ಶನಿವಾರ, ಮೇ 8, 2021
26 °C

ದಾಸ್ಯದಿಂದ ಲಾಸ್ಯದತ್ತ...

ಶಿವಲಿಂಗ ಸಿದ್ನಾಳ Updated:

ಅಕ್ಷರ ಗಾತ್ರ : | |

ಒಂಬತ್ತು ವರ್ಷಗಳ ಹಿಂದಿನ ಮಾತು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿ ಗ್ರಾಮದ ಐತಿಹಾಸಿಕ ಶ್ರಿ ಅಮೃತೇಶ್ವರ ದೇವಾಲಯ ಕುಡಿತ, ಜೂಜಾಟಗಳ ತಾಣ, ಅನೈತಿಕ ಚಟುವಟಿಕೆಗಳ ಜಾಗ. ಸುತ್ತಲೂ ಕಲುಷಿತ ವಾತಾವರಣ. ಆದರೆ ಇಂದು...? ಸಂಪೂರ್ಣ ಬದಲಾದ ಚಿತ್ರಣ. ಎಲ್ಲೆಲ್ಲೂ ಹಸಿರು. ನಸುನಗುತ್ತಿರುವ ಪರಿಸರ.ಇಂಥ ಒಂದು ಅಭೂತಪೂರ್ವ ಬದಲಾವಣೆಗೆ ಕಾರಣರಾದವರು ಯಾರು ಗೊತ್ತೆ? ದೇವದಾಸಿಯೆಂಬ ಪಟ್ಟಹೊತ್ತು, ಬಾಲ್ಯದಿಂದಲೂ ಶೋಷಣೆಗೆ ಒಳಗಾಗುತ್ತ ಬಂದ ಒಬ್ಬ ಮಹಿಳೆ. ಹೌದು. ಈಕೆಯೇ ರನ್ನ ಬೆಳಗಲಿ ಗ್ರಾಮದ ನಿವಾಸಿ ಬಂದವ್ವ ಜೋಗಪ್ಪಗೋಳ.ದೇವರ ಹೆಸರಿನಲ್ಲಿ ದೇವದಾಸಿಯೆಂಬ ಕಂದಾಚಾರದ ದೀಕ್ಷೆ ಪಡೆದು ಬೀದಿ ಬಸವಿಯರಾಗಿ ಭಿಕ್ಷೆಯೆತ್ತುವ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗುವವರ ಮಧ್ಯೆ ಬಂದವ್ವ ವಿಭಿನ್ನವಾಗಿ ಬದುಕಿ ತೋರಿಸಿದ್ದಾರೆ. ದೈವದ ಹೆಸರಿನಲ್ಲಿ `ಪಾಪದ ಹೂ' ಆಗಿ ದಾಸ್ಯದ ಬದುಕು ನಡೆಸುವುದಕ್ಕಿಂತ ಸ್ವಾವಲಂಬಿಯಾಗಿ ಲಾಸ್ಯದ ಬದುಕು ನಡೆಸುವುದೇ ಲೇಸು ಎಂದು, ತಮ್ಮಂತೇ ಬೇಗುದಿಯಲ್ಲಿ ಬೇಯುತ್ತಿರುವ ಪರಿಸರಕ್ಕೊಂದು `ರಕ್ಷಣೆ' ಮಾಡುವ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ.ಕಷ್ಟದ ಬದುಕು

