಭೋಜನ ನಡೆಯಲಿದೆ.ಪೇಜಾವರ ಸ್ವಾಮೀಜಿ ಮತ್ತು ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಪರಸ್ಪರ ಪಾದಯಾತ್ರೆ ನಡೆಸಿ ಸೆ. 15ಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ  ಮಾದಾರ ಚನ್ನಯ್ಯ ವಿಚಾರ ವೇದಿಕೆ ಹಾಗೂ ಸಾಮರಸ್ಯ ವೇದಿಕೆಗಳು ಒಟ್ಟಾಗಿ ಇಂತಹ ಕಾರ್ಯಕ್ರಮ ಏರ್ಪಡಿಸಿವೆ.ಬ್ರಾಹ್ಮಣ ಸ್ವಾಮೀಜಿಗಳು ದಲಿತರ ಕೇರಿಯಲ್ಲಿ ಹಾಗೂ ದಲಿತ ಜನಾಂಗದ ಸ್ವಾಮೀಜಿಗಳು ಬ್ರಾಹ್ಮಣರ ಬೀದಿಯಲ್ಲಿ ಪಾದಯಾತ್ರೆ ನಡೆಸಿದರೆ ಅಸ್ಪೃಶ್ಯತೆ ಹೋಗಲಾಡಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಮೇಲ್ವರ್ಗದವರು ಮತ್ತು ದಲಿತರನ್ನು ಒಟ್ಟುಗೂಡಿಸುವ ನಿರಂತರ ಪ್ರಕ್ರಿಯೆಗಾಗಿ ಸಹಪಂಕ್ತಿ ಭೋಜನ ಏರ್ಪಡಿಸಲಾಗಿದೆ.ಸೆ.15ರಂದು ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಇಳೈ ಆಳ್ವಾರ್ ಸ್ವಾಮೀಜಿ ಅವರು ಎಡಗೈ ಜನಾಂಗದವರೇ ಹೆಚ್ಚಾಗಿ ವಾಸಿಸುವ ಮೈಸೂರಿನ ಗಾಂಧಿನಗರದಲ್ಲಿ ಪಾದಯಾತ್ರೆ ನಡೆಸುವರು. ನಂತರ ಗಾಂಧಿನಗರದಲ್ಲಿರುವ 15 ಮನೆಗಳಲ್ಲಿ ಸಹಪಂಕ್ತಿ ಭೋಜನ ನಡೆಯಲಿದೆ. ಇದರಲ್ಲಿ ಬ್ರಾಹ್ಮಣರಲ್ಲದೆ ಇತರ ಮೇಲ್ವರ್ಗಗಳ ಸ್ವಾಮೀಜಿಗಳು, ಎಲ್ಲ ಜನಾಂಗದ ಮುಖಂಡರುಗಳೂ ಪಾಲ್ಗೊಳ್ಳಲಿದ್ದಾರೆ.ಕಳೆದ ಬಾರಿ ಮೈಸೂರಿನಲ್ಲಿಯೇ ಚಾತುರ್ಮಾಸ ನಡೆಸಿದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರು ದಲಿತರ ಕೇರಿಯಲ್ಲಿ ಪಾದಯಾತ್ರೆ  ನಡೆಸಿದ್ದರು. ಇದಕ್ಕೆ ಪೂರಕವಾಗಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಬ್ರಾಹ್ಮಣರೇ ಹೆಚ್ಚಾಗಿ ವಾಸಿಸುವ ಕೃಷ್ಣಮೂರ್ತಿಪುರಂನಲ್ಲಿ ಪಾದಯಾತ್ರೆ  ನಡೆಸಿದ್ದರು.ಈ ಬಾರಿ ಹೈದರಾಬಾದ್‌ನಲ್ಲಿ ಚಾತುರ್ಮಾಸ ನಡೆಸುತ್ತಿರುವ ಪೇಜಾವರ ಸ್ವಾಮೀಜಿ ಅವರು ಸೆ.15ರಂದು ಇಲ್ಲಿ ನಡೆಯುವ ಸಹಪಂಕ್ತಿ  ಭೋಜನಕ್ಕೆ ಆಗಮಿಸುತ್ತಿಲ್ಲ. ಆದರೆ ಅವರ ಆಶೀರ್ವಾದ ಇದೆ. ಅಲ್ಲದೆ ಬ್ರಾಹ್ಮಣ ಸಮುದಾಯದ ಎಲ್ಲರೂ ಸಹಪಂಕ್ತಿ ಭೋಜನಕ್ಕೆ ಉತ್ತಮ ಬೆಂಬಲ ಸೂಚಿಸಿದ್ದಾರೆ ಎಂದು ಗಾಂಧಿನಗರದ ಮುಖಂಡರು ತಿಳಿಸಿದ್ದಾರೆ.ಸಹಪಂಕ್ತಿ ಭೋಜನದ ಹಿನ್ನೆಲೆಯಲ್ಲಿ ಗಾಂಧಿನಗರದ ಎಲ್ಲ ಜನಾಂಗದ ಯಜಮಾನರ ಸಭೆಯಲ್ಲಿ ಕರೆದು ಚರ್ಚಿಸಲಾಗಿದ್ದು ಸೋಮವಾರ ಬ್ರಾಹ್ಮಣ ಸಮುದಾಯದ ಸ್ವಾಮೀಜಿಗಳು, ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ಇತರ ಜನಾಂಗದ ಸ್ವಾಮೀಜಿಗಳು,  ಮುಖಂಡರುಗಳನ್ನು ವೀಳ್ಯ ನೀಡಿ ಆಮಂತ್ರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.