ಭಾನುವಾರ, ಮೇ 16, 2021
29 °C

ದುರಂತ ಹಾದಿಯಲ್ಲಿಅಮೂಲ್ಯ ನಿಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಹವಳ~. ಅದು ಸಾಗರ ಸಾಮ್ರಾಜ್ಯದ ಒಂದು ಅಮೂಲ್ಯ ನಿಧಿ. ಕುಬ್ಜ ಗಾತ್ರದ, ವಿಚಿತ್ರ ಸ್ವರೂಪದ, ಅಚ್ಚರಿಯ ಸ್ವಭಾವದ, ಸೂಕ್ಷ್ಮ ಪ್ರಕೃತಿಯ ಸಾಗರ ಪ್ರಾಣಿಯೊಂದರ ಬರೀ ಸುಣ್ಣದ ಬಾಹ್ಯ ಅಸ್ಥಿಪಂಜರವೇ ಹವಳ. `ಹವಳದ ಜೀವಿ~ಯದು ಹಸುಳೆಯ ಉಗುರಿನಷ್ಟೇ ಗಾತ್ರ. ತೆರೆದ ಒಂದು ಬಾಯಿ.ಅದರ ಸುತ್ತ ಹೂದಳಗಳಂತೆ ಬೆಳೆದ ಗ್ರಹಣಾಂಗಗಳು. ಹವಳದ ಜೀವಿಗಳಲ್ಲಿ ಹಲವು ವಿಧಗಳಿವೆ. ಕೆಲವಾರು ಪ್ರಭೇದಗಳು ಒಂಟೊಂಟಿಯಾಗಿ ಬದುಕುತ್ತವೆ. ಆದರೆ ಮಿಲಿಯಾಂತರ ಸಂಖ್ಯೆಗಳಲ್ಲಿ ಒಟ್ಟೊಟ್ಟಾಗಿ ಬಾಳುವ ಪ್ರಭೇದಗಳು ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿವೆ.ಪ್ರಭೇದ ಯಾವುದೇ ಇರಲಿ, ಎಲ್ಲ ಹವಳದ ಜೀವಿಗಳೂ ತಮ್ಮ ಮಿದು ಶರೀರದ ರಕ್ಷಣೆಗಾಗಿ ದೇಹದ ಸುತ್ತ ಬಟ್ಟಲಿನ ಆಕಾರದಲ್ಲಿ ಸುಣ್ಣದ ಗಟ್ಟಿ ಗೋಡೆಯೊಂದನ್ನು ಬಾಹ್ಯ ಅಸ್ಥಿಪಂಜರವನ್ನು ನಿರ್ಮಿಸಿಕೊಳ್ಳುತ್ತವೆ. ಹಾಗೆ ನಿಂತಲ್ಲೇ ನಿಂತು ಅಲ್ಲೇ ಬೆಳೆದು ಅಲ್ಲೇ ಸಾಯುತ್ತವೆ. ಆಗ ಉಳಿಯುವ ಅಸ್ಥಿಯೇ ಹವಳ. ಕೋಟ್ಯಂತರ ಸಂಖ್ಯೆಗಳಲ್ಲಿ ಒಟ್ಟೊಟ್ಟಾಗಿ ನೆಲೆಸುವ `ಗಟ್ಟಿ ಹವಳ~ ಪ್ರಭೇದಗಳಲ್ಲಿ ಸತ್ತ ಹವಳ ಜೀವಿಗಳ ಅಸ್ಥಿಗಳ ಮೇಲೇ ಹೊಸ ಜೀವಿಗಳು ಬೆಳೆಯುತ್ತವೆ.

