ಗುರುವಾರ , ಜೂನ್ 24, 2021
29 °C

ದೇಶ ಸೇವೆಗೆ ಯುವಜನತೆ ಕಂಕಣಬದ್ಧರಾಗಿ: ಹಲಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಾತಿ, ಮತ, ಪಂಥಗಳಿಂದಾಚೆ ಇದ್ದು ಒಗ್ಗಟ್ಟಿನಿಂದ ಬಾಳಿ ಸುಂದರ ಬದುಕು ಕಟ್ಟಿಕೊಳ್ಳುವ ಮೂಲಕ ದೇಶ ಸೇವೆಗೆ ಕಂಕಣಬದ್ಧರಾಗಬೇಕು ಎಂದು ಭಾರತೀಯ ಸೇನಾಪಡೆಯ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ ಹೇಳಿದರು.ತಾಲ್ಲೂಕಿನ ಬೆನಕಟ್ಟಿ ಗ್ರಾಮದ ವಿಶ್ವಭಾರತಿ ಶಿಕ್ಷಣ ಸಮಿತಿಯ ಹೇಮರಡ್ಡಿ ಮಲ್ಲಮಾಂಬೆ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ್ದ ಪ್ರೌಢಶಾಲೆಯ ಬೆಳ್ಳಿಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಾತಿ-ಧರ್ಮ ನಮ್ಮ ನಮ್ಮ ಮನೆಯಲ್ಲಿರಬೇಕೆ ಹೊರತು, ಮನೆಯ ಹೊರಗೆ ಬಂದರೆ ಅದನ್ನು ಮರೆತು ಒಗ್ಗಟ್ಟಿನಿಂದ ಬಾಳಿ ದೇಶದ ಏಕತೆಯನ್ನು ಕಾಪಾಡಿಕೊಳ್ಳಬೇಕೆಂದರು.`ನಮ್ಮ ಸಂಸ್ಕೃತಿ, ನಮ್ಮ ಆಚಾರ-ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗುವಂತಿವೆ,  ಭಾರತ ಇಂದು ಜಗತ್ತಿನಲ್ಲಿ ಗುರುತಿಸಿಕೊಂಡಿದೆ. ಇಂತಹ ಪುಣ್ಯಸ್ಥಳದಲ್ಲಿ ಜನಿಸಿದ ನಾವುಗಳು ಧನ್ಯರು ಎಂದು ಬಣ್ಣಿಸಿದ ಅವರು,  ಕರ್ತವ್ಯವೇ ದೇವರು ಎಂದು ತಿಳಿದು ಪ್ರಾಮಾಣಿಕರಾಗಿ ದೇಶ ಸೇವೆಗೆ ಅಣಿಯಾಗಬೇಕು~ ಎಂದು ಹೇಳಿದರು.ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕು, ಮಕ್ಕಳು ಉತ್ತಮ ನಡತೆಯನ್ನು ರೂಢಿಸಿಕೊಂಡು, ನಾಡು, ದೇಶದ ಕೀರ್ತಿಯನ್ನು ಬೆಳಗುವ ದೀಪಗಳಾಗಬೇಕು ಎಂದರು.ತವರೂರಿನಲ್ಲಿ ತಮಗೆ ದೊರೆತ ಸನ್ಮಾನಕ್ಕೆ ಹೃದಯ ತುಂಬಿ ಕೃತಜ್ಞತೆ ಸಲ್ಲಿಸಿದ ರಮೇಶ ಹಲಗಲಿ ಅವರು, ತಮ್ಮ ಪೂರ್ವಜರನ್ನು ನೆನಪಿಸಿಕೊಂಡರಲ್ಲದೇ ತಮ್ಮ ತಂದೆ-ತಾಯಿಗಳ ತಪಸ್ಸಿನ ಫಲ ಹಾಗೂ ಊರಿನ ಜನರ ಅಭಿಮಾನ ಹಾಗೂ ಪ್ರೀತಿ ನನ್ನನ್ನು ಈ ಸ್ಥಾನಕ್ಕೆ ತಂದಿವೆ ಎಂದು ಸ್ಮರಿಸಿಕೊಂಡರು.ಸವಿನೆನಪು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಬೀದರನ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಹೊನ್ನಪ್ಪಗೋಳ ಮಾತನಾಡಿ, ಕಲಿತ ಶಾಲೆ, ಕಲಿಸಿದ ಗುರುಗಳನ್ನು ಸ್ಮರಿಸಿ ಗೌರವಿಸುವ ಈ ಶಾಲೆಯ ಹಳೆಯ ವಿದ್ಯಾರ್ಥಿಗಳ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.ಶಾಲೆಯ ಗ್ರಂಥಾಲಯಕ್ಕೆ ಅಗತ್ಯವಾದ ಪುಸ್ತಕ ಖರೀದಿಗೆ  ಎಸ್.ಕೆ. ಯಡಹಳ್ಳಿ ಅವರು  ರೂ.25 ಸಾವಿರ ಹಾಗೂ  ನಿವೃತ್ತ ಕೃಷಿ ಉಪನಿರ್ದೇಶಕ ಆರ್.ಎಲ್.ಕಟಗೇರಿ  ರೂ.10 ಸಾವಿರ ದೇಣಿಗೆ ನೀಡುವುದಾಗಿ ತಿಳಿಸಿದರು.

ಪ್ರೊ. ಎಚ್.ಆರ್.ಪಾಟೀಲ, ನಿವೃತ್ತ ಶಿಕ್ಷಕ ಅಣ್ಣಪ್ಪ ಕಟಗೇರಿ, ರಾಜೇಶ ದಾಸಪ್ಪನವರ, ರಾಯನಗೌಡ ಅರಿಷಿಣಗೋಡಿ, ಕೆ.ಎನ್.ಪಾಟೀಲ, ಎಚ್.ಜಿ. ಬಾಳಕ್ಕನವರ, ಎಸ್.ಟಿ. ಪಾಟೀಲ, ಡಾ.ಎಸ್.ಎನ್. ಅಮಾತೆಪ್ಪನವರ, ಕೆ.ಪಿ.ಯಡಹಳ್ಳಿ, ವಿಶ್ವಭಾರತಿ ಶಿಕ್ಷಣ ಸಮಿತಿಯ ಅಧ್ಯಕ್ಷೆ ರೇಣುಕಾ ಸನಗಿನ, ಜಿ.ಪಂ.ಸದಸ್ಯೆ ಸರೋಜಿನಿ ಅಂಗಡಿ, ತಾ.ಪಂ. ಉಪಾಧ್ಯಕ್ಷ ರಾಜಶೇಖರ ಮುದೇನೂರ, ಗ್ರಾ.ಪಂ. ಅಧ್ಯಕ್ಷ ಮಾನಪ್ಪ ಸಕ್ರಣ್ಣವರ, ಪಿಕೆಪಿಎಸ್ ಅಧ್ಯಕ್ಷ ಗಿರೀಶ ಪಾಟೀಲ, ಎಪಿಎಂಸಿ ಸದಸ್ಯ ರವಿ ಅರಿಷಿಣಗೋಡಿ, ಪ್ರೊ. ನಿರಂಜನ ನಾಲತವಾಡ, ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಎನ್.ಬಿ. ಗೊರವರ, ಪ್ರಾಚಾರ್ಯರಾದ ಕೆ.ಎಂ. ಶೆಟ್ಟರ ಹಾಗೂ ಎಸ್.ಬಿ. ಪಾಟೀಲ,  ಕಾಶೀಬಾಯಿ ಹಲಗಲಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.