ದೇವರು, ಧರ್ಮದ ಹೆಸರಿನಲ್ಲಿ ವಿವಿಧ ರೀತಿಯ ದುರಾಚಾರ, ದುಷ್ಟ ಆಚರಣೆಗಳು ಈ ದೇಶದಲ್ಲಿ ನಡೆಯುತ್ತ ಬಂದಿವೆ. ಮನುಷ್ಯ ತನ್ನ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳಲು ಹಲವು ರೀತಿಯ ಕರ್ಮಗಳನ್ನು ದೇವರ ಹೆಸರಿನಲ್ಲಿ ಮಾಡುತ್ತ ಬಂದಿದ್ದಾನೆ. ವಿಜ್ಞಾನದ ಪರಿಚಯ ಇಲ್ಲದಿದ್ದಾಗ, ಅಜ್ಞಾನ ಆವರಿಸಿದಾಗ, ವಿವೇಕ ಕೈಕೊಟ್ಟಾಗ ಏನೇ ಮಾಡಿದ್ದರೂ ಕ್ಷಮ್ಯ. ನಾವೀಗ ವಿಜ್ಞಾನದ ಕಾಲದಲ್ಲಿದ್ದೇವೆ. ಅಜ್ಞಾನ ಕಳೆದುಕೊಂಡಿದ್ದೇವೆ. ಅಂದಾಗ ಅಂಥ ಅರ್ಥಹೀನ ಆಚರಣೆಗಳ ಅಗತ್ಯ ಇಂದು ಇದೆಯೇ ಎಂದು ತೆರೆದ ಮನದಿಂದ, ಶಿರವನ್ನು ಹೊನ್ನ ಕಳಸವಾಗಿಸಿಕೊಂಡು ವಿವೇಕದ ಒರೆಗಲ್ಲಿಗೆ ಹಚ್ಚಬೇಕು. ಆಗ ಅನೇಕ ಆಚರಣೆಗಳು ನಿಜಕ್ಕೂ ಅರ್ಥಹೀನ ಎನ್ನಿಸುವುವು. ಹುರುಳಿಲ್ಲದ ಧರ್ಮಾಚರಣೆಗಳನ್ನು ನಿಷೇಧಿಸಬೇಕಾದದ್ದು ಅಪೇಕ್ಷಣಿಯ. ದೇವರ ಹೆಸರಲ್ಲಿ ಮಡೆಸ್ನಾನ ಮಾಡುವುದು, ಪ್ರಾಣಿಗಳನ್ನು ಬಲಿ ಕೊಡುವುದನ್ನೇ ತೆಗೆದುಕೊಳ್ಳಿ. ಯಾರೋ ಉಂಡ ಎಂಜಲೆಲೆಗಳ ಮೇಲೆ ಉರುಳಾಡುವುದು ಹೇಸಿಗೆ ಬರಿಸುವ ಸಂಗತಿ. ಅದರಿಂದ ಚರ್ಮರೋಗಗಳು ಹೆಚ್ಚಬಹುದೇ ಹೊರತು ಯಾವ ರೋಗಗಳೂ ವಾಸಿಯಾಗಲು ಸಾಧ್ಯವಿಲ್ಲ.