 

ಹಾಗೇ ನಿರಂತರ ಹೆಚ್ಚುತ್ತ ಹೋಗುವ ಹವಳರಾಶಿಗಳು ನಾನಾ ರೂಪ ತಳೆಯುತ್ತವೆ. ಪದರ ಪದರಗಳಂತೆ (ಚಿತ್ರ-1), ಕವಲು ಕುಂಬುಗಳಂತೆ (ಚಿತ್ರ-2), ಜೋಡಿಸಿಟ್ಟ ಎಲೆಗಳಂತೆ (3, 4), ತಟ್ಟೆಗಳಂತೆ (5), ಮೊಗ್ಗು, ಹಗ್ಗಗಳಂತೆ (7, 8), ಮಿದುಳಿನಂತೆ (11)..... ಹೀಗೆಲ್ಲ ಅಸಂಖ್ಯ ರೂಪಗಳಲ್ಲಿ ನಿಧಾನವಾಗಿ ಬೆಳೆಯುತ್ತ ಹೋಗುವ ಹವಳ ರಾಶಿ ಕ್ರಮೇಣ ದಿಬ್ಬಗಳಾಗಿ (ಚಿತ್ರ-9) ಗುಡ್ಡ-ಗೋಡೆಗಳಂತಾಗಿ ದ್ವೀಪಗಳೂ ಆಗುತ್ತವೆ (ಚಿತ್ರ-12). ಹೀಗೆ ಕಳೆದ ಸುಮಾರು ಐದು ಕೋಟಿ ವರ್ಷಗಳಿಂದ ಬೆಳೆಯುತ್ತಿರುವ ಹವಳದ ಕೋಟೆ `ದಿ ಗ್ರೇಟ್ ಬ್ಯಾರಿಯರ್ ರೀಫ್~ ಎರಡು ಸಾವಿರ ಕಿ.ಮೀ. ಉದ್ದಕ್ಕೆ ಹಬ್ಬಿದೆ.ಸ್ವರೂಪ ಹೇಗೇ ಇರಲಿ, ಹವಳಗಳದೆಲ್ಲ ಕಡಲಿನಲ್ಲೇ ನೆಲೆ. ಸಮಭಾಜಕದ ಆಸುಪಾಸಿನ ಕಡಲಂಚಿನ ಸನಿಹದ, ಕಡಿಮೆ ಆಳದ, ಸ್ವಚ್ಛವಾದ ಬೆಚ್ಚಗಿನ ನೀರತಾಣಗಳಲ್ಲಷ್ಟೇ ಅವುಗಳ ವಾಸ್ತವ್ಯ. ಹಾಗಿದ್ದು ಸೂರ್ಯನ ಬೆಳಕು ಧಾರಾಳವಾಗಿ ಹರಿದು ಬರುವಷ್ಟೇ ಆಳದಾಟದೆ, ನೀರೊಳಗೆ ಮುಳುಗಿದ್ದೇ ಅವುಗಳ ಬದುಕು. ಪ್ರಸ್ತುತ ಅಸ್ತಿತ್ವದಲ್ಲಿರುವ ಇಡೀ ಹವಳ ಸಾಮ್ರಾಜ್ಯದ ವಿಸ್ತಾರ ಆರು ಲಕ್ಷ ಚದರ ಕಿ.ಮೀ. ಸಾಗರಗಳ ಇಡೀ ವಿಸ್ತಾರಕ್ಕೆ ಹೋಲಿಸಿದರೆ ಇದು `ಅಂಗೈನಷ್ಟು ಅಗಲ~ವೂ ಆಗುವುದಿಲ್ಲ.