ಭಾನುವಾರ, ಏಪ್ರಿಲ್ 18, 2021
25 °C

ದೇಹವೇ ಆಯುಧ

ಸಿ. ಜಿ. ಮಂಜುಳಾ Updated:

ಅಕ್ಷರ ಗಾತ್ರ : | |

ದೇಹವೇ ಆಯುಧ

ಮಣಿಪುರದ ಇರೊಮ್ ಶರ್ಮಿಳಾ ಚಾನು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 12 ವರ್ಷಗಳನ್ನು ಪೂರೈಸಿ 13ನೇ ವರ್ಷಕ್ಕೆ ಕಾಲಿರಿಸಿದೆ. ಇಷ್ಟು ದೀರ್ಘಾವಧಿಯ ಉಪವಾಸ ಜಗತ್ತಿನ ಇತಿಹಾಸದಲ್ಲಿ ಕಂಡು ಕೇಳರಿಯದ್ದು. ಪ್ರಭುತ್ವದ ದೈತ್ಯ ಶಕ್ತಿಯ ವಿರುದ್ಧ ತನ್ನ `ದೇಹ~ವನ್ನೇ `ಆಯುಧ~ವಾಗಿಸಿಕೊಂಡು ಅಹಿಂಸಾತ್ಮಕವಾಗಿ ಹೋರಾಡುವ ಪ್ರತಿರೋಧದ ಅನನ್ಯ ಸಂಕೇತ ಇದು. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (1958) ಹಿಂತೆಗೆದುಕೊಳ್ಳುವವರೆಗೆ ನಿರಶನ ನಿಲ್ಲುವುದಿಲ್ಲವೆಂಬ ಈ `ಉಕ್ಕಿನ ಮಹಿಳೆ~ಯ ಛಲ ದೇಶ, ವಿದೇಶಗಳ ಗಮನ ಸೆಳೆದುಕೊಂಡಿದೆ. ಆದರೆ ಅದು ಹೇಗೋ ಇದು ನಗರಗಳ ಭಾರತೀಯ ಮಧ್ಯಮವರ್ಗದ ಗಮನ ಸೆಳೆದುಕೊಳ್ಳುವಲ್ಲಿ ವಿಫಲವಾಗಿದೆ.ಕಠಿಣವಾದ ಭ್ರಷ್ಟಾಚಾರ ವಿರೋಧಿ ಕಾಯಿದೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಹಿರಿಯ ಹೋರಾಟಗಾರ ಅಣ್ಣಾ ಹಜಾರೆ ಅವರು ಇಂತಹದೇ ಸತ್ಯಾಗ್ರಹವನ್ನು 2011ರ ಏಪ್ರಿಲ್ 5ರಂದು ಆರಂಭಿಸಿದಾಗ ಸಾವಿರಾರು ಜನರು ಬೆಂಬಲಿಸಿ ಹೋರಾಟದ ನದಿಗಳಾಗಿ ಹರಿದು ಬಂದಿದ್ದನ್ನು ನೆನಪಿಸಿಕೊಳ್ಳಬಹುದು. ಈಶಾನ್ಯ ರಾಜ್ಯಗಳ ಕುರಿತಾಗಿ ರಾಷ್ಟ್ರದ ಮುಖ್ಯವಾಹಿನಿಯಲ್ಲಿರುವ ನಿರ್ಲಕ್ಷ್ಯಕ್ಕೂ ಇದು ಸಂಕೇತ.ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ಮಣಿಪುರ ಮತ್ತು ಈಶಾನ್ಯದ ಬಹುತೇಕ ರಾಜ್ಯಗಳಲ್ಲಿ 1980ರಿಂದ ಜಾರಿಗೊಳಿಸಲಾಗಿದೆ. ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಅಥವಾ ಎಸಗಲು ಹೊರಟಿದ್ದಾರೆ ಎಂಬ ಚಿಕ್ಕ ಅನುಮಾನವಿದ್ದರೂ ಸಾಕು ಅಂತಹವರನ್ನು ವಾರಂಟ್ ಇಲ್ಲದೆ ಬಂಧಿಸಲು ಅಥವಾ ಗುಂಡು ಹಾರಿಸಿ ಸಾಯಿಸುವ ಅಧಿಕಾರಬಲವನ್ನು ಸೇನೆಗೆ ಈ ಕಾಯಿದೆ ನೀಡುತ್ತದೆ.ಈ ಕರಾಳ ಶಾಸನದ ವಿರುದ್ಧದ ಹೋರಾಟಕ್ಕೆ ಶರ್ಮಿಳಾ ಆಯ್ಕೆ ಮಾಡಿಕೊಂಡಿದ್ದು ಗಾಂಧಿಯ ಮಾರ್ಗ. ಶರ್ಮಿಳಾ ಹೇಳುತ್ತಾರೆ: `ಸಾಧಾರಣ ವ್ಯಕ್ತಿಗೆ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಏನೆಂದರೆ ಏನೂ ಇಲ್ಲ. ನನಗಿರುವುದು ನನ್ನ ದೇಹ ಮಾತ್ರ. ಕನಿಷ್ಠ ನನ್ನದಾದ ಇದನ್ನು ನಾನು ಪೂರ್ಣವಾಗಿ ಬಳಸುತ್ತೇನೆ.~

