ಸೋಮವಾರ, ಜೂನ್ 14, 2021
27 °C

ದಿಲ್ಲಿ ದೂರ, ಹಳ್ಳಿ ಮಾತೇ ಎಲ್ಲ!

ಪ್ರಜಾವಾಣಿ ವಾರ್ತೆ/ ಸುದೇಶ್ ದೊಡ್ಡಪಾಳ್ಯ Updated:

ಅಕ್ಷರ ಗಾತ್ರ : | |

ವಿಜಾಪುರ: ಮೊದಲು ಈ ಕಥೆಯನ್ನು ಹೇಳುತ್ತೇನೆ. ಇವರ ಹೆಸರು ವಿಜಯ ಸಾಗರ್‌ ಏಳೇಗಾಂ. ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ. ಮನಸ್ಸು ಮಾಡಿ­­ದ್ದರೆ ಯಾವುದಾದರೂ ಕಂಪೆನಿ­ಯಲ್ಲಿ ಕೆಲಸ ಮಾಡಬಹು­ದಿತ್ತು. ಆದರೆ ನೆಲದ ನಂಟು ಅತಿಯಾಗಿ ಸೆಳೆ­ಯಿತು. ಹೀಗಾಗಿ ಓದು ಮುಗಿಯು­ತ್ತಿದ್ದಂ­ತೆಯೇ ತಮ್ಮ ಹೊಲದಲ್ಲಿ ದ್ರಾಕ್ಷಿ, ದಾಳಿಂಬೆ, ಲಿಂಬೆ ಬೆಳೆಯುವ ಮನಸ್ಸು ಮಾಡಿದರು. ಬರಡು ನೆಲದಲ್ಲಿ ಬಂಗಾರ ಬೆಳೆಯುವ ಕನಸು ರಮ್ಯ­ವಾ­ಗಿರ­ಲಿಲ್ಲ. ಬೋರ್ ವೆಲ್‌ ನೀರು ಸಾಕಾ­ಗು­­ತ್ತಿರ­ಲಿಲ್ಲ. ಬೇಸಿಗೆಯಲ್ಲಿ ಸಸಿಗಳನ್ನು ಕಾಪಾ­ಡಿ­ಕೊಳ್ಳುವುದೇ ದೊಡ್ಡ

ಸವಾ­ಲಾ­­ಗಿತ್ತು. ಕಷ್ಟಪಟ್ಟರೆ ಫಲ ಸಿಕ್ಕೇ ಬಿಡು­ತ್ತದೆ ಎನ್ನುವ ಅಚಲ ಆತ್ಮವಿಶ್ವಾಸ ಇವರದು. ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚಾ­ದಾಗ ಟ್ಯಾಂಕರ್‌ ನೀರು ತರಿಸುವುದು ಅನಿ­ವಾರ್ಯವಾಯಿತು. ದಿನಕ್ಕೆ 15 ರಿಂದ 20 ಟ್ಯಾಂಕರ್‌ ನೀರು ಬೇಕಾ­ಗಿತ್ತು. ಟ್ಯಾಂಕರ್‌ವೊಂದಕ್ಕೆ ₨600. ಅದರೂ ಬೆಳೆ ಕಾಪಾಡಿ­ಕೊಂಡರು. ಹೀಗೇ ಆದರೆ ಮುಂದಿನ ದಿನ­ಗಳಲ್ಲಿ ತೋಟ­ಗಾರಿಕೆ ಬೆಳೆಯಿಂದ ಲಾಭ ಪಡೆಯುವುದು ಕಷ್ಟ ಎನ್ನುವುದು ಅರಿವಿಗೆ ಬಂದಿತು.

