ಶನಿವಾರ, ಮೇ 21, 2022
25 °C
ಉ.ಪ್ರದೇಶದ ಮುಜಾಫರ್‌ನಗರದಲ್ಲಿ ಘಟನೆ

ದಾಳಿಯಿಂದ ಪಾರಾಗಲು ಸಂಚು ನಾಯಿ `ಛೂ' ಬಿಟ್ಟ ಅಧಿಕಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತೆರಿಗೆ ಹಣ ವಂಚನೆ ಸುಳಿವಿನ ಹಿನ್ನೆಲೆಯಲ್ಲಿ ತಪಾಸಣೆಗೆಂದು ಬಂದ ಅಧಿಕಾರಿಗಳ ಮೇಲೆ ನಾಯಿ ಛೂ ಬಿಟ್ಟು, ಅವರನ್ನು ಸ್ಥಳದಿಂದ ಓಡಿಸಲು ಯತ್ನಿಸಿದ ಘಟನೆ ನಡೆದಿದೆ.ಕೇಂದ್ರೀಯ ಅಬಕಾರಿ ವಿಚಕ್ಷಣಾ ಮಹಾ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ಉತ್ತರ ಪ್ರದೇಶದ ಮುಜಾಫರ್‌ನಗರದ ತ್ರಿಕೂಟ್ ಐರನ್ ಅಂಡ್ ಸ್ಟೀಲ್ ಕಾಸ್ಟಿಂಗ್ ಲಿಮಿಟೆಡ್ ನಿರ್ದೇಶಕರ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿದರು. ಈ ಪೈಕಿ ತಮ್ಮ ನಿವಾಸದಲ್ಲಿ ತಪಾಸಣೆ ನಡೆಸಲು ಮುಂದಾದ ಅಧಿಕಾರಿಗಳ ಮೇಲೆ ನಿರ್ದೇಶಕರೊಬ್ಬರು ನಾಯಿ ಛೂ ಬಿಟ್ಟ ಪ್ರಕರಣ ನಡೆಯಿತು.ಅಧಿಕಾರಿಗಳು ನಾಯಿಗಳನ್ನು ಹಿಮ್ಮೆಟ್ಟಿಸುತ್ತಿರುವಾಗಲೇ, ಆ ನಿರ್ದೇಶಕ ತಮ್ಮಲ್ಲಿದ್ದ ಕಂಪ್ಯೂಟರ್‌ನಿಂದ ಹಾರ್ಡ್‌ಡಿಸ್ಕ್ ಹೊರತೆಗೆಯಲು ಪ್ರಯತ್ನಿಸಿದ ಘಟನೆಯೂ ನಡೆಯಿತು. ಹೆಚ್ಚುವರಿ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಸಿ, ತಪಾಸಣೆ ಮುಂದುವರಿಸಿದ ಅಧಿಕಾರಿಗಳು ಆ ಹಾರ್ಡ್‌ಡಿಸ್ಕ್ ವಶಪಡಿಸಿಕೊಂಡರು. ಹಲವು ಬಗೆಯ ವಂಚನೆ ವಿಧಾನ ಅನುಸರಿಸಿ, ಮಾರಾಟದ ಪ್ರಮಾಣ ಕಡಿಮೆ ಎಂಬುದಾಗಿ ಲೆಕ್ಕದಲ್ಲಿ ತೋರಿಸಲಾಗುತ್ತಿತ್ತು. ಇದರಿಂದ ಸುಮಾರು 20 ಕೋಟಿ ರೂಪಾಯಿ ವಂಚನೆ ಎಸಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಿರ್ದೇಶಕರ ನಿವಾಸದೊಳಗಿನ ಅಡುಗೆ ಹಾಗೂ ಇತರ ಕೊಠಡಿಗಳಲ್ಲಿ ರಹಸ್ಯವಾಗಿ ಕಾರ್ಯಾಲಯ ನಿರ್ಮಿಸಲಾಗಿದ್ದು, ಅಲ್ಲಿ ಕಂಪ್ಯೂಟರ್‌ಗಳನ್ನು ಕೂಡ ಅಳವಡಿಸಲಾಗಿತ್ತು. ಆಯ್ದ ನೌಕರರು ಮಾತ್ರ ಇಲ್ಲಿಗೆ ಬಂದು, ಕೆಲಸ ನಿರ್ವಹಿಸುತ್ತಿದ್ದರು. ಈ ಕಂಪ್ಯೂಟರ್‌ಗಳ ಹಾರ್ಡ್‌ಡಿಸ್ಕ್‌ನಲ್ಲಿದ್ದ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.ನಾಯಿಗಳು ನಡೆಸಿದ ದಾಳಿಗೆ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಅವರ ಮೇಲೆ ನಾಯಿಗಳು ದಾಳಿ ನಡೆಸಲು ಪ್ರಚೋದಿಸಿದ ಆರೋಪದ ಮೇಲೆ ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.