ಬುಧವಾರ, ಜೂನ್ 16, 2021
21 °C

ದೀಪಕ ಸಂಗೀತ ರೂಪಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ವಾರಾಂತ್ಯದ ಸಂಗೀತ ಕಾರ್ಯಕ್ರಮಗಳಿಗೆ ಬರವಿಲ್ಲ. ಹೊಸತನ ತರುವ ತುಡಿತ ಎಲ್ಲ ಸಂಘಟಕರದ್ದು. ಜಾನಪದ ಪ್ರಕಾರದಿಂದ ಹಿಡಿದು ಪಾಶ್ಚಾತ್ಯ ಶೈಲಿ, ಫ್ಯೂಷನ್ ಹೀಗೆ ಎಲ್ಲ ವರ್ಗದವರ ಆಸಕ್ತಿಗೆ ಸ್ಪಂದಿಸುವ ಸಂಗೀತ ಕಛೇರಿಗಳು ನಡೆಯುತ್ತಲೇ ಇವೆ.

 

ಕೆಲವು ಕಛೇರಿಗಳಿಗೆ ವಾಣಿಜ್ಯ ಉದ್ದೇಶವಿದ್ದರೆ, ಕೆಲವು ಸಂಸ್ಕೃತಿ ಪರಿಚಾರಿಕೆಯ ಉಮೇದಿನಿಂದ ಕೂಡಿರುತ್ತವೆ. ಹೋಮ್‌ಟೌನ್ ಪ್ರೊಡಕ್ಷನ್ಸ್‌ನ ಉಮೇದೂ ಅದೇ. ಅರವಿಂದ್ ಇದರ ಪ್ರೇರಕ ಶಕ್ತಿ. ಅವರ ಸಹೋದರಿ ನಟಿ ಭಾವನಾ ಸಂಸ್ಥೆಯ ಸಂಗೀತ ಅಭಿರುಚಿಯನ್ನು ಪೋಷಿಸುತ್ತಿದ್ದಾರೆ.ವರ್ಷಕ್ಕೆ ಬೆರಳೆಣಿಕೆಯಷ್ಟು ಕಾರ್ಯಕ್ರಮಗಳನ್ನು ಸಂಘಟಿಸುವ ಹೋಮ್‌ಟೌನ್ ಪ್ರೊಡಕ್ಷನ್ಸ್‌ನ ಕಾರ್ಯಕ್ರಮಗಳಿಗೆಲ್ಲ ಪ್ರವೇಶ ಉಚಿತ. ಇನ್ನೊಂದು ಗಮನಾರ್ಹ ಅಂಶವೆಂದರೆ ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ಅಥವಾ ಖ್ಯಾತ ಕಲಾವಿದರ ಪಕ್ಕದಲ್ಲಿ ಕುಳಿತು ಅವರ ಖ್ಯಾತಿಗೆ ತಮ್ಮದೂ ಹಿಡಿ ಕಾಣಿಕೆ ನೀಡುತ್ತಿರುವ ಕಲಾವಿದರನ್ನು ಹೆಕ್ಕಿ ತೆಗೆದು ಅವಕಾಶ ನೀಡುವ ಸಂಸ್ಥೆ ಇದು.ಮೂರು ವರ್ಷದ ಅವಧಿಯಲ್ಲಿ ನೂಪುರ, ಢಮರು ಮತ್ತು ವೇವ್ಸ್ ಎಂಬ ಮೂರು ಸ್ಮರಣೀಯ ಕಾರ್ಯಕ್ರಮಗಳನ್ನು ನೀಡಿದೆ. ಒಮ್ಮೆ ಕಛೇರಿಗೆ ಬಂದ ಸಂಗೀತ ಪ್ರೇಮಿಗಳ ಜಾಡು ಹಿಡಿದು ಮತ್ತೆ ಅವರಿಗೆ ವೈಯಕ್ತಿಕ ಆಮಂತ್ರಣ ಕಳಿಸುವ, ಪ್ರೇಕ್ಷಕರೊಂದಿಗೆ ಆತ್ಮೀಯತೆಯನ್ನು ಉಳಿಸಿಕೊಳ್ಳುವ ಕೆಲಸವನ್ನೂ ಅರವಿಂದ್ ಮಾಡುತ್ತಾ ಬಂದಿದ್ದಾರೆ.