ವಿಜಯಸಾಗರ್‌ ತಮ್ಮ ಚಿಕ್ಕಪ್ಪ ಹಾಗೂ ಇನ್ನೂ ಕೆಲವು ರೈತರ ಜತೆ ಸೇರಿಕೊಂಡು ಇಂಡಿ ಕಾಲುವೆ­ಯಿಂದ ಬರೋಬರಿ 10 ಕಿಲೋ­ಮೀಟರ್‌ ದೂರದಿಂದ ಪೈಪ್‌­ಲೈನ್‌ ಎಳೆಸಿದರು. ಇದಕ್ಕಾಗಿ ₨15 ಲಕ್ಷ ಖರ್ಚಾಗಿದೆ. ತೋಟದಲ್ಲಿ ಕೃತಕವಾಗಿ ನಿರ್ಮಿಸಿರುವ ಹೊಂಡದಲ್ಲಿ ನೀರು ಸಂಗ್ರಹಿಸಿ ಈ ಬಾರಿ ದ್ರಾಕ್ಷಿ, ದಾಳಿಂಬೆ, ಲಿಂಬೆಯನ್ನು ಸೊಗಸಾಗಿ ಬೆಳೆದಿದ್ದರು.ಕಳೆದ ವಾರ ದೃಷ್ಟಿ ತಾಗುವಷ್ಟು ದ್ರಾಕ್ಷಿ ಗೊನೆಗಳು, ದಾಳಿಂಬೆ ಹಣ್ಣು, ಲಿಂಬೆ ಕಾಯಿಗಳಿಂದ ಕಂಗೊಳಿಸುತ್ತಿದ್ದ ತೋಟ ಈಗ ಸರ್ವನಾಶವಾಗಿದೆ. ಎಲೆ, ಗೊನೆ, ಹಣ್ಣುಗಳನ್ನು ಕಳೆದುಕೊಂಡ ಖಾಲಿ...ಖಾಲಿ ತೋಟದ ಮಧ್ಯ ನಿಂತಿದ್ದ ವಿಜಯ ಸಾಗರ್‌ ಕಣ್ಣುಗಳೂ ಖಾಲಿ­ಯಾಗಿದ್ದವು. ಇದನ್ನು ಇಲ್ಲಿ ಪ್ರಸ್ತಾಪಿ­ಸಲು ಸಕಾರಣವಿದೆ. ವಿಜಾಪುರ ಜಿಲ್ಲೆ­ಯಲ್ಲಿ ಈಗ ಪ್ರವಾಸ ಮಾಡುವ­ವರಿಗೆ ಆಲಿ­ಕಲ್ಲು ಮಳೆ ಮಾಡಿರುವ ದೊಡ್ಡ ಹಾನಿ ಕಣ್ಣಿಗೆ ರಾಚುತ್ತದೆ. ಕಿರಾಣಿ ಅಂಗಡಿ, ಬಸ್‌ ನಿಲ್ದಾಣ, ಹನು­ಮನ ಗುಡಿ ಮುಂದೆ ಕುಳಿ­ತ­ವರು ಇದೇ ವಿಷಯವನ್ನು ಬಾಯಿ ನೋಯುವ ಮಟ್ಟಿಗೆ ಮಾತ­ನಾ­ಡುತ್ತಾರೆ.

ವಿಜಾಪುರ ಜಿಲ್ಲೆಯಲ್ಲಿ ಸದ್ಯದ ಚುನಾವಣೆ ವಾತಾವರಣವನ್ನು ನೋಡಲು ಹೋದಾಗ ಇಂಡಿಯಲ್ಲಿ ಮಾತಿಗೆ ಸಿಕ್ಕ ವಿಠಲಗೌಡ ಬಿರಾದಾರ ಚುನಾವಣೆ ವಿಷಯವನ್ನು ಮಾತನಾ­ಡಲು ಒಪ್ಪಲೇ ಇಲ್ಲ. ‘ನೀವು ನನ್ನೊಂದಿಗೆ ಬನ್ನಿ. ಒಂದು ತೋಟವನ್ನು ತೋರಿಸುತ್ತೇನೆ. ಆ ಮೇಲೆ ನೀವು ಚುನಾವಣೆ ಬಗ್ಗೆ ಬರೆಯುತ್ತಿರೋ ಅಥವಾ ಆಲಿಕಲ್ಲು ಮಳೆಯಿಂದ ಬರ್ಬಾದ್‌ ಆಗಿರುವ ರೈತರ ಬಗ್ಗೆ ಬರೆಯುತ್ತೀರೋ ನೋಡೋಣ’ ಎಂದು ಪ್ರೀತಿ ಮಿಶ್ರಿತ ಸವಾಲು ಹಾಕಿದರು.