ಹಾಗಿದ್ದರೂ ಕಡಲಲ್ಲಿ ಹವಳ ಸಾಮ್ರಾಜ್ಯದ ಮಹತ್ವ ಅತ್ಯದ್ಭುತ, ಅಪರಿಮಿತ. ಏಕೆಂದರೆ ಹವಳ-ಸಾಮ್ರಾಜ್ಯ ಕಡಲಿನ ಅತಿ ನಿಬಿಡ, ಅತಿ ವೈವಿಧ್ಯಮಯ ಜೀವಾಶ್ರಯ ತಾಣ. ಹವಳ ರಾಶಿಗಳನ್ನು ಆವರಿಸಿರುವ ಅಸಂಖ್ಯೆ ವಿಧ ಶೈವಲಗಳಿಂದ ಆರಂಭಿಸಿ (ಈ ಶೈವಲಗಳಿಂದಾಗಿಯೇ ಹವಳ ರಾಜ್ಯದಲ್ಲಿ ಬಹು ವಿಧ ವರ್ಣ ವೈಭವ) ಮತ್ಸ್ಯ, ಮೃದ್ವಂಗಿ, ಸರೀಸೃಪ ಇತ್ಯಾದಿ ಸರ್ವವಿಧ ಸಾಗರವಾಸಿಗಳೂ ನೆಲೆಗೊಂಡು ಅಲ್ಲಿನದೇ ವಿಶಿಷ್ಟವಾದ ನೂರಾರು `ಆಹಾರ ಸರಪಳಿ~ಗಳು ರೂಪುಗೊಂಡಿವೆ. ಆದ್ದರಿಂದಲೇ ಹವಳ ಸಾಮ್ರಾಜ್ಯವನ್ನು `ಕಡಲಿನ ಒಡಲಿನ ವೃಷ್ಟಿವನ~ ಎಂದೇ ತಜ್ಞರು ಬಣ್ಣಿಸುತ್ತಾರೆ.ಅದರಲ್ಲಿ ಕಿಂಚಿತ್ತೂ ಉತ್ಪ್ರೇಕ್ಷೆ ಇಲ್ಲ. ಏಕೆಂದರೆ ನೆಲದ ಮೇಲೆ ವೃಷ್ಟಿವನಗಳಲ್ಲಿರುವಂತೆಯೇ ಕಡಲಲ್ಲಿ ಹವಳ ಲೋಕದಲ್ಲೂ ಅಸಾಮಾನ್ಯ ಜೀವಿದಟ್ಟಣೆ ಇದೆ. ಕಡಲಿನ ಇಡೀ ಜೀವಜಾಲದ ಶೇಕಡ ಇಪ್ಪತ್ತೈದರಷ್ಟು ಪ್ರಭೇದಗಳು ಹವಳ ರಾಜ್ಯವನ್ನೇ ಆಶ್ರಯಿಸಿವೆ. ವೃಷ್ಟಿವನಗಳಂತೆಯೇ ಹವಳ ಲೋಕಗಳದೂ ಉಷ್ಣವಲಯದಲ್ಲೇ ನೆಲೆ, ಸೀಮಿತ ಅಲ್ಪ ವಿಸ್ತಾರ. ಹಾಗಿದ್ದೂ ಭೂಸ್ವಾಸ್ಥ್ಯ ಸಂರಕ್ಷಣೆಯಲ್ಲಿ ಅತಿಮುಖ್ಯ ಪಾತ್ರ.ಹಾಗೆಯೇ ವೃಷ್ಟಿವನಗಳಂತೆಯೇ ಹವಳ ಲೋಕಗಳದೂ ತೀವ್ರ ದುಸ್ಥಿತಿ. ನೇರವಾಗಿ ಮತ್ತು ಪರೋಕ್ಷವಾಗಿ ಕೇವಲ ಮನುಷ್ಯರಿಂದಾಗಿ ಒದಗಿರುವ ಈ ಕಳವಳ ಸ್ಥಿತಿಗೆ ಐದು ಪ್ರಧಾನ ಕಾರಣಗಳಿವೆ:

1. ಆಧುನಿಕ ಮಾನವರ ಅತೀವ ಕೈಗಾರಿಕಾ ಚಟುವಟಿಕೆಗಳಿಂದಾಗಿ ಭೂ ತಾಪ ನಿಧಾನವಾಗಿ ಏರುತ್ತಿದೆ. ಜೊತೆ ಜೊತೆಗೇ ಕಡಲ ಜಲದ ತಾಪಮಾನವೂ ಕೂಡ. ಸಾಗರದ ನೀರು ಅಧಿಕ ಬೆಚ್ಚಗಾದಂತೆ ಹವಳಗಳನ್ನಾವರಿಸಿದ ಶೈವಲಗಳು ಮೃತವಾಗಿ ಹವಳ ದಿಬ್ಬಗಳು ನಿರ್ವರ್ಣವಾಗಿ ಬರಡು ಮೂಳೆ ರಾಶಿಗಳಂತಾಗುತ್ತವೆ.

 

ಹವಳದ ಜೀವಿಗಳಿಗೆ ಆಹಾರ ಇಲ್ಲವಾಗಿ, ಇದೇ ಶೈವಲಗಳಿಂದ ಆರಂಭವಾಗುವ ಹೇರಳ ಜೀವ ಸರಪಳಿಗಳು ತುಂಡಾಗುತ್ತವೆ. ಹವಳಗಳ ವಿನಾಶದ ಮೊದಲ ಕಾರಣ ಇದು. ಇದೇ ಭೂತಾಪ ಹೆಚ್ಚಳದಿಂದ ಹಿಮಹಾಸುಗಳೆಲ್ಲ ಕರಗಿ ಸಾಗರಗಳ ನೀರಿನ ಮಟ್ಟ ಹೆಚ್ಚುವುದರಿಂದ ಹವಳ ವಸಾಹತುಗಳೆಲ್ಲ ಹೆಚ್ಚು ಆಳಕ್ಕೆ ತಲುಪಿ, ಸೂರ್ಯರಶ್ಮಿಯೂ ಕಡಿಮೆ ಒದಗುವಂತಾಗುತ್ತದೆ. ಆಗಲೂ ಇದೇ ಪರಿಣಾಮ.2. ಅತಿಯಾದ ಕೈಗಾರಿಕಾ ಚಟುವಟಿಕೆಗಳಿಂದ ಹೊಮ್ಮುತ್ತಿರುವ ಇಂಗಾಲದ ಡೈ ಆಕ್ಸೈಡ್‌ನಂಥ ಅನಿಲಗಳ ಭಾರೀ ಭಾಗ ಕಡಲಿಗೆ ಸೇರಿ ಕಡಲ ಜಲದ ಆಮ್ಲೀಯತೆ ಹೆಚ್ಚುತ್ತಿದೆ. ಇದೂ ಕೂಡ ಹವಳ ರಾಜ್ಯದ ಶೈವಲಗಳನ್ನು ಹಾಳುಗೆಡಹಿ ಮೇಲೆ ವಿವರಿಸಿದಂತಹವೇ ಅಪಾಯಗಳನ್ನು ತರುತ್ತಿದೆ.3. ಅರಣ್ಯನಾಶ ಮತ್ತು ಗಣಿಗಾರಿಕೆಗಳಿಂದ ಅಪಾರ ಪ್ರಮಾಣದ ಕಲ್ಲು ಮರಳು ಮಣ್ಣು ಮಳೆ ನೀರಿನಿಂದ ಕೊಚ್ಚಲ್ಪಟ್ಟು ನದಿಗಳ ಮೂಲಕ ಕಡಲಿಗಿಳಿಯುತ್ತಿವೆ. ಹವಳ ಲೋಕಗಳನ್ನು ಆವರಿಸುವ ಈ ಕೆಸರು ಸೂರ್ಯರಶ್ಮಿಯನ್ನು ತಡೆಗಟ್ಟುತ್ತದೆ. ಆಗ ಶಕ್ತಿರಹಿತವಾಗುವ ಹವಳ ರಾಶಿ-ಹವಳ ಜೀವಿಗಳಿಗೆ `ಕಪ್ಪುಪಟ್ಟೆ ಕಾಯಿಲೆ~ಯಂಥ ನಾನಾ ಉಗ್ರ ರೋಗಗಳು ತಗುಲಿ, ಹರಡಿ ವಿನಾಶ ತರುತ್ತವೆ.4. ಕಡಲಿಗೆ ಬೆರೆಯುತ್ತಿರುವ ಅಪಾರ ಪ್ರಮಾಣದ ಬಚ್ಚಲ ಹೊಲಸು ಮತ್ತು ಕೃಷಿ ಭೂಮಿಗಳಿಂದ ಬಸಿದು ಸೇರುತ್ತಿರುವ ರಸಗೊಬ್ಬರದ ಅಂಶಗಳಲ್ಲಿನ ನೈಟ್ರೇಟ್‌ಗಳಂಥ ಪೋಷಕಾಂಶಗಳು ಕಡಲಲ್ಲಿ ಸೂಕ್ಷ್ಮಜೀವಿಗಳಾದ `ಫ್ಲಾಂಕ್ಟನ್~ಗಳ ವಿಪರೀತ ವರ್ಧನೆಗೆ ಕಾರಣವಾಗುತ್ತವೆ. ಹವಳ ರಾಜ್ಯಗಳಲ್ಲಿ ಪ್ಲಾಂಕ್ಟನ್‌ಗಳ ಭಾರೀ ಹೆಚ್ಚಳ `ಸಾಗರ ತಾರೆ~ಗಳಂತಹ ಉಗ್ರ ಬೇಟೆಗಾರರನ್ನು ಆಕರ್ಷಿಸುತ್ತವೆ ಅವು ಹವಳದ ಜೀವಿಗಳನ್ನು ಎಡೆಬಿಡದೆ ತಿಂದು (ಚಿತ್ರ-6) ಹವಳ ಲೋಕಗಳನ್ನು ಹಾಳುಗೆಡಹುತ್ತವೆ.5. ಹವಳ ಲೋಕಗಳಲ್ಲಿ ಬಹು ವಿಶೇಷವಾದ, ವರ್ಣಮಯವಾದ, ಅತ್ಯಾಕರ್ಷಕವೂ ಆದ ನಾನಾ ಬಗೆಯ ಮತ್ಸ್ಯಗಳು (ಚಿತ್ರ-10) ಮತ್ತಿತರ ಜೀವಿಗಳು ನೆಲೆಸಿವೆ. ಅಂಥ ಜೀವಿಗಳನ್ನು ಮನೆ ಮತ್ಸ್ಯಾಗಾರಗಳಲ್ಲಿ ಸಂಗ್ರಹಿಸುವ-ಪ್ರದರ್ಶಿಸುವ ವಿಕೃತ ಹವ್ಯಾಸ ಮತ್ತು ತಿಂದುಹಾಕುವ ವಿಕೃತ ಜಿಹ್ವಾ ಚಾಪಲ್ಯ ಹವಳ ಲೋಕಗಳನ್ನು ಹಾಳುಗೆಡಗುತ್ತಿವೆ.