ಮನೆತನದ ಸಂಪ್ರದಾಯ ಮತ್ತು ಪೂರ್ವಜರ ಒತ್ತಾಸೆಗೆ ಮಣಿದು ದೇವದಾಸಿಯಾಗಿ ದೀಕ್ಷೆ ಪಡೆದ ನತದೃಷ್ಟೆ ಇವರು. ದೇವದಾಸಿಯಾಗಿ ಪಟ್ಟ ಅನುಭವ ಅಷ್ಟಿಷ್ಟಲ್ಲ. ತಮ್ಮನ್ನು ಈ ಪದ್ಧತಿಗೆ ತಳ್ಳಿದ ಪೂರ್ವಜರನ್ನು ಶಪಿಸುತ್ತಾ ಒಲ್ಲದ ವೃತ್ತಿಯನ್ನು ತೊರೆಯುವ ನಿರ್ಧಾರ ಮಾಡಿದಳು. ಮನೆಯವರು ಕೂಡ ಮಗಳ ಇಚ್ಛೆಗೆ ಅಡ್ಡಿಯಾಗದೇ ದೇವದಾಸಿ ಪದ್ಧತಿಯಿಂದ ಮುಕ್ತಳನ್ನಾಗಿ ಮಾಡಿ ಸ್ವಾವಲಂಬಿ ಜೀವನಕ್ಕೆ ಅನುವು ಮಾಡಿಕೊಟ್ಟರು. ಪರಿಣಾಮ ಅವರೇ ಕಂಡುಕೊಂಡ ಸ್ವಯಂ ಪುನರ್ವಸತೀಕರಣದ ಮಾರ್ಗವೆಂದರೆ ಐತಿಹಾಸಿಕ ದೇವಾಲಯದ ಸಂರಕ್ಷಣೆಯ ಕಾರ್ಯ.ಇವರು ಮೊದಲು ಕೈಗೆತ್ತಿಕೊಂಡ ಕಾರ್ಯ ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಈ ದೇಗುಲದ ಪರಿಸರವನ್ನು ಸ್ವಚ್ಛಗೊಳಿಸುವುದು. ಮೊದಲ ವರ್ಷ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡರು. ನಂತರದ ಎರಡು ವರ್ಷಗಳಲ್ಲಿ ಅಲ್ಲಿ ಹೂ-ಗಿಡಗಳನ್ನು ನೆಡುವ, ಅವುಗಳನ್ನು ಆರೈಕೆ ಮಾಡುವ ಮೂಲಕ ಉತ್ತಮ ಪರಿಸರಕ್ಕೆ ನಾಂದಿ ಹಾಡಿದರು. ಇದರ ಪರಿಣಾಮವೇ ಇಂದು ದೇವಸ್ಥಾನದ ಆವರಣ ನಂದನವನವಾಗಿದೆ. ದೇವಸ್ಥಾನದ ಆವರಣದಲ್ಲಿ 23 ತೆಂಗಿನ ಗಿಡ, 4 ಮಾವಿನ ಗಿಡ, 8 ಬಾದಾಮಿ, 3 ಸಂಪಿಗೆ, 1ಬಿಳಿ ಸಂಪಿಗೆ, 5 ಕೆಂಪು ದಾಸವಾಳ, 2 ಪೇರಲ ಗಿಡ ಹಾಗೂ ಅಡಿಕೆ ಗಿಡ ಸೇರಿದಂತೆ 100ಕ್ಕೂ ಹೆಚ್ಚು ಹೂ-ಗಿಡಗಳಿವೆ. ಸೇವಂತಿ, ಗಗನ ಮಲ್ಲಿಗೆ, ಚೆಂಡು ಮಲ್ಲಿಗೆ ಹೂಗಳು ಪ್ರತಿದಿನ ಅರಳಿ ನಗುವ ಮೂಲಕ ನೋಡುಗರ ಮನ ತಣಿಸುತ್ತವೆ. ಆದರೆ ನಳನಳಿಸುವ ಇಲ್ಲಿನ ಪರಿಸರದ ಹಿಂದೆ ಅಡಗಿರುವ ಬಂದವ್ವಳ ತ್ಯಾಗ ಬಹು ದೊಡ್ಡದು.ಸುಗಮವಲ್ಲದ ಹಾದಿ