ಇದರ ಪರಿಣಾಮವೇ ವಿಜಯಸಾಗರ್‌ ತೋಟವನ್ನು ನೋಡುವಂತಾಯಿತು.‘ಈ ಬಾರಿ ಭರ್ಜರಿ ಫಸಲು ಬಂದಿತ್ತು. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೆ. ಏನ್‌ ಮಾಡೋದು, ನಮ್ ಸ್ಟಾರ್ ಸರಿ ಇರಲಿಲ್ಲ’ ಎಂದು ಯುವ ರೈತ ವಿಜಯ ಸಾಗರ್‌ ಹೇಳುವಾಗ ಕಣ್ಣಿನಿಂದ ನೀರು ಜಾರಿತು.ವಾರದಿಂದ ಹಿಂದೆ ಬಿದ್ದ, ಎಂದೂ ಕೇಳರಿಯದ ಆಲಿಕಲ್ಲು ಮಳೆಯಿಂದ ತೋಟ ಸಂಪೂರ್ಣ ಹಾನಿಗೊಳಗಾಗಿದ್ದು, ವಿಜಯ ಸಾಗರ್‌ ಈಗ ಸಾಲಗಾರ. ‘ನೀವು ವಾರದ ಹಿಂದೆ ಬರಬೇಕಿತ್ತು. ನಮ್ಮ ತೋಟ ನೋಡಿದರೆ ಮಲೆನಾಡು ನೋಡಿದ ಅನುಭವವಾಗುತ್ತಿತ್ತು. ಈಗ ನೋಡಿ ಬರೀ ಬೋಳು, ಬೋಳು’ ಎಂದ ಸಾಗರ್‌ ಮುಂದೆ ನಿಂತು ‘ಈ ಬಾರಿ ಯಾರಿಗೆ ಮತ ಹಾಕುತ್ತೀರಿ’ ಎಂದು ಕೇಳಲು ಮನಸ್ಸು ಒಪ್ಪಲೇ ಇಲ್ಲ.ಅದು ತಾಂಬಾ ಗ್ರಾಮ. ದೇವರಹಿಪ್ಪರಗಿಯಿಂದ ಇಂಡಿಗೆ ಸಾಗುವ ಮಾರ್ಗಮಧ್ಯ ಸಿಗುತ್ತದೆ. ರಸ್ತೆ ಪಕ್ಕದಲ್ಲೇ ಇದ್ದ ಚಹಾದಂಗಡಿಯಲ್ಲಿ ಚಹಾ ಕುಡಿಯುತ್ತಿದ್ದೆ. ಅಲ್ಲಿದ್ದ ಹತ್ತಾರು ಮಂದಿ ಪರಸ್ಪರ ಚರ್ಚೆಯಲ್ಲಿ ಮುಳುಗಿದ್ದರು. ಅವರಲ್ಲಿದ್ದ ರೈತನ ಹೆಸರು ಭೀಮಣ್ಣ ಪರಪೇಟೆ. ಈತನ 20 ಎಕರೆಯಲ್ಲಿ ಕಡ್ಲೆ ಬೆಳೆದಿದ್ದು, ಆಲಿಕಲ್ಲು ಮಳೆಯಿಂದ ಕೈ ಕಚ್ಚಿದೆ. ಏನಿಲ್ಲವೆಂದರೂ 125 ಚೀಲ ಆಗುತ್ತಿತ್ತು. ಮಳೆಯಿಂದಾಗಿ 60 ಚೀಲ ಆದರೆ ಹೆಚ್ಚು.‘ನಾವು ಎಲೆಕ್ಷನ್‌ನೋರಲ್ರಿ. ಮುಂಜಾನೆಯಿಂದ ಸಂಜಿತನ ಹೊಲ್ದಾಗ ಇರೋರ್ರಿ. ಎಲೆಕ್ಷನ್ ನಾದಿನವರೇ ಅಲ್ಲ. ನಾವು ಕುರಿಯಾಗಿನ ನಾಯಿ ಇದ್ದಂಗ.  ಓಣಿಯಾಗಿನ ಲೀಡ್ರೇ ನಮ್ಗೆ ತಿಳಿಯಂಗಿಲ್ಲ. ಇನ್ನು ಎಂಥ ಎಲೆಕ್ಷನ್ನು. ನಾವು ಅಂಗಿಸೈತಾ ವಕ್ಕೊಳ್ಳಲ್ರಿ. ಮಳಿಗೆ ಅದೇ ತೋಯ್ದು ಸ್ವಚ್ಛ ಆಗಬೇಕು’ ಎಂದು ನಕ್ಕರು.