ಮಂಗಳವಾರ, ಮೇ 11, 2021
24 °C

ದಲಿತ ಕೇರಿಗಳಲ್ಲಿ ಶೌಚಾಲಯ: ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗುಲ್ಬರ್ಗ, ರಾಯಚೂರು ಸೇರಿದಂತೆ ನೆರೆಹೊರೆಯ ಒಟ್ಟು ನಾಲ್ಕು ಜಿಲ್ಲೆಗಳ ದಲಿತರ ಕೇರಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಘೋಷಿಸಿದರು.ಸಮಾಜ ಕಲ್ಯಾಣ ಇಲಾಖೆ ವಿಧಾನಸೌಧದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 121ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಶೌಚಾಲಯ ನಿರ್ಮಾಣ ಕಾರ್ಯವನ್ನು ಹಂತ ಹಂತವಾಗಿ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಲಾಗುವುದು~ ಎಂದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರತಿಯೊಂದು ಶೌಚಾಲಯ ನಿರ್ಮಾಣಕ್ಕೆ ಪ್ರಸ್ತುತ 3,250 ರೂಪಾಯಿ ನೀಡಲಾಗುತ್ತಿದೆ. ಇನ್ನುಳಿದ 6,750 ರೂಪಾಯಿ ಮೊತ್ತವನ್ನು ಸರ್ಕಾರ ಭರಿಸುತ್ತದೆ. ಕ್ರೋಡೀಕೃತ ಮೊತ್ತವಾದ 10 ಸಾವಿರ ರೂಪಾಯಿ ಬಳಸಿ ಶೌಚಾಲಯ ನಿರ್ಮಿಸಲಾಗುವುದು ಎಂದು ಹೇಳಿದರು.ನಮ್ಮ ಸಮಾಜದ ಕೆಲವು ಸಣ್ಣ ಮನಸ್ಸಿನ ವ್ಯಕ್ತಿಗಳಿಂದಾಗಿ ದಲಿತರು ಇನ್ನೂ ದುರ್ಬಲರಾಗಿಯೇ ಇದ್ದಾರೆ,  ಮೀಸಲಾತಿಯ ಪ್ರಯೋಜನವನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ವಿಷಾದಿಸಿದರು.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಯಾರೂ ಅಸಭ್ಯವಾಗಿ ಘೋಷಣೆ ಕೂಗಬಾರದು. ಅಂಬೇಡ್ಕರ್ ಅವರಂಥ ಮಹಾತ್ಮರ ಜನ್ಮದಿನ ಆಚರಣೆಯ ವೇಳೆ ಇಂಥ ಕೃತ್ಯಗಳು ಸಲ್ಲದು. ಯಾರೇ ಇಂಥ ಕಾರ್ಯದಲ್ಲಿ ತೊಡಗಿದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾರಜೋಳ ಎಚ್ಚರಿಸಿದರು.ಆಕ್ರೋಶ: ಸಮಾಜ ಕಲ್ಯಾಣ ಸಚಿವ ಎ. ನಾರಾಯಣ ಸ್ವಾಮಿ ಅವರು ಮಾತನಾಡುವ ಸಂದರ್ಭ, `ಹಿಂದೆ ಬಾಬು ಜಗಜೀವನರಾಂ ಜಯಂತಿ ಆಚರಣೆ ಸಂದರ್ಭದಲ್ಲೂ ಬ್ಯಾಂಕ್ವೆಟ್ ಸಭಾಂಗಣದ ಕುರ್ಚಿಗಳು ಖಾಲಿ ಇದ್ದವು. ಇಂದೂ ಅನೇಕ ಕುರ್ಚಿಗಳು ಖಾಲಿ ಇವೆ~ ಎಂದು ಹೇಳಿದಾಗ, ಸಭಿಕರಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.ಅನೇಕರಿಗೆ ಸಭಾಂಗಣ ಪ್ರವೇಶಿಸಲು ಪೊಲೀಸರು ಅವಕಾಶ ಮಾಡಿಕೊಟ್ಟಿಲ್ಲ. ಒಳಗೆ ಬರುವುದಾದರೂ ಹೇಗೆ ಎಂದು ಕೆಲವರು ಸಚಿವರನ್ನು ನೇರವಾಗಿ ಪ್ರಶ್ನಿಸಿದರು. ನಂತರ ಪೊಲೀಸರು ಮಧ್ಯಪ್ರವೇಶಿಸಿದ ಕಾರಣ ಸುಮ್ಮನಾದರು. ಹನ್ನೆರೆಡು ಮಂದಿ ಗಣ್ಯರಿಗೆ ಮುಖ್ಯಮಂತ್ರಿಗಳು ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಿದರು. ನಿವೃತ್ತ ಡಿಜಿಪಿ ಅಜಯಕುಮಾರ್ ಸಿಂಹ ಅವರು ಪ್ರಶಸ್ತಿ ಸ್ವೀಕರಿಸಲು ಗೈರುಹಾಜರಾಗಿದ್ದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.