ಪಟ್ನಾ/ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಿಟ್ಟಿರುವ ಒಕ್ಕೂಟ ವೇದಿಕೆ ರಚನೆ ಪ್ರಸ್ತಾವಕ್ಕೆ ತೆಲುಗುದೇಶಂ ಪಕ್ಷ (ಟಿಡಿಪಿ) ಸಹ ಗುರುವಾರ ಬೆಂಬಲ ವ್ಯಕ್ತಪಡಿಸಿದೆ.

ಈ ನಡುವೆ, ಎನ್ಡಿಎ ಸಖ್ಯ ಕಡಿದುಕೊಳ್ಳುವ ವಿಷಯದಲ್ಲಿ ಜೆಡಿಯು ಸ್ಪಷ್ಟವಾಗಿ ಏನನ್ನೂ ಹೇಳದಿರುವುದು ಬಿಜೆಪಿಗೆ ನುಂಗಲಾರ ಬಿಸಿ ತುಪ್ಪವಾಗಿದೆ.

`ಒಕ್ಕೂಟ ವೇದಿಕೆ ಸೇರುವುದು ನೂರಕ್ಕೆ ನೂರು ಸತ್ಯ. ಈ ಸಂಬಂಧ ನಿತೀಶ್ ಕುಮಾರ್ ಹಾಗೂ ನವೀನ್ ಪಟ್ನಾಯಕ್ ಮತ್ತಿತರ ಮುಖಂಡರ ಜತೆ ಸಂಪರ್ಕದಲ್ಲಿದ್ದೇನೆ' ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೈದರಾಬಾದ್ನಲ್ಲಿ ಹೇಳಿದ್ದಾರೆ.

`ಯುಪಿಎ ಹಾಗೂ ಎನ್ಡಿಎ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿವೆ. ಇದೇ ಹೊತ್ತಿನಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗುತ್ತಿದ್ದು, ಮುಂದಿನ ಸರ್ಕಾರ ರಚಿಸಲಿವೆ' ಎಂದು ನಾಯ್ಡು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳವಳಕಾರಿ ವಿದ್ಯಮಾನ: `ಮೈತ್ರಿಕೂಟದಲ್ಲಿನ ಇತ್ತೀಚಿನ ವಿದ್ಯಮಾನಗಳು ಕಳವಳಕಾರಿಯಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಯು, ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಡಿಯಂಥ ಪ್ರಾದೇಶಿಕ ಪಕ್ಷಗಳು ಒಂದಾದರೆ ಚೆನ್ನಾಗಿರುತ್ತದೆ' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಟ್ನಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಹೊರಗಿಟ್ಟು ಒಕ್ಕೂಟ ವೇದಿಕೆ ರಚಿಸುವ ಪ್ರಸ್ತಾಪವನ್ನು ಜೆಡಿಯು ಬೆಂಬಲಿಸಿದೆ ಎಂಬ ವರದಿ ಕುರಿತು ಕೇಳಿದ ಪ್ರಶ್ನೆಗೆ, `ಮಮತಾ ಬ್ಯಾನರ್ಜಿ ದೂರವಾಣಿಯಲ್ಲಿ ನನ್ನೊಂದಿಗೆ ಮಾತನಾಡಿದ್ದಾರೆ. ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ರಾಜ್ಯಗಳು ಒಂದೇ ರೀತಿಯ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿವೆ ಎನ್ನುವುದು ಅವರ ಅನಿಸಿಕೆ. ನಾವು ಆ ನಿಟ್ಟಿನಲ್ಲಿ ಒಟ್ಟಾಗಿ ಚಿಂತನೆ ನಡೆಸಬೇಕಿದೆ' ಎಂದರು.

`ಎಲ್ಲರೂ ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡರೆ ಪರ್ಯಾಯ ವೇದಿಕೆ ರಚಿಸಬಹುದು. ಇದು ಆರಂಭಿಕ ಹಂತವಷ್ಟೆ. ತೃತೀಯ ರಂಗ ರಚನೆಯಾಗಿದೆ ಎಂದು ಊಹಾಪೋಹ ಹಬ್ಬಿಸಬಾರದು' ಎಂದು ನಿತೀಶ್ ಹೇಳಿದರು.