ಅವರ ಮಾತು ಅಸಹಜ ಎನಿಸಲಿಲ್ಲ. ಏಕೆಂದರೆ ಐದು ಅಡಿ ಎತ್ತರದ ಭೀಮಣ್ಣ ಧರಿಸಿದ್ದ ಬಿಳಿ ಅಂಗಿ, ಧೋತ್ರ, ತಲೆಯಲ್ಲಿದ್ದ ಟೋಪಿ ಕಪ್ಪು ಬಣ್ಣಕ್ಕೆ ತಿರುಗಿದ್ದವು. ಭೀಮಣ್ಣ ಮಾತನಾಡುವುದನ್ನು ಕಂಡು ಅಲ್ಲಿಗೆ ಬಂದವರು ಭೀರಪ್ಪ ವಗ್ಗಿ. ಇವರೂ ಸಹ ಒಕ್ಕಲುತನ ಮಾಡುವವರೆ. ಚುನಾವಣೆ ಹೆಸರು ಎತ್ತಿದರೆ ‘ನಮ್ಮ ಬದುಕೇ ಸಾಕ್ಯಾಗದ. ಯಾವ ಎಲೆಕ್ಷನ್‌ರ್ರೀ. ಅದು ತಗಂದು ಏನ್‌ ಮಾಡೋದು. ನಮ್‌ಬಲ್ಲಿ 20 ದನ ಅವ. ಅವಕ್ಕ ಮೇವಿಗಿ ಏನ್‌ ಮಾಡೋದು ತಿಳ್ಯವಲ್ದು. ಜೋಳದ ಕಣಕಿ ಗಾರ್‌ಬಿದ್‌ (ಆಲಿಕಲ್ಲು) ಹಾಳಾಗ್ಯಾದ’ ಎಂದು ಚುನಾವಣೆ ಕುರಿತು ಮಾತನಾಡಲು ಉದಾಸೀನ ತೋರಿಸಿದರು.ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಸಿಗುವ ಹೊರ್ತಿ ದೊಡ್ಡ ಗ್ರಾಮ. ಇಲ್ಲಿನ ಅಂಗಡಿಯೊಂದರ ಮುಂದೆ ಏಳೆಂಟು ರೈತರು ಕುಳಿತು ಹರಟೆಯಲ್ಲಿ ತೊಡಗಿದ್ದರು. ಅಲ್ಲಿಯೂ ವಾರದ ಹಿಂದೆ ಬಿದ್ದ ಆಲಿಕಲ್ಲು ಮಳೆ ಮಾಡಿದ ರಾದ್ಧಾಂತದ್ದೇ ಮಾತು ತುಂಬಿತ್ತು. ‘ನಿಮ್‌ ಊರಲ್ಲಿ ರಾಜಕೀಯ ಹೇಗಿದೆ?’– ಮಾತು ಬದಲಿಸುವ ಸಲುವಾಗಿ ಕೇಳಿದೆ. ಆ ಗುಂಪಿನಲ್ಲಿದ್ದ ಕಟ್ಟು ಮಸ್ತಾದ ವ್ಯಕ್ತಿ ‘ರಾಜಕೀಯ ಹಾಳಾಗಲಿ; ನಮ್ಮ ಬದುಕು ಮುಖ್ಯ. ನಾವು ಕೆಟ್ಟರೆ ರಾಜಕೀಯದವರು ಬಂದು ನೋಡ್ತಾರಾ?’ ಎಂದು ತುಸು ಒರಟಾಗಿಯೇ ಕೇಳಿದ.ತಮ್ಮ ಜತೆಗಿದ್ದ ವ್ಯಕ್ತಿ ಒರಟಾಗಿ ಮಾತನಾಡಿದ್ದು ಸಂಗಪ್ಪ ತಳವಾರ ಅವರಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಕೂಡಲೇ ಮಧ್ಯ ಪ್ರವೇಶಿಸಿ ‘ನಾವು ನಮ್ಮ ಸಂಕಷ್ಟದ ಒಳಗೆ ಇದ್ದೀವಿ. ಅವರು (ರಾಜಕಾರಣಿಗಳು) ಅವರ ಸಂಕಷ್ಟದೊಳಗೆ ಇದ್ದಾರೆ. ಈಗ ಎರಡೂ ಕೂಡಿ ಬಂದಿವೆ. ಹೀಗಾಗಿ ಏನು ಆಗುತ್ತದೋ ಹೇಳಲು ಬರುವುದಿಲ್ಲ .ರಾಜಕಾರಣಿಗಳು, ಸರ್ಕಾರ ಮೊದಲು ನಮ್ಮ ಸಂಕಷ್ಟವನ್ನು ಪರಿಹರಿಸಬೇಕು. ಆಗ ಮಾತ್ರ ಅವರ ಸಂಕಷ್ಟ (ಚುನಾವಣೆ)ವೂ ಪರಿಹಾರವಾಗುತ್ತದೆ’ ಎಂದು ಇನ್ನೂ ಮಾತು ಮುಗಿಸಿರಲಿಲ್ಲ. ಇಷ್ಟರಲ್ಲಿ ಮತ್ತೊಬ್ಬ ‘ರಾಜಕೀಯ ತಕೊಂಡು ಏನ್‌ ಮಾಡೋದು. ಸಾಲವಂತು ಹೊರೆಯಾಗಿಬಿಟ್ಟಿದೆ’ ಎಂದ.‘ಈಗ ಮೋದಿ ಗಾಳಿ ಅನ್ನುತ್ತಾರೆ. ಒಂದು ವೇಳೆ ಅವರೇ ಅಧಿಕಾರಕ್ಕೆ ಬಂದ್ರು ಅಂತ ತಿಳ್ಕೋಳ್ರಿ. ಹೇಳಿದ ಹಾಗೆ ಕೆಲಸ ಮಾಡಿ ತೋರಿಸಿದರೆ ಛಲೋ. ಕಾಂಗ್ರೆಸ್‌ 60 ವರ್ಷ ಮಾಡಲಾರದ ಕೆಲಸನಾ, ತಾನು 60 ದಿನದಲ್ಲಿ ಮಾಡಿ ತೋರಿಸುತ್ತೇನೆ ಎಂದಿದ್ದಾರೆ ಮೋದಿ’ ಎಂದರು ಕಾಂಗ್ರೆಸ್‌ ಪಕ್ಷದ ಬಗ್ಗೆ ಒಲವು ಇರುವ 60 ರ ಪ್ರಾಯದ ತಳವಾರ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ 50 ರ ಪ್ರಾಯದ ಮೋದಿ ಅಭಿಮಾನಿ, ‘60 ದಿನ ಅಲ್ಲ, 60 ತಿಂಗಳು. ಪಟಕ್ಕನೆ ಮಾಡಲು ಅದು ರೊಟ್ಟಿಯೇ?’ ಎಂದು ರೇಗಿದ.ಉರಿಬಿಸಿಲಲ್ಲೂ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ‘ಮೋದಿ ಗಾಳಿ ಇದೆ’ ಎಂದ ತೊದಲುತ್ತಲೇ ಹೇಳಿದ! ಇದಕ್ಕೆ ತಳವಾರ ‘ಮೋದಿ ಗಾಳಿ ಇದೆ, ಅದು ಎಲ್ಲರ ಬಾಯಲ್ಲಿ’ ಎಂದು ಅಸಮಾಧಾನ ವ್ಯಕ್ತಪಡಿಸಿದ. ಅಮಲಿನಲ್ಲಿದ್ದ ವ್ಯಕ್ತಿ ಹೆಸರು ಶಿವಶರಣಪ್ಪ ಚೌಧರಿ. ಈತ ವೃತ್ತಿಯಲ್ಲಿ ಟ್ರಕ್‌ ಚಾಲಕ. ಹೆಚ್ಚು ಗುಜರಾತ್ ಗೆ ಹೋಗುತ್ತಾನಂತೆ. ಆದ್ದರಿಂದ ಮೋದಿಯ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದಾನೆ ಎನ್ನುವ ವಿವರವನ್ನು ಅಂಗಡಿಯ ಮುಂದಿದ್ದವರೇ ಕೊಟ್ಟರು.ಲೋಕಸಭೆ ಚುನಾವಣೆಗೆ ಇನ್ನು 30 ದಿನಗಳು ಬಾಕಿ ಇವೆ. ಆದರೆ ವಿಜಾಪುರ ಜಿಲ್ಲೆ ರೈತರು ಮಾತ್ರ ಉತ್ಸಾಹ ತೋರಿಸುತ್ತಿಲ್ಲ. ದಿಲ್ಲಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ‘ಅಬ್‌ ಕೀ ಬಾರ್ ಮೋದಿ ಸರ್ಕಾರ್’ ಎನ್ನುವ ಚುನಾವಣೆ ಉದ್ಘೋಷವನ್ನು ತೇಲಿಬಿಟ್ಟಿದೆ. ‘ಬಲಿಷ್ಠ ಭಾರತಕ್ಕಾಗಿ ನಾವು, ನೀವು’ ಎನ್ನುತ್ತಿದ್ದಾರೆ ಕಾಂಗ್ರೆಸ್‌ ಯುವ ನಾಯಕ ರಾಹುಲ್‌ಗಾಂಧಿ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ‘ಕರ್ನಾಟಕ ಉಳಿಸಿ’ ಎಂದು ಮತದಾರರಲ್ಲಿ ಮೊರೆ ಇಡುತ್ತಿದೆ. ಆದರೆ ಈ ಜಿಲ್ಲೆಯ ರೈತರು ಈ ಮೂರೂ ಪಕ್ಷದವರನ್ನು ಕೇಳುತ್ತಿದ್ದಾರೆ;  ’ಮೊದಲು ನಮ್ಮನ್ನು ಉಳಿಸಿ’ ಎಂದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.