ಶನಿವಾರ, ಮೇ 8, 2021
19 °C

ದೇಶದ ಮೊದಲ ಹಣಕಾಸು ನಗರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ಖ್ಯಾತಿಯ ಬೆಂಗಳೂರು ನಗರ ಈಗ, ದೇಶದ ಮೊಟ್ಟ ಮೊದಲ `ಹಣಕಾಸು ನಗರ~ವೆಂಬ ಖ್ಯಾತಿಗೂ ಪಾತ್ರವಾಗಲಿದೆ. ವಿವಿಧ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಒಂದೇ ಸೂರಿನಡಿ ಕೆಲಸ ನಿರ್ವಹಿಸುವುದಕ್ಕಾಗಿ ಈ ಯೋಜನೆಯನ್ನು ಭಾರತೀಯ ಕೈಗಾರಿಕಾ ಹಣಕಾಸು ನಿಗಮ (ಐಎಫ್‌ಸಿಐ) ರೂಪಿಸಿದೆ.ಈ ಸಲುವಾಗಿ ನಗರ ಹೊರ ವಲಯದ ಬಾಗಲೂರಿನ ಹಾರ್ಡ್‌ವೇರ್ ಪಾರ್ಕ್ ಸಮೀಪ 50 ಎಕರೆ ಜಮೀನನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. 2010ರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡ ಯೋಜನೆಗಳ ಪೈಕಿ ಇದು ಮೊದಲನೆಯದು. ಸುಮಾರು 1000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ನೀರೀಕ್ಷೆ ಇದ್ದು, ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.ಈ ಯೋಜನೆಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು, `ಆರ್ಥಿಕ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಲು ಇದು ಸಹಕಾರಿಯಾಗಲಿದೆ.

ವಿವಿಧ ಕ್ಷೇತ್ರಗಳಿಗೆ ಸಾಲ ಮಂಜೂರು ಮಾಡುವ ಪ್ರಮುಖ ನಗರಿಗಳ ಪೈಕಿ ಮುಂಬೈ ಮತ್ತು ದೆಹಲಿಯನ್ನು ಹೊರತುಪಡಿಸಿದರೆ ಬೆಂಗಳೂರಿಗೆ ಮೂರನೇ ಸ್ಥಾನ ಇದೆ. ದೇಶದ ಆರ್ಥಿಕ ಕೊಡುಗೆಯಲ್ಲಿ ಬೆಂಗಳೂರಿನ ಕೊಡುಗೆ ಅಪಾರ. ಈ ಸಾಲಿಗೆ `ಹಣಕಾಸು ನಗರ~ ಕೂಡ ಸೇರಿದ್ದು, ಇದು ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲು~ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಈ ಯೋಜನೆ ಜಾರಿಯಿಂದ ಸಾವಿರಾರು ಜನರಿಗೆ ಉದ್ಯೋಗದ ಅವಕಾಶ ಕೂಡ ದೊರಕಲಿದೆ ಎಂದು ನುಡಿದರು.ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ, `ಇಂಥಾದ್ದೊಂದು ಯೋಜನೆ ಕಾರ್ಯಗತವಾಗಬೇಕು ಎನ್ನುವ ನನ್ನ ಬಹಳ ವರ್ಷಗಳ ಕನಸು ನನಸಾಗಿದೆ. ಲಂಡನ್, ನ್ಯೂಯಾರ್ಕ್ ಮುಂತಾದ ಪ್ರಮುಖ ನಗರಗಳಲ್ಲಿನ ಅರ್ಥ ವ್ಯವಸ್ಥೆಯನ್ನು ಕಂಡಾಗ, ಇಲ್ಲಿಯೂ ಅದೇ ರೀತಿಯ ವ್ಯವಸ್ಥೆ ಜಾರಿಗೊಳಿಸಬೇಕು ಎಂಬುದನ್ನು 90ರ ದಶಕದಲ್ಲಿಯೇ ಕನಸು ಕಂಡಿದ್ದೆ~ ಎಂದರು.`ಹಣಕಾಸು ನಗರ~ ಸ್ಥಾಪನೆಗೆ 50 ಎಕರೆ ಜಮೀನು ಮಾತ್ರ ಮೀಸಲು ಇರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂಥದ್ದೊಂದು ಯೋಜನೆ ರೂಪಿಸಲು ಸಾವಿರಾರು ಎಕರೆ ಜಮೀನು ಮಂಜೂರು ಮಾಡಬೇಕಿದೆ~ ಎಂದರು.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ  ಹಾಗೂ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಈ ಯೋಜನೆಗೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ಈ ಯೋಜನೆಯು ಜಗತ್ತಿನ ಇತರ ದೇಶಗಳಿಗೂ ಮಾದರಿಯಾಗಿ ರೂಪುಗೊಳ್ಳುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಐಎಫ್‌ಸಿಐ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಅತುಲ್ ಕುಮಾರ್ ರೈ ಮಾತನಾಡಿದರು.

 

ಬಾಂಧವ್ಯ ಹೆಚ್ಚಳ: ಪ್ರಣವ್ ಆಶಯ

ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಭಾರತಕ್ಕೆ ಭೇಟಿ ನೀಡಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಪ್ರಣವ್ ಮುಖರ್ಜಿ `ದ್ವಿಪಕ್ಷೀಯ ಬಾಂಧವ್ಯಕ್ಕೆ ಈ ಭೇಟಿ ಪ್ರಮುಖವಾಗಲಿದೆ. ಪಾಕಿಸ್ತಾನದ ಜೊತೆ ಭಾರತದ ಬಾಂಧವ್ಯ ಇನ್ನಷ್ಟು ಹೆಚ್ಚಾಗಬೇಕು ಎನ್ನುವುದೇ ನಮ್ಮ ಆಶಯ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.