 

ಕಳ್ಳ ಬೇಟೆಗಾರರು ಅದಕ್ಕಾಗಿ ಹವಳ ತಾಣಗಳಲ್ಲಿ ಮುಳುಗಿ (ಚಿತ್ರ-13) ಘೋರ ವಿಷ ಸಿಂಪಡಿಸಿ, ಡೈನಾಮೈಟ್ ಸಿಡಿಸಿ ಅಲ್ಲಿನ ಪ್ರಾಣಿಗಳನ್ನು ತಲ್ಲಣಗೊಳಿಸಿ ಜೀವಂತ ಸಂಗ್ರಹಿಸುತ್ತಾರೆ. ಭಾರೀ ಬೆಲೆಗೆ ಹೋಟೆಲುಗಳಿಗೆ ಮಾರುತ್ತಾರೆ. ಈ ದಂಧೆಯೂ ಹವಳ ಲೋಕಗಳನ್ನು ಹಾಳುಗೆಡಹುತ್ತಿದೆ.ಈ ಎಲ್ಲ ಕಾರಣಗಳ ಪರಿಣಾಮವಾಗಿ ಈಗಾಗಲೇ ಹವಳ ಸಾಮ್ರಾಜ್ಯದ ಶೇಕಡ ಹತ್ತು ಭಾಗ ಸಂಪೂರ್ಣ ನಾಶವಾಗಿದೆ; ಶೇಕಡ 30 ಭಾಗ ಚಿಂತಾಜನಕ ಸ್ಥಿತಿಯಲ್ಲಿದೆ; ಮತ್ತೂ ಶೇಕಡ 30 ಭಾಗ ವಿನಾಶದ ತೀವ್ರ ಒತ್ತಡದಲ್ಲಿದೆ!

ಎಂಥ ದುಸ್ಥಿತಿ! ಎಂಥ ದುರ್ಗತಿ! 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.