ಸೋಮವಾರ, ಏಪ್ರಿಲ್ 12, 2021
26 °C

ದೆವ್ವದ ಕಾಲು ದೇವರ ಕಾಲು ಆದಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದೆವ್ವದ ಕಾಲಿನ ಹುಡ್ಗ ಅವ್ನ. ಯಾರೂ ಹತ್ರ ಹೋಗ್ಬೇಡಿ~-ಹಾಸನ ಜಿಲ್ಲೆಯ ಮೊಸಳೆಹೊಸಳ್ಳಿ ಗ್ರಾಮದ ಹುಡುಗ ಸುನಿಲ್ ಕುಮಾರ್ ಕಂಡರೆ ಸಾಕು, ಜನ ಅವನತ್ತ ಅಸಡ್ಡೆ ವ್ಯಕ್ತಪಡಿಸುತ್ತಿದ್ದ ಪರಿ ಇದಾಗಿತ್ತು. ಆತನ ಬಲಗಾಲು 180 ಡಿಗ್ರಿ ಕೋನದಲ್ಲಿ ಹಿಂದಕ್ಕೆ ಹೊರಳಿದ್ದೇ ಈ ಅಸಡ್ಡೆಗೆ ಕಾರಣವಾಗಿತ್ತು.ಒಂದು ಕಾಲು ಮುಂದಕ್ಕೂ ಮತ್ತೊಂದು ಹಿಂದಕ್ಕೂ ಮುಖ ಮಾಡಿದ್ದರಿಂದ ಸುನಿಲ್ ನಡೆಯಲು ಆರಂಭಿಸಿದರೆ ಸಾಕು, `ಅರೆರೆ, ಎತ್ತ ಕಡೆಗೆ ಹೊರಟಿದ್ದಾನೆ ಈತ~ ಎಂಬ ಗಲಿಬಿಲಿ ನೋಡುಗರಲ್ಲಿ ಉಂಟಾಗುತ್ತಿತ್ತು. ಬೆನ್ನಿನ ಕಡೆಗೆ ಮುಖ ಮಾಡಿದ್ದ ಬಲಗಾಲು `ಉಲ್ಟಾ~ ಹೆಜ್ಜೆ ಇಡುತ್ತಿತ್ತು.ದೆವ್ವದ ಕಾಲಿನ ಮೂದಲಿಕೆಗೆ ಒಳಗಾಗುತ್ತಿದ್ದ ಸುನಿಲ್ ಶಾಲೆಗೆ ಸರಿಯಾಗಿ ಹೋಗಲಿಲ್ಲ. ಮನೆಬಿಟ್ಟು ಆಚೆಗೆ ಬರಲೂ ಸಂಕೋಚ ಪಡುತ್ತಿದ್ದ. ಪರಿಚಿತರ ಸಹಾಯ ಪಡೆದು ತಮ್ಮ ಏಕೈಕ ಮಗನನ್ನು ಮುಂಬೈ ಆಸ್ಪತ್ರೆಗೂ ಕರೆದುಕೊಂಡು ಹೋಗಿಬಂದರು ಹಿರಿಯಣ್ಣೇಗೌಡ. ಈ ಯಾತ್ರೆಯಿಂದ ದುಡ್ಡು ಖರ್ಚಾಗಿದ್ದು ಬಿಟ್ಟರೆ ಏನೊಂದೂ ಪ್ರಯೋಜನ ಆಗಲಿಲ್ಲ.ನಗರದ ಸಂಜಯ್ ಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಆಸ್ಪತ್ರೆಯ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎಚ್.ಎಸ್. ಚಂದ್ರಶೇಖರ್, ತಮ್ಮ ತಂದೆ ಎಚ್.ಎನ್. ಸಣ್ಣೇಗೌಡರ ಸ್ಮರಣೆಗಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಈ ಹುಡುಗ ವೈದ್ಯರ ಕಣ್ಣಿಗೆ ಬಿದ್ದ.ಸುನಿಲ್ ಕಾಲುಗಳನ್ನು ಕಂಡು ಮೂಳೆ ತಜ್ಞ ವೈದ್ಯರ ತಂಡ ವಿಸ್ಮಯಗೊಂಡಿತು. `ಕಾಲು ಹೆಚ್ಚೆಂದರೆ 90 ಡಿಗ್ರಿ ಕೋನದವರೆಗೆ ಹೊರಳುತ್ತದೆ~ ಎಂದಷ್ಟೇ ಗೊತ್ತಿದ್ದ ತಜ್ಞರಿಗೆ ಹೊಸ ಕೌತುಕ ಕಣ್ಣ ಮುಂದೆಯೇ ಪ್ರತ್ಯಕ್ಷ ಪ್ರಮಾಣವಾಗಿ ನಿಂತಿತ್ತು. ಜಗತ್ತಿನ ಎಲ್ಲ ವೈದ್ಯಕೀಯ ಪುಸ್ತಕಗಳನ್ನು ತಡಕಾಡಿದರೂ ರೋಟೇಶನ್ ಡಿಫರ್ಮಿಟಿ (ಹೊರಳಿದ ಕಾಲಿಗೆ ವೈದ್ಯಕೀಯ ಪರಿಭಾಷೆ) 180 ಡಿಗ್ರಿ ಕೋನ ತಲುಪಿದ ಯಾವ ದಾಖಲೆಯೂ ಅವರಿಗೆ ಸಿಕ್ಕಲಿಲ್ಲ.