ಭಾನುವಾರ, ಜನವರಿ 19, 2020
28 °C

ದುರ್ಬಲ ಲೋಕಪಾಲ ಮಸೂದೆ: ಕೇಜ್ರಿವಾಲ್‌ ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಜ್ಯಸಭೆಯ ಪರಿಗಣನೆಯಲ್ಲಿರುವ ಲೋಕಪಾಲ ಮಸೂದೆ ದುರ್ಬಲ ಮತ್ತು ಪರಿಣಾಮಕಾರಿಯಲ್ಲ ಎಂದು ಹೇಳುವ ಮೂಲಕ ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್‌ ಮಸೂದೆಯನ್ನು ತಿರಸ್ಕರಿಸಿದ್ದಾರೆ.ಈ ಮಸೂದೆ ಅಂಗೀಕಾರದಿಂದ ಕಾಂಗ್ರೆಸ್‌ ಹೊರತುಪಡಿಸಿ ಬೇರೆ ಯಾರಿಗೂ ಲಾಭವಿಲ್ಲ. ಮಸೂದೆ ಅಂಗೀಕಾರವಾದರೆ ರಾಹುಲ್‌ ಗಾಂಧಿಗೆ ಅದರ ಕೀರ್ತಿ ದೊರೆಯುತ್ತದೆ ಅಷ್ಟೆ ಎಂದು  ಹೇಳಿದ್ದಾರೆ.‘ಸಚಿವರ ವಿಷಯ ಬಿಡಿ, ಈ ಮಸೂದೆಯಿಂದ ಒಂದು ಇಲಿಯನ್ನು ಕೂಡ ಜೈಲಿಗೆ ಕಳುಹಿಸುವುದು ಸಾಧ್ಯವಿಲ್ಲ. ಮುಂದಿನ 10 ವರ್ಷಗಳಲ್ಲಿ ಒಬ್ಬನೇ ಒಬ್ಬ ವ್ಯಕ್ತಿಗೆ ಶಿಕ್ಷೆಯಾಗು­ವುದಿಲ್ಲ’ ಎಂದು ಕೇಜ್ರಿವಾಲ್‌ ಅಭಿಪ್ರಾಯಪಟ್ಟಿದ್ದಾರೆ.ಸಿಬಿಐಯನ್ನು ಸ್ವಾಯತ್ತಗೊಳಿ­ಸುವವರೆಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಒಬ್ಬರಿಗೂ ಶಿಕ್ಷೆಯಾಗದು. ಈಗಿನ ಮಸೂದೆ ಸಿಬಿಐಯನ್ನು ಸ್ವಾಯತ್ತ

ಗೊಳಿ­ಸುವುದಿಲ್ಲ. ಕಳೆದ 50 ವರ್ಷಗಳಲ್ಲಿ ಸಿಬಿಐಯಿಂದ ನಾಲ್ಕು ರಾಜಕೀಯ ನಾಯಕರಿಗೆ ಮಾತ್ರ ಶಿಕ್ಷೆಯಾಗಿದೆ. ಯಾರ ವಿರುದ್ಧ ತನಿಖೆ ನಡೆಸಲಾಗು­ತ್ತದೆಯೋ ಅದೇ ರಾಜಕೀಯ ನಾಯಕರಿಗೆ ಸಿಬಿಐ ವರದಿ ಸಲ್ಲಿಸಬೇಕಿ­ರುವುದರಿಂದ ಹೀಗಾಗಿದೆ ಎಂದು ಕೇಜ್ರಿವಾಲ್‌ ವಿವರಿಸಿದ್ದಾರೆ.2011ರ ಆಗಸ್ಟ್‌ 11ರಂದು ಅಂಗೀಕಾರವಾದ ಮಸೂದೆಯಲ್ಲಿ ಲೋಕಪಾಲಕ್ಕೆ ಸ್ವತಂತ್ರವಾದ ತನಿಖಾ ಸಂಸ್ಥೆಯನ್ನು ಹೊಂದುವ ಅವಕಾಶ ಇತ್ತು. ಆದರೆ ಈಗ ದುರ್ಬಲ­ವಾಗಿ­ರುವ ಲೋಕಪಾಲವನ್ನು ಒಪ್ಪಿಕೊಳ್ಳು­ವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.ಜನ ಲೋಕಪಾಲಕ್ಕಾಗಿ ನಮ್ಮ ಚಳವಳಿಯನ್ನು ಮುಂದುವರಿಸುತ್ತೇವೆ. ಹಿಂದೆ ಹಜಾರೆ ಅವರ ನಿರಶನ ನಿಲ್ಲಿಸು­ವುದಕ್ಕಾಗಿ ನೀಡಲಾದ ಮೂರು ಭರವಸೆಗಳನ್ನು ಉಳಿಸಿ­ಕೊಳ್ಳುವಲ್ಲಿ ಸಂಸತ್ತು ವಿಫಲವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ಒಂದು ಬಾರಿ ಕಾನೂನು ರಚನೆ­ಯಾದ ನಂತರ ಜನ ಲೋಕಪಾಲದ ಅಂಶಗಳನ್ನು ಮತ್ತೆ ಸೇರಿಸಿಕೊಳ್ಳ­ಬಹುದು ಎಂಬ ಸಲಹೆಯ ಬಗ್ಗೆ ಕೇಜ್ರಿ­ವಾಲ್‌ ಖಾರವಾದ ಪ್ರತಿಕ್ರಿಯೆ ನೀಡಿ­ದ್ದಾರೆ.‘ಅವರು ಕಂತುಗಳಲ್ಲಿ ಭ್ರಷ್ಟಾ­ಚಾರ ಎಸಗುವುದಿಲ್ಲ. ಹಾಗಿರುವಾಗ ಕಾನೂನನ್ನು ಮಾತ್ರ ಯಾಕೆ ಕಂತು­ಗಳಲ್ಲಿ ರಚಿಸಬೇಕು’ ಎಂದು ಅವರು ಕೇಳಿದ್ದಾರೆ.

ಪ್ರತಿಕ್ರಿಯಿಸಿ (+)