ಬುಧವಾರ, ಮೇ 18, 2022
21 °C

ದೂರವಾದ ದನಿ... ಕೃಷಿಕರ ಕಂಬನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರಿಗೇರಿ: ರೈತರಿಗೆ ಎಲ್ಲೇ ಅನ್ಯಾಯವಾಗಲಿ, ರೈತರ ಪರ ಎಲ್ಲೇ ಹೋರಾಟ, ಚಳವಳಿ ನಡೆಯಲಿ ಅಲ್ಲಿ ಹಾಜರಾಗುತ್ತಿದ್ದ ಇವರು, ಸ್ವತಃ ರೈತರಾಗಿದ್ದರು. ಮೂರು ದಶಕಗಳ ಕಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ, ಒಂದು ದಶಕ ಶಾಸಕರಾಗಿ ಆಯ್ಕೆ ಯಾಗಿದ್ದರೂ ಅಹಂಭಾವವನ್ನೇ ರೂಢಿಸಿಕೊಳ್ಳದೆ,  ಕೃಷಿ ಚಟುವಟಿಕೆಯಿಂದಲೂ ವಿಮುಖವಾಗದೆ ಬಾಳಿದರು.‘ಜನಪ್ರತಿನಿಧಿ’ ಎಂದರೆ ಜನರಿಂದ ದೂರ ಇರುವವ, ಅನ್ಯೋನ್ಯತೆ ಎಂದರೇ ಗೊತ್ತಿರದಂತೆ ಬದುಕುವವ ಎಂಬ ಮಾತುಗಳಿಗೆ ಆರೋಪ ಎಂಬಂತೆ ಜೀವಿಸಿದ ಅಪರೂಪದ ಚೇತನವೊಂದು ಬುಧವಾರ ಇಹಲೋಕ ಯಾತ್ರೆ ಅಂತ್ಯಗೊಳಿಸಿತು.ತಾಲ್ಲೂಕಿನ ಸಿರಿಗೇರಿಯ ಸಿ.ಎಂ. ರೇವಣಸಿದ್ದಯ್ಯ ಅವರೇ ಆ ವ್ಯಕ್ತಿ.‘ರೈತ ಬೆಳೀಲಿಲ್ಲ ಅಂದ್ರೆ ಏನು ತಿಂತೀರೀ? ರೈತನೇ ಈ ದೇಶದ ಬೆನ್ನೆಲುಬು ಎನ್ನುತ್ತಲೇ ಅವನ ಬೆನ್ನು ಮುರಿಯೋ ಕೆಲಸ ಮಾಡಿದ್ರೆ ನಾನು ಸುಮ್ಮನಿರೂ ದಿಲ್ಲ’. ಎಂದು ವಿಧಾನಸಭೆಯಲ್ಲಿ ರೈತರ ಪರ ಮಾತನಾಡಿ, ಮಿಕ್ಕೆಲ್ಲ ಸದಸ್ಯರು ಬೆಂಬಲಿಸುವಂತೆ ನೋಡಿಕೊಳ್ಳುತ್ತಿದ್ದ ಅವರು, ಒಂದು ದಶಕ ವಿಧಾನಸಭೆಯಲ್ಲಿ ರೈತರ ಧ್ವನಿಯಾಗಿ ಕೆಲಸ ಮಾಡಿದರಲ್ಲದೆ, ರಾಜ್ಯ ರೈತ ಚಳವಳಿಗೆ ಬಹು ದೊಡ್ಡ ಕೊಡುಗೆ ನೀಡಿದವರು.1924ರಲ್ಲಿ ತಾಲ್ಲೂಕಿನ ಸಿರಿಗೇರಿ ಗ್ರಾಮದಲ್ಲಿ ಜನಿಸಿದ ರೇವಣಸಿದದ್ದಯ್ಯ, ಈಗಿನ ಆಂಧ್ರದ ಆದೋನಿಯ ಎಲೆಮಲ್ಲೇಶಪ್ಪ ಕನ್ನಡಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದು, ಇಂಟರ್‌ಮೀಡಿಯಟ್ ಶಿಕ್ಷಣಕ್ಕಾಗಿ ಬಳ್ಳಾರಿಯ ವೀರಶೈವ ಕಾಲೇಜು ಸೇರಿದರು. ತಂದೆಯ ನಿಧನದಿಂದಾಗಿ ಶಿಕ್ಷಣ ಮೊಟಕುಗೊಳಿಸಿ ವ್ಯವಸಾಯದಲ್ಲಿ ತೊಡಗಿದರು.1952ರಲ್ಲಿ ಗ್ರಾಮದ ಪಂಚಾಯಿತಿ ಅಧ್ಯಕ್ಷ ರಾಗಿದ್ದ ಇವರಲ್ಲಿದ್ದ ಜನಪರ ಕಾಳಜಿಯಿಂದಾಗಿ ಸತತ 31 ವರ್ಷಗಳ ಕಾಲ ಗ್ರಾಮದ ಪಂಚಾಯಿತಿ ಅಧ್ಯಕ್ಷರಾಗಿಯೇ ಮುಂದುವರಿದಿದ್ದರು.1953ರಲ್ಲಿ ರೈತ ಚಳವಳಿಗೆ ಧುಮುಕಿದ ಇವರು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯ ವಾಗಿ ಪಾಲ್ಗೊಂಡು ಬಳ್ಳಾರಿಯು ಕರ್ನಾಟಕದಲ್ಲೇ ಉಳಿಯಬೇಕು ಎಂದು ದನಿ ಎತ್ತಿದವರಲ್ಲಿ ಪ್ರಮುಖರು.