ದೇವರು ದೀನಬಂಧು, ದಯಾಸಿಂಧು ಎಂದೆಲ್ಲ ಹೇಳುವರು. ಅಂಥ ದೇವರ ಒಲುಮೆಗೆ ಕುರಿ ಬೇಡ, ಮರಿ ಬೇಡ ಎಂದು ಬಸವಣ್ಣನವರೇ ಹೇಳಿದ್ದಾರೆ. ದೇವರೆಂದೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ರಕ್ತ ಮಾಂಸ ಬಯಸುವುದಿಲ್ಲ. ದೇವರಿಗೆ ಬೇಕಾದುದು ಭಕ್ತನ ಶುದ್ಧಾಂತಃಕರಣ, ನಿರ್ಮಲ ಭಕ್ತಿ. ಜನರು ಇದನ್ನು ಮರೆತು ತಾವು ಮಾಡಿದ ಪಾಪಗಳ ಪರಿಹಾರಕ್ಕಾಗಿ ದಿಂಡುರುಳುವ, ಪ್ರಾಣಿಬಲಿ ಕೊಡುವ ವಿಚಿತ್ರ ಹಿಂಸಾಮಾರ್ಗವನ್ನು ಅನುಸರಿಸುತ್ತ ಬಂದಿದ್ದಾರೆ. ಅರಿವಿಲ್ಲದ ಜನರು ಇಂಥವುಗಳನ್ನು ಮಾಡಿದರೆ ಕ್ಷಮಿಸಬಹುದು. ಅರಿವುಳ್ಳವರೂ ಮಡೆಸ್ನಾನ ಬೆಂಬಲಿಸಿದರೆ, ತಾವೇ ಮುಂದೆ ನಿಂತಿದ್ದು ಪ್ರಾಣಿಬಲಿಯನ್ನು ಕೊಟ್ಟರೆ ಅಂಥವರನ್ನು ಏನೆನ್ನಬೇಕು? ಅದು ಬೇಲಿಯೇ ಎದ್ದು ಹೊಲ ಮೇಯ್ದಂತೆ. ತಾಯಿಯ ಮೊಲೆಯ ಹಾಲೇ ವಿಷವಾದಂತೆ. ಧರೆಯೇ ಹೊತ್ತಿ ಉರಿದಂತೆ.

ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರು ತಮ್ಮ ಊರಿನ ದೇವರಿಗೆ ಕೋಳಿಯ ಬಲಿ ಕೊಟ್ಟು ಮತ್ತೆ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ಅವರ ಸಮರ್ಥನೆಯ ವಿಚಾರ ಓದಿ ಅವರ ಬಗ್ಗೆ ಇದ್ದ ಸದ್ಭಾವನೆ ಹೊರಟು ಹೋಗುವಂತಾಗಿದೆ. `ಕೋಳಿ, ಕುರಿ ತಿನ್ನೋದು, ಬಲಿ ಕೊಡೋದು ಸಂಪ್ರದಾಯ. ಸಂಪ್ರದಾಯ ಮೀರಿ ನಾವೇನೂ ಮಾಡಿಲ್ಲ. ಮೇಲಾಗಿ ನಾವು ಮನುಷ್ಯರ ಬಲಿ ಕೊಟ್ಟು ತಿನ್ನುವ ಕಾಲದಲ್ಲಿಲ್ಲ~ ಎಂದು ಅವರು ಪತ್ರಿಕೆಯವರಿಗೆ ಹೇಳಿದ್ದಾರೆ. ಕುರಿ, ಕೋಳಿ ತಿನ್ನುವುದು ಸಂಪ್ರದಾಯ. ಅದರ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ದೇವರ ಹೆಸರಿನಲ್ಲಿ ಆ ಪ್ರಾಣಿಗಳನ್ನು ಕಡಿದು ತಿನ್ನುವುದು ಯಾವ ಸಂಪ್ರದಾಯ? ಅದು ಸಂಪ್ರದಾಯವಲ್ಲ; ಧರ್ಮ ಮತ್ತು ದೈವ ದ್ರೋಹ. `ನಾವೇನೂ ಮನುಷ್ಯರ ಬಲಿ ಕೊಟ್ಟು ತಿನ್ನುವ ಕಾಲದಲ್ಲಿಲ್ಲ~ ಎನ್ನುವ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.