ಕಾನೂನು ಬಾಹಿರ ಚಟುವಟಿಕೆ ನಿಲ್ಲಿಸುವುದು ಬಂದವ್ವ ಅವರಿಗೆ ಸುಲಭವೇನೂ ಆಗಿರಲಿಲ್ಲ. ಮೊದಮೊದಲು ಇವರಿಗೆ ಪ್ರತಿರೋಧ ಒಡ್ಡಿದವರೇ ಹೆಚ್ಚು. ಇವರ ವಿರುದ್ಧ ಹಲವರು ದೂರು ನೀಡಲೂ ಮುಂದಾಗಿದ್ದರು. ಯಾವುದಕ್ಕೂ ಜಗ್ಗದೇ-ಕುಗ್ಗದೇ ಗಟ್ಟಿಯಾಗಿ ದೇವಾಲಯ ರಕ್ಷಣೆಗೆ ನಿಂತ ಬಂದವ್ವಳ ಪರಿಶ್ರಮದ ಫಲವಾಗಿ ಇಂದು ದೇವಾಲಯ ಸುಸ್ಥಿತಿ ಕಾಯ್ದುಕೊಂಡಿದೆ ಮಾತ್ರವಲ್ಲದೇ ಸುತ್ತಲೂ ನಾನಾ ಬಗೆಯ ಹೂ-ಗಿಡಗಳಿಂದ ತುಂಬಿಕೊಂಡು ಹಚ್ಚ ಹಸಿರಾಗಿ ಕಂಗೊಳಿಸುವ ಮೂಲಕ ವಾತಾವರಣವನ್ನು ಆಹ್ಲಾದಕರಗೊಳಿಸಿದೆ.ಕಲ್ಯಾಣ ಚಾಲುಕ್ಯ ಕಾಲದ ಶೈಲಿಯ ಶಿಲ್ಪ ಕೆತ್ತನೆಯ ಶ್ರಿ ಅಮೃತೇಶ್ವರ ದೇವಾಲಯವು ವಾಸ್ತು ಶಿಲ್ಪದ ದೃಷ್ಟಿಯಿಂದ ಐತಿಹಾಸಿಕ ಮಹತ್ವ ಹೊಂದಿದೆ. ಆದರೆ ಸೂಕ್ತ ಕಾಳಜಿಯಿಲ್ಲದೇ ಅಸ್ತವ್ಯಸ್ತಗೊಂಡು ಸಂಪೂರ್ಣ ಶಿಥಿಲಾವಸ್ಥೆ ತಲುಪಿತ್ತು. ಈ ದೇವಾಲಯವನ್ನು ರಾಜ್ಯ ಪುರಾತತ್ವ ಇಲಾಖೆ ತಮ್ಮ ಅಧೀನಕ್ಕೆ ತೆಗೆದುಕೊಂಡು ಪುನರ್ ನಿರ್ಮಾಣ ಮಾಡಿದೆ. ಪುರಾತತ್ವ ಇಲಾಖೆ ದೇವಾಲಯದ ಜೀರ್ಣೋದ್ಧಾರ ಕೈಗೊಂಡಾಗ ಕಾಳಜಿಪೂರ್ವಕವಾಗಿ ಕೈ ಜೋಡಿಸಿದ್ದು ಈ ಬಂದವ್ವ.ಅಮೃತೇಶ್ವರ ದೇವಾಲಯವೇ ವಾಸಸ್ಥಾನ ಮತ್ತು ನೆಮ್ಮದಿಯ ತಾಣ ಎಂದುಕೊಂಡು ದೇವಾಲಯದ ಸುತ್ತಮುತ್ತಲಿನ ಜಾಗವನ್ನೆಲ್ಲ ಸ್ವಚ್ಛಗೊಳಿಸಿ ಹೂ-ಗಿಡಗಳನ್ನು ನೆಟ್ಟು ಪುರಾತನ ದೇವಸ್ಥಾನಕ್ಕೆ ಸೊಬಗು ತಂದುಕೊಟ್ಟಿದ್ದಲ್ಲದೇ ಇಲ್ಲಿ ಆಗಮಿಸುವ ಪ್ರವಾಸಿಗರನ್ನು ಪ್ರೀತಿ-ಗೌರವದಿಂದ ಕಾಣುವ ಮತ್ತು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಇಡೀ ವಾತಾವರಣಕ್ಕೆ ಆಪ್ತಳಾಗಿ ಬದುಕುತ್ತಿರುವ ಬಂದವ್ವ ಯಾವುದೇ ಫಲಾಪೇಕ್ಷೆ ಇಲ್ಲದೇ ಸಾರ್ಥಕ ಸೇವೆಯಲ್ಲಿದ್ದಾರೆ. ಪರೋಪಕಾರಿ ಗಿಡಮರಗಳನ್ನು ಪೊರೆಯುವ ಮೂಲಕ ಮುಂದಿನ ತಲೆಮಾರುಗಳಿಗೆ ಉಪಕಾರ ಮಾಡಿದ್ದಾರೆ.ಇಂತಹ ನಿಸ್ವಾರ್ಥ ಸೇವಕಿ ಬಂದವ್ವಳ ಬದುಕಿಗೆ ನೆರಳಾಗುವ, ನೆಲೆ ಕಲ್ಪಿಸಿ ಕೊಡುವ ಸೌಲಭ್ಯಗಳು ಮಾತ್ರ ಇನ್ನೂ ಸಿಕ್ಕಿಲ್ಲ. ಸಂಬಂಧಪಟ್ಟ ಇಲಾಖೆಯವರು ಬಂದವ್ವಳಿಗೆ ಸೂರು ನೀಡಿ ಇಳಿವಯಸ್ಸಿನ ಬಾಳಿಗೆ ನೆರಳಾಗುವಂತಹ ಸೂಕ್ತ ಸೌಲಭ್ಯ ಕಲ್ಪಿಸಿಕೊಡಬೇಕೆಂಬುದು ಎಲ್ಲರ ಅಭಿಮತ. ಸಂಪ್ರದಾಯದ ಸೆಳವಿಗೆ ಸಿಕ್ಕು ಸಹಜ ಸುಂದರ ಬಾಳಿನಿಂದ ವಂಚಿತರಾಗಿ ದೇವದಾಸಿಯೆಂಬ ಕಂದಾಚಾರಕ್ಕೆ ಬಲಿಯಾಗುವ `ಪಾಪದ ಹೂ'ಗಳ ಸಾಲಿಗೆ ಸೇರಿದ್ದ ಬಂದವ್ವ ತಾನು ಮಾಡಿದ ಪುಣ್ಯದ ಕೆಲಸದಿಂದ ಕಳಂಕ ತೊಳೆದುಕೊಂಡ ಬಗೆ ಶ್ಲಾಘನೀಯ.ಅದೇ ರೀತಿ, ದಿನವೊಂದಕ್ಕೆ ಪ್ರತಿ ಗಿಡಕ್ಕೆ 5 ಬಿಂದಿಗೆ (ಅಂದಾಜು 50ಲೀ) ನೀರಿನ ಅವಶ್ಯಕತೆ ಇದ್ದು, ಅವುಗಳಿಗೆಲ್ಲ ಸಾಕಾಗುವಷ್ಟು ಅಗತ್ಯ ನೀರಿನ ಸೌಕರ್ಯ ಇಲ್ಲಿ ಇಲ್ಲ.ದೂರದ ನೀರಿನ ಟ್ಯಾಂಕ್‌ನಿಂದ ನೀರು ಹೊತ್ತು ತಂದು ಗಿಡಗಳಿಗೆ ಉಣಿಸುವುದರಲ್ಲಿ ಬೆವರು ನೀರಾಗಿ ಹರಿದಿರುತ್ತದೆ. ಆವರಣದಲ್ಲಿ ಪುರಾತತ್ವ ಇಲಾಖೆಯ ಅಥವಾ ಸರಕಾರದ ಯಾವುದೇ ಅನುದಾನದಲ್ಲಿ ಕೊಳವೆ ಬಾವಿ ಕೊರೆಸಿ ನೀರಿನ ಅನುಕೂಲ ಕಲ್ಪಿಸಿದಲ್ಲಿ ಹೂ-ಗಿಡಗಳು ಹುಲುಸಾಗಿ ಬೆಳೆದು ಹಸಿರಾದ ವಾತಾವರಣ ನಿರ್ಮಾಣ ಮಾಡಿ ಮುಂದಿನ ಪೀಳಿಗೆಗೆ ಉಸಿರಾಗಬಲ್ಲವು.ಬಂದವ್ವ ಹೇಳಿದ್ದಿಷ್ಟು...