ಕೊನೆಗೆ ಸುನಿಲ್ ಬಲಗಾಲನ್ನು ಮುಂದಕ್ಕೆ ತಿರುಗಿಸಲು ತಜ್ಞರ ತಂಡ ನಿರ್ಧಾರ ಮಾಡಿತು. ಹಿರಿಯಣ್ಣೇಗೌಡ ಮತ್ತು ಕಾಂತಮ್ಮ ದಂಪತಿಯಿಂದ ಚಿಕಿತ್ಸೆಗೆ ಒಪ್ಪಿಗೆಯನ್ನೂ ಪಡೆಯಲಾಯಿತು. ಮೂರು ವಾರಗಳ ಹಿಂದೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಆ ಹುಡುಗನ ಕಾಲಿಗೆ `ಕರೆಕ್ಟಿವ್ ಆಸ್ಟಿಯಾಟಮಿ ಆಫ್ ಟಿಬಿಯಾ~ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.ಡಾ. ಚಂದ್ರಶೇಖರ್ ಅವರಲ್ಲದೆ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಕೆ. ಬಸವರಾಜ್, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿ ಡಾ.ಎಚ್.ಎಸ್. ವಿನಯ್ ಹಾಗೂ ಅರಿವಳಿಕೆ ತಜ್ಞ ಡಾ. ಶಿವಲಿಂಗಯ್ಯ ಅವರಿದ್ದ ತಂಡ ಎರಡು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ಹಿಂದೆ ತಿರುಗಿದ್ದ ಕಾಲನ್ನು ಸ್ವಸ್ಥಾನಕ್ಕೆ ತಂದು ಕೂಡಿಸಿತು.`ಕಾಲು ಹಿಂದಕ್ಕೆ ಹೊರಳಲು ಯಾವುದೇ ಸ್ಪಷ್ಟ ಕಾರಣ ಸಿಗುತ್ತಿಲ್ಲ. ಸುನಿಲ್ ಚಿಕ್ಕವನಿದ್ದಾಗ ಕಾಲಿನ ಎಲುಬಿನ ಮೇಲೆ ದೊಡ್ಡ ಗಾಯವಾಗಿತ್ತು ಎಂಬುದು ಆತನ ಪಾಲಕರು ನೀಡುವ ಮಾಹಿತಿಯಾಗಿದೆ. ಚಿಕ್ಕ ಮಕ್ಕಳಲ್ಲಿ ಎಲುಬು ಮೃದುವಾಗಿರುತ್ತದೆ. ಪ್ರಾಯಶಃ ಬಲ ಭಾಗದಲ್ಲಿ ಒತ್ತಡ ಬೀಳುತ್ತಾ ಹೋಗಿದ್ದರಿಂದ ವಾಲುತ್ತಾ ಹೋಗಿರಬಹುದು~ ಎಂದು ಡಾ. ಚಂದ್ರಶೇಖರ್ ಹೇಳುತ್ತಾರೆ.ಅಂದಹಾಗೆ, ಈ ಶಸ್ತ್ರ ಚಿಕಿತ್ಸೆಯನ್ನು  ಪೂರ್ಣ ಉಚಿತವಾಗಿ ಮಾಡಲಾಗಿದೆ. `ಆಸ್ಪತ್ರೆ ಇದಕ್ಕಾಗಿ ರೂ 20 ಸಾವಿರ  ಖರ್ಚು ಮಾಡಿದೆ. ಅದೇ ಖಾಸಗಿ ಆಸ್ಪತ್ರೆಯಲ್ಲಿ ಆಗಿದ್ದರೆ ರೂ 2 ಲಕ್ಷಕ್ಕಿಂತ ಅಧಿಕ ಹೊರೆ ಅವರ ಕುಟುಂಬದ ಮೇಲೆ ಬೀಳುತ್ತಿತ್ತು~ ಎಂದು ವಿವರಿಸುತ್ತಾರೆ.`ಕುಂಟ ಎಂದು ಕಾಡಿಸುತ್ತಿದ್ದರು. ಈಗ ನೋಡಿ, ನನ್ನ ಕಾಲೂ ಎಲ್ಲರಂತಾಗಿದೆ~ ಎಂದು ಹೇಳುವಾಗ ಸುನಿಲ್ ಕಣ್ಣುಗಳಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. `ನನಗೀಗ 17 ವರ್ಷ. ಓದನ್ನು ಮುಂದುವರಿಸುತ್ತೇನೆ~ ಎಂದು ಉತ್ಸಾಹ ತೋರುತ್ತಾನೆ ಆತ.`ನನ್ನ ಮಗನದು ಇನ್ನು ದೇವರ ಕಾಲು. ಅವನಿಗೆ ಹೆಣ್ಣು ಸಿಗುವುದಿಲ್ಲ ಎಂಬ ಚಿಂತೆ ಇನ್ನಿಲ್ಲ~ ಎಂದು ಕಾಂತಮ್ಮ  ಹರ್ಷಪಟ್ಟಿದ್ದಾರೆ. ಇಂತಹದ್ದೇ ತೊಂದರೆ ಉಳ್ಳವರು ಡಾ. ಚಂದ್ರಶೇಖರ್ ಅವರನ್ನು ಸಂಪರ್ಕಿಸಿ, ಸಹಾಯ ಪಡೆಯಬಹುದು. ಸಂಪರ್ಕ ಸಂಖ್ಯೆ: 98455 06627. ಆಸ್ಪತ್ರೆಯ ದೂರವಾಣಿ- 080 2656 2822.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.