ಶುಕ್ರವಾರ, ಜೂನ್ 25, 2021
22 °C

ದೇಗುಲಗಳ ತೊಟ್ಟಿಲು ‘ಆಲಂಪುರ’

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಆಂಧ್ರಪ್ರದೇಶದ ನಲ್ಲಮಲ್ಲ ದಟ್ಟ ಅರಣ್ಯದ ಅಂಚಿನಲ್ಲಿ ಆಲಂಪುರ ಎಂಬ ಪುಟ್ಟ ಊರಿದೆ. ಈ ಊರು ನಾಗರಶೈಲಿಯ ದೇವಸ್ಥಾನಗಳಿಗೆ ಹೆಸರುವಾಸಿ. ಶಿಲ್ಪಕಲೆ ಶ್ರೀಮಂತಿಕೆಯಿಂದ ಕೂಡಿರುವ ಈ ದೇವಸ್ಥಾನಗಳು ಮೊದಲ ನೋಟಕ್ಕೆ ಕರ್ನಾಟಕದ ಐಹೊಳೆಯನ್ನು ನೆನಪಿಸುತ್ತವೆ.ಆಲಂಪುರದಲ್ಲಿ ಒಟ್ಟು ಒಂಬತ್ತು ನವಬ್ರಹ್ಮ ದೇವಾಲಯಗಳಿವೆ. ಇದರಲ್ಲಿ ಸಂಗಮೇಶ್ವರ ದೇವಸ್ಥಾನ ಪ್ರಮುಖವಾದದ್ದು. ಇವುಗಳ ಇತಿಹಾಸ ಹುಡುಕುತ್ತ ಹೋದರೆ ಕ್ರಿ.ಶ. ೭ನೇ ಶತಮಾನಕ್ಕೆ ಕೊಂಡೊಯ್ಯುತ್ತವೆ. ಈ ಹಳ್ಳಿ ಹಿಂದೆ ಬಾದಾಮಿ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಶೈವ ಮತ ಆರಾಧಕರಾಗಿದ್ದ ಚಾಲುಕ್ಯರು ಕಲೆ ಮತ್ತು ವಾಸ್ತುಶಿಲ್ಪದ ಬಗ್ಗೆ ವಿಶೇಷ ಅಭಿರುಚಿ ಹೊಂದಿದ್ದರು.ಇಲ್ಲಿನ ಎಲ್ಲ ದೇವಸ್ಥಾನಗಳನ್ನು ಅವರು ಶಿವನ ಆರಾಧನೆಗಾಗಿ ಕಟ್ಟಿಸಿದ್ದರು. ಪ್ರತಿಯೊಂದು ದೇವಸ್ಥಾನದ ಹೊರಭಾಗ ಮತ್ತು ಅದರ ವಿಮಾನ ಗೋಪುರ ಚೌಕಾಕಾರವಾಗಿದ್ದು, ಸಂಪೂರ್ಣವಾಗಿ ಕಲ್ಲಿನ ಕೆತ್ತನೆ ಹೊಂದಿವೆ. ಇವುಗಳಲ್ಲಿ ಶಿವ ಮತ್ತು ಪಾರ್ವತಿಯ ವಿವಿಧ ಭಂಗಿ ನೋಡಬಹುದು. ಈ ಬಗೆಯ ಮಂದಿರಗಳನ್ನು ದಕ್ಷಿಣ ಭಾರತದಲ್ಲಿ ಕರ್ನಾಟಕದ ಐಹೊಳೆ, ಮಹಾರಾಷ್ಟ್ರದ ಕೆಲವು ಕಡೆ ಹೊರತುಪಡಿಸಿದರೆ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಹೆಚ್ಚಾಗಿ ಕಾಣಬಹುದು.ಕೃಷ್ಣೆ ಮತ್ತು ತುಂಗಭದ್ರೆ ನದಿಗಳ ಸಂಗಮದ ಸ್ಥಳದಲ್ಲಿರುವ ಆಲಂಪುರ, ದೇವಸ್ಥಾನಗಳ ತೊಟ್ಟಿಲು ಎಂದೇ ಪ್ರಸಿದ್ಧಿ. ನವಬ್ರಹ್ಮ ದೇವಾಲಯಗಳ ಹೊರತಾಗಿ ಬ್ರಹ್ಮೇಶ್ವರ ಮತ್ತು ಜೋಗುಳಾಂಬ ದೇವಾಲಯಗಳನ್ನೂ ಇಲ್ಲಿ ಕಾಣಬಹುದು. ನಿತ್ಯವೂ ಇಲ್ಲಿಗೆ ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಇದು ಈ ಭಾಗದ ಅಚ್ಚುಮೆಚ್ಚಿನ ಪಿಕ್‌ನಿಕ್‌ ಸ್ಪಾಟ್‌ ಕೂಡ ಹೌದು.ಹಂಪಿಯಂತೆ ಇದು ಕೂಡ ಬಹಮನಿ ಸುಲ್ತಾನರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಇಲ್ಲಿನ ಅನೇಕ ಶಿಲ್ಪಗಳು ವಿರೂಪಗೊಂಡಿವೆ. ಭಗ್ನಗೊಂಡಿದ್ದ ಮತ್ತು ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಅನೇಕ ಕಲ್ಲಿನ ಕೆತ್ತನೆಗಳನ್ನು ದೇವಸ್ಥಾನದ ಸನಿಹದಲ್ಲೇ ಇರುವ ಸಂಗ್ರಹಾಲಯದಲ್ಲಿ ಸಂಗ್ರಹಿಸಿ ಇಡಲಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಶಿಲ್ಪಕಲೆಯ ಜೊತೆಗೆ ಪ್ರಕೃತಿಯ ಸೊಬಗನ್ನು ನೋಡಬಹುದು.ಆಲಂಪುರ ಈ ಹಿಂದೆ ಹೈದರಾಬಾದ್‌ ರಾಜ್ಯದ ವ್ಯಾಪ್ತಿಗೆ ಒಳಪಟ್ಟಿದ್ದ ರಾಯಚೂರು ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿತ್ತು. ಈಗ ಇದು (ನೂತನ ತೆಲಂಗಾಣ ರಾಜ್ಯದ  ಭಾಗ) ಮೆಹಬೂಬ್‌ನಗರ ಜಿಲ್ಲೆಗೆ ಒಳಪಟ್ಟಿದೆ.ಹೋಗುವುದು ಹೀಗೆ...