ಹೋಮ್‌ಟೌನ್ ಪ್ರೊಡಕ್ಷನ್ಸ್‌ನ ಈ ವರ್ಷದ ಮೊದಲ ಕಾರ್ಯಕ್ರಮ ಕಳೆದ ಶುಕ್ರವಾರ (ಮಾರ್ಚ್ 9) ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಿತು. ಹೆಸರು `ಜ್ಯೂಕ್ ಬಾಕ್ಸ್~. ವೇದಿಕೆಯ ಕೇಂದ್ರ ಬಿಂದು ದೀಪಕ್ ಪಂಡಿತ್. ಖ್ಯಾತ ಗಜಲ್ ಗಾಯಕ ಜಗಜಿತ್ ಸಿಂಗ್ ಅವರೊಂದಿಗೆ 70ಕ್ಕೂ ಹೆಚ್ಚು ಆಲ್ಬಂಗಳನ್ನು ಮಾಡಿದವರು.ಆದರೆ, ಬೆಂಗಳೂರಿಗರಿಗೆ ಬಹುತೇಕ ಅಪರಿಚಿತರು. ಒಂದಿಷ್ಟು `ಆಫ್‌ಬೀಟ್~ ಹಿಂದಿ ಚಿತ್ರಗಳಿಗೂ ಸಂಗೀತ ನೀಡಿರುವ ದೀಪಕ್ ಪಂಡಿತ್ ಅವರ ವಯಲಿನ್ ನಾದ ಒಂದೂವರೆ ಗಂಟೆಗಳ ಕಾಲ ಚೌಡಯ್ಯ ಸಭಾಭವನದಲ್ಲಿ ಕಿಕ್ಕಿರಿದು ಸೇರಿದ್ದ ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧಗೊಳಿಸಿತು.ಜ್ಯೂಕ್ ಬಾಕ್ಸ್ ತೆರೆದುಕೊಂಡಿದ್ದು ಮುಕುಲ್ ಢೋಂಗ್ರೆ ಅವರ ಏಕವ್ಯಕ್ತಿ ಡ್ರಮ್‌ನೊಂದಿಗೆ. ಅದರ ಹೆಸರೇ `ರೋಲಿಂಗ್ ಸ್ಟೋನ್ಸ್~. 15 ನಿಮಿಷಗಳವರೆಗೆ ಲಯಬದ್ಧವಾಗಿ ಡ್ರಮ್‌ಗಳಿಂದ ಹೃದಯಕ್ಕೆ ಗುದ್ದುವ ಶಬ್ದ. ಅದು ಕಿವಿಯಿಂದ ದೂರವಾಗುವುದರೊಳಗೆ ದೀಪಕ್ ಪಂಡಿತ್ ಕಛೇರಿಯನ್ನು ಆವರಿಸಿಕೊಂಡರು. ಬ್ಲಾಕ್ ಸ್ವಾನ್, ಟೌನ್ ಫ್ಲಿಂಚ್, ಸೂಫಿ ಮೌಲಾ ಅಲಿ, ಆನಂದಮ್, ಪುರಿಯಾ ಧನಶ್ರ್ ಮತ್ತು ಸೋನಿಕ್ ಭೂಮಿ ಎಂಬ ಆಕರ್ಷಕ ಹೆಸರುಗಳನ್ನು ಏಳು ಬಗೆಯ `ಸಂಗೀತ ಖಾದ್ಯ~ಗಳಿಗೆ ನೀಡಲಾಗಿತ್ತು.ಸ್ಥಳೀಯ ಗಾಯಕಿ ಪೂರ್ಣಿಮಾ ಭಟ್ ಅವರೊಂದಿಗೆ ದೀಪಕ್ ಪಂಡಿತ್ ಅವರ ವಯಲಿನ್ ಪೈಪೋಟಿ ಜುಗಲ್ ಬಂದಿಯ ಸ್ವರೂಪ ಪಡೆಯಿತೆಂದರೂ ಸಾಲದು. ಇಬ್ಬರ ನಡುವಿನ ಸಂಗೀತ ಸಂವಾದದ ತೀವ್ರತೆ ಅಷ್ಟಿತ್ತು.