ಧಾರ್ಮಿಕ ಮತ್ತು ರಾಜಕೀಯ ಜವಾಬ್ದಾರಿ ಸ್ಥಾನದಲ್ಲಿರುವವರ ವ್ಯಕ್ತಿಗತ ನಡವಳಿಕೆಗಳು ಇತರರಿಗೆ ಮಾರ್ಗದರ್ಶನ ಮಾಡುವಂತಿರಬೇಕು. ಅವರೇ ಸಂಪ್ರದಾಯವೆಂದು ಕೋಳಿ, ಕುರಿಗಳ ಬಲಿ ಕೊಡುವುದನ್ನು ಪುರಸ್ಕರಿಸಿದರೆ ಈ ನಾಡಿಗೆ ದಿಕ್ಕು ತೋರುವವರು ಯಾರು? ಯಾವ ದೇವರೂ ಬಲಿ ಬಯಸಲು ಸಾಧ್ಯವಿಲ್ಲ. ಒಂದು ವೇಳೆ ಬಲಿ ಕೊಡಲೇ ಬೇಕೆಂದಾದರೆ ಕುರಿ, ಕೋಳಿಯಂತಹ ಸಾಧು ಪ್ರಾಣಿಗಳ ಬದಲು ಹುಲಿ, ಸಿಂಹ, ಕರಡಿಯಂಥ ಕ್ರೂರ ಪ್ರಾಣಿಗಳೂ ಆಗಬಹುದಲ್ಲವೇ? ಆದರೆ, ಇದುವರೆಗೂ ಕ್ರೂರ ಪ್ರಾಣಿಗಳ ಬಲಿ ಕೊಟ್ಟಿರುವ ನಿದರ್ಶನಗಳಿಲ್ಲ.

ಈ ಕ್ರೂರ ಪ್ರಾಣಿಗಳು ಮಾಡಿದ ಒಳಿತೇನು? ಕುರಿ, ಕೋಳಿಗಳಂತಹ ಸಾಧುಪ್ರಾಣಿಗಳು ಮಾಡಿದ ಕೆಡುಕೇನು? ಅವುಗಳಿಗೆ ಮಾತನಾಡಲು ಬಂದಿದ್ದರೆ ಖಂಡಿತ ಅವು ನಮಗೆ ಶಾಪ ಹಾಕುತ್ತಿದ್ದವು. ಅವುಗಳ ಬಲಿ ಕೊಡುವುದರಿಂದ ಯಾರಿಗೂ ಒಳಿತಾಗದು. ಬದಲಾಗಿ ಆ ಮೂಕ ಪ್ರಾಣಿಗಳ ಶಾಪ ತಟ್ಟುವುದು.

ದೇವರು ನರಬಲಿಯನ್ನಾಗಲಿ, ಪ್ರಾಣಿಬಲಿಯನ್ನಾಗಲಿ ಬಯಸುವುದಿಲ್ಲ. ಇದೆಲ್ಲ ಪಟ್ಟಭದ್ರರ, ಮಾಂಸಪ್ರಿಯರ, ಪೂಜಾರಿ- ಪುರೋಹಿತರ ಕುಟಿಲ ಸಂಚು. ವಿವೇಕಿಗಳು ಅಂಥ ಸಂಚನ್ನು ಅರ್ಥ ಮಾಡಿಕೊಳ್ಳಬೇಕು.

ಅದನ್ನು ಬಿಟ್ಟು ಸಂಪ್ರದಾಯ ಎಂದು ಹಿಂಸೆಗೆ ಒತ್ತು ಕೊಟ್ಟು, ದೈವದ್ರೋಹದ ಕೆಲಸ ಮಾಡಿ ಅದೇ ಧರ್ಮ ಎಂದು ಹೇಳುವ ನೇತಾರರಿಗೆ ಅಥವಾ ನಾಡಿಗೆ ಎಂದಿಗೂ ಒಳಿತಾಗದು. ಇಂಥ ಅಧಾರ್ಮಿಕ, ಹಿಂಸಾಕೃತ್ಯ ನಿಜಕ್ಕೂ ಖಂಡನೀಯ. ಮನುಷ್ಯ ತಾನು ಮಾಡಿದ ಪಾಪಗಳನ್ನು ಕಳೆದುಕೊಳ್ಳಲು ಹೋಮ, ಹವನ, ತೀರ್ಥಯಾತ್ರೆ ಮಾಡಿದ ಮಾತ್ರಕ್ಕೆ ಅವು ಪರಿಹಾರವಾಗುವುದಿಲ್ಲ.