ಆಲಂಪುರ ಜಿಲ್ಲಾ ಕೇಂದ್ರ ಮೆಹಬೂಬ್‌ನಗರದಿಂದ ೯೦ ಕಿ.ಮೀ ಮತ್ತು ಕರ್ನೂಲ್‌ ಜಿಲ್ಲೆಯಿಂದ ಕೇವಲ ೩೦ ಕಿ.ಮೀ ಅಂತರದಲ್ಲಿದೆ. ರಾಜಧಾನಿ ಹೈದರಾಬಾದ್‌ನಿಂದ ೨೦೦ ಕಿ.ಮೀ ದೂರದಲ್ಲಿದೆ. ಉತ್ತಮ ರಸ್ತೆ ಸಂಪರ್ಕ ಹೊಂದಿರುವ ಇಲ್ಲಿಗೆ ಸರ್ಕಾರಿ ಬಸ್ಸುಗಳು ಸೇರಿದಂತೆ ಖಾಸಗಿ ವಾಹನಗಳು ಸಂಚರಿಸುತ್ತವೆ. ರೈಲಿನಲ್ಲಿ ಕೂಡ ಹೋಗಬಹುದು.ಪ್ರವಾಸಿಗರ ಅನುಕೂಲಕ್ಕಾಗಿ ಆಂಧ್ರ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಪಿಟಿಡಿಸಿ) ಆಲಂಪುರದಲ್ಲಿ ಸುಸಜ್ಜಿತ ವಸತಿಗೃಹ ನಿರ್ಮಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.