ನಡುವೆ ಶೆಲ್ಡನ್ ಡಿಸಿಲ್ವಾ ಅವರ ಗಿಟಾರ್ ಸೋಲೋ ಸಹ ತಲೆದೂಗುತ್ತಿದ್ದವರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದಿತು. ಅರುಣ್ ಕುಮಾರ್ ಅವರಿದ್ದ ಇನ್ನೊಂದು ಡ್ರಮ್, ಸಂಜಯ್ ಜೈಪುರ್‌ವಾಲಾ ಅವರ ಓವೇಷನ್ ಗಿಟಾರ್, ಗಿರಿಧರ ಉಡುಪ ಅವರ ಘಟ, ಹೀರಾ ಪಂಡಿತ್ ಅವರ ತಬಲಾ ಎಲ್ಲವೂ ಹದವಾಗಿ ಮಿಳಿತಗೊಂಡು ಸಂಗೀತದ ರಸದೌತಣ ಬಡಿಸಿತು.ಸಂಗೀತಕ್ಕೆ ಮೆರುಗು ನೀಡಿದ ಇನ್ನೆರಡು ಅಂಶಗಳೆಂದರೆ ಬೆಳಕು ಮತ್ತು ವೇದಿಕೆ. ಕೇವಲ ಬೆಳಕಿನ ಛಾಯೆಯಲ್ಲಿಯೇ ನಡೆದ ರೋಲಿಂಗ್ ಸ್ಟೋನ್ಸ್ ಮುಗಿಯುತ್ತಿದ್ದಂತೆ ವೇದಿಕೆಯ ಹಿನ್ನೆಲೆಯಲ್ಲಿ ಮೊಘಲ್ ಅರಮನೆಗಳನ್ನು ನೆನಪಿಸುವ ರೇಖಾಚಿತ್ರಗಳು ಮೂಡಿ ಬಂದವು. ಕಛೇರಿಯುದ್ದಕ್ಕೂ ಈ ರೇಖಾಚಿತ್ರಗಳು ಬಣ್ಣಗಳಲ್ಲಿ ಓಕುಳಿಯಾಡುತ್ತಿದ್ದವು.ಕಛೇರಿ ಮುಗಿದು ಭಾವನಾ ಎಲ್ಲರಿಗೂ ಕತಜ್ಞತೆ ಸಲ್ಲಿಸಿ, ಕಾರ್ಯಕ್ರಮ ಮುಗಿಯಿತೆಂದು ಪರೋಕ್ಷವಾಗಿ ಹೇಳುತ್ತಿದ್ದರೂ ಪ್ರೇಕ್ಷಕರು ಆಸನ ಬಿಟ್ಟಿರಲಿಲ್ಲ. ಬಳಿಕ ಎಲ್ಲ ಕಲಾವಿದರನ್ನು ಮಾತನಾಡಿಸಲಾಯಿತು. ದೀಪಕ್ ಪಂಡಿತ್ ಬೆಂಗಳೂರಿನಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದರೂ ಪರಿಪೂರ್ಣವಾಗಿ ಇಡೀ ವೇದಿಕೆಯನ್ನು ನಿಭಾಯಿಸಿದ್ದು ಇದೇ ಮೊದಲು.ಅವರು ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಡ್ರಮ್ಸನಲ್ಲಿ ಮಿಂಚಿದ್ದ ಮುಂಬೈನ ಮುಕುಲ್ ಢೋಂಗ್ರೆ ಬೆಂಗಳೂರಿನಲ್ಲಿ ಅವಕಾಶಕ್ಕಾಗಿ ಐದು ವರ್ಷಗಳಿಂದ ಕಾಯುತ್ತಿದ್ದರಂತೆ. ಒಬ್ಬೊಬ್ಬ ಕಲಾವಿದರದ್ದು ಒಂದೊಂದು ಅನುಭವ. ಪ್ರೇಕ್ಷಕರದ್ದು ಹಲವು ಅನುಭವ. 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.