ಆ ಹೋರಾಟದಲ್ಲಿ 21 ದಿನದ ಸೆರೆವಾಸ ಅನುಭವಿಸಿ, ಕನ್ನಡತನ ಮೆರೆದರಲ್ಲದೆ, ನರಗುಂದ- ನವಲಗುಂದ ರೈತ ಬಂಡಾಯದಲ್ಲೂ ಪಾಲ್ಗೊಂಡು ಚಳವಳಿಯ ತೀವ್ರತೆಗೆ ದೊಡ್ಡ ಶಕ್ತಿಯಾದರು.1962ರಲ್ಲಿ ನಡೆದ ವಿಧಾನಸಭೆ ಚುನಾವಣೆ ಯಲ್ಲಿ ಸಿರುಗುಪ್ಪ ಕ್ಷೇತ್ರದಿಂದ ಸ್ವತಂತ್ರ ಪಕ್ಷದಿಂದ ಸ್ಫರ್ಧಿಸಿ ಶಾಸಕರಾಗಿದ್ದ ಇವರು, 1980ರಲ್ಲಿ ಕರ್ನಾಟಕ ಪ್ರಾಂತ ರೈತ- ರೈತ ಕಾರ್ಮಿಕ ಸಂಘದ ಅಧ್ಯಕ್ಷರೂ ಆಗಿ ನೇಮಕಗೊಂಡು, ರೈತ ಚಳವಳಿ ಯನ್ನು ರಾಜ್ಯವ್ಯಾಪಿ ವಿಸ್ತರಿಸಿದರು.1985ರಲ್ಲಿ ಜನತಾ ಪಕ್ಷದಿಂದ ಸ್ಫರ್ಧಿಸಿ, ಶಾಸಕರಾಗಿದ್ದ ರೇವಣಸಿದ್ದಯ್ಯ, ರೈತರ ಅಭ್ಯುದಯಕ್ಕೆ ಹೋರಾಡಿದವರು. ರೈತರ ಸಾಲ ಮನ್ನಾ, ಬೆಂಬಲ ಬೆಲೆ ನಿಗದಿ, ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್, ಬಡವರ ಇನಾಂ ಭೂಮಿಗೆ ಪಟ್ಟಾ ವಿತರಣೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ನಡೆದ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ ರೈತರನ್ನು ಒಗ್ಗೂಡಿಸಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ.ಉತ್ತಮ ವಾಗ್ಮಿಯೂ ಆಗಿದ್ದ ಇವರು, ಸರಕಾರಗಳ ಜನವಿರೋಧಿ ನಿಲುವಿನ ವಿರುದ್ಧ ಮಾತಿನ ಛಾಟಿ ಏಟು ನೀಡುತ್ತಿದ್ದರು. ಇವರ ಭಾಷಣ ಕೇಳಲು ಜನತೆ ಮುಗಿಬೀಳುತ್ತಿದ್ದರು. ಹೀಗಾಗಿಯೇ ಇವರ ಧ್ವನಿ ‘ರೈತರಧ್ವನಿ’ ಎನಿಸಿಕೊಂಡಿತ್ತು.ಅಧಿಕಾರದ ಎಲ್ಲ ಮಜಲುಗಳನ್ನು ಅನುಭವಿಸಿದರೂ ನಿಗರ್ವಿಯಾಗಿ, ಸ್ನೇಹಪರರಾಗಿ ಸದಾ ಹೊಲ- ಗದ್ದೆಯಲ್ಲಿ ಕೆಲಸ ಮಾಡುತ್ತ, ಜಾನುವಾರುಗಳನ್ನು ವಿಶೇಷವಾಗಿ ಪ್ರೀತಿಸುತ್ತ ಪ್ರೀತಿಯ ದ್ಯೋತಕವಾಗಿ ಹೊರಹೊಮ್ಮಿದ ಸಿ.ಎಂ. ರೇವಣಸಿದ್ದಯ್ಯನವರ ಸರಳ ಜೀವನ ಇತರರಿಗೆ ಮಾದರಿಯಾಗಿದೆ.ಅದರಲ್ಲೂ ವಿಶೇಷವಾಗಿ ಇಂದಿನ ರಾಜಕಾರಣಿಗಳಿಗೆ ದಾರಿದೀಪವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.