ಈ ಹನ್ನೆರಡು ವರ್ಷಗಳಲ್ಲಿ ಒಂದು ತುತ್ತು ಅನ್ನವನ್ನೂ ಅವರು ತಿಂದಿಲ್ಲ. ಒಂದು ಗುಟುಕು ನೀರನ್ನೂ ಕುಡಿದಿಲ್ಲ. ಈ ದೇಹದಂಡನೆ, ಈ ಉಪವಾಸ ಸತ್ಯಾಗ್ರಹ ತನ್ನ ಕರ್ತವ್ಯ, ಬದ್ಧತೆ ಎಂದೂ ಶರ್ಮಿಳಾ ಭಾವಿಸುತ್ತಾರೆ. ಈ ನಿಟ್ಟಿನಲ್ಲಿ ಶರ್ಮಿಳಾರ ವೈಯಕ್ತಿಕ ತ್ಯಾಗ ಅಪಾರವಾದುದು. ಆದರೆ ಇದರಿಂದ ಶರ್ಮಿಳಾ ಸಾಧಿಸಿದ್ದಾದರೂ ಏನು? ಎಂಬುದು ಪ್ರಶ್ನೆ. ನಿಜ. ಶರ್ಮಿಳಾರ ಬೇಡಿಕೆಗೆ ಪ್ರಭುತ್ವ ಮಣಿದಿಲ್ಲ. ಆದರೆ ತೀವ್ರ ಒತ್ತಡಗಳಿಂದಾಗಿ, 2004ರಲ್ಲಿ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ಬಿ.ಪಿ ಜೀವನ್‌ರೆಡ್ಡಿ ಅಧ್ಯಕ್ಷತೆಯ ಸಮಿತಿ ರಚಿಸಿತು. `ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ~ ರದ್ದು ಪಡಿಸುವಿಕೆಗೆ ರೆಡ್ಡಿ ಸಮಿತಿ ಸಲಹೆ ನೀಡಿತು. ಈ ಕುರಿತಂತೆ ಯಾವುದೇ ನಿರ್ದಿಷ್ಟ ಕ್ರಮವನ್ನು ಸರ್ಕಾರ ಕೈಗೊಳ್ಳಲಿಲ್ಲ. ಆದರೆ ಜ್ವಲಂತ ಸಮಸ್ಯೆಯೊಂದು ಮುಂಚೂಣಿಗೆ ಬರಲು ಇದರಿಂದ ಸಹಾಯವಂತೂ ಆಯಿತು.ಶರ್ಮಿಳಾ ಹುಟ್ಟಿದ್ದು 1972ರ ಮಾರ್ಚ್ 14ರಂದು. ತಾಯಿ ಶಾಖಿ ದೇವಿ. ತಂದೆ ಇರೊಮ್ ನಂದ ಸಿಂಗ್ ಸರ್ಕಾರಿ ಪಶುವೈದ್ಯ ಇಲಾಖೆಯಲ್ಲಿ ಪಶುವೈದ್ಯ ಸಹಾಯಕರಾಗಿದ್ದರು. ಕಿರಿಯ ಮಗಳಾದ ಶರ್ಮಿಳಾಗೆ ಐವರು ಅಣ್ಣಂದಿರು, ನಾಲ್ವರು ಅಕ್ಕಂದಿರು. ಶರ್ಮಿಳಾಗೆ ಓದುವುದರಲ್ಲಿ ಅಪಾರ ಆಸಕ್ತಿ. ವೃತ್ತಪತ್ರಿಕೆ, ಪುಸ್ತಕಗಳು, ಅಜ್ಜಿಯ ಕಥೆಗಳು ಹಾಗೂ ಕುಟುಂಬದೊಳಗೆ ನಡೆಯುವ ಚರ್ಚೆಗಳ ಮೂಲಕ ಮಾಹಿತಿಗಳನ್ನು ಗ್ರಹಿಸುತ್ತಿದ್ದರು. ತನ್ನ ರಾಜ್ಯದ ಗಲಭೆಗ್ರಸ್ತ ಪರಂಪರೆಯ ಅರಿವಿತ್ತು ಅವರಿಗೆ.1991ರಲ್ಲಿ ಶಾಲಾ ಶಿಕ್ಷಣ ಪೂರೈಸಿದ ನಂತರ ಷಾರ್ಟ್‌ಹ್ಯಾಂಡ್, ಟೈಪಿಂಗ್, ಟೈಲರಿಂಗ್ ಹಾಗೂ ಪತ್ರಿಕೋದ್ಯಮದಲ್ಲಿ ಕೈಯಾಡಿಸಿದರು. ಸಾಮಾಜಿಕ ಕಾರ್ಯ ಹಾಗೂ ಮಾನವ ಹಕ್ಕುಗಳ ಸಂಘಟನೆಗಳತ್ತ ಒಲವು ತೋರಿದ ಅವರು ವಿವಿಧ ಗುಂಪುಗಳ ಜತೆಗೂ ಕೆಲಸ ಮಾಡಿದರು.2000ದ ಅಕ್ಟೋಬರ್‌ನಲ್ಲಿ  ಹ್ಯೂಮನ್ ರೈಟ್ಸ್ ಅಲರ್ಟ್ (ಎಚ್‌ಆರ್‌ಎ) ಎಂಬ ಮಾನವ ಹಕ್ಕುಗಳ ಸಂಘಟನೆಯಲ್ಲಿ ಒಂದು ತಿಂಗಳು ಪ್ರಶಿಕ್ಷಣಾರ್ಥಿಯಾಗಿ ಶರ್ಮಿಳಾ ಕಾರ್ಯ ನಿರ್ವಹಿಸಿದರು. ಈ ಅವಧಿಯಲ್ಲಿ, ಜಾಗತಿಕ ದೃಷ್ಟಿಕೋನದಿಂದ ಮಾನವ ಹಕ್ಕುಗಳನ್ನು ಗ್ರಹಿಸುವ ಬಗ್ಗೆ ಜಾಗೃತಿ ಮೂಡಿತ್ತು.  ಮಣಿಪುರದಲ್ಲಿ `ಸಶಸ್ತ್ರ ಪಡೆಗಳ ವಿಶೇಷ ಹಕ್ಕು ಕಾಯಿದೆ~ಯ ಪರಿಣಾಮ ಕುರಿತಂತೆ ಸ್ವತಂತ್ರ ವ್ಯಕ್ತಿಗಳ ವಿಚಾರಣಾ ಆಯೋಗಕ್ಕಾಗಿ ಎಚ್‌ಆರ್‌ಎ ರಚಿಸಿದ್ದ ಸಿದ್ಧತಾ ಸಮಿತಿಯ ಭಾಗವಾಗಿ ಶರ್ಮಿಳಾ ಅವರೂ ಕೆಲಸ ಮಾಡಿದರು. ಈ ವಿಚಾರಣಾ ಆಯೋಗದ ನೇತೃತ್ವ ವಹಿಸಿದ್ದವರು ಬಾಂಬೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎಚ್ ಸುರೇಶ್. ಈ ತಂಡ ನಡೆಸಿದ ಕಲಾಪಗಳನ್ನು ಪ್ರತ್ಯಕ್ಷವಾಗಿ ಕಂಡ ಶರ್ಮಿಳಾ ಅನುಭವಲೋಕ ವಿಸ್ತಾರವಾಯಿತು. ಸಶಸ್ತ್ರ ಪಡೆಗಳ ಯದ್ವಾತದ್ವಾ ಕಾರ್ಯಾಚರಣೆಗಳಿಂದ ನೊಂದವರ ಅನುಭವ ಕಥನಗಳನ್ನು, ಸಾಕ್ಷಿಗಳನ್ನು ಕೇಳಿಸಿಕೊಳ್ಳುತ್ತಾ ಪೂರ್ಣ ಬದಲಾದರು ಅವರು.ಸ್ವಲ್ಪ ದಿನಗಳಲ್ಲೇ 2000ನೇ ನವೆಂಬರ್ 2ರಂದು `ಅಸ್ಸಾಂ ರೈಫಲ್ಸ್~ನ ಸಿಬ್ಬಂದಿ ಹಾರಿಸಿದ ಗುಂಡಿಗೆ 10 ಮುಗ್ಧ ಜೀವಗಳು ಬಲಿಯಾದವು. ಆ ಸಂದರ್ಭದಲ್ಲಿ ಈ ಬಡಪಾಯಿಗಳು ಇಂಫಾಲದ ಹೊರವಲಯದಲ್ಲಿನ ಪುಟ್ಟಹಳ್ಳಿ ಮಲೋಮ್‌ನ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಅಂದು ಬೆಳಿಗ್ಗೆ ವಾಸ್ತವವಾಗಿ ಮಲೋಮ್ ಬಳಿ `ಅಸ್ಸಾಂ ರೈಫಲ್ಸ್~ ಕ್ಯಾಂಪ್‌ನಲ್ಲಿ  ಬಾಂಬೊಂದು ಸ್ಫೋಟಗೊಂಡಿತ್ತು. ಈ ಸ್ಫೋಟಕ್ಕೆ ಕಾರಣರಾಗಿದ್ದವರು ಅಪರಿಚಿತ ಬಂಡುಕೋರರು. ಆಕ್ರೋಶಗೊಂಡ `ಅಸ್ಸಾಂ ರೈಫಲ್ಸ್~ ತನ್ನದೇ ಪ್ರತೀಕಾರದ ಕ್ರಮವಾಗಿ 10 ಜನರ ಮಾರಣಹೋಮಗೈದಿತ್ತು. ಮಲೋಮ್‌ನ ಹತ್ಯಾಕಾಂಡ ಶರ್ಮಿಳಾರನ್ನು ತೀವ್ರವಾಗಿ ಕಾಡಿತು. ಆಗ ಆಕೆಗೆ 28 ವರ್ಷ. ಕರಾಳ ಶಾಸನ ಹಿಂತೆಗೆದುಕೊಳ್ಳುವವರೆಗೆ ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರ ಕೈಗೊಂಡರು. 2000ನೇ ನವೆಂಬರ್ 5ರಂದು ಮಲೋಮ್‌ಗೆ ತೆರಳಿ ಹತ್ಯಾಕಾಂಡ ನಡೆದ ಸ್ಥಳದಲ್ಲಿ ಉಪವಾಸ ಆರಂಭಿಸಿದರು. ಆಕೆಯ ಕೃಶ ಶರೀರ ಸಾಮೂಹಿಕ ಪ್ರತಿಭಟನೆಯ ಕೇಂದ್ರಬಿಂದುವಾಯಿತು. ಈಗ 12 ವರ್ಷ ತುಂಬಿದ ಅವರ ಉಪವಾಸ ಸತ್ಯಾಗ್ರಹ ನಮ್ಮ ಕಾಲದ ಆಧುನಿಕ ದಂತಕಥೆಯಾಗಿದೆ.ಈ ಹನ್ನೆರಡು ವರ್ಷಗಳಿಂದಲೂ ಇಂಫಾಲದ ಜವಾಹರಲಾಲ್ ನೆಹರು ಆಸ್ಪತ್ರೆಯ ಭದ್ರತಾ ವಾರ್ಡ್‌ನಲ್ಲಿ ಶರ್ಮಿಳಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ವಿರುದ್ಧ ಆತ್ಮಹತ್ಯೆ ಯತ್ನ ಮೊಕದ್ದಮೆ ಹೂಡಲಾಗಿದೆ. ಬಲವಂತವಾಗಿ ಮೂಗಿಗೆ ನಳಿಕೆ ಹಾಕಿ ದ್ರವಾಹಾರ ನೀಡಲಾಗುತ್ತಿದೆ. ಈ ಬಂಧನದಲ್ಲಿ ಏಕಾಂಗಿಯಾಗಿರುವ ಅವರು ಅಧ್ಯಯನ, ಬರವಣಿಗೆ ಹಾಗೂ ಯೋಗಾಸನದಂತಹ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಕವನಗಳನ್ನು ಬರೆದಿರುವ ಶರ್ಮಿಳಾರ ಕವನವೊಂದರ ಸಾಲುಗಳು ಇವು:ಬದುಕಲು ಬಿಡಿ