ಬಸವಣ್ಣನವರು ಹೇಳುತ್ತಾರೆ: `ನೀನು ಮಾಡಿದ ಪಾಪಗಳು ಲೆಕ್ಕವಿಲ್ಲದಷ್ಟು. ಅವುಗಳ ಪರಿಹಾರಕ್ಕಾಗಿ ಹೊನ್ನಿನ ಪರ್ವತ ದಾನ ಮಾಡಿದರೂ ಸಾಲದು. ಅದಕ್ಕೆ ಪ್ರಾಯಶ್ಚಿತ್ತ ಮಾರ್ಗ ಹಿಡಿಯದೆ ಪಶ್ಚಾತ್ತಾಪದ ಉರಿಯಲ್ಲಿ ಬೇಯಬೇಕು. ದೇವರಿಗೆ ಭಕ್ತಿಯಿಂದ ಶರಣಾಗಿ ಮುಂದೆ ಅಂಥ ಪಾಪಗಳನ್ನು ಮಾಡುವುದಿಲ್ಲ ಎಂದು ಮನಸಾರೆ ಹೇಳಿಕೊಂಡರೆ ಸಾಕು~.

ಜನರು ಪಶ್ಚಾತ್ತಾಪ ಮಾರ್ಗವನ್ನು ಬಿಟ್ಟು ಏನೋ ಬಲಿ ಕೊಟ್ಟು, ಮತ್ತೇನನ್ನೋ ದಾನ ಮಾಡಿ, ಮತ್ತೆಲ್ಲೋ ಮುಳುಗಿ, ದಿಂಡುರುಳಿ ತನ್ನ ಪಾಪ ಪರಿಹಾರವಾಯಿತು ಎನ್ನುವುದು ಒಂದು ಭ್ರಮೆಯೇ ಹೊರತು ಅದರಿಂದ ಯಾವ ಪಾಪವೂ ಪರಿಹಾರವಾಗದು.

ದೇವರ ಹೆಸರಿನಲ್ಲಿ ನಾಡಿನ ನಾನಾಕಡೆ ಪ್ರಾಣಿಗಳನ್ನು ಬಲಿ ಕೊಡುವ ಜಾತ್ರೆಗಳೇ ನಡೆಯುತ್ತಿರುವುದು ನಿಜಕ್ಕೂ ತಲೆತಗ್ಗಿಸುವಂತಹ ಸಂಗತಿ. ಸಾರ್ವಜನಿಕ ಸ್ಥಳದಲ್ಲಿ ಮತ್ತು ದೇವರ ಹೆಸರಿನಲ್ಲಿ ಬಲಿಯನ್ನು ಕೊಡಬಾರದೆಂಬ ಕಾನೂನೇ ಇದೆ. ಒಂದು ವೇಳೆ ಯಾರಾದರೂ ಈ ಕಾನೂನು ಮೀರಿ ಬಲಿ ಕೊಟ್ಟರೆ ಅವರನ್ನು ಅಪರಾಧಿಗಳೆಂದು ಪರಿಗಣಿಸಿ ಶಿಕ್ಷಿಸಬಹುದು. ಆದರೆ ಶಿಕ್ಷೆ ನೀಡಬೇಕಾದ ಸ್ಥಾನದಲ್ಲಿ ಇರುವವರೇ ಅಪರಾಧವನ್ನು ಬಹಿರಂಗವಾಗಿ ಮಾಡುತ್ತ ಬಂದರೆ ಗತಿ ಏನು?

ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಮಾತು ಮತ್ತು ಕೃತಿಯ ಮೇಲೆ ಹತೋಟಿ ಇಟ್ಟುಕೊಂಡು ಒಳಿತಿನ ದಾರಿ ತುಳಿಯಲಿ. ದೇವರ ಹೆಸರಿನಲ್ಲಿ ನಡೆಯುವ ಪ್ರಾಣಿಬಲಿಯನ್ನು ತಡೆಗಟ್ಟುವ ಸಂಕಲ್ಪ ಮಾಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.