ಮನವೊಲಿಕೆ ಯತ್ನ: ಈ ನಡುವೆ ಬಿಜೆಪಿ ಮುಖಂಡರಾದ ನಿತಿನ್ ಗಡ್ಕರಿ ಹಾಗೂ ಮುಖ್ತರ್ ಅಬ್ಬಾಸ್ ನಕ್ವಿ ಅವರು ಗುರುವಾರ ದೆಹಲಿಯಲ್ಲಿ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರನ್ನು ಭೇಟಿಯಾಗಿ ಮನವೊಲಿಕೆ ಯತ್ನ ನಡೆಸಿದರು.
ಬಿಜೆಪಿ ಮುಖಂಡರು ಹಾಗೂ ಯಾದವ್ ನಡುವಿನ ಮಾತುಕತೆಯಲ್ಲಿ `ಸಕಾರಾತ್ಮಕ ಬೆಳವಣಿಗೆ' ಕಂಡುಬಂದಿಲ್ಲ ಎಂದು ಮೂಲಗಳು ಹೇಳಿವೆ.

ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, `ಸದ್ಯಕ್ಕಂತೂ ಎನ್ಡಿಎ ಅಸ್ತಿತ್ವದಲ್ಲಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ' ಎಂದರು.

ಬಿಜೆಪಿ ಜತೆಗಿನ ಸಖ್ಯ ಕಡಿದುಕೊಳ್ಳುವ ಯೋಚನೆಯನ್ನು ಕೈಬಿಡುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ `ಎರಡೂ ಪಕ್ಷಗಳ ನಡುವೆ ಚರ್ಚೆ ನಡೆಯುತ್ತಿದೆ. ನಮ್ಮ ಪಕ್ಷದ ಪ್ರಮುಖ ಕಾರ್ಯಕರ್ತರೊಂದಿಗೂ ಸಮಾಲೋಚನೆ ನಡೆಸುತ್ತಿದ್ದೇವೆ. ಈ ಬಗ್ಗೆ ಸಭೆ ಕರೆಯುತ್ತೇವೆ. ಅಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ' ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ನುಡಿದರು.

ಅಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಜೆಡಿಯು ಒಪ್ಪಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ, `ನಾನೊಬ್ಬನೇ ನಿರ್ಧಾರಕ್ಕೆ ಬರಲಾಗದು' ಎಂದು ಜಾಣತನದಿಂದ ಉತ್ತರಿಸಿದರು.

`ಮೈತ್ರಿ ಕುದುರಿಸಲು ಮಮತಾ ಚೌಕಾಸಿ'
ಕೋಲ್ಕತ್ತ (ಪಿಟಿಐ): ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಮೈತ್ರಿ ಕುದುರಿಸಲು ಚೌಕಾಸಿ ನಡೆಸುವುದಕ್ಕಾಗಿ ಮಮತಾ ಬ್ಯಾನರ್ಜಿ ಅವರು ಒಕ್ಕೂಟ ವೇದಿಕೆ ಪ್ರಸ್ತಾವ ಮುಂದಿಟ್ಟಿದ್ದಾರೆ ಎಂದು ಎಡಪಕ್ಷಗಳು ಟೀಕಿಸಿವೆ.

`ಮಮತಾ ಅವರ ಈ ಹಿಂದಿನ ರಾಜಕೀಯ ನಡೆ ಎಲ್ಲರಿಗೂ ಗೊತ್ತಿದೆ. ಅವರು ಬೇರೆ ಪಕ್ಷಗಳ ಅನಿಸಿಕೆಗಳಿಗೆ ಕವಡೆ ಕಿಮ್ಮತ್ತು ನೀಡದೆ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಾರೆ. ಹಾಗಾಗಿ ಒಕ್ಕೂಟ ವೇದಿಕೆ ಯಶಸ್ವಿಯಾಗುವುದಿಲ್ಲ' ಎಂದು ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕ ಸೂರ್ಯಕಾಂತ ಮಿಶ್ರಾ ಹೇಳಿದ್ದಾರೆ.

ಮಿಶ್ರಾ ಹೇಳಿಕೆಗೆ ದನಿಗೂಡಿಸಿರುವ ಸಿಪಿಐ ಮುಖಂಡ ಎ.ಬಿ.ಬರ್ದನ್, `ಕೇಂದ್ರದಲ್ಲಿ ಅಧಿಕಾರದ ಲಾಭ ಪಡೆದುಕೊಳ್ಳುವುದಕ್ಕೆ ಕೆಲವು ಮುಖ್ಯಮಂತ್ರಿಗಳು ಮಾತ್ರ ಮುಂದೆ ಬಂದಿದ್ದಾರೆ. ಅವರ ಈ ಆಯ್ಕೆ ಸೂಕ್ತವಾಗಿಲ್ಲ' ಎಂದಿದ್ದಾರೆ.

ಲಖನೌ ವರದಿ: `ಲೋಕಸಭೆ ಚುನಾವಣೆಗೂ ಮುನ್ನ ತೃತೀಯ ರಂಗ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇಲ್ಲ' ಎಂದು ಸಮಾಜವಾದಿ ಪಕ್ಷ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.