ಭಾನುವಾರ, ಏಪ್ರಿಲ್ 11, 2021
32 °C

ದೀಪಾವಳಿಗೆ ದೀಪವೇ ಸಾಕು, ಪಟಾಕಿ ಏಕೆ ಬೇಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ದೀಪಾವಳಿಗೆ ದೀಪವೊಂದೇ ಸಾಕು, ದೀಪಾವಳಿ ತರುವುದು ಹೊಸತನ- ಪಟಾಕಿ ತರುವುದು ಕುರುಡುತನ, ಪಟಾಕಿಗೆ ವಿದಾಯ- ಅಪ್ಪನ ಜೇಬಿಗೆ ಉಳಿತಾಯ...ನೂರಾರು ಮಕ್ಕಳು ಇಂಥ ಘೋಷವಾಕ್ಯಗಳುಳ್ಳ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ನಡೆಯುತ್ತಿದ್ದಾಗ ದಾರಿಯುದ್ದಕ್ಕೂ ಜನ ಕುತೂಹಲ ಮತ್ತು ಆಸಕ್ತಿಯಿಂದ ನಿಂತು ನೋಡಿದರು.ಸುರಕ್ಷಿತ ದೀಪಾವಳಿ ಆಚರಣೆ ಕುರಿತು ಆಟೋರಿಕ್ಷಾದ ಮೈಕ್‌ಗಳ ಮೂಲಕ ಸೂಚನೆಗಳನ್ನು ಕೇಳುತ್ತಿದ್ದ ಜನರಿಗೆ ಇದು ಹೊಸ ಬಗೆಯಾಗಿತ್ತು. ಅದರಲ್ಲೂ ಆಕರ್ಷಕ ಬರಹಗಳುಳ್ಳ ಫಲಕಗಳು ಹೆಚ್ಚು ಜನರ ಗಮನ ಸೆಳೆದವು.ನಗರದ ಗಾಂಧಿವನದ ಆವರಣದಲ್ಲಿ ಜಾಗೃತಿ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಚಾಲನೆ ನೀಡಿದರು.ದೀಪಾವಳಿಗೆ ದೀಪವೊಂದೇ ಸಾಕು ಎಂದು ಎಲ್ಲರೂ ನಿರ್ಧಾರವನ್ನು ಕೈಗೊಂಡರೆ ಬಹುತೇಕ ಅಪಘಾತಗಳನ್ನು ತಪ್ಪಿಸಬಹುದು. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಹತ್ತಿ ಬಟ್ಟೆ, ಪಾದರಕ್ಷೆಗಳನ್ನು ಧರಿಸಬೇಕು ಎಂದು ಕಿವಿಮಾತು ಹೇಳಿದರು.ಬಹು ಮಹಡಿಗಳ ಕಟ್ಟಡಗಳಲ್ಲಿ ವಾಸಿಸುವವರು ತೆರೆದ ಮೈದಾನಗಳಲ್ಲಿ ಸಂಘಟಿತರಾಗಿ ಪಟಾಕಿಗಳನ್ನು ಸಿಡಿಸುವುದು ಉತ್ತಮ. ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಮನೆಯಲ್ಲಿ ಸಿದ್ದಪಡಿಸಿಟ್ಟುಕೊಳ್ಳಲೇಬೇಕು.ಶಬ್ದಮಾಲಿನ್ಯದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಕಿವಿಗಳಲ್ಲಿ ಹತ್ತಿ ಉಂಡೆಗಳನ್ನು ಇಟ್ಟುಕೊಳ್ಳಬೇಕು.

ರೋಗಿಗಳು, ಎಳೆಯ ಮಕ್ಕಳು ಮತ್ತು ವೃದ್ಧರು ಇರುವ ಮನೆಗಳಲ್ಲಿ ಪಟಾಕಿ ಹೊಡೆಯಬಾರದು. ಆದಷ್ಟೂ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಬೇಕು ಎಂದರು.ಗಾಂಧಿವನದಿಂದ ಶುರುವಾಗಿ ಎಂ.ಜಿ ರಸ್ತೆ ಮೂಲಕನ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ನಗರದ ಹಲವು ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್‌ದಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝಲ್ಪಿಖರ್ ಉಲ್ಲಾ ಸಹ ಫಲಕಗಳನ್ನ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.