`ಸದಾ ಅಮೃತೇಶ್ವರನ ಧ್ಯಾನ ಮಾಡುತ್ತ ಭಕ್ತಿಯ ಜೊತೆಗೆ ಸೇವೆ ಮುಂದುವರೆಸಿರುವ ನನ್ನ ವಯಸ್ಸು ಈಗ 60 ವರ್ಷ ದಾಟಿದ್ದು, ಮೊದಲಿನ ಕಸುವು ನನ್ನಲ್ಲಿಲ್ಲ. ನೀರು ತರಲು ಆಗುತ್ತಿಲ್ಲ. ಶಕ್ತಿ ಇರುವವರೆಗೆ ಸೇವೆ ಮಾಡುತ್ತೇನೆ. ವಯಸ್ಸು ಮೀರಿದ ಮೇಲೆ, ಶಕ್ತಿ ತೀರಿದ ಮೇಲೆ ಆ ಅಮೃತೇಶ್ವರ ಇದ್ದೇ ಇರುತ್ತಾನೆ, ಎಲ್ಲವನ್ನೂ ಅವನೇ ಕಾಯುತ್ತಾನೆ...' ಎನ್ನುವುದು ಬಂದವ್ವಳ ಹೇಳಿಕೆ. ಪರಿಸರ ದಿನಕ್ಕಷ್ಟೇ ಮೀಸಲು ಇರಿಸುವ ಪರಿಸರ ಪ್ರೇಮವನ್ನು ಜೀವನದುದ್ದಕ್ಕೂ ಪಸರಿಸಬೇಕು ಎನ್ನುವುದು ಅವರ ಹಂಬಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.