ಭಾನುವಾರ, ಮೇ 16, 2021
22 °C

ದೂರದೃಷ್ಟಿಗೆ ಮತ್ತೊಂದು ಹೆಸರು ಸರ್ ಎಂ.ವಿ.

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪ್ರತಿಭೆ ಮತ್ತು ದೂರದೃಷ್ಟಿಗೆ ಮತ್ತೊಂದು ಹೆಸರು ಸರ್ ಎಂ. ವಿಶ್ವೇಶ್ವರಯ್ಯ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.ನಗರದ ಬಾಪೂಜಿ ಸಭಾಂಗಣದಲ್ಲಿ ಗುರುವಾರ ವೃತ್ತಿನಿರತ ವಾಸ್ತುಶಿಲ್ಪಿ ಮತ್ತು ಅಭಿಯಂತರರ ಸಮೂಹ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ ಮತ್ತು ಇನ್ಸ್‌ಟ್ರಕ್ಟ್ ಜಿಲ್ಲಾ ಘಟಕ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ 151ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ಎಂಜಿನಿಯರ್ಸ್‌ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ನೂರು ವರ್ಷಗಳ ಹಿಂದೆ ಸರ್ ಎಂ.ವಿ. ಅವರು ಕಟ್ಟಿದ್ದ ಕನ್ನಂಬಾಡಿ ಕಟ್ಟೆ ಇಂದಿಗೂ ಹಾಳಾಗಿಲ್ಲ. ಉನ್ನತ ಗುಣಮಟ್ಟದಿಂದ ಕೂಡಿದೆ. ಆದರೆ, ಈಚೆಗಷ್ಟೇ ನಮ್ಮ ಎಂಜಿನಿಯರ್‌ಗಳು ಕಟ್ಟಿರುವ ಅಣೆಕಟ್ಟುಗಳು ಕೇವಲ 6 ತಿಂಗಳಲ್ಲೇ ಕುಸಿಯುತ್ತವೆ. ಇದು ಸರ್ ಎಂ.ವಿ. ಅವರ ಕೆಲಸದ ಗುಣಮಟ್ಟ ತೋರಿಸುತ್ತದೆ ಎಂದರು.ಇಂದು ಎಂಜಿನಿಯರಿಂಗ್ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಒಂದು ರೂಪಾಯಿ ಕೆಲಸಕ್ಕೆ ಐವತ್ತು ಪೈಸೆ ಲಂಚ ನೀಡುವ ಪರಿಸ್ಥಿತಿ ಇದೆ. ಶಿಕ್ಷಣ ಇಲಾಖೆಯಲ್ಲಂತೂ ಎಂಜಿನಿಯರಿಂಗ್ ಇಲಾಖೆಯನ್ನೂ ಮೀರಿ ಭ್ರಷ್ಟಾಚಾರವಿದೆ. ಇದಕ್ಕೆ ನಾವೇ ಕಾರಣ. ಏಕೆಂದರೆ ಕೆಲಸ  ಬೇಗ ಆಗಲಿ ಎಂದು ಅಧಿಕಾರಿಗಳಿಗೆ ಲಂಚ ನೀಡುತ್ತಿದ್ದೇವೆ.ಇದನ್ನೆಲ್ಲಾ ನೋಡಿ ಬೇಸತ್ತು ಕೊನೆಗೆ ಅಣ್ಣಾಹಜಾರೆ ಚಳವಳಿ ಮಾಡಿದರು. ಅದರ ಫಲವಾಗಿಯೇ ಹಣ ಲೂಟಿ ಹೊಡೆದವರು ಕಂಬಿ ಎಣಿಸುವಂತಾಗಿದೆ. ಮಾಡಿದ ಕರ್ಮ ಇದ್ದಾಗಲೇ ಅನುಭವಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಎದ್ದ ಅಲೆಯಿಂದಾಗಿ ಇಂದು ಭ್ರಷ್ಟರಿಗೆ ಜೈಲು ಶಿಕ್ಷೆಯಾಗುತ್ತಿದೆ. ನಾಳೆ ಯಾರು ಕಂಬಿ ಹಿಂದೆ ಹೋಗುತ್ತಾರೆ ಎಂಬುದು ಪ್ರತಿನಿತ್ಯ ಚರ್ಚೆಯ ವಸ್ತುವಾಗಿದೆ ಎಂದು ನುಡಿದರು.

ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ `ಸಮಾಜದ ಬೆಳವಣಿಗೆಯಲ್ಲಿ ಎಂಜಿನಿಯರ್‌ಗಳ ಪಾತ್ರ~ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ಎಚ್.ಎಸ್. ನಟರಾಜ್ ಅವರಿಗೆ `ಅಭಿಯಂತರಶ್ರೀ ಪ್ರಶಸ್ತಿ~ ಪ್ರದಾನ ಮಾಡಲಾಯಿತು. ಕೆ.ಸಿ. ಮಹಮ್ಮದ್ ಹನೀಫ್ ಅವರಿಗೆ `ಅತ್ಯುತ್ತಮ ಕಟ್ಟಡದ ಮೇಸ್ತ್ರಿ~, ಕೆ. ಕಲ್ಲಪ್ಪ ಅವರಿಗೆ `ಅತ್ಯುತ್ತಮ ಫ್ಲಂಬರ್ ಮೇಸ್ತ್ರಿ~, ಕಾರಿಗನೂರು ಅನ್ವರ್ ಸಾಬ್ ಅವರಿಗೆ `ಅತ್ಯುತ್ತಮ ಬಾರ್‌ಬೆಂಡಿಂಗ್~ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಎಫ್‌ಪಿಎಸಿಇ ಅಧ್ಯಕ್ಷ ಜಿ.ಬಿ. ಸುರೇಶಕುಮಾರ್, ಕಾರ್ಯದರ್ಶಿ ಎ.ಬಿ. ರವಿ, ಖಜಾಂಚಿ ಪ್ರಕಾಶ ಮುಳೆ, ಎಸಿಸಿಇಐ ದಾವಣಗೆರೆ ಘಟಕದ ಕಾರ್ಯಾಧ್ಯಕ್ಷ ಜಿ.ಎಂ. ಲೋಹಿತಾಶ್ವ, ಕಾರ್ಯದರ್ಶಿ ಬಿ.ವಿ.ಬಸವರಾಜ್, ಖಜಾಂಚಿ ಸಿ. ಭೀಮರಾಜ್, ಇನ್ಸ್‌ಟ್ರಕ್ಟ್ ಕಾರ್ಯಾಧ್ಯಕ್ಷ ಆರ್.ಎಸ್. ವಿಜಯಾನಂದ್, ಅಣಬೇರು ರಾಜಣ್ಣ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.