ಮಗುವಿನಂತೆ

ಮಹತ್ವಾಕಾಂಕ್ಷೆ ಇಲ್ಲದ ಕೀಟದಂತೆ

ನಿಸ್ವಾರ್ಥದ

ತೃಪ್ತಿಯಲಿ2006ರ ಅಕ್ಟೋಬರ್ 3ರಂದು ಶರ್ಮಿಳಾರನ್ನು ಬಿಡುಗಡೆ ಮಾಡಲಾಗಿತ್ತು. ಆಗ ಪೊಲೀಸರು ಮರು ಬಂಧಿಸುವ ಮುಂಚೆ ತಪ್ಪಿಸಿಕೊಂಡು ದೆಹಲಿಗೆ ಬಂದು ಮಹಾತ್ಮಾ ಗಾಂಧಿ ಸಮಾಧಿ ಸ್ಥಳದಲ್ಲಿ ಪ್ರಾರ್ಥಿಸಿದ್ದರು ಅವರು. ನಂತರ ಜಂತರ್ ಮಂತರ್‌ನಲ್ಲಿ ನಿರಶನ ಮುಂದುವರಿಸಿದ್ದರು. ಯಥಾಪ್ರಕಾರ ಮತ್ತೆ ಬಂಧಿಸಿದ ಪೊಲೀಸರು ಅವರನ್ನು ಅಖಿಲ ಭಾರತ  ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ರಾಮಮನೋಹರ ಲೋಹಿಯಾ ಆಸ್ಪತ್ರೆಗಳಲ್ಲಿ ಇರಿಸಿದ್ದರು. 2007ರ ಮಾರ್ಚ್ 3ರಂದು ಮತ್ತೆ ಇಂಫಾಲಕ್ಕೆ ವಾಪಸಾದರು ಶರ್ಮಿಳಾ. ಅವರ ಆಂದೋಲನ ಕುರಿತ ಅರಿವು ಹೆಚ್ಚು ಜನರನ್ನು ತಲುಪಲು ಇದರಿಂದ ಸಾಧ್ಯವಾಗಿತ್ತು.   ಪ್ರಭುತ್ವದ ಶಕ್ತಿಗೆ ಸವಾಲೆಸೆದಿರುವ ಏಕ ವ್ಯಕ್ತಿಯ ಸಾಹಸಗಾಥೆ ಇದು. ಈ ಸಾತ್ವಿಕ ಪ್ರತಿರೋಧಕ್ಕೆ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಶಕ್ತಿ ಬೇಕು. ಇಂಫಾಲದ ಜೈಲಿನ ಆಸ್ಪತ್ರೆ ಶರ್ಮಿಳಾರ ಚೇತನವನ್ನು ಅನಿಕೇತನವಾಗಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.